ಸರ್ಕಾರದಿಂದ ಭರವಸೆ ಸಿಕ್ಕಲ್ಲಿ ಮೀಸಲಾತಿ ಹೋರಾಟ ಮುಂದೆ ಹಾಕ್ತೀವಿ: ಬಸನಗೌಡ ಪಾಟೀಲ್ ಯತ್ನಾಳ್
ಮೀಸಲಾತಿ ಲಭಿಸುವ ಭರವಸೆ ಸಿಕ್ಕಲ್ಲಿ ಹೋರಾಟ ಮುಂದೂಡುವ ಬಗ್ಗೆ ಯತ್ನಾಳ್ ಸುಳಿವು ಕೊಟ್ಟಿದ್ದಾರೆ. ಕೇವಲ ಪಂಚಮಸಾಲಿ ಅಲ್ಲ, ಹಿಂದುಳಿದ ಅನೇಕ ಸಮುದಾಯದ ಪರವಾಗಿ ಧ್ವನಿ ಎತ್ತಿದ್ದೇವೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ.
ಗದಗ: ಸರ್ಕಾರದಿಂದ ಭರವಸೆ ಸಿಕ್ಕಲ್ಲಿ ಹೋರಾಟ ಮುಂದೆ ಹಾಕ್ತೀವಿ ಎಂದು ಪಂಚಮಸಾಲಿ ಮೀಸಲಾತಿ ಹೋರಾಟದ ಬಗ್ಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಪ್ರತಿಕ್ರಿಯೆ ನೀಡಿದ್ದಾರೆ. ಅಕ್ಟೋಬರ್ ಒಂದರಂದು ನಡೆಯಲಿರುವ ಹೋರಾಟದ ಬಗ್ಗೆ ಶಾಸಕ ಬಸನಗೌಡ ಯತ್ನಾಳ್ ಪ್ರತಿಕ್ರಿಯಿಸಿದ್ದಾರೆ. ಪಂಚಮಸಾಲಿ ಪಂಚಾಯತ್ ನಂತರ ಅಕ್ಟೋಬರ್ 1 ಕ್ಕೆ ಬೆಂಗಳೂರಿನಲ್ಲಿ ಹೋರಾಟ ನಡೆಯುವ ಬಗ್ಗೆ ಈ ಮೊದಲು ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದರು. ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಹೋರಾಟ ನಡೆಯಲಿರುವ ಬಗ್ಗೆ ತಿಳಿಸಿದ್ದರು.
ಮೀಸಲಾತಿ ಲಭಿಸುವ ಭರವಸೆ ಸಿಕ್ಕಲ್ಲಿ ಹೋರಾಟ ಮುಂದೂಡುವ ಬಗ್ಗೆ ಯತ್ನಾಳ್ ಸುಳಿವು ಕೊಟ್ಟಿದ್ದಾರೆ. ಕೇವಲ ಪಂಚಮಸಾಲಿ ಅಲ್ಲ, ಹಿಂದುಳಿದ ಅನೇಕ ಸಮುದಾಯದ ಪರವಾಗಿ ಧ್ವನಿ ಎತ್ತಿದ್ದೇವೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ. ಬೊಮ್ಮಾಯಿ ಅವರು ಮೀಸಲಾತಿ ನೀಡುವ ಬಗ್ಗೆ ಭರವಸೆ ನೀಡಿದ್ದಾರೆ. ಹಿಂದುಳಿದ ಎಲ್ಲಾ ಸಮಾಜಗಳನ್ನ ವಿಶ್ವಾಸಕ್ಕೆ ತೆಗೆದುಕೊಂಡು ನ್ಯಾಯ ಒದಗಿಸುವುದಾಗಿ ಸಿಎಂ ಹೇಳಿದ್ದಾರೆ. ನಾವು ಒಂದನೇ ತಾರೀಕು ಹೋರಾಟ ಮಾಡ್ತೀವಿ ಎಂದು ಹಠ ಹಿಡಿದಿಲ್ಲ. ಕಾಲ ಮಿತಿಯಲ್ಲಿ ಕೆಲಸ ಆಗೋದಿಲ್ಲ ಅನ್ನೋದು ಗೊತ್ತಿದೆ. ಸಿಸಿ ಪಾಟೀಲ್ ಹಾಗೂ ಸಿಎಂ ಮೇಲೆ ವಿಶ್ವಾಸವಿದೆ ಎಂದು ಯತ್ನಾಳ್ ಹೇಳಿದ್ದಾರೆ.
ಅಕ್ಟೋಬರ್ 1 ರಂದು ಪಂಚಮಸಾಲಿ 2ಎ ಮೀಸಲಾತಿ ಒತ್ತಾಯಿಸಿ ಸತ್ಯಾಗ್ರಹ ಹಿನ್ನೆಲೆಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಮತ್ತೊಂದು ಸುತ್ತಿನ ಮಾತುಕತೆ ಸಾಧ್ಯತೆ ಇದೆ ಎಂದು ಗದಗ ನಗರದಲ್ಲಿ ಜಯಮೃತ್ಯಂಜಯ ಶ್ರೀಗಳು ಹೇಳಿಕೆ ನೀಡಿದ್ದಾರೆ. ಜಯಮೃತ್ಯುಂಜಯ ಶ್ರೀಗಳು ಕೂಡಲ ಸಂಗಮ ಪಂಚಮಸಾಲಿ ಪೀಠದ ಶ್ರೀಗಳು ಇವತ್ತು ಸಿಎಂ ಗದಗ ನಗರಕ್ಕೆ ಆಗಮಿಸುತ್ತಿದ್ದಾರೆ. ನಾವು ಗದಗನಲ್ಲೇ ಇದ್ದೇವೆ ಇವತ್ತು ಮಾತುಕತೆ ಆದ್ರೆ ಒಳ್ಳೆಯದು. ಶಾಸಕ ಬಸನಗೌಡ ಪಾಟೀಲ್ ಯತ್ನಾಳ, ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಇದ್ದಾರೆ. ಸಚಿವ ಸಿ ಸಿ ಪಾಟೀಲ್ ನಮ್ಮ ಹಾಗೂ ಸರ್ಕಾರದ ನಡುವೆ ಸಂಧಾನ ಕಾರ್ಯ ನಡೆಸಿದ್ದಾರೆ. ಸಿಎಂ ಮಾತಿನ ಮೇಲೆ ನಮಗೆ ಭರವಸೆ ಮೂಡಿದೆ. ಉಳಿದ ರಾಜಕಾರಣಿಗಳ ಮೇಲೆ ವಿಶ್ವಾಸವಿಲ್ಲ. ಮಾತುಕತೆ ನಂತರ ಹೋರಾಟದ ನಿರ್ಧಾರ ಮಾಡುತ್ತೇವೆ ಎಂದು ಸ್ವಾಮೀಜಿ ತಿಳಿಸಿದ್ದಾರೆ.
ವೀರಶೈವ ಲಿಂಗಾಯತ ಸಮಾಜಕ್ಕೆ ಮೀಸಲಾತಿ ನೀಡಬೇಕು ಎಂಬ ನಿರಾಣಿ ಹೇಳಿಕೆ ವಿಚಾರವಾಗಿ ಜಯಮೃತ್ಯುಂಜಯ ಸ್ವಾಮೀಜಿ ತಿರುಗೇಟು ನೀಡಿದ್ದಾರೆ. ನಿರಾಣಿಗೇನು ಗೊತ್ತು? ನಿರಾಣಿ ಹೇಳೋ ಮುಂಚೆ ನಾವು ಹೇಳಿದ್ದೇವೆ. ಪಂಚಮಸಾಲಿ ಲಿಂಗಾಯತ ಜೊತೆ ಎಲ್ಲಾ ಲಿಂಗಾಯತರಿಗೆ ಮೀಸಲಾತಿ ನೀಡಬೇಕು. ಸಚಿವ ನಿರಾಣಿ ನಾವು ಹೇಳಿದ್ದು ಈಗ ಕಾಪಿ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಇದನ್ನೂ ಓದಿ: ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡದೆ ಮೋಸ ಮಾಡಿದ ಯಡಿಯೂರಪ್ಪನವರಿಗೆ ದೇವರು ಶಿಕ್ಷೆ ಕೊಟ್ಟಿದ್ದಾನೆ: ಯತ್ನಾಳ್
ಇದನ್ನೂ ಓದಿ: ಪಂಚಮಸಾಲಿ ಮೀಸಲಾತಿ ಹೋರಾಟ: ಅಕ್ಟೋಬರ್ 1ರಿಂದ ಸತ್ಯಾಗ್ರಹ ನಡೆಸಲು ತೀರ್ಮಾನ- ಬಸವ ಜಯಮೃತ್ಯುಂಜಯಶ್ರೀ
Published On - 3:05 pm, Sun, 26 September 21