AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಂಗ್ರೆಸ್ ಶಾಸಕರ ಬೇಡಿಕೆ ಏನು? ಸಿಎಂ ಸಿದ್ದರಾಮಯ್ಯ ನೀಡಿರುವ ಭರವಸೆ ಏನು? ಇನ್ ಸೈಡ್ ಸುದ್ದಿ ನೋಡಿ

ಕಾಂಗ್ರೆಸ್ ಶಾಸಕರ ಬೇಡಿಕೆ ಏನು? ಸಿಎಂ ಸಿದ್ದರಾಮಯ್ಯ ನೀಡಿರುವ ಭರವಸೆ ಏನು? ಇನ್ ಸೈಡ್ ಸುದ್ದಿ ನೋಡಿ

ಪ್ರಸನ್ನ ಗಾಂವ್ಕರ್​
| Updated By: ಸಾಧು ಶ್ರೀನಾಥ್​

Updated on: Aug 08, 2023 | 7:07 AM

ಡಬಲ್ ಇಂಜಿನ್ ಮುರಿದು ಹೊಸ ಇಂಜಿನ್ ಸರ್ಕಾರ ರಚಿಸಿದ್ದ ಕಾಂಗ್ರೆಸ್ ಗೆ ಇದೀಗ ಶಾಸಕರ ಸಮಸ್ಯೆ ಬಗೆಹರಿಸುವುದೇ ದೊಡ್ಡ ಸವಾಲಾಗಿಬಿಟ್ಟಿದೆ. ಸಿಎಂ ಸಿದ್ದರಾಮಯ್ಯ ಶಾಸಕರ ಸಮಸ್ಯೆ ಬಗೆಹರಿಸಲು ಖುದ್ದು ಅಖಾಡಕ್ಕೆ ಇಳಿದಿದ್ದಾರೆ. ಮೊದಲ ದಿನ ಶಾಸಕರ ಜೊತೆ ಸಿಎಂ, ಡಿಸಿಎಂ ಸಮಾಲೋಚನೆ ಹೇಗಿತ್ತು? ಶಾಸಕರ ಬೇಡಿಕೆ ಏನು?

ಕಾಂಗ್ರೆಸ್ ಸರ್ಕಾರದ (Congress ) ಇಂಜಿನ್ ಯಾಕೋ ಆರಂಭದಲ್ಲೇ ಹೊಗೆ ಉಗುಳುತ್ತಿದೆ. ಡಬಲ್ ಇಂಜಿನ್ ಮುರಿದು ಹೊಸ ಇಂಜಿನ್ ಸರ್ಕಾರ ರಚಿಸಿದ್ದ ಕಾಂಗ್ರೆಸ್ ಗೆ ಇದೀಗ ಶಾಸಕರ ಸಮಸ್ಯೆ ಬಗೆಹರಿಸುವುದೇ ದೊಡ್ಡ ಸವಾಲಾಗಿಬಿಟ್ಟಿದೆ. ಇದೀಗ ಸಿಎಂ ಸಿದ್ದರಾಮಯ್ಯ (Siddaramaiah) ಶಾಸಕರ ಸಮಸ್ಯೆ ಬಗೆಹರಿಸಲು ಖುದ್ದು ಅಖಾಡಕ್ಕೆ ಇಳಿದಿದ್ದಾರೆ. ಮೊದಲ ದಿನ ಶಾಸಕರ ಜೊತೆ ಸಿಎಂ, ಡಿಸಿಎಂ ಸಮಾಲೋಚನೆ ಹೇಗಿತ್ತು? ಶಾಸಕರ ಬೇಡಿಕೆ ಏನು? ಸಿಎಂ ಭರವಸೆ ಏನು ಅನ್ನೋದರ ಇನ್ ಸೈಡ್ ಸುದ್ದಿಯನ್ನೇ ತೋರಿಸ್ತೀವಿ ನೋಡಿ.

ಶಾಸಕರ ಎದುರೇ ಸಚಿವರಿಗೆ ಸಿಎಂ ಡೈರೆಕ್ಷನ್!

ಕಾಂಗ್ರೆಸ್ ಸರ್ಕಾರ ಇನ್ನೂ ಎರಡು ತಿಂಗಳ ಹಸುಳೆ. ಸರ್ಕಾರ ಟೇಕಾಫ್ ಆಗುವ ಹೊತ್ತಲ್ಲೇ ಶಾಸಕರ ಅಸಮಾಧಾನ, ಕಾಂಗ್ರೆಸ್ ಮನೆಯನ್ನು ಅಲುಗಾಡಿಸಿಬಿಟ್ಟಿದೆ. ವಿಪಕ್ಷಗಳ ಕೈಗೆ ಅಸ್ತ್ರ ನೀಡಿದೆ. ಶಾಸಕರ ಅಸಮಾಧಾನ ಪದೇ ಪದೇ ಸ್ಪೋಟಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸ್ಚತಃ ಸಿಎಂ ಸಿದ್ದರಾಮಯ್ಯನವರೇ ಅಖಾಡಕ್ಕೆ ಇಳಿದಿದ್ದಾರೆ. ಶಾಸಕರ ಸಮಸ್ಯೆ ಬಗೆಹರಿಸಲು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆಶಿವಕುಮಾರ್ ಇಂದು ಶಾಸಕರೊಂದಿಗೆ ಸಭೆ ನಡೆಸಿದರು. ತುಮಕೂರು, ಯಾದಗಿರಿ, ಚಿತ್ರದುರ್ಗ, ಬಾಗಲಕೋಟೆ, ಧಾರವಾಡ ಮತ್ತು ಬಳ್ಳಾರಿ ಜಿಲ್ಲೆಯ 31 ಶಾಸಕರು, ಸಚಿವರು, ಉಸ್ತುವಾರಿ ಸಚಿವರ ಜೊತೆಗೆ ಸಭೆ ನಡೆಸಿದ್ರು. ಶಾಸಕರು ಸಿಎಂ ಎದುರು ತಮ್ಮ ಅಹವಾಲು ಸಲ್ಲಿಸಿದ್ದಾರೆ‌. ದುಃಖ ದುಮ್ಮಾನ ಹೇಳಿಕೊಂಡಿದ್ದಾರೆ. ವಿಶೇಷವಾಗಿ ಸಭೆಯಲ್ಲಿ ಅನುದಾನ ಕೊರತೆ ಬಗ್ಗೆ ಹೆಚ್ಚು ಚರ್ಚೆ ಆಗಿದೆ.

ಸಭೆಯಲ್ಲಿ ಶಾಸಕರು ನಮ್ಮ ಕ್ಷೇತ್ರದ ಅಭಿವೃದ್ಧಿಗೆ ಅಗತ್ಯ ಅನುದಾನ ಒದಗಿಸಿ.. ಕ್ಷೇತ್ರದ ಮೂಲಭೂತ ಸೌಕರ್ಯ ಸೇರಿ ನೀರಾವರಿ ಯೋಜನೆಗಳಿಗೆ ಅಗತ್ಯವಾದ ಅನುದಾನ ಬಿಡುಗಡೆ ಮಾಡುವಂತೆ ಸಿಎಂಗೆ ಮನವಿ ಮಾಡಿದ್ದಾರೆ. ಶಾಸಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಿಎಂ, ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ. ಗ್ಯಾರಂಟಿಗಳಿಗೆ ಹೆಚ್ಚುವರಿ ಅನುದಾನ ಕೊಡಲಾಗಿದೆ. ಹಾಗಂತ ನಿಮ್ಮ ಕಾಮಗಾರಿಗಳಿಗೆ ಅನುದಾನ ನಿಲ್ಲಿಸುವುದಿಲ್ಲ. ಹಂತ ಹಂತವಾಗಿ ಅನುದಾನ ಬಿಡುಗಡೆ ಮಾಡ್ತೀವಿ. ಸಚಿವರ ಇಲಾಖೆಗಳಲ್ಲಿ ಆಗಬೇಕಿದ್ದ ಸಮಸ್ಯೆ ನಿವಾರಿಸಲು ಕ್ರಮ ತೆಗೆದುಕೊಳ್ತೀವಿ.. ಈ ಬಗ್ಗೆ ಸಂಬಂಧಿಸಿದ ಸಚಿವರಿಗೆ ಸೂಚನೆ ಕೊಡ್ತೀನಿ.. ಅವರು ನಿಮ್ಮ ಜಿಲ್ಲೆಗೆ ಬಂದು ಸಭೆ ಮಾಡ್ತಾರೆ. ಸಭೆಯಲ್ಲಿ ಏನು ಆಗಬೇಕೋ ಆ ಕೆಲಸಗಳನ್ನು ಮಾಡಿಕೊಡ್ತಾರೆ ಎಂದು ಸಿಎಂ ಶಾಸಕರಿಗೆ ಭರವಸೆ ನೀಡಿದ್ದಾರೆ.

ಇನ್ನು ಸಭೆಯಲ್ಲಿ ಶಾಸಕರ ಅಹವಾಲುಗಳನ್ನು ಆಲಿಸಿ, ಭರವಸೆ ನೀಡಿದ ಸಿಎಂ ಸಿದ್ದರಾಮಯ್ಯ, ಶಾಸಕರಿಗೆ ಕೆಲ ಸೂಚನೆಗಳನ್ನು ನೀಡಿದ್ದಾರೆ. ಗ್ಯಾರಂಟಿ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವಂತೆ ಸಿಎಂ ಸಿದ್ದರಾಮಯ್ಯ ಶಾಸಕರಿಗೆ ಸೂಚನೆ ನೀಡಿದ್ದಾರೆ. ಸರ್ಕಾರದ ಪರವಾಗಿ ಜನರಿಗೆ ಮತ್ತಷ್ಟು ಒಲವು ಮೂಡುವಂತೆ ಮಾಡಿ. 2024ರ ಲೋಕಸಭೆ ಚುನಾವಣೆಯೇ ಮುಖ್ಯವಾಗಿದೆ. ಹೀಗಾಗಿ ಲೋಕಸಭೆ ಚುನಾವಣೆಗೆ ಪೂರಕವಾಗಿ ಕೆಲಸ ಮಾಡಿ ಎಂದು ಶಾಸಕರಿಗೆ ಸೂಚನೆ ನೀಡಿದ್ದಾರೆ.

ಶಾಸಕರ ಅಸಮಾಧಾನ ಸರ್ಕಾರ ಮತ್ತು ಕೈ ಪಾಳಯವನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು. ಶಾಸಕರು ಸಮಾಧಾನವಾಗಿದ್ದರೆ ಮಾತ್ರ ಸರ್ಕಾರಕ್ಕೆ ಸಮಾಧಾನ ಎಂಬುದನ್ನು ಸಿಎಂ ತುರ್ತಾಗಿ ಅರ್ಥ ಮಾಡಿಕೊಂಡಂತಿದೆ. ಕಳೆದ ಶಾಸಕಾಂಗ ಸಭೆಯಲ್ಲಿ ಭರವಸೆ ಕೊಟ್ಟಂತೆ ಇಂದು ಮೊದಲ ಹಂತದ ಶಾಸಕರ ಸಭೆ ನಡೆಸಿದ್ದಾರೆ. ಶಾಸಕರ ಅಹವಾಲು ಆಲಿಸಿದ್ದಾರೆ. ಆದ್ರೆ, ಮುಖ್ಯಮಂತ್ರಿಗಳ ಈ ಪ್ರಯತ್ನ ಫಲ ನೀಡುತ್ತಾ? ಕೈ ಭಿನ್ನಮತ ಶಮನವಾಗುತ್ತಾ ಅನ್ನೋದನ್ನು ಕಾದು ನೋಡ್ಬೇಕಿದೆ.

ಹೆಚ್ಚಿನ ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ