ಬೆಂಗಳೂರು, ಆಗಸ್ಟ್ 21: ಸಚಿವರ ವಿರುದ್ಧ ಶಾಸಕರ ಅಸಮಾಧಾನ, ಶಾಸಕರಿಂದ ಮುಖ್ಯಮಂತ್ರಿಗಳಿಗೆ ಪತ್ರ ಸೇರಿದಂತೆ ಹಲವು ಆಂತರಿಕ ಭಿನ್ನಮತಗಳನ್ನು ಎದುರಿಸುತ್ತಿರುವ ಆಡಳಿತಾರೂಢ ಕಾಂಗ್ರೆಸ್ಗೆ (Congress) ಇದೀಗ ಒಬಿಸಿ ಸಮುದಾಯದವರ (Community) ಪ್ರತಿಭಟನೆಯ ಬಿಸಿ ತಟ್ಟಲಿದೆ. ಭಾನುವಾರವಷ್ಟೇ ಪರೋಕ್ಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಸ್ವಜಾತಿ ಪ್ರೇಮ ಆರೋಪ ಮಾಡಿದ್ದ ಕಾಂಗ್ರೆಸ್ ನಾಯಕ ಬಿಕೆ ಹರಿಪ್ರಸಾದ್ (BK Hariprasad) ಇದೀಗ ಅತಿ ಹಿಂದುಳಿದ ವರ್ಗಗಳ ಸಂಘಟನೆಗೆ ಮುಂದಾಗಿದ್ದಾರೆ. ಅವರಿಗೆ ಈಡಿಗ ಸಮುದಾಯದ ಪ್ರಣವಾನಂದ ಸ್ವಾಮೀಜಿ ಬೆಂಬಲವೂ ದೊರೆತಿದೆ.
ಈಡಿಗ, ಉಪ್ಪಾರ, ವಿಶ್ವಕರ್ಮ, ಸವಿತಾ ಸಮಾಜ, ಅಂಬಿಗ ಸಮಾಜ, ಅತಿ ಸಣ್ಣ ಸಮುದಾಯಗಳೂ ಸೇರಿದಂತೆ 101 ಸಮುದಾಯಗಳ ಸಂಪರ್ಕದಲ್ಲಿ ಬಿಕೆ ಹರಿಪ್ರಸಾದ್ ಇದ್ದಾರೆ. ಇದರ ಬೆನ್ನಲ್ಲೇ ಅವರ ಪರ ಪ್ರಣವಾನಂದ ಸ್ವಾಮೀಜಿ ಬ್ಯಾಟ್ ಬೀಸಲು ಆರಂಭಿಸಿದ್ದಾರೆ.
ಅತಿ ಹಿಂದುಳಿದ ಸಮಾಜದ ಸಮಾವೇಶಕ್ಕೆ ಪ್ರಣವಾನಂದ ಸ್ವಾಮೀಜಿಯಿಂದ ಬೆಂಬಲ ವ್ಯಕ್ತವಾಗಿದ್ದು, ಇನ್ನಿತರ ಸಮುದಾಯ ಸ್ವಾಮಿಜಿಗಳಿಗೂ ಆಹ್ವಾನ ನೀಡಲು ಹರಿಪ್ರಸಾದ್ ಉದ್ದೇಶಿಸಿದ್ದಾರೆ. ಸೆಪ್ಟೆಂಬರ್ 9 ರಂದು ಅತಿ ಹಿಂದುಳಿದ ಸಮಾಜದ ಸಮಾವೇಶದ ಪೂರ್ವಭಾವಿ ಸಭೆ ನಡೆಸಲು ತೀರ್ಮಾನಿಸಲಾಗಿದೆ. ಬಳಿಕ ಡಿಸೆಂಬರ್ ನಲ್ಲಿ ಶಿವಮೊಗ್ಗ, ಉಡುಪಿ ಅಥವಾ ಉತ್ತರ ಕನ್ನಡದಲ್ಲಿ ಅತಿ ಹಿಂದುಳಿದವರ ಸಮಾವೇಶ ನಡೆಸುವ ಸಾಧ್ಯತೆ ಇದೆ.
ಅತಿ ಹಿಂದುಳಿದವರ ಸಮಾವೇಶ ನಡೆಸುವ ಮೂಲಕ ಸಿದ್ದರಾಮಯ್ಯಗೆ ಪರ್ಯಾಯ ನಾಯಕರಾಗಿ ಹೊರಹೊಮ್ಮಲು ಬಿಕೆ ಹರಿಪ್ರಸಾದ್ ಯೋಜನೆ ಹಾಕಿಕೊಂಡಿದ್ದಾರೆ. ಜತೆಗೆ, ರಾಜಕೀಯವಾಗಿಯೂ ಇನ್ನಷ್ಟು ಬಿಗಿ ಹಿಡಿತ ಸಾಧಿಸಲು ಪ್ಲಾನ್ ಮಾಡುತ್ತಿದ್ದಾರೆ. ಸಮಾಜದ ಜತೆ ಪಕ್ಷದಲ್ಲಿ ಹೆಚ್ಚಿನ ಮಾನ್ಯತೆ ಸಿಗುವ ನಿರೀಕ್ಷೆಯಲ್ಲಿ ಹರಿಪ್ರಸಾದ್ ಇದ್ದಾರೆ.
ಇದನ್ನೂ ಓದಿ: ಈಡಿಗ ಸಮುದಾಯದ ನಾಯಕರ ಕಡೆಗಣನೆ: ಹೊಸ ಪಕ್ಷ ಸ್ಥಾಪನೆ ಎಚ್ಚರಿಕೆ ನೀಡಿದ ಪ್ರಣವಾನಂದ ಶ್ರೀ
ಮಂತ್ರಿ ಸ್ಥಾನ ಕೈತಪ್ಪಿಸಿದ್ದಕ್ಕೆ ಸಿದ್ದರಾಮಯ್ಯ ವಿರುದ್ದ ಅಸಮಾಧಾನಗೊಂಡಿರುವ ಹರಿಪ್ರಸಾದ್ ಇದೀಗ ರಾಜಕೀಯವಾಗಿ ಹೊಸ ದಾಳ ಉರುಳಿಸಲು ಮುಂದಾಗಿದ್ದಾರೆ. ಹಿಂದುಳಿದ ಸಮಾಜದ ಒಕ್ಕೂಟ ಸಿದ್ದರಾಮಯ್ಯ ಬೆಂಬಲಕ್ಕೆ ನಿಂತಿದ್ದರೆ, ಇದಕ್ಕೆ ಪರ್ಯಾಯವಾಗಿ ಅತಿ ಹಿಂದುಳಿದ ಸಮಾವೇಶಕ್ಕೆ ಪ್ಲಾನ್ ರೂಪಿಸಿದ್ದಾರೆ. ಈಗ ಹಿಂದುಳಿದ ಸಮಾಜದಲ್ಲೇ ಅತಿ ಹಿಂದುಳಿದ ಸಣ್ಣ ಸಮಾಜ ಸಂಘಟಿಸುವ ಮೂಲಕ ಹೊಸ ರಾಜಕೀಯ ಅಸ್ತ್ರ ಬಳಸಲು ಹರಿಪ್ರಸಾದ್ ಪ್ಲಾನ್ ರೂಪಿಸಿದ್ದಾರೆ.
ಈ ಮಧ್ಯೆ, ನಮ್ಮ ಸಮುದಾಯದ ನಾಯಕರಿಗೆ ಮೂರು ಪಕ್ಷಗಳಿಂದ ಅನ್ಯಾಯವಾದರೆ ಹೊಸ ಪಕ್ಷ ಸ್ಥಾಪನೆ ಮಾಡಲಾಗುವುದು ಎಂದು ಈಡಿಗ ಸಮುದಾಯದ ಪ್ರಣವಾನಂದ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ. ಅರಮನೆ ಮೈದಾನದಲ್ಲಿ ಸಪ್ಟೆಂಬರ್ 9 ರಂದು ಈಡಿಗ ಬಿಲ್ಲವ ನಾಮಧಾರಿ ದೀವರು ಮತ್ತು ಅತೀ ಹಿಂದುಳಿದ ವರ್ಗಗಳ ಸಮಾನ ಮನಸ್ಕರ ವಿಶೇಷ ಸಭೆ ಆಯೋಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕರ್ನಾಟಕಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ