ಬಿಜೆಪಿ ಯುವಮೋರ್ಚಾ ಅಧ್ಯಕ್ಷನ ಮೇಲೆ ಪೊಲೀಸರಿಂದ ಹಲ್ಲೆ ಆರೋಪ; ಬಿಜೆಪಿ ಕಾರ್ಯಕರ್ತ ಆಸ್ಪತ್ರೆಗೆ ದಾಖಲು
ಮೂಡಿಗೆರೆ ತಾಲೂಕಿನ ಬಿಜೆಪಿ ಯುವಮೋರ್ಚಾ ಸ್ಥಳೀಯ ಘಟಕದ ಅಧ್ಯಕ್ಷ ಅವಿನಾಶ್ ಅವರು ಸಕಲೇಶಪುರ ಪೊಲೀಸರ ವಿರುದ್ಧ ಆರೋಪ ಮಾಡಿದ್ದಾರೆ. ಯಾವುದೇ ಆಧಾರವಿಲ್ಲದೆ ನನ್ನನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಹಲ್ಲೆ ಮಾಡಿದ್ದಾರೆ ಎಂದಿದ್ದಾರೆ.
ಚಿಕ್ಕಮಗಳೂರು: ಮೂಡಿಗೆರೆ ತಾಲೂಕು ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಅವಿನಾಶ್ ಮೇಲೆ ಸಕಲೇಶಪುರ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಸದ್ಯ ಪೊಲೀಸರಿಂದ ಹಲ್ಲೆಗೊಳಗಾದ ಬಿಜೆಪಿ ಕಾರ್ಯಕರ್ತ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಮನೆಯಿಂದ ಠಾಣೆಗೆ ಕರೆದೊಯ್ದು ಚಿತ್ರ ಹಿಂಸೆ ನೀಡಿ ಹಲ್ಲೆ ಮಾಡಿದ್ದಾರೆ ಎಂದು ಅವಿನಾಶ್ ಆರೋಪ ಮಾಡಿದ್ದಾರೆ.
ಬಜರಂಗದಳದ ಮಾಜಿ ಸಂಚಾಲಕ ರಘು ಸಕಲೇಶಪುರನೊಂದಿಗೆ ಸಂಪರ್ಕ ಹಿನ್ನೆಲೆ ಅವಿನಾಶ್ನನ್ನ ವಿಚಾರಣೆಗಾಗಿ ಯಾವುದೇ ವಾರಂಟ್ ಅಥವಾ ನೋಟಿಸ್ ನೀಡದೆ ಸಕಲೇಶಪುರ ಪೊಲೀಸರು ಠಾಣೆಗೆ ಕರೆದೊಯ್ದಿದ್ದರು. ಜನ್ನಾಪುರದ ಮನೆಯಿಂದ ಸಕಲೇಶಪುರ ಠಾಣೆಗೆ ಕರೆದುಕೊಂಡು ಹೋಗಿ ಅವಿನಾಶ್ ಕಾಲು, ಕಿವಿ, ಮುಖದ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಅವಿನಾಶ್ ಆರೋಪಿಸಿದ್ದಾರೆ.
ಸುಮಾರು 10-15 ಪೊಲೀಸರು ನನ್ನನ್ನು ನನ್ನ ಮನೆಯಿಂದ ಬಂಧಿಸಿ, ನನ್ನನ್ನು ಮೂಡಿಗೆರೆಗೆ ಕರೆದೊಯ್ದರು. ನಂತರ ಸಕಲೇಶಪುರಕ್ಕೆ ಕರೆದೊಯ್ದರು. ರಘು ಬಗ್ಗೆ ನನ್ನ ಬಳಿ ವಿಚಾರಿಸಿದರು. ಆಗ ನಾನು ರಘು ಬಗ್ಗೆ ನನಗೆ ಗೊತ್ತು. ಆದ್ರೆ ಈಗ ನನಗೆ ಅವನೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದೆ. ಅವರು ಅದೇ ಪ್ರಶ್ನೆಯನ್ನು ಕೇಳುತ್ತಲೇ ಇದ್ದರು. ರಘು ಅವರು ನನಗೆ ಕರೆ ಮಾಡಿ ಧರ್ಮಸ್ಥಳಕ್ಕೆ ಹೋಗುವುದಾಗಿ ಹೇಳಿದ್ದರು ಎಂದು ನಾನು ಹೇಳಿದೆ ಎಂದು ಹಲ್ಲೆಗೊಳಗಾದ ಅವಿನಾಶ್ ತಿಳಿಸಿದ್ದಾರೆ. ಇನ್ನು ಗಾಯಗೊಂಡ ಅವಿನಾಶ್ ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು ಹಲ್ಲೆ ಖಂಡಿಸಿ ಬಿಜೆಪಿ, ಬಜರಂಗದಳ ಬೃಹತ್ ಪ್ರತಿಭಟನೆ ನಡೆಸುತ್ತಿದೆ.
ಸಕಲೇಶಪುರ DYSP ಮಿಥುನ್ ಅಮಾನತಿಗೆ ಆಗ್ರಹಿಸಿ ಮೂಡಿಗೆರೆ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ವಿವಾದಾತ್ಮಕ ಹೇಳಿಕೆ ಸಂಬಂಧ ರಘು ಸಕಲೇಶಪುರ ಮೇಲೆ ಪ್ರಕಾರ ದಾಖಲು ಮಾಡಿದ್ದ ಹಾಸನ ಪೊಲೀಸರು ಈ ವಿಚಾರಕ್ಕೆ ಸಂಬಂಧಿಸಿ ಅವಿನಾಶ್ನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದರು.
ಚಿಕ್ಕಮಗಳೂರು ಜಿಲ್ಲೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ