Jagadish Shettar: ಸಿದ್ದರಾಮಯ್ಯ ನೂತನ ಸಚಿವರ ಪಟ್ಟಿ ಸಿದ್ಧ, ಜಗದೀಶ್​ ಶೆಟ್ಟರ್ ಎಂಟ್ರಿಗೆ ಬ್ರೇಕ್​, ಕೊನೆಯ ಕ್ಷಣದಲ್ಲಿ ಏನಾಯ್ತು!? ಇಲ್ಲಿದೆ ವಿವರ

|

Updated on: May 26, 2023 | 10:36 AM

Siddaramaiah Cabinet: ಅದಕ್ಕಿಂತ ಹೆಚ್ಚಾಗಿ ಶೆಟ್ಟರ್ ಕೂಡಾ ಮಂತ್ರಿ ಸ್ಥಾನಕ್ಕೆ ಭಾರಿ ಲಾಬಿ ಮಾಡಿದ್ದರು ಎಂಬುದೂ ನಿಜ. ಯಾಕಂದ್ರೆ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದು, ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಹೇಶ ಟೆಂಗಿನಕಾಯಿ ವಿರುದ್ದ ಸೋಲನುಭವಿಸಿದ್ದರು. ಹೀಗಾಗಿ ಕ್ಷೇತ್ರದ ಜನತೆಗೆ ಮುಖ ತೋರಿಸಲಾಗದೆ 12 ದಿನದಿಂದ ಹುಬ್ಬಳ್ಳಿ ತೊರೆದಿದ್ದರು.

Jagadish Shettar: ಸಿದ್ದರಾಮಯ್ಯ ನೂತನ ಸಚಿವರ ಪಟ್ಟಿ ಸಿದ್ಧ, ಜಗದೀಶ್​ ಶೆಟ್ಟರ್ ಎಂಟ್ರಿಗೆ ಬ್ರೇಕ್​, ಕೊನೆಯ ಕ್ಷಣದಲ್ಲಿ ಏನಾಯ್ತು!? ಇಲ್ಲಿದೆ ವಿವರ
ಸಿದ್ದರಾಮಯ್ಯ ನೂತನ ಸಚಿವರ ಪಟ್ಟಿ ಸಿದ್ಧ, ಜಗದೀಶ್​ ಶೆಟ್ಟರ್ ಎಂಟ್ರಿಗೆ ಬ್ರೇಕ್
Follow us on

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ಸಚಿವ ಸಂಪುಟ ರಚನೆಗೆ ದೆಹಲಿಯ ಕಾಂಗ್ರೆಸ್ ವಾರ್ ರೂಮ್​ನಲ್ಲಿ ಭಾರೀ ಕಸರತ್ತು ನಡೆದಿತ್ತು. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ (DK Shivakumar) ನಡುವೆ ಒಮ್ಮತದ ನಿರ್ಧಾರ ಮೂಡದಿದ್ದರೂ ಕಾಂಗ್ರೆಸ್​​ ಹೈಕಮಾಂಡ್​ಗೆ ತಲೆನೋವಾಗಿ ಪರಿಣಮಿಸಿತ್ತು. ಎರಡನೇ ಸಂಪುಟ ವಿಸ್ತರಣೆಗಾಗಿ ಸದ್ಯಕ್ಕೆ ಸಚಿವರ ಪಟ್ಟಿಯೊಂದು (Cabinet Expansion) ಅಂತಿಮಗೊಂಡಿದೆ. ನೂತನ ಸಚಿವರ ಪ್ರಮಾಣವಚನ ಮೇ 28ರಂದು ಭಾನುವಾರ ನೆರವೇರಲಿದೆ ಎಂದು ತಿಳಿದುಬಂದಿದೆ. ಈ ನಡುವೆ ನೂತನ ಸಚಿವರ ಪಟ್ಟಿ ಟಿವಿ9ಗೆ ಲಭ್ಯವಾಗಿದೆ. ಕೆಲವರಿಗೆ ಸಚಿವ ಸ್ಥಾನ ಕೈತಪ್ಪಿದ್ದು, ಇನ್ನು ಕೆಲವರಿಗೆ ಸಚಿವ ಸ್ಥಾನ ಸಿಕ್ಕಿದೆ. ಗಮನಾರ್ಹವೆಂದರೆ ಅದರಲ್ಲಿ ಅಂತಿಮ ಕ್ಷಣದಲ್ಲಿ ಕಾಂಗ್ರೆಸ್​​ ಸೇರಿ, ಚುನಾವಣೆಯಲ್ಲಿ ಸೋತಿರುವ ಜಗದೀಶ್​ ಶೆಟ್ಟರ್​ ಅವರ ಹೆಸರು ಕಾಣಿಸಿಕೊಂಡಿಲ್ಲ. ಆದರೆ ದಾಖಲಾರ್ಹ ಸಂಗತಿಯೆಂದರೆ ಇದೇ ಜಗದೀಶ್​ ಶೆಟ್ಟರ್ ಅವರು ಹೊಸ ಸಂಪುಟ ಸೇರಲು ಶತಾಯಗತಾಯ ಪ್ರಯುತ್ನಿಸಿದ್ದರು. ಮಾಜಿ‌ ಸಿಎಂ ಜಗದೀಶ ಶೆಟ್ಟರ್ ಗೆ ಸಚಿವ ಸ್ಥಾನಮಾನ ಬಹುತೇಕ ಫಿಕ್ಸ್ ಅಂದುಕೊಂಡಿದ್ದರು. ಶೆಟ್ಟರ್ ಗೆ ಸ್ಥಾನ ಮಾನ ನೀಡುವ ಜೊತೆಗೆ ಕೈ ಪಡೆ ಒಂದು ಪ್ರಮುಖ‌ ಸಂದೇಶ ನೀಡೋಕೆ ಮುಂದಾಗಿತ್ತು ಎನ್ನಲಾಗಿತ್ತು. ಅದಕ್ಕಾಗಿ 12 ದಿನಗಳಿಂದ ಶೆಟ್ಟರ್ ಬೆಂಗಳೂರಲ್ಲಿ ಬೀಡು ಬಿಟ್ಟಿದ್ದರು. ಆದರೆ ಶೆಟ್ಟರ್​​ ಸಂಪುಟ ಪ್ರವೇಶಕ್ಕೆ ಸದ್ಯಕ್ಕೆ ಬ್ರೇಕ್​​ ಬಿದ್ದಿದೆ. ಈ ಮಧ್ಯೆ ಏನೆಲ್ಲಾ ನಡೆದಿತ್ತು, ಏನೆಲ್ಲಾ ಸಂದೇಶ ರವಾನಿಸಲು ಸಿದ್ಧತೆ ನಡೆದಿತ್ತು. ಒತ್ತಡ ತಂತ್ರದ ಹಿಂದಿನ ಅಸಲಿಯತ್ತೇನು ಎಂಬುದರ ರೋಚಕ ಕತೆ ಇಲ್ಲಿದೆ.

ಹೌದು ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರೋ ಬೆನ್ನಲ್ಲೇ ಸಚಿವ ಸ್ಥಾನಕ್ಕಾಗಿ ಬಹುತೇಕ ಶಾಸಕರು ಲಾಬಿ ಶುರು ಮಾಡಿದ್ದಾರೆ. ಒಂದು ವಾರದಿಂದ ಮಂತ್ರಿಗಿರಿಗಾಗಿ ಸರ್ಕಸ್ ನಡೆಸಿರೋದು ಒಂದೆಡೆಯಾದ್ರೆ, ಇತ್ತ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗುವ ಮೂಲಕ ಕಾಂಗ್ರೆಸ್ ಗೆ ಬಲ ತುಂಬುವ, ಮತ್ತು ಬಿಜೆಪಿನ ತೊರೆದು ರಾಜಕೀಯವಾಗಿ ತಮ್ಮ ಬಲವೃದ್ಧಿಸಿಕೊಳ್ಳಲು ಹಾತೊರೆದಿದ್ದ ಮಾಜಿ ಸಿಎಂ ಜಗದೀಶ ಶೆಟ್ಟರ್ ಸೋಲನುಭವಿಸಿ, ದಿಕ್ಕುತಪ್ಪಿದಂತಾಗಿದ್ದರು. ಆದರೆ ಕಾಂಗ್ರೆಸ್​​ ಗೆಲುವಿನ‌ ಮೂಲಕ ತಮ್ಮ ಅಸ್ತಿತ್ವ ಕಂಡುಕೊಳ್ಳಲು ಹಾತೊರೆದಿದ್ದರು.

ಈ ಹಿನ್ನೆಲೆಯಲ್ಲಿ ಜಗದೀಶ ಶೆಟ್ಟರ್ ಸೋತರೂ ಸಹ ಕಾಂಗ್ರೆಸ್ ಸರ್ಕಾರದಲ್ಲಿ ಶೆಟ್ಟರ್ ಗೆ ಬಹುತೇಕ ಸಚಿವ ಸ್ಥಾನ ಖಚಿತ ಎಂಬ ಮಾತುಗಳು ಕೇಳಿಬರುತ್ತಿವೆ. ಬಿಜೆಪಿಯಲ್ಲಿ ಲಿಂಗಾಯತರಿಗೆ ಮೋಸ‌ ಮಾಡಲಾಗುತ್ತಿದೆ ಎಂಬ ಹೇಳಿಕೆ ನೀಡುವ ಮೂಲಕ ಮಾಜಿ‌ ಸಿಎಂ ಜಗದೀಶ ಶೆಟ್ಟರ್ ಬಿಜೆಪಿ ವಿರುದ್ಧ ತಿರುಗಿ ಬಿದ್ದಿರೋದು ಎಲ್ಲರಿಗೂ ಗೊತ್ತೇ ಇದೆ. ಅದೇ ಹಾದಿಯಲ್ಲಿ ಬಿಜೆಪಿಯಂತೆ ಕಾಂಗ್ರೆಸ್ ಪಕ್ಷ ಉತ್ತರ ಕರ್ನಾಟಕ ಭಾಗದ ಲಿಂಗಾಯತರಿಗೆ ಮೋಸ, ದ್ರೋಹ ಮಾಡಲ್ಲ ಎಂಬ ಸಂದೇಶ ರವಾನೆ ಮಾಡುವ‌ ಮೂಲಕ ಇದೀಗ ಕಾಂಗ್ರೆಸ್ ಶೆಟ್ಟರ್ ಗೆ ಸಚಿವ ಸ್ಥಾನ ನೀಡೇ ನೀಡುತ್ತದೆ ಎನ್ನಲಾಗಿತ್ತು.

ಅದಕ್ಕಿಂತ ಹೆಚ್ಚಾಗಿ ಶೆಟ್ಟರ್ ಕೂಡಾ ಮಂತ್ರಿ ಸ್ಥಾನಕ್ಕೆ ಭಾರಿ ಲಾಬಿ ಮಾಡಿದ್ದರು ಎಂಬುದೂ ನಿಜ. ಯಾಕಂದ್ರೆ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದು, ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಹೇಶ ಟೆಂಗಿನಕಾಯಿ ವಿರುದ್ದ ಸೋಲನುಭವಿಸಿದ್ದರು. ಹೀಗಾಗಿ ಕ್ಷೇತ್ರದ ಜನತೆಗೆ ಮುಖ ತೋರಿಸಲಾಗದೆ 12 ದಿನದಿಂದ ಹುಬ್ಬಳ್ಳಿ ತೊರೆದಿದ್ದರು.

ತಮ್ಮ ಸಂಬಂಧಿಕರಾದ ಶಾಮನೂರು ಶಿವಶಂಕರಪ್ಪ ಹಾಗೂ ಎಂಬಿ ಪಾಟೀಲ್ ಅವರಿಬ್ಬರ ಮೂಲಕ ಶೆಟ್ಟರ್ ಲಾಬಿ ಮಾಡ್ತೀದಾರೆ ಅನ್ನೋ ಮಾತು ಕೇಳಿ ಬರುತ್ತಿತ್ತು. ಜೊತೆಗೆ, ಸೋತರೂ ತಮ್ಮ ಕೈಬಿಡಲಿಲ್ಲ ಕಾಂಗ್ರೆಸ್​​ ಎಂಬ ಸಂದೇಶ ರವಾನಿಸುವ ಜರೂರತ್ತು ಶೆಟ್ಟರ್​​ಗೆ ಇತ್ತು. ಆದರೆ ಈಗಿನ ಕಾಂಗ್ರೆಸ್​​ ಪಟ್ಟಿ ನೋಡಿದಾಗ ದುರ್ಬೀನು ಹಾಕಿ ಹುಡುಕಿದರೂ ಶೆಟ್ಟರ್ ಎಂಟ್ರಿಗೆ ಅವಕಾಶ ನೀಡಿಲ್ಲ ಎಂಬುದು ಸ್ಪಷ್ಟವಾಗಿದೆ.

ಇನ್ನು ಪ್ರಮುಖವಾಗಿ ವಿಧಾನ ಸಭೆ ಚುನಾವಣೆಯಲ್ಲಿ ಪ್ರಚಂಡ ಬಹುಮತದ ಮೂಲಕ ಗೆದ್ದು ಬೀಗಿರುವ ಕಾಂಗ್ರೆಸ್ ಪಡೆ ಇದೀಗ ಲೋಕಸಭಾ ಚುನಾವಣೆಯತ್ತ ದೃಷ್ಟಿ ನೆಟ್ಟಿದೆ. ಶೆಟ್ಟರ್ ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದರಿಂದ ಒಬ್ಬ ಲಿಂಗಾಯತ ನಾಯಕ ಸಿಕ್ಕಂತಾಗಿದ್ದು ಪಕ್ಷಕ್ಕೆ ಮತ್ತಷ್ಟು ಆನೆ ಬಲ‌ಬಂದಂತಾಗಿದೆ.

ಈ ಹಿನ್ನೆಲೆಯಲ್ಲಿ ಲೋಕಸಭೆಯನ್ನ ಗಮನದಲ್ಲಿಟ್ಟುಕೊಂಡು ಶೆಟ್ಟರ್ ಗೆ ಸಚಿವ ಸ್ಥಾನ ನೀಡುವ ಮೂಲಕ ಕೈ ಪಡೆಯನ್ನ ಬಲ‌ಪಡಿಸುವ ಆಯಾಮದಲ್ಲಾದರೂ ಶೆಟ್ಟರ್​​ಗೆ ಕಾಂಗ್ರೆಸ್ ಮಣೆ ಹಾಕಬೇಕಿತ್ತು. ಇನ್ನು ಪ್ರಮುಖವಾಗಿ ಎಐಸಿಸಿ ವರಿಷ್ಠರಾದ ಸ್ವತಃ ಸೋನಿಯಾ ಗಾಂಧಿಯವರೇ ಶೆಟ್ಟರ್ ಗೆ ಸರಿಯಾದ ಸ್ಥಾನಮಾನ ನೀಡಿ ಎಂದು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸೂಚನೆ ನೀಡಿದ್ದಾರೆ ಎಂಬ ಮಾತುಗಳೂ ಕೇಳಿಬಂದಿದ್ದವು. ಶೆಟ್ಟರ್ ಸೋತರೂ ಕಾಂಗ್ರೆಸ್ ಪಡೆ ಶೆಟ್ಟರ್ ಅವರನ್ನ ಕೈಬಿಡಲಿಲ್ಲ ಎಂಬುದನ್ನು ಸಾಬೀತುಪಡಿಸಬೆಕಿತ್ತು. ಆದರೆ ಲೆಕ್ಕಾಚಾರವೆಲ್ಲಾ ತಲೆಕೆಳಗಾಗಿದೆ.

ವರದಿ: ಶಿವಕುಮಾರ್​ ಪತ್ತಾರ್, ಟಿವಿ9, ಹುಬ್ಬಳ್ಳಿ

Published On - 10:33 am, Fri, 26 May 23