ಮಂಡ್ಯ: ರಾಜ್ಯ ವಿಧಾನಸಭೆ ಚುನಾವಣೆಗೆ ದಿನಗಳನ್ನಷ್ಟೇ ಲೆಕ್ಕ ಹಾಕಲಾಗುತ್ತಿದ್ದು, ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರದ ಗದ್ದುಗೆ ಹಿಡಿಯಲು ಬಿಜೆಪಿ ಟೊಂಕ ಕಟ್ಟಿ ನಿಂತಿದೆ. ಅದರಂತೆ ಕೇಂದ್ರದ ಬಿಜೆಪಿ ನಾಯಕರು ರಾಜ್ಯದಲ್ಲಿ ಮೇಲಿಂದ ಮೇಲೆ ಪ್ರವಾಸ ಮಾಡುತ್ತಿದ್ದಾರೆ. ಇದೀಗ ಮತ್ತೆ ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಮಾರ್ಚ್ 12 ರಂದು ಧಾರವಾಡ (Dharwad) ಮತ್ತು ಮಂಡ್ಯ (Mandya) ಜಿಲ್ಲೆಗಳಿಗೆ ಭೇಟಿ ನೀಡಲಿದ್ದಾರೆ. ಧಾರವಾಡದಲ್ಲಿ ಐಐಟಿ (Dharwad IIT) ಮತ್ತು ಮಂಡ್ಯದಲ್ಲಿ ಮೈಸೂರು-ಬೆಂಗಳೂರು ಎಕ್ಸ್ಪ್ರೆಸ್ ವೇ (Mysore Bengaluru Express Way) ಲೋಕಾರ್ಪಣೆಮಾಡಲಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ ಮಂಡ್ಯದಲ್ಲಿ ಮೋದಿಗೆ ಪ್ರತಿಭಟನೆಯ ಬಿಸಿ ತಟ್ಟುವ ಸಾಧ್ಯತೆ ಇದೆ.
ಕಬ್ಬು ಹಾಗೂ ಹಾಲಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡುವಂತೆ ಕಬ್ಬು ಬೆಳೆಗಾರರು ಹಲವು ಬಾರಿ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಬಿಸಿ ತಟ್ಟಿಸಿದ್ದರು. ಆದರೆ ಇದಕ್ಕೆಲ್ಲಾ ಸರ್ಕಾರ ಕ್ಯಾರೇ ಎನ್ನುತ್ತಿಲ್ಲ. ಹೀಗಾಗಿ ಪ್ರಧಾನಿ ಮೋದಿ ಆಗಮನದಂದು ರಾಜ್ಯ ರೈತ ಸಂಘ ಪ್ರತಿಭಟನೆ ನಡೆಸಲು ನಿರ್ಧಾರಿಸಿದೆ. ಮಾರ್ಚ್ 12ರಂದು ಬೃಹತ್ ಸಮಾವೇಶದಲ್ಲಿ ಭಾಗಿಯಾಗಲು ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಗೆಜ್ಜಲಗೆರೆ ಕಾಲೋನಿಗೆ ಆಗಮಿಸುತ್ತಿರುವ ಮೋದಿಗೆ ಕಪ್ಪು ಬಟ್ಟೆ ಪ್ರದರ್ಶಿಸಿ ಪ್ರತಿಭಟಿಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾದ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದ್ದಾರೆ. ಕಬ್ಬು ಹಾಗೂ ಹಾಲಿಗೆ ವೈಜ್ಞಾನಿಕ ಬೆಲೆ ನಿಗದಿ ಪಡಿಸದ ಹಿನ್ನಲೆ ಪ್ರಧಾನಿ ಮೋದಿ ಸಾಗುವ ಮಾರ್ಗ ಮಧ್ಯೆ ಕಪ್ಪು ಬಟ್ಟೆ ಪ್ರದರ್ಶಿಸಲು ಪ್ಲಾನ್ ಮಾಡಲಾಗಿದೆ.
ಇದನ್ನೂ ಓದಿ: ಸತ್ಯಸಾಯಿ ಮೆಡಿಕಲ್ ಕಾಲೇಜು ಉದ್ಘಾಟನೆಗೆ ಮಾ. 25ಕ್ಕೆ ಚಿಕ್ಕಬಳ್ಳಾಪುರಕ್ಕೆ ಪ್ರಧಾನಿ ಮೋದಿ ಆಗಮನ
ಮಾರ್ಚ್ 12ರಂದು ಮಂಡ್ಯಕ್ಕೆ ಪ್ರಧಾನಿ ಮೋದಿ ಆಗಮಿಸುತ್ತಿರುವ ಹಿನ್ನಲೆ ಗೆಜ್ಜಲಗೆರೆ ಕಾಲೋನಿಯಲ್ಲಿ ಸಚಿವ ಗೋಪಾಲಯ್ಯ ಅವರು ಪೂರ್ವಭಾವಿ ಸಭೆ ನಡೆಸಿದರು. ಅಧಿಕಾರಿಗಳ ಜೊತೆ ಒಂದು ಗಂಟೆ ಚರ್ಚಿಸಿದರು. ಬೃಹತ್ ಸಮಾವೇಶಕ್ಕೆ ಗೆಜ್ಜಲಗೆರೆ ಕಾಲೋನಿಯಲ್ಲಿ ವೇದಿಕೆ ಸಜ್ಜುಗೊಳಿಸಲಾಗುತ್ತಿದ್ದು, ಸಮಾವೇಶದಲ್ಲಿ 1 ಲಕ್ಷಕ್ಕೂ ಹೆಚ್ಚು ಜನ ಭಾಗಿಯಾಗುವ ಸಾಧ್ಯತೆ ಇದೆ. ಆ ಮೂಲಕ ದಳಪತಿಗಳ ಭದ್ರಕೋಟೆ ಛಿದ್ರಗೊಳಿಸಲು ಬಿಜೆಪಿ ಗೇಮ್ ಪ್ಲ್ಯಾನ್ ಮಾಡಿಕೊಂಡಿದೆ.
ಮಾರ್ಚ್ 12 ರಂದು ಮೋದಿಯಿಂದ ಉದ್ಘಾಟನೆಗೊಳ್ಳಲಿರುವ ಧಾರವಾಡ ಐಐಟಿಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಭೇಟಿ ನೀಡಿ ಕೈಗೊಂಡ ಸಿದ್ಧತೆಗಳ ಬಗ್ಗೆ ಪರಿಶೀಲನೆ ನಡೆಸಿದರು. ಮಾರ್ಚ್ 12ರಂದು ಮಧ್ಯಾಹ್ನ 2 ಗಂಟೆಗೆ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಮೋದಿ ಅವರು ಐಐಟಿ ಉದ್ಘಾಟನೆ ಮಾಡಲಿದ್ದಾರೆ. ಜೊತೆಗೆ ವಿವಿಧ ಯೋಜನೆಗಳನ್ನೂ ಉದ್ಘಾಟಿಸಲಿದ್ದಾರೆ. ತುಪ್ಪರಿಹಳ್ಳ ಅಭಿವೃದ್ಧಿ ಯೋಜನೆಗೆ ಶಂಕುಸ್ಥಾಪನೆ, ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಅತೀ ಉದ್ದನೆಯ ಪ್ಲಾಟ್ ಫಾರ್ಮ್ ಲೋಕಾರ್ಪಣೆ, ಕಿಮ್ಸ್‌ನ ನೂತನ ಹಾಸ್ಟೆಲ್ ಉದ್ಘಾಟನೆ, ಮನೆ ಮನೆಗೆ ನಳ ಯೋಜನೆಯ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಎಲ್ಲ ಕಾರ್ಯಕ್ರಮಗಳಿಗೆ ತಯಾರಿ ನಡೆದಿದೆ. ಈ ವರ್ಷ ವಿಶ್ವ ಸಿರಿ ಧಾನ್ಯ ವರ್ಷಾಚರಣೆ ನಡೆದಿದೆ. ಸಿರಿಧಾನ್ಯಗಳ ಮೂಲಕವೇ ಪ್ರಧಾನಿಯವರನ್ನು ಸ್ವಾಗತಿಸಲಾಗುವುದು. ಸ್ಥಳೀಯ ಕಲಾವಿದರು ವಿವಿಧ ವೇಷಭೂಷಣ ಮೂಲಕ ಸ್ವಾಗತ ಮಾಡುತ್ತಾರೆ. ಕಾರ್ಯಕ್ರಮಕ್ಕೆ ಧಾರವಾಡ ಜಿಲ್ಲೆಯಿಂದಲೇ 2 ಲಕ್ಷ ಜನ ಬರಲಿದ್ದಾರೆ ಎಂದು ಜೋಶಿ ಹೇಳಿದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:56 pm, Tue, 7 March 23