AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಶ್ವತ್ಥ ನಾರಾಯಣ ವಿರುದ್ಧದ ಪ್ರಕರಣ ಮೈಸೂರಿನಿಂದ ಮಂಡ್ಯಕ್ಕೆ ವರ್ಗಾವಣೆ

ಮಾಜಿ ಸಚಿವ ಸಿಎನ್ ಅಶ್ವತ್ಥ ನಾರಾಯಣ ವಿರುದ್ಧ ಮೈಸೂರಿನಲ್ಲಿ ದಾಖಲಾಗಿದ್ದ ಪ್ರಕರಣವನ್ನು ಮಂಡ್ಯ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.

ಅಶ್ವತ್ಥ ನಾರಾಯಣ ವಿರುದ್ಧದ ಪ್ರಕರಣ ಮೈಸೂರಿನಿಂದ ಮಂಡ್ಯಕ್ಕೆ ವರ್ಗಾವಣೆ
ಮೈಸೂರಿನಲ್ಲಿ ದಾಖಲಾಗಿದ್ದ ಅಶ್ವತ್ಥ ನಾರಾಯಣ ವಿರುದ್ಧದ ಪ್ರಕರಣ ಮಂಡ್ಯಕ್ಕೆ ವರ್ಗಾವಣೆ
Rakesh Nayak Manchi
Rakesh Nayak Manchi|

Updated on:May 26, 2023 | 8:01 AM

Share

ಮೈಸೂರು: ಸಿದ್ದರಾಮಯ್ಯ (Siddaramaiah) ಅವರನ್ನು ಮುಗಿಸಬೇಕು ಎಂದು ವಿವಾದಾತ್ಮಕ ಹೇಳಿಕೆ ನೀಡಿದ ಆರೋಪದ ಮೇಲೆ ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ (Dr. CN Ashwath Narayan) ವಿರುದ್ಧ ಮೈಸೂರಿನಲ್ಲಿ ದಾಖಲಾಗಿದ್ದ ಪ್ರಕರಣ ಮಂಡ್ಯ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಫೆಬ್ರವರಿ ತಿಂಗಳಲ್ಲಿ ಮಂಡ್ಯದ ಸಾತನೂರಿನಲ್ಲಿ ಸಿದ್ದರಾಮಯ್ಯ ಕೊಲೆಗೆ ಪ್ರಚೋದಿಸುವ ಹೇಳಿಕೆ ನೀಡಿದ್ದಾಗಿ ಆರೋಪಿಸಿ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ ಅವರು ಮೈಸೂರಿನ ದೇವರಾಜ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದ ಪ್ರಕರಣ ಇದಾಗಿದೆ.

ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಆಗಿ ಹೋದ ಘಟನೆಗಳನ್ನು ಕೆದಕಿ ಬಿಜೆಪಿ ನಾಯಕರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ. ಸಿಎನ್ ಅಶ್ವತ್ಥನಾರಾಯಣ, ಶಾಸಕ  ಹರೀಶ್ ಪೂಂಜಾ ಸೇರಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ಕ್ರಮ ಆಗಲಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಹೇಳಿದ್ದಾರೆ. ನಿನ್ನೆ ಬೆಂಗಳೂರು ನಗರ ಪೊಲೀಸ್ ಅಧಿಕಾರಿಗಳ ಸಭೆಯ ನಂತರ ಈ ಹೇಳಿಕೆ ನೀಡಿದ್ದರು.

ಇದನ್ನೂ ಓದಿ: ಸಿದ್ದರಾಮಯ್ಯ ಮೇಲೆ ಗೌರವ ಇದೆ. ಆದರೂ ಅಧಿಕಾರ ದುರ್ಬಳಕೆ ಮಾಡಿಕೊಂಡು ನನ್ನ ಮೇಲೆ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ: ಅಶ್ವತ್ಥ ನಾರಾಯಣ

ಬಿಜೆಪಿ ಸರ್ಕಾರದಲ್ಲಿ ಉನ್ನತ ಶಿಕ್ಷಣ ಸಚಿವರಾಗಿದ್ದ ಅಶ್ವತ್ಥ ನಾರಾಯಣ ಅವರು ಮಂಡ್ಯದ ಸಾತನೂರಿನಲ್ಲಿ ಸಿದ್ದರಾಮಯ್ಯ ಅವರನ್ನು ಟೀಕಿಸುವ ಭರದಲ್ಲಿ ಟಿಪ್ಪು ಮುಗಿಸಿದಂತೆ ಅವರನ್ನೂ ಮುಗಿಸಬೇಕು ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದಕ್ಕೆ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ಎಚ್ಚೆತ್ತಿದ್ದ ಅವರು ಕ್ಷಮಾಪಣೆ ಕೇಳಿದ್ದರು. ಅದಾಗ್ಯೂ, ಅಶ್ವತ್ಥನಾರಾಯಣ ವಿರುದ್ಧ ಫೆಬ್ರವರಿ 17ರಂದು ಪ್ರಕರಣ ದಾಖಲಿಸಲಾಗಿತ್ತು. ಆದರೆ ಕ್ರಮ ಕೈಗೊಂಡಿರಲಿಲ್ಲ.

ಕಾಂಗ್ರೆಸ್ ಸರ್ಕಾರ ಬಂದ ನಂತರ ಮಂಡ್ಯ ಕಾಂಗ್ರೆಸ್ ಜಿಲ್ಲಾ ಸಮಿತಿ ಅಧ್ಯಕ್ಷ ಡಾ.ಬಿ.ಜೆ. ಅಜಯ್ ಕುಮಾರ್ ಅವರು ಠಾಣೆಗೆ ಆಗಮಿಸಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಈ ವೇಳೆ, ಹಿಂದೆ ನೀಡಿದ ದೂರಿನ ಅನ್ವಯ ಎಫ್​ಐಆರ್ ದಾಖಲಿಸಲು ಸಾಧ್ಯವಿಲ್ಲ, ಮತ್ತೆ ಪ್ರಕರಣ ನೀಡುವಂತೆ ಇನ್​ಸ್ಪೆಕ್ಟರ್ ಅವರು ನೀಡಿದ ಸೂಚನೆ ಮೇರೆಗೆ ಲಕ್ಷ್ಮಣ ಅವರು ದೂರು ದಾಖಲಿಸಿದ್ದರು.

ತನ್ನ ವಿರುದ್ಧ ದಾಖಲಾದ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಅಶ್ವತ್ಥ ನಾರಾಯಣ, ಕಾಂಗ್ರೆಸ್ ಪಕ್ಷವನ್ನು ಚುನಾವಣೆಯಲ್ಲಿ ಸೋಲಿಸಬೇಕು ಎಂಬ ಚಿಂತನೆಯಲ್ಲಿ ಹೇಳಿದ್ದೆ. ವೈಯಕ್ತಿಕವಾಗಿ ನನಗೆ ಸಿದ್ದರಾಮಯ್ಯ ಮೇಲೆ ಗೌರವ ಇದೆ. ಸೈದ್ದಾಂತಿಕವಾಗಿ ನಮಗೂ ಅವರಿಗೂ ಬಹಳ ವ್ಯತ್ಯಾಸ ಇದೆ. ನಾನು ಸದನದಲ್ಲಿ ಕೂಡಾ ಸ್ಪಷ್ಟವಾಗಿ ಹೇಳಿಕೆ ಕೊಟ್ಟಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:43 am, Fri, 26 May 23

Follow Us
Rakesh Nayak Manchi
Rakesh Nayak Manchi

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದವನಾದ ನಾನು, ಪದವಿ ಮುಗಿಸಿದ ನಂತರ ಏನು ಮಾಡಬೇಕು ಎಂಬ ಯೋಚನೆಯಲ್ಲಿದ್ದಾಗ ಪತ್ರಿಕೋದ್ಯಮ ಕ್ಷೇತ್ರದ ಮೇಲೆ ಕಣ್ಣುಬಿತ್ತು. ಅದರಂತೆ ಎಂಎ ಮುಗಿಸಿ ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ದಿನ ಪತ್ರಿಕೆ, ನ್ಯೂಸ್ ಆ್ಯಪ್​ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಪ್ರಸ್ತುತ ಕಳೆದ ಒಂದೂವರೆ ವರ್ಷಗಳಿಂದ 'ಉತ್ತಮ ಸಮಾಜಕ್ಕಾಗಿ' ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ.