AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಶ್ಮೀರದ ಗಡಿಯಲ್ಲಿ ಪುನರ್​ ನಿರ್ಮಾಣಗೊಂಡ ಶಾರದಾ ಮಂದಿರ: ಅಮಿತ್ ಶಾರಿಂದ ಲೋಕಾರ್ಪಣೆ, ತೇಜಸ್ವಿ ಸೂರ್ಯ ಭಾಗಿ

ಜಮ್ಮು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಪುನರ್ ನಿರ್ಮಾಣಗೊಂಡ ಶಾರದಾ ಮಂದಿರವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ವರ್ಚುವಲ್​ ಮೂಲಕ ಬುಧವಾರ ಲೋಕಾರ್ಪಣೆ ಮಾಡಿದರು.

ಕಾಶ್ಮೀರದ ಗಡಿಯಲ್ಲಿ ಪುನರ್​ ನಿರ್ಮಾಣಗೊಂಡ ಶಾರದಾ ಮಂದಿರ: ಅಮಿತ್ ಶಾರಿಂದ ಲೋಕಾರ್ಪಣೆ, ತೇಜಸ್ವಿ ಸೂರ್ಯ ಭಾಗಿ
ಅಮಿತ್ ಶಾ, ಪುನರ್ ನಿರ್ಮಾಣಗೊಂಡ ಶಾರದಾ ಮಂದಿರ
ಗಂಗಾಧರ​ ಬ. ಸಾಬೋಜಿ
|

Updated on:Mar 22, 2023 | 6:40 PM

Share

ನವದೆಹಲಿ: ಜಮ್ಮು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಪುನರ್ ನಿರ್ಮಾಣಗೊಂಡ ಶಾರದಾ ಮಂದಿರವನ್ನು (Sharda Mandir) ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು ವರ್ಚುವಲ್ ಕಾರ್ಯಕ್ರಮದ ಮೂಲಕ ಬುಧವಾರ ಲೋಕಾರ್ಪಣೆ ಮಾಡಿದರು. 1948ರಲ್ಲಿ ಪಾಕಿಸ್ತಾನಿ ಮೂಲಭೂತವಾದಿಗಳ ಆಕ್ರಮಣದಿಂದ ಸಂಪೂರ್ಣ ಹಾನಿಗೊಳಗಾಗಿತ್ತು. ಶಾರದಾ ಮಂದಿರವನ್ನು ಆರ್ಟಿಕಲ್ 370 ರದ್ದತಿ ನಂತರ ಪುನರ್ ನಿರ್ಮಾಣಗೊಳಿಸಿ ಯುಗಾದಿ ಶುಭ ದಿನದಂದು ಲೋಕಾರ್ಪಣೆಗೊಳಿಸಿದ್ದು ಅತ್ಯಂತ ಮಹತ್ವ ಪಡೆದುಕೊಂಡಿದೆ. ಕರ್ನಾಟಕದ ಬಿಡದಿಯಿಂದ ಗ್ರಾನೈಟ್ ಬಳಕೆಯಿಂದ ನಿರ್ಮಿತವಾಗಿರುವ ಮಂದಿರದಲ್ಲಿ, ಶೃಂಗೇರಿ ಶಾರದ ಮಠದಿಂದ ಪಂಚಲೋಹದ ಶಾರದಾ ಮೂರ್ತಿ ಪ್ರತಿಷ್ಠಾಪನೆಗೊಂಡಿದ್ದು ಗಮನಾರ್ಹ. ಜನವರಿ 24 ರಿಂದ ದೇಶಾದ್ಯಂತ ಸಂಚರಿಸಿ ತೀತ್ವಾಲ್ ತಲುಪಿರುವ ಮೂರ್ತಿಯು ಇಂದು ಸ್ಥಾಪನೆಗೊಂಡಿದ್ದು ವಿಶೇಷ. ಈ ಸಂದರ್ಭದಲ್ಲಿ ಮಾತನಾಡಿದ ಅಮಿತ್ ಶಾ, ಇಂದು ಪುನರ್ನಿರ್ಮಾಣಗೊಂಡಿರುವ ಶಾರದಾ ಮಂದಿರದ ಲೋಕಾರ್ಪಣೆ ಕಾರ್ಯಕ್ರಮವು ಅತ್ಯಂತ ಮಹತ್ವದ್ದಾಗಿದೆ. ಒಂದು ಕಾಲದಲ್ಲಿ ಉತ್ಕೃಷ್ಟ ಜ್ಞಾನದ ಕೇಂದ್ರವೆಂದು ಪರಿಗಣಿಸಲಾಗುತ್ತಿದ್ದ ಶಾರದಾ ಪೀಠಕ್ಕೆ ಭರತ ಖಂಡದ ಸಮಸ್ತ ಭಾಗಗಳಿಂದ ಜ್ಞಾನಾರ್ಜನೆಗಾಗಿ ಪಂಡಿತರು ಆಗಮಿಸುತ್ತಿದ್ದುದರಿಂದ ಮಹಾಶಕ್ತಿ ಪೀಠವೆಂದು ಕೂಡ ಕರೆಯಲ್ಪಡುತ್ತದೆ ಎಂದರು.

ಆದಿ ಶಂಕರರು ಇಲ್ಲಿ ತಾಯಿ ಶಾರದೆ ಕುರಿತಾಗಿ ಅನೇಕ ಸ್ತುತಿಗಳನ್ನು ರಚಿಸಿದ್ದು ಕೂಡ ಉಲ್ಲೇಖನೀಯ. ಆರ್ಟಿಕಲ್ 370 ರದ್ದತಿ ನಂತರ ಇಡೀ ಕಾಶ್ಮೀರ ಪ್ರಗತಿ ಪಥದಲ್ಲಿ ಸಾಗುತ್ತಿದ್ದು, ಸನಾತನ, ಸಾಂಸ್ಕೃತಿಕ ಪುನರುತ್ಥಾನ ಕೂಡ ಇಲ್ಲಿ ನಡೆಯುತ್ತಿರುವುದು ಹೊಸ ಅಧ್ಯಾಯವೊಂದಕ್ಕೆ ಸಾಕ್ಷಿಯಾಗಿದೆ. ಶಾರದಾ ಮಂದಿರಕ್ಕೆ ಆದಿ ಶಂಕರರ ಕಾಲದಲ್ಲಿದ್ದ ಭವ್ಯತೆಯನ್ನು ಮತ್ತೊಮ್ಮೆ ಪುನರ್ ಸ್ಥಾಪಿಸುವ ಕಾರ್ಯ ಅತ್ಯಂತ ಮಹತ್ವದ್ದಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: Coronavirus: ಕೋವಿಡ್ ಸಂಬಂಧಿತ ಪರಿಸ್ಥಿತಿಯನ್ನು ಪರಿಶೀಲಿಸಲು ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ

ಪ್ರಧಾನಿ ಮೋದಿ, ಅಮಿತ್ ಶಾಗೆ ಧನ್ಯವಾದ ಹೇಳಿದ ತೇಜಸ್ವಿ ಸೂರ್ಯ

ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ಜಮ್ಮು ಕಾಶ್ಮೀರದ ಕಿಶನ್ ಗಂಗಾ ನದಿಯ ದಡದಲ್ಲಿ ಇಂದು ಶಾರದಾ ಮಂದಿರವು ಲೋಕಾರ್ಪಣೆಗೊಂಡಿದ್ದು, ದಕ್ಷಿಣ ಭಾರತದ ನಮ್ಮ ಶೃಂಗೇರಿ ಶಂಕರಾಚಾರ್ಯರ ಆಶೀರ್ವಾದವಿದೆ. 1 ಸಾವಿರ ವರ್ಷದ ಹಿಂದೆ ಸನಾತನ ಪರಂಪರೆಯ ಪುನರುತ್ಥಾನದ ಉದ್ದೇಶದಿಂದ ದೇಶದ ನಾಲ್ಕೂ ಭಾಗಗಳಲ್ಲಿ ಶಾರದಾ ಪೀಠ ಸ್ಥಾಪನೆ ಮಾಡಿ ಏಕ್ ಭಾರತ್, ಶ್ರೇಷ್ಠ ಭಾರತ್ ಪರಿಕಲ್ಪನೆಗೆ ಬುನಾದಿ ಹಾಕಲಾಗಿದೆ. ಇಂದು ಕರ್ನಾಟಕದ ತುಂಗಾ ತೀರದಿಂದ ಕಾಶ್ಮೀರದ ಕಿಶನ್ ಗಂಗಾ ನದಿ ದಡದವರೆಗೆ ಮತ್ತೊಮ್ಮೆ ತಾಯಿ ಶಾರದಾಂಬೆಯ ಪುನರುಜ್ಜೀವನ, ಪುನರುತ್ಥಾನ ಕಾರ್ಯ ಶ್ಲಾಘನೀಯ.

ಇದನ್ನೂ ಓದಿ: ಕಾಲ್ ಬಿಫೋರ್ ಯು ಡಿಗ್ ಆ್ಯಪ್ ಬಿಡುಗಡೆ ಮಾಡಿದ ಪ್ರಧಾನಿ ಮೋದಿ; ಏನಿದು CBuD? ಇದು ಹೇಗೆ ಕಾರ್ಯವೆಸಗುತ್ತದೆ?

ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ದಿಟ್ಟ ನಿರ್ಧಾರದಿಂದ ಕಾಶ್ಮೀರದಲ್ಲಿ ವಿಧಿ 370 ರದ್ದುಗೊಂಡ ನಂತರ ಅಲ್ಲಿ ಶಾಂತಿ ಸ್ಥಾಪನೆಯಾಗಿದ್ದು, ದೇಶವಾಸಿಗಳಲ್ಲಿ ಸಂಪೂರ್ಣ ಸುರಕ್ಷತೆಯ ಭಾವ ಮೂಡಿದೆ. ಇಂತಹ ಕಾರ್ಯಗಳಿಗೆ ಇಂದು ಮತ್ತೆ ಬಲ ಬಂದಿದ್ದು, ಇದರಿಂದ ಪ್ರವಾಸೋದ್ಯಮ, ತೀರ್ಥಯಾತ್ರೆಯ ಕಾರಣಗಳಿಗಾಗಿ ಹೆಚ್ಚಿನ ಪ್ರವಾಸಿಗರು ಕಾಶ್ಮೀರಕ್ಕೆ ಭೇಟಿ ನೀಡುತ್ತಿರುವುದು ಗಮನಾರ್ಹ. ಈ ಅಭಿನಂದನಾರ್ಹ ಕಾರ್ಯಕ್ಕೆ ನಾನು ಸಮಸ್ತ ಕನ್ನಡಿಗರ ಪರವಾಗಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ರವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.

ನಾನ್ ಕನಾ ಸಾಹಿಬ್ ಭೇಟಿಗೆ ಕರ್ತಾರ್ಪುರ ಕಾರಿಡಾರ್ ಆರಂಭಿಸಿದಂತೆ, ಶಾರದಾ ಪೀಠಕ್ಕೆ ಕೂಡ ವಾರ್ಷಿಕ ತೀರ್ಥಯಾತ್ರೆ ಆಯೋಜನೆ ಕುರಿತು ಪರಿಶೀಲನೆ ನಡೆಸುವುದಾಗಿ ಅಮಿತ್ ಶಾ ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಜಮ್ಮು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್​ ಮನೋಜ್ ಸಿನ್ಹಾ, ಜಮ್ಮು ಕಾಶ್ಮೀರ ಬಿಜೆಪಿ ಘಟಕ ಅಧ್ಯಕ್ಷರು ರವೀಂದ್ರ ರೈನಾ ಮತ್ತು ಸೇವಾ ಶಾರದಾ ಕಮಿಟಿ ಸದಸ್ಯರು ಉಪಸ್ಥಿತರಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:29 pm, Wed, 22 March 23