ಮಂಗಳೂರು, (ಜುಲೈ 26): ಬಿಜೆಪಿಯಿಂದ ಬಂಡಾಯ ಎದ್ದು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಮೂರನೇ ಸ್ಥಾನಕ್ಕೆ ಕಳುಹಿಸಿದ್ದ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ(Arun Kumar puthila) ಇದೀಗ ಗ್ರಾಮ ಪಂಚಾಯತ್ ಉಪಚುನಾವಣೆಯಲ್ಲೂ ಸಹ ಕಮಾಲ್ ಮಾಡಿದ್ದಾರೆ. ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮ ಪಂಚಾಯತಿ ಉಪಚುನಾವಣೆಯಲ್ಲಿ ಪುತ್ತಿಲ ಪರಿವಾರ(puthila pariva) ಅಭ್ಯರ್ಥಿಗೆ ಗೆಲುವಾಗಿದೆ. ಇನ್ನು ಗ್ರಾಮ ಪಂಚಾಯಿತಿ ಬೈ ಎಲೆಕ್ಷನ್ನಲ್ಲೂ ಸಹ ಬಿಜೆಪಿ ಬೆಂಬಲಿತ ಅಭ್ಯರ್ಥಿ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ.
ಪುತ್ತೂರು ತಾಲೂಕಿನ ಎರಡು ಗ್ರಾಮಪಂಚಾತಿಗಳ ತಲಾ ಒಂದೊಂದು ವಾರ್ಡ್ಗೆ ಉಪಚುನಾವಣೆ, ಆರ್ಯಾಪು ಗ್ರಾಮ ಪಂಚಾಯಿತಿಯ 2ನೇ ವಾರ್ಡ್ ಹಾಗೂ ನಿಡ್ಪಳ್ಳಿ ಗ್ರಾಮಪಂಚಾತಿಯ 2ನೇ ವಾರ್ಡ್ಗೆ ಉಪಚುನಾವಣೆ ನಡೆದಿದ್ದು, ಈ ಪೈಕಿ ಆರ್ಯಾಪು ಗ್ರಾಮ ಪಂಚಾಯತಿಯ 2ನೇ ವಾರ್ಡ್ನ ಫಲಿತಾಂಶ ಪ್ರಕಟವಾಗಿದೆ. ಇದರಲ್ಲಿ ಪುತ್ತಿಲ ಪರಿವಾರ ಬೆಂಬಲಿತ ಅಭ್ಯರ್ಥಿ ಸುಬ್ರಹ್ಮಣ್ಯ ಬಲ್ಯಾಯ ಎನ್ನುವರು ಒಟ್ಟು 499 ಮತಗಳನ್ನು ಪಡೆದು 146 ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದಾರೆ.
ವಾರ್ಡ್-2ರ ಹಿಂದುಳಿದ ವರ್ಗ ಎ ಮೀಸಲು ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಸದಸ್ಯ ರುಕ್ಮಯ್ಯ ಮೂಲ್ಯರವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಜು.23ರಂದು ನಡೆದ ಉಪ ಚುನಾವಣೆಯಲ್ಲಿ ಒಟ್ಟು 1237 ಮತಗಳ ಪೈಕಿ 999 ಮತಗಳು ಚಲಾವಣೆಯಾಗಿದ್ದವು. ಇದರಲ್ಲಿ ಪುತ್ತಿಲ ಪರಿವಾರ ಬೆಂಬಲಿತ ಅಭ್ಯರ್ಥಿ ಸುಬ್ರಹ್ಮಣ್ಯ ಬಲ್ಯಾಯ 499 ಮತ, ಕಾಂಗ್ರೆಸ್ ಬೆಂಬಲಿತ ಪುರುಷೋತ್ತಮ ಪ್ರಭು 353 ಮತ ಗಳನ್ನು ಪಡೆದರೆ, ಬಿಜೆಪಿ ಬೆಂಬಲಿತ ಅಭ್ಯರ್ಥಿ ಜಗದೀಶ ಭಂಡಾರಿ ಕೇವಲ 140 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. ಇನ್ನು ನಿಡ್ಪಳ್ಳಿ 2ನೇ ವಾರ್ಡ್ ಮತ ಎಣಿಕೆ ಕಾರ್ಯ ಪುತ್ತೂರು ತಾಲೂಕು ಪುತ್ತೂರು ಮಿನಿ ವಿಧಾನಸೌಧದಲ್ಲಿ ನಡೆದಿದ್ದು, ಇದರಲ್ಲಿ ಯಾರು ಗೆಲ್ಲುತ್ತಾರೆ ಎನ್ನುವ ಕುತೂಹಲ ಮೂಡಿಸಿದೆ.
ಪುತ್ತಿಲ ಪರಿವಾರ ಎನ್ನುವ ಹೊಸ ಸಂಘಟನೆ ಕಟ್ಟಿಕೊಂಡಿರುವ ಅರುಣ್ ಕುಮಾರ್ ಪುತ್ತಿಲ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾತ್ರವಲ್ಲ ಕರಾವಳಿ ಭಾಗದ ರಾಜ್ಯ ರಾಜಕಾರಣದಲ್ಲಿ ಹಲ್ಚಲ್ ಎಬ್ಬಿಸಿದ್ದು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅರುಣ್ ಕುಮಾರ್ ಪುತ್ತಿಲ ಅವರು ಪುತ್ತೂರಿನಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು. ಆದ್ರೆ, ಕಾಂಗ್ರೆಸ್ನ ಅಶೋಕ್ ರೈ ಗೆದ್ದಿದ್ದು, ಬಿಜೆಪಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 11:31 am, Wed, 26 July 23