ಗುಜರಾತ್ ವಿಧಾನಸಭಾ ಚುನಾವಣೆ: ಆಡಳಿತಾರೂಢ ಭಾರತೀಯ ಜನತಾ ಪಕ್ಷ (BJP) ರಾಜ್ಯದಲ್ಲಿ ಬಿರುಸಿನ ಪ್ರಚಾರ ಕೈಗೊಂಡಿದ್ದು, ಯಾವುದೇ ಆಡಳಿತ ವಿರೋಧಿ ಅಲೆ ಇಲ್ಲ ಎಂಬುದನ್ನು ತೋರಿಸಲು ಹಾಗೂ ಮತ್ತೊಮ್ಮೆ ರಾಜ್ಯದಲ್ಲಿ ಗದ್ದುಗೆ ಏರಲು ಎಲ್ಲಿಲ್ಲದ ಕಸರತ್ತು ನಡೆಸುತ್ತಿದೆ. ಅದರಂತೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಮುಂದಿನ ಹದಿನೈದು ದಿನಗಳಲ್ಲಿ ರಾಜ್ಯಾದ್ಯಂತ ಸುಮಾರು 25 ರ‍್ಯಾಲಿಗಳನ್ನು ನಡೆಸಲಿದ್ದಾರೆ. ಪಕ್ಷದ ಚಾಣಕ್ಯ ಎಂದೆನಿಸಿಕೊಂಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಕೂಡ ರ‍್ಯಾಲಿಗಳಲ್ಲಿ ಭಾಗಿಯಾಗಲಿದ್ದಾರೆ. ಗುಜರಾತ್‌ನ ಸೌರಾಷ್ಟ್ರದಲ್ಲಿ ನವೆಂಬರ್ 20-22ರ ವರೆಗೆ ಸತತ ಮೂರು ದಿನಗಳ ಕಾಲ ಮೋದಿ ಅವರು ರ‍್ಯಾಲಿಗಳನ್ನು ನಡೆಸಲಿದ್ದಾರೆ.
ಈ ರ‍್ಯಾಲಿಗಳಲ್ಲಿ 1.5 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ನವೆಂಬರ್ 20 ರಂದು ಸೌರಾಷ್ಟ್ರದಲ್ಲಿ ಮೂರು, ನವೆಂಬರ್ 21 ರಂದು ದಕ್ಷಿಣ ಗುಜರಾತ್ ಮತ್ತು ಸೌರಾಷ್ಟ್ರದಲ್ಲಿ ಎರಡು ಮತ್ತು ನವೆಂಬರ್ 22 ರಂದು ಸೌರಾಷ್ಟ್ರದಲ್ಲಿ ಎರಡು ರ‍್ಯಾಲಿಗಳನ್ನು ಪ್ರಧಾನಿ ನಡೆಸಲಿದ್ದಾರೆ.
ರಾಜ್ಯದ 182 ವಿಧಾನಸಭಾ ಸ್ಥಾನಗಳ ಪೈಕಿ 48 ಕ್ಷೇತ್ರಗಳು ಈ ಪ್ರದೇಶದಲ್ಲಿದ್ದು, ಡಿಸೆಂಬರ್ 1 ರಂದು ಮೊದಲ ಹಂತದಲ್ಲಿ ಮತದಾನ ನಡೆಯಲಿದೆ. 2017ರ ವಿಧಾನಸಭಾ ಚುನಾವಣೆಯಲ್ಲಿ ಪಾಟಿದಾರ್ ಚಳವಳಿಯಿಂದ ಸಿಕ್ಕ ಬೆಂಬಲದ ಆಧಾರದ ಮೇಲೆ ಕಾಂಗ್ರೆಸ್ ಇಲ್ಲಿ 28 ಸ್ಥಾನಗಳನ್ನು ಗೆದ್ದಿತ್ತು. ಆದರೆ ಬಿಜೆಪಿ ಶಾಸಕರ ಸಂಖ್ಯೆ 30 ರಿಂದ 19ಕ್ಕೆ ಇಳಿದಿದೆ. ಪಕ್ಷವು ರಾಜ್ಯ ಚುನಾವಣೆಯಲ್ಲಿ ಗೆದ್ದಿದ್ದರೂ ಕಾಂಗ್ರೆಸ್ ಭದ್ರಕೋಟೆಯನ್ನು ಮುರಿಯಲು ಸಾಧ್ಯವಾಗಿರಲಿಲ್ಲ.
ಇದನ್ನೂ ಓದಿ: ವೋಟರ್ ಐಡಿ ‘ಚಿಲುಮೆ’: ಚಿಲುಮೆ ಸಂಸ್ಥೆ ಹೇಗೆ ಮತದಾರರ ಮಾಹಿತಿ ಕಲೆಹಾಕುತ್ತಿತ್ತು ಗೊತ್ತಾ? ಇಲ್ಲಿದೆ ಮಾಹಿತಿ
ನವೆಂಬರ್ 21 ಪ್ರಧಾನಿ ಮೋದಿ ಅವರು ಸುರೇಂದ್ರನಗರ, ಭರೂಚ್ ಮತ್ತು ನವಸಾರಿಯಲ್ಲಿ ಮೂರು ರ‍್ಯಾಲಿಗಳನ್ನು ನಡೆಸಲಿದ್ದಾರೆ. ಭರೂಚ್ ಮಾಜಿ ಕಾಂಗ್ರೆಸ್ ಪ್ರಬಲ ಅಹ್ಮದ್ ಪಟೇಲ್ ಅವರ ಕ್ಷೇತ್ರವಾಗಿದ್ದರೆ, ನವಸಾರಿಯಿಂದ ಬಂದಿರುವ ಬಿಜೆಪಿ ರಾಜ್ಯಾಧ್ಯಕ್ಷ ಸಿಆರ್ ಪಾಟೀಲ್ ಅವರು ತಮ್ಮ ಲೋಕಸಭಾ ಸ್ಥಾನವನ್ನು ಭಾರೀ ಅಂತರದಲ್ಲಿ ಗೆಲ್ಲುತ್ತಿದ್ದಾರೆ.
ಗುಜರಾತ್‌ನಿಂದ ಬಂದಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ರಾಜ್ಯದಲ್ಲಿ 15ಕ್ಕೂ ಹೆಚ್ಚು ರ‍್ಯಾಲಿಗಳನ್ನು ನಡೆಸುವ ನಿರೀಕ್ಷೆಯಿದೆ. ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಸೇರಿದಂತೆ 40 ನಾಯಕರ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಪಕ್ಷವು ಈಗಾಗಲೇ ರಚಿಸಿದೆ. ಅವರು ಕನಿಷ್ಠ 2-3 ದಿನಗಳ ಕಾಲ ಪ್ರಚಾರ ಮಾಡುವ ನಿರೀಕ್ಷೆಯಿದೆ.
ಇದನ್ನೂ ಓದಿ: ವೋಟರ್ ಐಡಿ ಪ್ರಕರಣ: ಕಾಂಗ್ರೆಸ್ ವಿರುದ್ಧವೇ ಹಗರಣ ತಿರುಗಿಸಿದ ಬಿಜೆಪಿ, ಮಹತ್ವದ ದಾಖಲೆ ಬಿಡುಗಡೆ
ಶನಿವಾರ (ನವೆಂಬರ್ 19) ರಾಜ್ಯಕ್ಕೆ ಆಗಮಿಸಿದ ಮೋದಿ, ವಲ್ಸಾದ್ ಜಿಲ್ಲೆಯ ಜುಜ್ವಾ ಗ್ರಾಮದಲ್ಲಿ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದರು. ವಾಪಿಯಲ್ಲಿ ರೋಡ್ ಶೋ ಕೂಡ ನಡೆಸಿದ್ದರು. ವಿಧಾನಸಭೆ ಚುನಾವಣೆ ವೇಳಾಪಟ್ಟಿ ಪ್ರಕಟವಾದ ಬಳಿಕ ತವರು ರಾಜ್ಯಕ್ಕೆ ಮೋದಿ ಅವರು ಎರಡನೇ ಬಾರಿ ಭೇಟಿ ನೀಡುತ್ತಿದ್ದಾರೆ. ನವೆಂಬರ್ 6 ರಂದು ತಮ್ಮ ಕೊನೆಯ ಭೇಟಿಯ ಸಮಯದಲ್ಲಿ ಅವರು ವಲ್ಸಾದ್ ಜಿಲ್ಲೆಯ ಕಪ್ರಡಾದಲ್ಲಿ ರ‍್ಯಾಲಿಯನ್ನು ಉದ್ದೇಶಿಸಿ ಮತ್ತು ಭಾವನಗರದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಗುಜರಾತ್ ವಿಧಾನಸಭೆಯ 182 ಸ್ಥಾನಗಳ ಪೈಕಿ 89 ಸ್ಥಾನಗಳಿಗೆ ಡಿಸೆಂಬರ್ 1 ರಂದು ನಡೆಯಲಿರುವ ಗುಜರಾತ್ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನದಲ್ಲಿ 70 ಮಹಿಳೆಯರು ಸೇರಿದಂತೆ ಒಟ್ಟು 788 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ಚುನಾವಣಾ ಆಯೋಗವು ಉಳಿದ 93 ಸ್ಥಾನಗಳಿಗೆ ಇದುವರೆಗೆ 1,515 ನಾಮಪತ್ರಗಳನ್ನು ಸ್ವೀಕರಿಸಿದೆ. ಡಿಸೆಂಬರ್ 5 ರಂದು ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿದೆ.
ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:07 am, Sun, 20 November 22