ಬೆಂಗಳೂರು: ನಾನು ಅಶೋಕ ಎಂದು ಮಂತ್ರಿ ಮಾಡಿಲ್ಲ. ಒಕ್ಕಲಿಗ ಸಮುದಾಯದಲ್ಲಿ ಹುಟ್ಟಿದ್ದಕ್ಕೆ ಮಂತ್ರಿ ಮಾಡಿದ್ದಾರೆ. ಒಕ್ಕಲಿಗ ಸಮುದಾಯದಿಂದ ಬಂದವನು ಎಂಬ ಹೆಮ್ಮೆಯಿದೆ ಎಂದು ಹಾಸನದಲ್ಲಿ ಕಂದಾಯ ಸಚಿವ ಆರ್. ಅಶೋಕ್ ಹೇಳಿಕೆ ನೀಡಿದ್ದಾರೆ. ಒಕ್ಕಲಿಗ ಸಮುದಾಯ ಭವನ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದ್ದಾರೆ. ಅಧಿಕಾರ ಎನ್ನುವುದು ನೀರ ಮೇಲಿನ ಗುಳ್ಳೆಯಿದ್ದ ಹಾಗೆ. ಅಧಿಕಾರ ಎನ್ನುವುದು ಯಾರಿಗೂ ಶಾಶ್ವತವಲ್ಲ. ನಾವು ಮಾಡುವ ಕೆಲಸ ಶಾಶ್ವತವಾಗಿ ಉಳಿಯುತ್ತದೆ ಎಂದು ಆರ್. ಅಶೋಕ್ ಹೇಳಿದ್ದಾರೆ.
ಮುಖ್ಯಮಂತ್ರಿಗಳು ಆರ್ಎಸ್ಎಸ್ ಗುಲಾಮಗಿರಿಯಿಂದ ಹೊರ ಬರಲಿ ಎಂಬ ಕೈ ನಾಯಕ ಮಹದೇವಪ್ಪ ಹೇಳಿಕೆಗೆ ಅಶೋಕ್ ತಿರುಗೇಟು ನೀಡಿದ್ದಾರೆ. ಮಹದೇವಪ್ಪ ಅವರು ಕುಟುಂಬ ರಾಜಕಾರಣದಿಂದ ಬಂದವ್ರು. ಅವರು ಅಪ್ಪ, ಅಮ್ಮ, ತಾತ ಆ ಸಂಪ್ರದಾಯದಿಂದ ಬಂದವ್ರು. ಮೊದಲು ಅವರು ಕುಟುಂಬ ರಾಜಕಾರಣದಿಂದ ಹೊರಬರಲಿ. ಆರ್ಎಸ್ಎಸ್ ಯಾವುದೇ ಕುಟುಂಬಕ್ಕೆ ಮಣೆ ಹಾಕಿಲ್ಲ. ಕುಟುಂಬಕ್ಕೆ ಮಣೆ ಹಾಕಿದ ಪಕ್ಷ ಕಾಂಗ್ರೆಸ್ ಎಂದು ಅಶೋಕ್ ವಾಗ್ದಾಳಿ ನಡೆಸಿದ್ದಾರೆ. ನಮ್ಮ ಬಗ್ಗೆ ಹೇಳುವ ನೈತಿಕತೆ ಕಾಂಗ್ರೆಸ್ ನಾಯಕರಿಗಿಲ್ಲ ಎಂದು ಅವರು ತಿಳಿಸಿದ್ದಾರೆ.
ಜಾತಿಗಣತಿ ವಿಚಾರವಾಗಿ ಸಿದ್ದರಾಮಯ್ಯ ಹೇಳಿಕೆಗೆ ಆರ್. ಅಶೋಕ್ ಪ್ರತಿಕ್ರಿಯೆ ನೀಡಿದ್ದಾರೆ. ಸಿದ್ದರಾಮಯ್ಯ ಹೇಳುತ್ತಿರುವುದೆಲ್ಲಾ ಸುಳ್ಳು. ಜಾತಿ ಗಣತಿಗೆ ಸರ್ಕಾರದ ಕಾರ್ಯದರ್ಶಿ ಇನ್ನು ಸಹಿಯನ್ನೇ ಹಾಕಿಲ್ಲ. ಕಾಂಗ್ರೆಸ್ ಐದು ವರ್ಷ ಅವದಿಯಲ್ಲಿ ಜಾತಿ ಗಣತಿ ಬಿಡುಗಡೆಗೊಳಿಸದೆ ನಾಟಕವಾಡುತ್ತಿದ್ದಾರೆ. ಇದು ರಾಜಕೀಯದ ಕಪಟ ನಾಟಕ ಎಂದು ಸಿದ್ದರಾಮಯ್ಯ ವಿರುದ್ಧ ಅಶೋಕ್ ಕಿಡಿಕಾರಿದ್ದಾರೆ.
ಅವರಿಗೆ ಧೈರ್ಯ ಇರಲಿಲ್ಲ ಹಾಗಾಗಿ ಆಗ ಬಿಡುಗಡೆ ಮಾಡಲಿಲ್ಲ. ಈಗ ಬೇರೆ ಸರ್ಕಾರ ಬಂದಾಗ ಕೇಳುತ್ತಿದ್ದಾರೆ. ಗಣತಿ ಮಾಡಿದ ವರದಿ ಬಿಡುಗಡೆ ಮಾಡೊಕೆ ಎಷ್ಡು ದಿನ ಬೇಕಿತ್ತು. ಅವರ ಅವಧಿಯಲ್ಲಿ ಏಕೆ ಬಿಡುಗಡೆ ಮಾಡಲಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ಹೇಮಾವತಿ ಜಲಾಶಯದ ಪುನರ್ವಸತಿ ಹೆಸರಿನಲ್ಲಿ ಅಕ್ರಮ ವಿಚಾರವಾಗಿ ಅಶೋಕ್ ಮಾತನಾಡಿದ್ದಾರೆ. ಈ ವಿಷಯದಲ್ಲಿ ಯಾರೊಬ್ಬರನ್ನೂ ರಕ್ಷಿಸುವ ಪ್ರಶ್ನೆಯಿಲ್ಲ. ನಾನು ಕಂದಾಯ ಮಂತ್ರಿ ಆದ ನಂತರವೇ ತನಿಖೆ ಶುರು ಆಗಿದೆ. ಸರ್ಕಾರಿ ಆಸ್ತಿಯನ್ನು ರಕ್ಷಿಸುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿ ವಿಚಾರವಾಗಿ ಮಾತನಾಡಿದ್ದಾರೆ. ನಾವು ಭಾರತೀಯ ಸಂಸ್ಕ್ರತಿ ಶಿಕ್ಷಣ ತರುತ್ತಿದ್ದೇವೆ. ಕಾಂಗ್ರೆಸ್ನವರು ಇಟಲಿ ಶಿಕ್ಷಣ ನೀತಿ ತರಲು ಹೋರಾಡುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಈ ಹಿನ್ನೆಲೆಯಲ್ಲಿ ನಮ್ಮ ರಾಜ್ಯದಲ್ಲಿ ಹೊಸ ಶಿಕ್ಷಣ ನೀತಿಯನ್ನು ಆತುರವಾಗಿಯೇ ಜಾರಿ ಮಾಡುತ್ತಿದ್ದೇವೆ. ಕಾಂಗ್ರೆಸ್ನವರಿಗೆ ತಾಕತ್ತಿದ್ದರೆ ನಮ್ಮ ಜೊತೆ ಚರ್ಚಿಸಲಿ ಎಂದು ಸವಾಲು ಹಾಕಿದ್ದಾರೆ.
ಹಾಸನ ಜಿಲ್ಲಾ ಒಕ್ಕಲಿಗರ ಸಂಘದ ಸಮುದಾಯ ಭವನದ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಆರ್. ಅಶೋಕ್ ಭಾಗವಹಿಸಿದ್ದಾರೆ. ಅಬಕಾರಿ ಸಚಿವ ಗೋಪಾಲಯ್ಯ, ಶಾಸಕರಾದ ಶಿವಲಿಂಗೇಗೌಡ, ಪ್ರೀತಂಗೌಡ, ಲಿಂಗೇಶ್, ಎಂಎಲ್ಸಿ ಗೋಪಾಲಸ್ವಾಮಿ ಉಪಸ್ಥಿತರಿದ್ದರು. ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಶ್ರೀ ಸಾನಿಧ್ಯ ವಹಿಸಿದ್ದರು.
ಇದನ್ನೂ ಓದಿ: ಸರ್ಕಾರದಿಂದ ಭರವಸೆ ಸಿಕ್ಕಲ್ಲಿ ಮೀಸಲಾತಿ ಹೋರಾಟ ಮುಂದೆ ಹಾಕ್ತೀವಿ: ಬಸನಗೌಡ ಪಾಟೀಲ್ ಯತ್ನಾಳ್
ಇದನ್ನೂ ಓದಿ: ಸಾರಿಗೆ ಸಚಿವ ಶ್ರೀರಾಮುಲು ಒಬ್ಬ ಪೆದ್ದ: ಬಿಜೆಪಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ