ಬೆಂಗಳೂರು, ಆಗಸ್ಟ್ 7: ನಕಲಿ ಪೆನ್ ಡ್ರೈವ್ ಆಯ್ತು, ಈಗ ನಕಲಿ ಪತ್ರದ ಮೊರೆ ಹೋಗಿದ್ದಾರೆ ವಿರೋಧ ಪಕ್ಷದ ಬೃಹಸ್ಪತಿಗಳು ಎಂದು ಕಾಂಗ್ರೆಸ್ (Congress) ಆರೋಪಿಸಿದೆ. ತನ್ನ ವಿರುದ್ಧ ಅಧಿಕಾರಿಗಳು ರಾಜ್ಯಪಾಲರಿಗೆ ನೀಡಿದ್ದಾರೆ ಎನ್ನಲಾಗುವ ಪತ್ರ ನಕಲಿ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ (N. Chaluvaraya Swamy) ಹೇಳಿಕೆ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ಘಟಕ ಈ ಟ್ವೀಟ್ ಮಾಡಿದೆ.
“ನಕಲಿ ಪೆನ್ ಡ್ರೈವ್ ಆಯ್ತು, ಈಗ ನಕಲಿ ಪತ್ರದ ಮೊರೆ ಹೋಗಿದ್ದಾರೆ ವಿರೋಧ ಪಕ್ಷದ ಬೃಹಸ್ಪತಿಗಳು, ಫೇಕ್ ಫ್ಯಾಕ್ಟರಿಯ ಮಾಲೀಕರು ಮೊದಲು ಸಾಮಾಜಿಕ ಜಾಲತಾಣಗಳಿಗೆ ಮಾತ್ರ ಸೀಮಿತರಾಗಿದ್ದರು, ಈಗ ಸರ್ಕಾರಿ ವ್ಯವಸ್ಥೆ, ರಾಜ್ಯಪಾಲರ ಕಚೇರಿಗೂ ತಮ್ಮ ನಕಲಿ ಜಾಲ ವಿಸ್ತರಿಸಿದ್ದಾರೆ” ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
“ಕೃಷಿ ಸಚಿವರ ವಿರುದ್ಧ ಅಧಿಕಾರಿಗಳು ಲಂಚದ ಆರೋಪ ಹೊರಿಸಿ ರಾಜ್ಯಪಾಲರಿಗೆ ಬರೆದಿರುವ ಪತ್ರವೇ ನಕಲಿ. ಪತ್ರದಲ್ಲಿ ಹೆಸರಿಸಿರುವ ಅಧಿಕಾರಿಗಳ ಸಹಿಯನ್ನು ನಕಲಿ ಮಾಡಲಾಗಿದೆ, ನಕಲಿ ವಿಳಾಸವನ್ನು ನೀಡಲಾಗಿದೆ, ಈ ವಿಚಾರವನ್ನು ಆ ಅಧಿಕಾರಿಗಳೇ ಸ್ಪಷ್ಟಪಡಿಸಿದ್ದಾರೆ” ಎಂದು ಕಾಂಗ್ರೆಸ್ ಹೇಳಿದೆ.
ಇದನ್ನೂ ಓದಿ: ಲಂಚಕ್ಕೆ ಬೇಡಿಕೆ, ಚಲುವರಾಯಸ್ವಾಮಿ ವಿರುದ್ಧ ಗಂಭೀರ ಆರೋಪ: ರಾಜ್ಯಪಾಲರಿಗೆ ದೂರು
“ರಾಜ್ಯದಲ್ಲಿ ನಕಲಿ ಜಾಲವು ರಾಜ್ಯಪಾಲರ ಕಚೇರಿಯನ್ನೇ ಯಾಮಾರಿಸುವಷ್ಟರ ಮಟ್ಟಿಗೆ ಬೆಳೆದಿದೆ, ನಮ್ಮ ಸರ್ಕಾರ ನಕಲಿ ಜಾಲವನ್ನು ಮಟ್ಟ ಹಾಕಲು ಕಠಿಣ ಕ್ರಮ ಕೈಗೊಳ್ಳುವುದು ನಿಶ್ಚಿತ. ರಾಜ್ಯಪಾಲರಿಗೆ ಬರೆದ ಪತ್ರವು ಸಂಪೂರ್ಣ ನಕಲಿ ಎನ್ನುವುದು ತಿಳಿದುಬಂದಿದ್ದು ಇದರ ವಿರುದ್ಧ ಮಂಡ್ಯ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಲಾಗಿದೆ. ಇದರ ತನಿಖೆ ನಡೆಸಿ ಇದರಲ್ಲಿ ಅದೆಷ್ಟೇ ದೊಡ್ಡವರ ಕೈವಾಡವಿದ್ದರೂ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವುದು ನಿಶ್ಚಿತ” ಎಂದು ಟ್ವೀಟ್ ಮಾಡಿದೆ.
ನಕಲಿ ಪೆನ್ ಡ್ರೈವ್ ಆಯ್ತು, ಈಗ ನಕಲಿ ಪತ್ರದ ಮೊರೆ ಹೋಗಿದ್ದಾರೆ ವಿರೋಧ ಪಕ್ಷದ ಬೃಹಸ್ಪತಿಗಳು!
ಫೇಕ್ ಫ್ಯಾಕ್ಟರಿಯ ಮಾಲೀಕರು ಮೊದಲು ಸಾಮಾಜಿಕ ಜಾಲತಾಣಗಳಿಗೆ ಮಾತ್ರ ಸೀಮಿತರಾಗಿದ್ದರು, ಈಗ ಸರ್ಕಾರಿ ವ್ಯವಸ್ಥೆ, ರಾಜ್ಯಪಾಲರ ಕಚೇರಿಗೂ ತಮ್ಮ ನಕಲಿ ಜಾಲ ವಿಸ್ತರಿಸಿದ್ದಾರೆ.
ಕೃಷಿ ಸಚಿವರ ವಿರುದ್ಧ ಅಧಿಕಾರಿಗಳು ಲಂಚದ ಆರೋಪ ಹೋರಿಸಿ… pic.twitter.com/ycDEgHt9nO
— Karnataka Congress (@INCKarnataka) August 7, 2023
ಸಚಿವ ಚಲುವರಾಯಸ್ವಾಮಿ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ ವಿಚಾರವಾಗಿ ಟ್ವೀಟ್ ಮೂಲಕ ಬಿಜೆಪಿ ಮತ್ತು ಹೆಚ್‌ಡಿ ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದ ಸಿಎಂ ಸಿದ್ದರಾಮಯ್ಯ, ಮಂಡ್ಯ ಜಿಲ್ಲೆಯ ಅಧಿಕಾರಿಗಳು ದೂರು ನೀಡಿದ್ದಾರೆ ಎಂಬರ್ಥದಲ್ಲಿ ಬರೆದಿರುವ ಪತ್ರ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದು ನಕಲಿ ಎಂದು ಬಯಲಾಗಿದೆ. ಅಂತಹ ಅಧಿಕಾರಿಗಳು ಯಾರೂ ಜಿಲ್ಲೆಯಲ್ಲಿ ಇಲ್ಲ ಎಂದು ಮಂಡ್ಯ ಜಿಲ್ಲೆಯ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ. ಆದರೂ ಈ ಬಗ್ಗೆ ಪರಿಶೀಲನೆ ನಡೆಸಿ ಅಗತ್ಯವಿದ್ದರೆ ತನಿಖೆ ನಡೆಸಲಾಗುವುದು. ಬಿಜೆಪಿ ನಾಯಕರೇ ಇಂತಹ ನಕಲಿ ಪತ್ರವನ್ನಿಟ್ಟುಕೊಂಡು ಸರ್ಕಾರದ ಬಗ್ಗೆ ಅಪಪ್ರಚಾರ ಮಾಡುತ್ತಿರುವ ನೀವೇ ಇದರ ಸೃಷ್ಟಿಕರ್ತರೋ? ಅಥವಾ ನಿಮ್ಮ ‘ಬ್ರದರ್ರೋ’? (ಕುಮಾರಸ್ವಾಮಿ) ಎಂದು ಪ್ರಶ್ನಿಸಿದರು.
ಮಂಡ್ಯ ಜಿಲ್ಲೆಯ ಅಧಿಕಾರಿಗಳು ರಾಜ್ಯಪಾಲರಿಗೆ ದೂರು ನೀಡಿದ್ದಾರೆ ಎಂಬರ್ಥದಲ್ಲಿ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪತ್ರ ನಕಲಿಯಾದುದು ಎಂದು ಬಯಲಾಗಿದೆ.
ಅಂತಹ ಅಧಿಕಾರಿಗಳು ಯಾರು ಜಿಲ್ಲೆಯಲ್ಲಿ ಇಲ್ಲ ಎಂದು ಮಂಡ್ಯದ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ.
ಹೀಗಿದ್ದರೂ ಈ ಸಂಬಂಧ ಪರಿಶೀಲನೆ ನಡೆಸಿ, ಅಗತ್ಯ ಕಂಡುಬಂದಲ್ಲಿ… pic.twitter.com/kPR5TQColK
— Siddaramaiah (@siddaramaiah) August 7, 2023
ಕಾಂಗ್ರೆಸ್ ನಾಯಕರ ಬಂಡವಾಳ ಇದರಲ್ಲಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ ಅವರು ಮಾಧ್ಯಮಗಳ ಮುಂದೆ ಪೆಂಡ್ಡ್ರೈವ್ ತೋರಿಸಿದ್ದರು. ಈ ಬಗ್ಗೆ ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೂ ಕಾರಣವಾಗಿತ್ತು. ಅಷ್ಟೇ ಅಲ್ಲದೆ, ಕೆಲವು ಸಚಿವರ ವಿರುದ್ಧ ಸ್ವಪಕ್ಷದ ಶಾಸಕರೇ ಮುಖ್ಯಮಂತ್ರಿಗೆ ದೂರು ನಿಡಿದ್ದರು. ಇದರ ನಡುವೆ ಕೃಷಿ ಸಚಿವರ ವಿರುದ್ಧವೇ ಇಲಾಖೆಯ ಅಧಿಕಾರಿಗಳ ರಾಜ್ಯಪಾಲರಿಗೆ ದೂರು ನೀಡಿರುವುದು ಕಾಂಗ್ರೆಸ್ಗೆ ನುಂಗಲಾರದ ತುತ್ತಾಗಿದೆ.
ತಮ್ಮ ವಿರುದ್ಧ ದೂರು ನೀಡಿದ ಬಗ್ಗೆ ಸ್ಪಷ್ಟನೆ ನೀಡಿದ ಚಲುವರಾಯಸ್ವಾಮಿ, ಕೃಷಿ ಅಧಿಕಾರಿಗಳು ರಾಜ್ಯಪಾಲರಿಗೆ ಪತ್ರ ಬರೆದ ವಿಚಾರವಾಗಿ ನನಗೆ ಗೊತ್ತಿಲ್ಲ, ನಾನು ಯಾರ ಬಳಿ ಮಾತನಾಡಿಲ್ಲ. ಜೆಡಿ ಬಳಿ ಈಗ ಕೇಳಿದಾಗ ನಕಲಿ ಪತ್ರ ಎಂದು ಹೇಳಿದ್ದಾಗಿ ತಿಳಿಸಿದರು. ಅಲ್ಲದೆ, ಪತ್ರದ ಬಗ್ಗೆ ತನಿಖೆ ನಡೆಸಲಾಗುವುದು ಎಂದಿದ್ದಾರೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:53 pm, Mon, 7 August 23