ರಾಹುಲ್ ಗಾಂಧಿ ‘ಇಡಿ’ ವಿಚಾರಣೆ: ಪ್ರತಿಭಟನಾನಿರತ ಕೈ ನಾಯಕರಿಗೆ ಪಂಚ ಪ್ರಶ್ನೆಗಳನ್ನು ಕೇಳಿದ ಸಿ.ಟಿ.ರವಿ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜಾರಿ ನಿರ್ದೇಶನಾಯಲಯ (ಇಡಿ) ವಿಚಾರಣೆ ಖಂಡಿಸಿ ಕೈ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ನಡುವೆ ಪ್ರತಿಭಟನಾನಿರತ ನಾಯಕರಿಗೆ ಪಂಚ ಪ್ರಶ್ನೆಗಳನ್ನ ಕೇಳುವ ಮೂಲಕ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಉತ್ತರದ ನಿರೀಕ್ಷೆಯಲ್ಲಿ ಇದ್ದೇನೆ ಎಂದಿದ್ದಾರೆ.
ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi)ಯ ವಿಚಾರಣೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯದ ಕ್ರಮವನ್ನು ಖಂಡಿಸಿ ಪ್ರತಿಭಟಿಸುತ್ತಿರುವ ಕಾಂಗ್ರೆಸ್ ನಾಯಕರಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಪಂಚ ಪ್ರಶ್ನೆಗಳನ್ನು ಕೇಳಿದ್ದಾರೆ.
ನ್ಯಾಷನಲ್ ಹೆರಾಲ್ಡ್ ವಿಚಾರದಲ್ಲಿ ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಇಡಿ ವಿಚಾರಣೆ ಎದುರಿಸಿ ಹೊರಬಂದಿದ್ದಾರೆ. ಈ ವೇಳೆ ಸುಮ್ಮನಿದ್ದ ಕೈ ನಾಯಕರು ಇದೀಗ ಅದೇ ಪ್ರಕರಣದಲ್ಲಿ ರಾಹುಲ್ ಗಾಂಧಿ ವಿಚಾರಣೆ ಎದುರಿಸಿದಾಗ ಇಡೀ ದೇಶಾದ್ಯಂತ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಬಿಜೆಪಿ ಆರೋಪಿಸುತ್ತಿದೆ. ಇದರ ಬೆನ್ನಲ್ಲೆ ಸಿಟಿ ರವಿ ಅವರು, ಸೋನಿಯಾ, ರಾಹುಲ್ ಕುಟುಂಬ ಕಾನೂನಿಗಿಂತ ದೊಡ್ಡವರೇ ಎಂಬಿತ್ಯಾದಿ ಪ್ರಶ್ನೆಗಳನ್ನು ಕೈ ನಾಯಕರಿಗೆ ಕೇಳಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಯಾವಾಗಲೂ ಕಾನೂನಿನ ಬಗ್ಗೆ ಮಾತನಾಡುವವರಿಗೆ ಕೆಲವು ಪ್ರಶ್ನೆಗಳನ್ನು ಕೇಳುತ್ತೇನೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಕುಟುಂಬ ಕಾನೂನಿಗಿಂತ ಅತೀತರೇ? ಹಾಗಿದ್ದರೆ ಸಂವಿಧಾನದ ಯಾವ ಅಡಿಯಲ್ಲಿ ಪ್ರಾತಿನಿಧ್ಯ ನೀಡಲಾಗಿದೆ? ಅಸೋಸಿಯೇಷನ್ ಜರ್ನಲ್ನಲ್ಲಿರುವ ಷೇರುದಾರರು ಎಷ್ಟು? ಯಂಗ್ ಇಂಡಿಯಾದಲ್ಲಿರುವ ಪಾಲುದಾರರು ಎಷ್ಟು? ಅಲ್ಲಿ ಷೇರುದಾರರು, ಇಲ್ಲಿ ಪಾಲುದಾರರು ಎಷ್ಟು? ಷೇರನ್ನು ಖಾಸಗಿ ಕಂಪನಿಗೆ ವರ್ಗಾವಣೆ ಮಾಡುವ ಅಧಿಕಾರವನ್ನು ಕಾನೂನಿನಲ್ಲಿ ನೀಡಲಾಗಿದೆಯೇ? ವರ್ಗಾವಣೆ ವೇಳೆ ಮೂಲ ಷೇರುದಾರರ ಅನುಮತಿ ಇದೆಯಾ? ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಜೂನ್ 20 ಮತ್ತು 21ರಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯ ಭೇಟಿ: ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ
ಒಂದು ಕಂಪನಿಯಿಂದ ಮತ್ತೊಂದು ಕಂಪನಿಗೆ ವರ್ಗಾವಣೆ ಮಾಡುವಾಗ ಎಜೆಎಲ್ ಕಂಪನಿಯ ಸಾಲ ಎಷ್ಟಿತ್ತು? ಆಸ್ತಿಯ ಪ್ರಮಾಣ ಇವತ್ತಿನ ಮಾರುಕಟ್ಟೆ ದರ ಅಲ್ಲ, ಸಬ್ ರಿಜಿಸ್ಟ್ರಾರ್ ಮೌಲ್ಯ 2 ಸಾವಿರ ಕೋಟಿ ಬೆಲೆ ಬಾಳುವ ಆಸ್ತಿ ಅಸೆಸ್ ಮಾಡದೇ ಕೇವಲ 50 ಲಕ್ಷಕ್ಕೆ ವರ್ಗಾವಣೆ ಮಾಡಿರೋದು ಅಕ್ರಮ ಅಲ್ವಾ? ಯಂಗ್ ಇಂಡಿಯಾ ಕಂಪನಿ ಈಗ ಯಾವ ಕಾರಣವಾಗಿ ಯಾವ ವಹಿವಾಟು ನಡೆಸುತ್ತಿದೆ? ಎಂದು ಪ್ರಶ್ನಿಸಿದ ಸಿ.ಟಿ.ರವಿ, ನನ್ನ ಈ ಪ್ರಶ್ನೆಗಳಿಗೆ ಅವರು ಉತ್ತರ ಕೊಡುತ್ತಾರೆ ಎಂದು ಭಾವಿಸಿದ್ದೇನೆ ಎಂದರು.
ಎಜೆಎಲ್ ಆರಂಭದಲ್ಲಿ ಐದೂವರೆ ಸಾವಿರ ಷೇರುದಾರರಿದ್ದರು. ಯಂಗ್ ಇಂಡಿಯಾಗೆ ವರ್ಗಾವಣೆಯಾದಾಗ ಇದ್ದದ್ದು 1,500 ಷೇರುದಾರರು. ಇಲ್ಲಿ ವರ್ಗಾವಣೆ ಆದಾಗ ನಾಲ್ವರು ಪಾಲುದಾರರಿದ್ದಾರೆ. ಸೋನಿಯಾ ಗಾಂಧಿ 38%, ರಾಹುಲ್ ಗಾಂಧಿ 38% ಪಾಲು ಮತ್ತು ಉಳಿದದ್ದು ಮೋತಿಲಾಲ್ ವೋರಾ, ಆಸ್ಕರ್ ಫರ್ನಾಂಡಿಸ್ ಪಾಲು ಇತ್ತು. ಈ ಪೈಕಿ ಮೋತಿಲಾಲ್ ವೋರಾ, ಆಸ್ಕರ್ ಫರ್ನಾಂಡಿಸ್ ಈಗ ಇಲ್ಲ ಎಂದರು.
ಇದನ್ನೂ ಓದಿ: Presidential Poll 2022: ಮೊದಲ ದಿನ 11 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ, 1 ತಿರಸ್ಕೃತ
ರಾಹುಲ್ ಗಾಂಧಿಯನ್ನು ಟಾರ್ಗೆಟ್ ಮಾಡಿದ್ದಾರೆ, ಭಯಭೀತರಾಗಿದ್ದಾರೆ ಎಂದು ಆರೋಪ ಮಾಡಲಾಗುತ್ತಿದೆ. ನಿಮ್ಮ ನಾಯಕರು ಕಾಲಿಟ್ಟ ಕಡೆಯಲ್ಲೆಲ್ಲಾ ನಿಮ್ಮ ಪಕ್ಷ ಸೋತಿದೆ. ಹೀಗಿದ್ದಾಗ ನಾವು ಯಾಕೆ ಟಾರ್ಗೆಟ್ ಮಾಡಬೇಕು? ಉತ್ತರ ಪ್ರದೇಶ ಚುನಾವಣೆಯಲ್ಲಿ 399 ಕ್ಷೇತ್ರದಲ್ಲಿ ಸ್ಪರ್ಧಿಸಿ 387 ಸ್ಥಾನದಲ್ಲಿ ಠೇವಣಿ ಕಳೆದುಕೊಂಡಿದೆ. ವಿಚಾರಣೆ ತಡೆ ನೀಡಲು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದೀರಿ. ಅದನ್ನು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಹೀಗಿದ್ದಾಗ ಟಾರ್ಗೆಟ್ ಆಗಲು ಹೇಗೆ ಸಾಧ್ಯ? ಸಿದ್ದರಾಮಯ್ಯನವರೇ ನೀವು ವಕೀಲರಾಗಿ, ಸಿಎಂ ಆಗಿ ಎಲ್ಲಾ ರೀತಿಯ ನಾಯಕರಾಗಿದ್ದೀರಿ. ನಿಮ್ಮಿಂದ ನನ್ನ ಪಂಚ ಪ್ರಶ್ನೆಗಳಿಗೆ ಉತ್ತರ ಬೇಕಿದೆ ಎಂದರು.
ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ