ಬೆಂಗಳೂರಿನಲ್ಲಿ ಫಲಾನುಭವಿಗಳ ಸಮಾವೇಶ, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಅಮಿತ್ ಶಾ

ಬೆಂಗಳೂರಿನಲ್ಲಿ ನಡೆದ ಫಲಾನುಭವಿಗಳ ಸಮಾವೇಶದಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟನೆ ಮಾಡಿದರು. ಆರಂಭದಲ್ಲಿ ಅನುಪಸ್ಥಿತರಿದ್ದ ಮುಖ್ಯಮಂತ್ರಿ ಬೊಮ್ಮಾಯಿ ತದನಂತರ ಕಾರ್ಯಕ್ರಮಕ್ಕೆ ಆಗಮಿಸಿದರು.

ಬೆಂಗಳೂರಿನಲ್ಲಿ ಫಲಾನುಭವಿಗಳ ಸಮಾವೇಶ, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಅಮಿತ್ ಶಾ
ಅಮಿತ್ ಶಾImage Credit source: PTI
Follow us
Rakesh Nayak Manchi
|

Updated on: Mar 24, 2023 | 3:21 PM

ಬೆಂಗಳೂರು: ದೇಶದಲ್ಲಿ ಕಾಂಗ್ರೆಸ್ ಪಕ್ಷ ಸಮಾಪ್ತಿಯಾಗುತ್ತಾ ಹೋಗುತ್ತಿದೆ. ದೇಶದಲ್ಲಿ ಎಲ್ಲೂ ಕಾಂಗ್ರೆಸ್ (Congress) ಉಳಿದುಕೊಂಡಿಲ್ಲ. ಹೀಗಾಗಿ ಕಾಂಗ್ರೆಸ್ ಪಕ್ಷಕ್ಕೆ ಎಟಿಎಂ (ಕರ್ನಾಟಕ) ಬೇಕಾಗಿದೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ (Amit Shah) ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಬೆಂಗಳೂರಿನ ಕೊಮ್ಮಘಟ್ಟದಲ್ಲಿ ನಡೆದ ಫಲಾನುಭವಿಗಳ ಸಮಾವೇಶದಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟನೆ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಇತಿಹಾಸವೇ ಭ್ರಷ್ಟಾಚಾರ, ದಲಿತರು ಆದಿವಾಸಿಗಳನ್ನು ಅಪಮಾನ ಮಾಡುವುದು, ದೇಶ ವಿರೋಧಿ ಶಕ್ತಿಗಳಿಗೆ ಬೆಂಬಲ ನೀಡುವುದಾಗಿದೆ ಎಂದರು.

ಸಿದ್ದರಾಮಯ್ಯ ಸರ್ಕಾರ ಪಿಎಫ್​ಐ ಕಾರ್ಯಕರ್ತರ ವಿರುದ್ಧ ದಾಖಲಾಗಿದ್ದ ಪ್ರಕರಣಗಳನ್ನು ವಾಪಸ್ ಪಡೆಯಿತು. ಆದರೆ ನರೇಂದ್ರ ಮೋದಿ ಅವರು ಪಿಎಫ್​ಐ ನಿಷೇಧ ಮಾಡಿದ್ದಾರೆ. ಕಾಂಗ್ರೆಸ್ ರಾಮಮಂದಿರ ವಿಷಯದಲ್ಲಿ ರಾಜಕೀಯ ಮಾಡಿಕೊಂಡು ಬರುತ್ತಿತ್ತು. ಆದರೆ ಮೋದಿ ಆಡಳಿತದ ಸಮಯದಲ್ಲಿ ರಾಮ ಮಂದಿರದ ನಿರ್ಮಾಣ ಮಾಡಲಾಗುತ್ತಿದೆ. ರೈತರಿಗಾಗಿ ಪ್ರಧಾನಿ ಮೋದಿ ಹಲವು ಯೋಜನೆ ಜಾರಿಗೆ ತಂದಿದ್ದಾರೆ. ಕರ್ನಾಟಕದಲ್ಲಿ ಪೂರ್ಣ ಬಹುಮತದ ಸರ್ಕಾರ ತರಬೇಕೋ ಬೇಡವೋ? ಮೋದಿ, ಬೊಮ್ಮಾಯಿ‌ ಕೈ ಬಲಪಡಿಸುತ್ತೀರೋ ಇಲ್ಲವೋ? ಎಂದು ಜನರನ್ನು ಪ್ರಶ್ನಿಸಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚಿಸಲು ಮತ್ತೆ ಮೋದಿಯನ್ನು ಕರೆ ತರುತ್ತೇವೆ ಎಂದರು.

ಇದನ್ನೂ ಓದಿ: ಅಮಿತ್ ಶಾ ಕಾರ್ಯಕ್ರಮಕ್ಕೆ ಬಿಸಿ ಮುಟ್ಟಿಸಲು ರಾಯಚೂರು ಬಂದ್, 66 ದಿನಗಳಿಂದ ಪ್ರತಿದಿನ ಇಬ್ಬರಂತೆ ಉಪವಾಸ ಸತ್ಯಾಗ್ರಹ

ಬೆಂಗಳೂರಿನಿಂದ ಛತ್ತೀಸ್ ಗಢಕ್ಕೆ ತೆರಳಬೇಕಿದ್ದ ಕಾರಣ ಅಮಿತ್ ಶಾ ಅವರು ತುರ್ತಾಗಿ ಭಾಷಣ ಮುಗಿಸಿ ಕೊಮ್ಮಘಟ್ಟದಿಂದ ಹೆಚ್​ಎಎಲ್ ವಿಮಾನ ನಿಲ್ದಾಣದತ್ತ ತೆರಳಿದರು. ಅಲ್ಲಿಂದ ಛತ್ತೀಸ್ ಗಢದ ಜಬ್ಬಲ್ಪುರಕ್ಕೆ ತೆರಳಿದರು. ಜಬ್ಬಲ್ಪುರದಲ್ಲಿ ವಿಮಾನ ರಾತ್ರಿ ಸಮಯದಲ್ಲಿ ಲ್ಯಾಂಡಿಂಗ್ ಸಾಧ್ಯವಿಲ್ಲದ ಕಾರಣ ಬೆಂಗಳೂರಿನಿಂದ ತರಾತುರಿಯಲ್ಲಿ ತೆರಳಿದ್ದಾರೆ ಎನ್ನಲಾಗಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಫಲಾನುಭವಿಗಳ ಸಮಾವೇಶಕ್ಕೆ ಅಮಿತ್ ಶಾ ಆಗಮಿಸಿದ್ದರೂ ಆರಂಭದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಅನುಪಸ್ಥಿತರಿದ್ದರು. ಬಳಿಕ ತಡವಾಗಿ ಕಾರ್ಯಕ್ರಮಕ್ಕೆ ಆಗಮಿಸಿದರು. ಇವರಲ್ಲದೆ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಗೃಹ ಸಚಿವ ಅರಗ ಜ್ಞಾನೇಂದ್ರ, ಸಹಕಾರ ಸಚಿವ ಎಸ್.ಟಿ. ಸೋಮಶೇಖರ್, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಮೊದಲ ಬಾರಿಗೆ ಸರ್ಕಾರಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಬಿಎಸ್​ವೈ

ಮಾಜಿ ಸಿಎಂ ಯಡಿಯೂರಪ್ಪ ಮೊದಲ ಬಾರಿಗೆ ಸರ್ಕಾರಿ ಕಾರ್ಯಕ್ರಮದಲ್ಲಿ ‌ಪಾಲ್ಗೊಂಡರು. ಇದೇ ವೇಳೆ ಸ್ವಸಹಾಯ ಸಂಘಗಳಿಗೆ ಚೆಕ್ ವಿತರಣೆ ಮಾಡಿದರು. ಬಳಿಕ ಮಾತನಾಡಿದ ಅವರು, ಮತ್ತೊಮ್ಮೆ ಸಚಿವ ಎಸ್. ಟಿ. ಸೋಮಶೇಖರ್ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ