Rahul Gandhi: ರಾಹುಲ್ ಗಾಂಧಿ ಲೋಕಸಭಾ​ ಸದಸ್ಯತ್ವ ಅನರ್ಹ; ಬಿಜೆಪಿ ಸರ್ಕಾರದ ವಿರುದ್ಧ ಮುಗಿಬೀಳುತ್ತಿರುವ ಕಾಂಗ್ರೆಸ್

|

Updated on: Mar 24, 2023 | 4:36 PM

ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರ ಲೋಕಸಭಾ ಸದಸ್ಯತ್ವ ಅನರ್ಹಗೊಂಡ ಬೆನ್ನಲ್ಲೇ ಕಾಂಗ್ರೆಸ್ ನಾಯರು ಬಿಜೆಪಿ ಸರ್ಕಾರ ಮತ್ತು ನಾಯಕರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದು, ಯಾರ್ಯಾರು ಏನೇನು ಹೇಳಿದರು ಎಂಬುದು ಇಲ್ಲಿದೆ.

Rahul Gandhi: ರಾಹುಲ್ ಗಾಂಧಿ ಲೋಕಸಭಾ​ ಸದಸ್ಯತ್ವ ಅನರ್ಹ; ಬಿಜೆಪಿ ಸರ್ಕಾರದ ವಿರುದ್ಧ ಮುಗಿಬೀಳುತ್ತಿರುವ ಕಾಂಗ್ರೆಸ್
ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ
Follow us on

ದೆಹಲಿ: ಲೋಕಸಭೆ ಚುನಾವಣೆಗೆ ಇನ್ನು ಒಂದೇ ವರ್ಷ ಬಾಕಿ ಇರುವಾಗಲೇ ಎರಡು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ (Rahul Gandhi) ಅವರ ಲೋಕಸಭಾ​ ಸದಸ್ಯತ್ವ ಸ್ಥಾನ ಅನರ್ಹಗೊಂಡಿದ್ದು, ಕಾಂಗ್ರೆಸ್ ನಾಯಕರನ್ನು ಕೆರಳಿಸಿದೆ. ತಮ್ಮ ಸ್ಥಾನ ಅನರ್ಹಗೊಳ್ಳುತ್ತಿದ್ದಂತೆ ದೆಹಲಿಯ ಅಕ್ಬರ್ ರಸ್ತೆಯಲ್ಲಿರುವ ಸೋನಿಯಾ ಗಾಂಧಿ (Sonia Gandhi) ನಿವಾಸಕ್ಕೆ ಆಗಮಿಸಿದ ರಾಹುಲ್ ಗಾಂಧಿ ಮಾತುಕತೆ ನಡೆಸುತ್ತಿದ್ದಾರೆ. ಇನ್ನೊಂದೆಡೆ ಎಐಸಿಸಿ ಕಚೇರಿ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಜಮಾಯಿಸುತ್ತಿದ್ದು, ಮುಂಜಾಗೃತಾ ಕ್ರಮವಾಗಿ ಕಚೇರಿ ಸುತ್ತಮುತ್ತ ಹೆಚ್ಚಿನ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ದೆಹಲಿಯ ಎಐಸಿಸಿ ಕಚೇಯಲ್ಲಿ ನಡೆದ ಕಾಂಗ್ರೆಸ್​ ನಾಯಕರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಭಿಷೇಕ್​​ ಮನುಸಿಂಘ್ವಿ, ಕಾನೂನಾತ್ಮಕ ಮತ್ತು ರಾಜಕೀಯವಾಗಿ ಈ ವಿಚಾರವನ್ನು ನೋಡಬೇಕು. ಕೇಂದ್ರ ಸರ್ಕಾರದ ನಡತೆಯಿಂದ ಪ್ರಜಾಪ್ರಭುತ್ವ ಸಂಕಷ್ಟದಲ್ಲಿದೆ. ವಾಕ್ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಇದೆ ಕಾರಣಕ್ಕೆ ರಾಹುಲ್ ಗಾಂಧಿ ಸದನದಲ್ಲಿ ಮತ್ತು ಹೊರಗಡೆ ಮಾತನಾಡುತ್ತಿದ್ದಾರೆ ಎಂದರು.

ರಾಹುಲ್​ ಸರ್ಕಾರದ ತಪ್ಪುಗಳನ್ನ ಎತ್ತಿಹಿಡಿಯುವ ಕೆಲಸ ಮಾಡುತ್ತಿದ್ದಾರೆ. ಚೀನಾ ಗಡಿ ವಿಚಾರ, ನಿರುದ್ಯೋಗ ಸಮಸ್ಯೆ ಕುರಿತು ದನಿ ಎತ್ತಿದ್ದಾರೆ. ಸರ್ಕಾರ ಇವರ ಧ್ವನಿಯನ್ನು ಹತ್ತಿಕ್ಕಲು ಎಲ್ಲಾ ದಾರಿ ಬಳಸಿಕೊಳ್ಳುತ್ತಿದೆ. ಮೂಲ ಸಮಸ್ಯೆಯಿಂದ ದಾರಿ ತಪ್ಪಿಸುವ ಕೆಲಸ ಸರ್ಕಾರ ಮಾಡುತ್ತಿದೆ. ಸರ್ಕಾರದ‌ ವಿರುದ್ದ ಧ್ವನಿ ಎತ್ತಿದರೆ ಅಂತಹವರಿಗೆ ಭಯ ಪಡಿಸುವ ಕೆಲಸ ಮಾಡುತ್ತಿದೆ. ಈ ರೀತಿಯ ಕಾರ್ಯ ಈ ಹಿಂದೆ ಯಾವ‌ಸರ್ಕಾರವು ಮಾಡಿಲ್ಲ ಎಂದರು.

ರಾಹುಲ್ ಗಾಂಧಿ ಲೋಕಸಭಾ ಸದಸ್ಯತ್ವ ಅನರ್ಹಗೊಳಿಸಿರುವುದನ್ನು ಖಂಡಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸತ್ಯ ಹೇಳುವವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿದ್ದಾರೆ. ಸತ್ಯ ಮಾತಾಡುವುದನ್ನು ನಾವು ನಿಲ್ಲಿಸುವುದಿಲ್ಲ. ಪ್ರಜಾಪ್ರಭುತ್ವ ಉಳಿಸಲು ನಾವು ಜೈಲಿಗೆ ಹೋಗಲು ಸಿದ್ಧರಿದ್ದೇವೆ. ರಾಹುಲ್ ಅವರನ್ನು ಅನರ್ಹಗೊಳಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗಿದೆ. ಸತ್ಯವನ್ನು ಮಾತನಾಡಲು ಮತ್ತು ಪ್ರಜಾಪ್ರಭುತ್ವದ ತತ್ವಗಳ ಪ್ರಕಾರ ಜನರ ಹಕ್ಕುಗಳಿಗಾಗಿ ಹೋರಾಡುವವರ ಬಾಯಿ ಮುಚ್ಚಿಸಲು ಸಂಸತ್ ಸದಸ್ಯತ್ವವನ್ನು ರದ್ದುಗೊಳಿಸಲಾಗಿದೆ ಎಂದು ಆರೋಪಿಸಿದರು. ದೆಹಲಿಯಲ್ಲಿ ಈ ಹೇಳಿಕೆ ನೀಡಿದ್ದಾರೆ.

ಇನ್ನು, ಟ್ವಿಟರ್​ ಖಾತೆಯಲ್ಲಿ ಟೀಕಿಸಿದ ರಾಷ್ಟ್ರೀಯ ಕಾಂಗ್ರೆಸ್, ರಾಹುಲ್ ಗಾಂಧಿ ಅವರ ಲೋಕಸಭಾ ಸದಸ್ಯತ್ವವನ್ನು ರದ್ದುಗೊಳಿಸಲಾಗಿದೆ. ಅವರು ನಿಮಗಾಗಿ ಮತ್ತು ಈ ದೇಶಕ್ಕಾಗಿ ನಿರಂತರವಾಗಿ ಹೋರಾಡುತ್ತಿದ್ದಾರೆ, ಪ್ರಜಾಪ್ರಭುತ್ವವನ್ನು ಉಳಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತಿದ್ದಾರೆ. ಎಲ್ಲಾ ಪಿತೂರಿಯ ಹೊರತಾಗಿಯೂ ಅವರು ಈ ಹೋರಾಟವನ್ನು ಮುಂದುವರಿಸುತ್ತಾರೆ ಮತ್ತು ಈ ವಿಷಯದಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತಾರೆ. ಹೋರಾಟ ಮುಂದುವರಿಯುತ್ತದೆ ಎಂದು ಹೇಳಿದೆ.

ಇದನ್ನೂ ಓದಿ: Rahul Gandhi: ಸಂಸದ ಸ್ಥಾನದಿಂದ ಅನರ್ಹರಾದ ರಾಹುಲ್ ಗಾಂಧಿ, ಮುಂದೇನು?

ಕರ್ನಾಟಕ ರಾಜ್ಯ ಕಾಂಗ್ರೆಸ್ ಕೂಡ ಟ್ವೀಟ್ ಮಾಡಿದ್ದು, ರಾಹುಲ್ ಗಾಂಧಿ ಅವರ ಲೋಕಸಭಾ ಸದಸ್ಯತ್ವವನ್ನು ರದ್ದುಗೊಳಿಸಲಾಗಿದೆ. ಸಂಸತ್ತಿನ ಒಳಗೆ ಮತ್ತು ಹೊರಗೆ ನಿಮ್ಮ ಹಕ್ಕುಗಳಿಗಾಗಿ ಮತ್ತು ಭಾರತೀಯ ಪ್ರಜಾಪ್ರಭುತ್ವವನ್ನು ರಕ್ಷಿಸಲು ಅವರು ನಿರಂತರವಾಗಿ ಹೋರಾಡುತ್ತಿದ್ದಾರೆ. ಅವರ ಈ ಹೋರಾಟ ಮುಂದುವರಿಯಲಿದೆ. ಸತ್ಯವು ಮೇಲುಗೈ ಸಾಧಿಸುತ್ತದೆ. ಮುಂದಿನ ದಿನಗಳಲ್ಲಿ ಸೂಕ್ತ ಕಾನೂನು ಹೋರಾಟ ನಡೆಸಲಾಗುವುದು ಎಂದು ಹೇಳಿದೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಟ್ವೀಟ್ ಮಾಡಿ, ಪ್ರಜಾಪ್ರಭುತ್ವದಲ್ಲಿ ಇಂದು ‘ಕರಾಳ ದಿನ’!, ಇಂದು “ಮಾತನಾಡುವ ಹಕ್ಕಿಗೆ” ಒಂದು “ಕಳಂಕ”!, ಇಂದು “ದೇಶಭ್ರಷ್ಟರು ಮತ್ತು ಬ್ಯಾಂಕ್ ವಂಚಕರು” ಎಂದು ಕರೆಯುವ “ಸಾವಿನ ಗಂಟೆ”!, Adani ಜೆಪಿಸಿಯನ್ನು ಕೇಳಿದ್ದಕ್ಕಾಗಿ ಇಂದು ಪ್ರಧಾನಿಯ ಕುರುಡು ಪ್ರತೀಕಾರದ ದಿನ!, ಇಂದು ಸತ್ಯಕ್ಕಾಗಿ ಹೋರಾಡುವ ಮತ್ತು ತಲೆಬಾಗದ ದಿನ! ಎಂದು ಹೇಳಿದ್ದಾರೆ.

ಇದನ್ನೂ ಓದಿ: ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಂಡ ರಾಹುಲ್ ಗಾಂಧಿ; ಚುನಾವಣಾ ಅಯೋಗ ವಯ್ನಾಡ್ ಕ್ಷೇತ್ರಕ್ಕೆ ಉಪಚುನಾವಣೆ ಘೋಷಿಸುವ ಸಾಧ್ಯತೆ!

ಕೆಸಿ ವೇಣುಗೋಪಾಲ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ರಾಹುಲ್ ಗಾಂಧಿ ಅವರು ಅದಾನಿ ಬಗ್ಗೆ ಪ್ರಶ್ನೆಗಳನ್ನು ಎತ್ತಿದ ದಿನದಿಂದ, ಅವರ ಧ್ವನಿಯನ್ನು ಅಡಗಿಸಲು ಪಿತೂರಿಯನ್ನು ಪ್ರಾರಂಭಿಸಲಾಯಿತು. ಇದು ಬಿಜೆಪಿ ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ ಮತ್ತು ಸರ್ವಾಧಿಕಾರಿ ಮನೋಭಾವದ ಸ್ಪಷ್ಟ ಉದಾಹರಣೆಯಾಗಿದೆ ಎಂದರು.

ಕಾಂಗ್ರೆಸ್ ಪ್ರಧಾನ ಕಾರ್ಯರ್ಶಿ ಜೈರಾಮ್ ರಮೇಶ್ ಟ್ವೀಟ್ ಮಾಡಿ, ನಾವು ಈ ಹೋರಾಟವನ್ನು ಕಾನೂನಾತ್ಮಕವಾಗಿ ಮತ್ತು ರಾಜಕೀಯವಾಗಿ ಹೋರಾಡುತ್ತೇವೆ. ನಮ್ಮನ್ನು ಹೆದರಿಸುವುದಿಲ್ಲ ಅಥವಾ ಮೌನಗೊಳಿಸಲಾಗುವುದಿಲ್ಲ. ಭಾರತೀಯ ಪ್ರಜಾಪ್ರಭುತ್ವ ಓಂ ಶಾಂತಿ ಎಂದು ಹೇಳಿದ್ದಾರೆ.

ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, ನಮ್ಮ ನಾಯಕ ರಾಹುಲ್ ಗಾಂಧಿ ಅವರು ಹೇಳುವ ಸತ್ಯವನ್ನು ಎದುರಿಸಲಾಗದ ನರೇಂದ್ರ ಮೋದಿ ಸರ್ಕಾರ ಅವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿ ತನ್ನ ಹೇಡಿತನವನ್ನು ಜಾಹೀರುಗೊಳಿಸಿದೆ. ಭಾರತದ ಸಂಸದೀಯ ಪ್ರಜಾಪ್ರಭುತ್ವದಲ್ಲಿ ಇದೊಂದು ಕರಾಳ ದಿನ ಎಂದರು. ಅಲ್ಲದೆ, ಭಾರತೀಯ ಜನತಾ ಪಕ್ಷದ ಪಾಪದ ಕೊಡ ತುಂಬಿದೆ. ತನ್ನ ನಾಶದ ಶವದಪೆಟ್ಟಿಗೆಗೆ ತಾನೇ ಕೊನೆಯ ಮೊಳೆ ಬಡಿದಿದೆ. ಈ ಫ್ಯಾಸಿಸ್ಟ್ ನಡವಳಿಕೆಗೆ ಹೆದರುವ, ಹಿಂಜರಿಯುವ ಪ್ರಶ್ನೆಯೇ ಇಲ್ಲ. ಈ ಅನ್ಯಾಯದ ವಿರುದ್ಧ ನ್ಯಾಯಾಲಯ ಮತ್ತು ಬೀದಿಗಳಲ್ಲಿ ಹೋರಾಟ ಮಾಡುತ್ತೇವೆ ಎಂದರು.

ಸರಣಿ ಟ್ವೀಟ್ ಮಾಡಿದ ಸಿದ್ದರಾಮಯ್ಯ, ಭಾರತದಲ್ಲಿ ಇಂದು ಅನಧಿಕೃತವಾಗಿ ತುರ್ತುಪರಿಸ್ಥಿತಿ ಘೋಷಿಸಲಾಗಿದೆ. ನರೇಂದ್ರ ಮೋದಿ ಮತ್ತು ಬಿಜೆಪಿ ಹಾಗೂ ಎನ್​ಡಿಎ ಸರ್ಕಾರದ ವಿರುದ್ಧ ಮಾತನಾಡುವವರಿಗೆಲ್ಲರಿಗೂ ಎಚ್ಚರಿಕೆಯ ರೂಪದಲ್ಲಿ ರಾಹುಲ್ ಗಾಂಧಿ ಅವರ ಬಗ್ಗೆ ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡಿದೆ. ಇದು ಕೇವಲ ಕಾಂಗ್ರೆಸ್ ಪಕ್ಷ ಇಲ್ಲವೇ ರಾಹುಲ್ ಗಾಂಧಿ ಅವರಿಗೆ ನೀಡಿರುವ ಬೆದರಿಕೆ ಅಲ್ಲ, ಅನ್ಯಾಯ-ಅಕ್ರಮದ ವಿರುದ್ಧ ದನಿ ಎತ್ತುವ ಎಲ್ಲ ಪ್ರಜಾಪ್ರಭುತ್ವ ಪ್ರೇಮಿಗಳಿಗೆ ಒಡ್ಡಿರುವ ಬೆದರಿಕೆ. ಪಕ್ಷ, ಪಂಥ ಬೇಧ ಮರೆತು ಎಲ್ಲರೂ ಒಟ್ಟಾಗಿ ಇದರ ವಿರುದ್ಧ ಪ್ರತಿಭಟನೆ ನಡೆಸಬೇಕಾಗಿದೆ ಎಂದರು.

ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರ ವಿರುದ್ಧ ಕೈಗೊಳ್ಳಲಾದ ಕ್ರಮದಿಂದ ಕಾಂಗ್ರೆಸ್ ಪಕ್ಷದ ಲಕ್ಷಾಂತರ ಕಾರ್ಯಕರ್ತರ ಮನಸ್ಸಿಗೆ ನೋವಾಗಿರುವುದು ನಿಜವಾದರೂ ಈ ಸಂದರ್ಭದಲ್ಲಿ ಸಂಯಮದಿಂದ ವರ್ತಿಸುವುದು ಅಗತ್ಯ. ಯಾರೂ ಕೂಡಾ ಸಿಟ್ಟು-ಆಕ್ರೋಶದ ಕೈಗೆ ಬುದ್ದಿ ಕೊಡದೆ ಶಾಂತಿಯುತ ಪ್ರತಿಭಟನೆ ನಡೆಸಬೇಕೆಂದು ಕೋರುತ್ತೇನೆ ಎಂದು ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಟ್ವೀಟ್ ಮಾಡಿ, ನೀವು ರಾಹುಲ್ ಗಾಂಧಿ ಅವರನ್ನು ಸಂಸತ್ ಸ್ಥಾನದಿಂದ ತೆಗೆದುಹಾಕಬಹುದು. ಆದರೆ ಕೋಟ್ಯಂತರ ಭಾರತೀಯರು ಹೃದಯದಲ್ಲಿ ನೀಡಿರುವ ಸ್ಥಾನದಿಂದ ತೆಗೆದುಹಾಕುವುದು ಅಸಾಧ್ಯ. ಬಿಜೆಪಿಯ ಪ್ರಜಾಪ್ರಭುತ್ವ ವಿರೋಧಿ ಧೋರಣೆಗೆ ನನ್ನ ಧಿಕ್ಕಾರ ಎಂದರು.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಖಂಡನೆ

ಲೋಕಸಭಾ​ ಸದಸ್ಯ ಸ್ಥಾನದಿಂದ ರಾಹುಲ್ ಗಾಂಧಿ ಅನರ್ಹತೆಯನ್ನು ಖಂಡಿಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ವಿಪಕ್ಷಗಳ ನಾಯಕರನ್ನು ಬಿಜೆಪಿ ಗುರಿಯಾಗಿಸಿಕೊಂಡಿದೆ. ಕ್ರಿಮಿನಲ್ ಹಿನ್ನೆಲೆ ಹೊಂದಿರುವವರು ಕೇಂದ್ರ ಸಂಪುಟದಲ್ಲಿದ್ದಾರೆ. ಬಿಜೆಪಿ ನಾಯಕರ ಮೇಲೆ ಸರ್ಕಾರ ಯಾವುದೇ ಕ್ರಮಕೈಗೊಂಡಿಲ್ಲ. ವಿಪಕ್ಷದ ನಾಯಕರು ಭಾಷಣ ಮಾಡಿದ್ದಕ್ಕೆ ಅನರ್ಹಗೊಳಿಸಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆ ಕುಸಿಯುತ್ತಿರುವುದಕ್ಕೆ ಇದೇ ಸಾಕ್ಷೆ ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:21 pm, Fri, 24 March 23