ವೈಎಸ್​ಟಿ ಜೊತೆಗೆ ಪೇಸಿಎಂ, ಪೇ ಸೋನಿಯಾ, ಪೇ ವೇಣುಗೋಪಾಲ್ ಇದೆ: ಬಿಜೆಪಿ ಶಾಸಕ ಯತ್ನಾಳ್

| Updated By: Rakesh Nayak Manchi

Updated on: Jul 03, 2023 | 4:00 PM

ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ವೈಎಸ್​ಟಿ ಸರ್ಕಾರ ಎಂಬ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಆರೋಪಕ್ಕೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಧ್ವನಿಗೂಡಿಸಿದ್ದಾರೆ.

ವೈಎಸ್​ಟಿ ಜೊತೆಗೆ ಪೇಸಿಎಂ, ಪೇ ಸೋನಿಯಾ, ಪೇ ವೇಣುಗೋಪಾಲ್ ಇದೆ: ಬಿಜೆಪಿ ಶಾಸಕ ಯತ್ನಾಳ್
ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಹೆಚ್​ಡಿ ಕುಮಾರಸ್ವಾಮಿ
Follow us on

ಬೆಂಗಳೂರು: ವೈಎಸ್​ಟಿ (ಯತೀಂದ್ರ ಸಿದ್ದರಾಮಯ್ಯ ಟ್ಯಾಕ್ಸ್) ಸರ್ಕಾರ ಎಂಬ ಮಾಜಿ ಸಿಎಂ ಹೆಚ್​​ಡಿ ಕುಮಾರಸ್ವಾಮಿ (HD Kumaraswamy) ಆರೋಪಕ್ಕೆ ಧ್ವನಿಗೂಡಿಸಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal), ಪೇಸಿಎಂ, ಪೇ ಸೋನಿಯಾ, ಪೇ ವೇಣುಗೋಪಾಲ್ ಎಲ್ಲವೂ ಇದೆ ಎಂದು ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, 10 ಜನರ ಮುಖ್ಯಮಂತ್ರಿಗಳು ಯಾರ್ಯಾರು ಎಂದು ನನಗೆ ಗೊತ್ತಿಲ್ಲ. ಕುಮಾರಸ್ವಾಮಿಗೆ ಅವರದ್ದೇ ಆದ ಮಾಹಿತಿ ಮೂಲಗಳಿವೆ. ಅವರಿಗೆ ಮೊದಲು ಕ್ಯಾಬಿನೆಟ್ ಅಜೆಂಡಾ ಹೋಗುತ್ತದೆ ಎಂದರು.

ವಿಧಾನಸಭೆ ಮತ್ತು ಪರಿಷತ್​ ವಿಪಕ್ಷ ನಾಯಕರ ಆಯ್ಕೆ ವಿಚಾರವಾಗಿ ಮಾತನಾಡಿದ ಯತ್ನಾಳ್, ವಿಪಕ್ಷ ನಾಯಕ ಯಾರೇ ಆದರೂ ಸ್ವಾಗತ ಮಾಡುತ್ತೇವೆ. ನಾನು ರೇಸ್​​ನಲ್ಲಿ ಇದ್ದೇನೆ ಎಂದು ನೀವೇ ತೋರಿಸಿದ್ದೀರಿ. ಈಶ್ವರಪ್ಪ ಹೇಳಿಕೆಯನ್ನ ತಿರುಚಿ ತೋರಿಸಿದ್ದೀರಿ. ಮತ್ತೆ ನಮ್ಮ ಮಧ್ಯೆ ಬೆಂಕಿ ಹಚ್ಚಬೇಡಿ. ಹೈಕಮಾಂಡ್ ತೀರ್ಮಾನಕ್ಕೆ ನಾವೆಲ್ಲಾ ಬದ್ಧರಾಗಿರುವುದಾಗಿ ತಿಳಿಸಿದರು.

ಇದನ್ನೂ ಓದಿ: ಬಿಜೆಪಿ ಯುವಮೋರ್ಚಾ ಅಧ್ಯಕ್ಷನ ಮೇಲೆ ಪೊಲೀಸರಿಂದ ಹಲ್ಲೆ ಆರೋಪ; ಬಿಜೆಪಿ ಕಾರ್ಯಕರ್ತ ಆಸ್ಪತ್ರೆಗೆ ದಾಖಲು

ಕಾಂಗ್ರೆಸ್​ ಸರ್ಕಾರದಲ್ಲಿ ಜಿಎಸ್​ಟಿ ರೀತಿ ವೈಎಸ್​ಟಿ ಸಂಗ್ರಹ ಮಾಡಲಾಗುತ್ತಿದೆ ಎಂದು ಹೇಳುವ ಮೂಲಕ ಕುಮಾರಸ್ವಾಮಿ ಅವರು, ಸಿಎಂ ಸಿದ್ದರಾಮಯ್ಯ ಅವರ ಪುತ್ರನೂ ಆಗಿರುವ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಸರು. ವೈಎಸ್​ಟಿ ತೆರಿಗೆ ಅಂತ ಅವರ ಸರ್ಕಾರದಲ್ಲಿ ಬಂದಿದೆಯಂತೆ. ಅದರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೇವೆ ಎಂದು ಹೇಳಿದ್ದರು.

ಸರ್ಕಾರದ ವಿರುದ್ಧದ ಕುಮಾರಸ್ವಾಮಿ ಆರೋಪ ಅಷ್ಟಕ್ಕೆ ನಿಲ್ಲದೆ, ಮುಖ್ಯಮಂತ್ರಿಗಳ ಗೃಹಕಚೇರಿ ಕೃಷ್ಣಾದಲ್ಲೇ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಮತ್ತೊಂದು ಗಂಭೀರ ಆರೋಪ ಮಾಡಿದ್ದರು. ಶಾಸಕರ ಶಿಫಾರಸು ತಂದ್ರೆ ಸಾಲದು 30 ಲಕ್ಷ ದುಡ್ಡು ತನ್ನಿ ಎಂದು ಮುಖ್ಯಮಂತ್ರಿಗಳ ಕಚೇರಿಯಲ್ಲಿ ಬೇಡಿಕೆ ಇಡುತ್ತಿದ್ದಾರೆ ಎಂದಿದ್ದರು. ಅಲ್ಲದೆ, ಭ್ರಷ್ಟಾಚಾರದ ವಿರುದ್ಧ ಕ್ರಮ ಅಂತಾ ಹೇಳುತ್ತಾರೆ, ಏನೂ ಕ್ರಮ ತಗೊಂಡಿದ್ದಾರೆ? ಸರ್ಕಾರ ಬಂದು ಒಂದು ತಿಂಗಳು ಕಳಿಯಿತು ಎಂದಿದ್ದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ