Presidential polls 2022 ರಾಷ್ಟ್ರಪತಿ ಚುನಾವಣೆಗೆ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಲು ವಿರೋಧ ಪಕ್ಷಗಳ ಸಭೆಯಲ್ಲಿ ತೀರ್ಮಾನ

| Updated By: ರಶ್ಮಿ ಕಲ್ಲಕಟ್ಟ

Updated on: Jun 15, 2022 | 6:35 PM

"ನಾವು ಒಮ್ಮತದ ಅಭ್ಯರ್ಥಿಯನ್ನು ಮಾತ್ರ ಆಯ್ಕೆ ಮಾಡಲು ನಿರ್ಧರಿಸಿದ್ದೇವೆ" ಎಂದು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ವಿರೋಧ ಪಕ್ಷಗಳ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

Presidential polls 2022 ರಾಷ್ಟ್ರಪತಿ ಚುನಾವಣೆಗೆ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಲು ವಿರೋಧ ಪಕ್ಷಗಳ ಸಭೆಯಲ್ಲಿ ತೀರ್ಮಾನ
ಮಮತಾ ಬ್ಯಾನರ್ಜಿ
Follow us on

ದೆಹಲಿ: ರಾಷ್ಟ್ರಪತಿ ಚುನಾವಣೆಗೆ (Presidential polls) ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಲು ವಿರೋಧ ಪಕ್ಷಗಳು (opposition meeting )ಬುಧವಾರ ನಿರ್ಣಯ ಕೈಗೊಂಡಿವೆ. ರಾಮನಾಥ್ ಕೋವಿಂದ್ ಅವರ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಲು ಜುಲೈ 18 ರಂದು ಚುನಾವಣೆ ನಡೆಯಲಿದ್ದು, ಜುಲೈ 21 ರಂದು ಮತ ಎಣಿಕೆ ನಡೆಯಲಿದೆ. “ನಾವು  ಒಮ್ಮತದ ಅಭ್ಯರ್ಥಿಯನ್ನು ಮಾತ್ರ ಆಯ್ಕೆ ಮಾಡಲು ನಿರ್ಧರಿಸಿದ್ದೇವೆ” ಎಂದು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ (Mamata Banerjee) ವಿರೋಧ ಪಕ್ಷಗಳ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. “ಎಲ್ಲರೂ ಈ ಅಭ್ಯರ್ಥಿಗೆ ನಮ್ಮ ಬೆಂಬಲವನ್ನು ನೀಡುತ್ತಾರೆ. ನಾವು ಇತರರೊಂದಿಗೆ ಸಮಾಲೋಚಿಸುತ್ತೇವೆ. ಇದೊಂದು ಉತ್ತಮ ಆರಂಭ. ನಾವು ಹಲವಾರು ತಿಂಗಳುಗಳ ನಂತರ ಒಟ್ಟಿಗೆ ಸಭೆ ಸೇರಿದ್ದೇವೆ. ಮತ್ತೊಮ್ಮೆ ಸಭೆ ಸೇರಲಿದ್ದೇವೆ”ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಎಲ್ಲ ನಾಯಕರು ಶರದ್ ಪವಾರ್ ಜಿಯನ್ನು ಸರ್ವಾನುಮತದಿಂದ ಒಪ್ಪಿಕೊಂಡಿದ್ದಾರೆ. ಆದರೆ ಅವರು ಆಸಕ್ತಿ ಹೊಂದಿಲ್ಲದಿದ್ದರೆ, ಇತರ ಪಕ್ಷಗಳಿಂದ ಬೇರೆ ಹೆಸರುಗಳು ಬರುತ್ತವೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಅಭ್ಯರ್ಥಿ ಬಗ್ಗೆ ತೀರ್ಮಾನ ಕೈಗೊಳ್ಳಲು ಮಮತಾ ಬ್ಯಾನರ್ಜಿ ಇತರ ಪಕ್ಷಗಳ ನಾಯಕರೊಂದಿಗೆ ಇಂದು ಸುಮಾರು ಎರಡು ಗಂಟೆಗಳ ಕಾಲ ಸಭೆ ನಡೆಸಿದ್ದಾರೆ.

ಸಭೆಯಲ್ಲಿ ವಿರೋಧ ಪಕ್ಷದ ನಾಯಕರು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಚುನಾವಣೆಗೆ ಜಂಟಿ ವಿರೋಧ ಪಕ್ಷದ ಅಭ್ಯರ್ಥಿಯನ್ನಾಗಿ ಮಾಡುವಂತೆ ಒತ್ತಾಯಿಸಿದರು. ಆದಾಗ್ಯೂ, ಅವರು ಮತ್ತೊಮ್ಮೆ ಪ್ರಸ್ತಾಪವನ್ನು ನಿರಾಕರಿಸಿದರು. ಸಂಭಾವ್ಯ ವಿರೋಧ ಪಕ್ಷದ ಅಭ್ಯರ್ಥಿಗಳಾಗಿ ಫಾರೂಕ್ ಅಬ್ದುಲ್ಲಾ ಮತ್ತು ಗೋಪಾಲಕೃಷ್ಣ ಗಾಂಧಿ ಅವರ ಹೆಸರನ್ನು ಬ್ಯಾನರ್ಜಿ ಸೂಚಿಸಿದ್ದಾರೆ ಎಂದು ಆರ್‌ಎಸ್‌ಪಿಯ ಎನ್‌ಕೆ ಪ್ರೇಮಚಂದ್ರನ್ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಇದನ್ನೂ ಓದಿ
ಕಾಂಗ್ರೆಸ್ ಪ್ರಧಾನ ಕಚೇರಿಯೊಳಗೆ ನುಗ್ಗಿದ ದೆಹಲಿ ಪೊಲೀಸ್; ಮೋದಿ ಸರ್ಕಾರದ ಸೊಕ್ಕು ಮುರಿಯುತ್ತೇವೆ ಎಂದು ಕಾಂಗ್ರೆಸ್ ಟ್ವೀಟ್
DK Shivakumar: ನಾವು ಲಂಚ ಪಡೆದಿದ್ದೆವಾ? ಮಂಚಕ್ಕೆ ಹೋಗಿದ್ದೆವಾ? ಬಿಜೆಪಿಗೆ ಹೆದರೋ ಮಾತೇ ಇಲ್ಲ; ಡಿಕೆ ಶಿವಕುಮಾರ್
DK Shivakumar: ಕೊವಿಡ್ ನಿಯಮ ಉಲ್ಲಂಘಿಸಿ ಮೇಕೆದಾಟು ಪಾದಯಾತ್ರೆ; ಜನಪ್ರತಿನಿಧಿಗಳ ವಿಶೇಷ ಕೋರ್ಟ್​ಗೆ ಡಿಕೆ ಶಿವಕುಮಾರ್ ಹಾಜರು
ಚಾಮುಲ್ ಆಡಳಿತ ಮಂಡಳಿ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ, ಶಾಸಕ ನಿರಂಜನ್ ಕುಮಾರ್ಗೆ ಮುಖಭಂಗ

ರಾಷ್ಟ್ರಪತಿ ಚುನಾವಣೆಗೆ ಜಂಟಿ ಅಭ್ಯರ್ಥಿಯನ್ನು ನಿರ್ಧರಿಸಲು ಎಲ್ಲಾ ವಿರೋಧ ಪಕ್ಷಗಳ ನಾಯಕರನ್ನು ಬ್ಯಾನರ್ಜಿ ಆಹ್ವಾನಿಸಿದ್ದರು. ಹದಿನಾರು ಪ್ರತಿಪಕ್ಷಗಳು ಸಭೆಯಲ್ಲಿ ಭಾಗವಹಿಸಿದ್ದವು. ನಾಲ್ಕು ಪಕ್ಷಗಳು ಗೈರಾಗಿದ್ದವು. ಆಮ್ ಆದ್ಮಿ ಪಕ್ಷ, ತೆಲಂಗಾಣ ರಾಷ್ಟ್ರ ಸಮಿತಿ, ಶಿರೋಮಣಿ ಅಕಾಲಿದಳ ಮತ್ತು ಬಿಜು ಜನತಾ ದಳ ರಾಷ್ಟ್ರ ರಾಜಧಾನಿಯ ಕಾನ್ಸ್ಟಿಟ್ಯೂಷನ್ ಕ್ಲಬ್‌ನಲ್ಲಿ ಮಧ್ಯಾಹ್ನ 3 ಗಂಟೆಗೆ ಆರಂಭವಾದ ಸಭೆಯಿಂದ ಹೊರಗುಳಿದಿವೆ.

ರಾಷ್ಟ್ರೀಯ ಜನತಾ ದಳದ ಮುಖಂಡರಾದ ಮನೋಜ್ ಝಾ ಮತ್ತು ಎ.ಡಿ.ಸಿಂಗ್, ಶಿವಸೇನೆಯಿಂದ ಪ್ರಿಯಾಂಕಾ ಚತುರ್ವೇದಿ ಮತ್ತು ಸುಭಾಷ್ ದೇಸಾಯಿ, ಎಚ್.ಡಿ.ಕುಮಾರಸ್ವಾಮಿ ಮತ್ತು ಜನತಾದಳದ (ಜಾತ್ಯತೀತ) ಎಚ್.ಡಿ.ದೇವೇಗೌಡ, ದ್ರಾವಿಡ ಮುನ್ನೇಟ್ರ ಕಳಗಂನ ಟಿ.ಆರ್.ಬಾಲು ಮತ್ತು ರಾಷ್ಟ್ರೀಯ ಪಕ್ಷದ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಸಭೆಯಲ್ಲಿ ಭಾಗವಹಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಜೈರಾಮ್ ರಮೇಶ್ ಮತ್ತು ರಣದೀಪ್ ಸಿಂಗ್ ಸುರ್ಜೆವಾಲಾ, ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಶರದ್ ಪವಾರ್ ಮತ್ತು ಪ್ರಫುಲ್ ಪಟೇಲ್, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಮತ್ತು ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಮೆಹಬೂಬಾ ಮುಫ್ತಿ ಕೂಡ ಸಭೆಯಲ್ಲಿದ್ದರು.

ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ), ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ-ಲೆನಿನಿಸ್ಟ್), ಕ್ರಾಂತಿಕಾರಿ ಸಮಾಜವಾದಿ ಪಕ್ಷ, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್, ರಾಷ್ಟ್ರೀಯ ಲೋಕದಳ ಮತ್ತು ಜಾರ್ಖಂಡ್ ಮುಕ್ತಿ ಮೋರ್ಚಾ ಕೂಡ ಭಾಗವಹಿಸಿದ್ದವು.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Published On - 6:04 pm, Wed, 15 June 22