ರಾಹುಲ್ ಗಾಂಧಿ ಲೋಕಸಭೆ ಸದಸ್ಯತ್ವ ರದ್ದು: ಕೋರ್ಟ್​ಗೆ ಕಾಂಗ್ರೆಸ್ ಯಾಕೆ ಹೋಗಿಲ್ಲ? ಸಿಟಿ ರವಿ ಪ್ರಶ್ನೆ

|

Updated on: Mar 25, 2023 | 2:56 PM

ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಗುಜರಾತ್ ನ್ಯಾಯಾಲಯವು ಅವರನ್ನು ದೋಷಿ ಎಂದು ಘೋಷಿಸಿದ ನಂತರ ರಾಹುಲ್ ಗಾಂಧಿ ಅವರ ಸಂಸದ ಸ್ಥಾನ ರದ್ದುಗೊಳಿಸಲಾಗಿದೆ. ನಂತರ ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ಮುಗಿಬೀಳುತ್ತಿದ್ದು, ರಾಹುಲ್ ಗಾಂಧಿಯವರನ್ನು ಬಿಜೆಪಿ ಟಾರ್ಗೆಟ್ ಮಾಡಿದೆ ಎಂದು ಆರೋಪಿಸುತ್ತಿದ್ದಾರೆ.

ರಾಹುಲ್ ಗಾಂಧಿ ಲೋಕಸಭೆ ಸದಸ್ಯತ್ವ ರದ್ದು: ಕೋರ್ಟ್​ಗೆ ಕಾಂಗ್ರೆಸ್ ಯಾಕೆ ಹೋಗಿಲ್ಲ? ಸಿಟಿ ರವಿ ಪ್ರಶ್ನೆ
ಸಿಟಿ ರವಿ ಮತ್ತು ರಾಹುಲ್ ಗಾಂಧಿ
Follow us on

ದಾವಣಗೆರೆ: ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಗುಜರಾತ್ ನ್ಯಾಯಾಲಯವು ಅವರನ್ನು ದೋಷಿ ಎಂದು ಘೋಷಿಸಿದ ನಂತರ ರಾಹುಲ್ ಗಾಂಧಿ (Rahul Gandhi) ಅವರ ಸಂಸದ ಸ್ಥಾನ ರದ್ದುಗೊಳಿಸಿದ ಬಗ್ಗೆ ಕಾಂಗ್ರೆಸ್ (Congress) ನಾಯಕರು ಬಿಜೆಪಿ ನಾಯಕರ ವಿರುದ್ಧ ಕೆಂಡಾಮಂಡಲರಾಗಿದ್ದು, ರಾಹುಲ್ ಗಾಂಧಿಯವರನ್ನು ಟಾರ್ಗೆಟ್ ಮಾಡಲಾಗಿದೆ ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (CT Ravi), ರಾಹುಲ್​ರನ್ನು ಬಿಜೆಪಿ ಟಾರ್ಗೆಟ್ ಮಾಡ್ತಿದೆ ಎಂಬುದರಲ್ಲಿ ಅರ್ಥವಿಲ್ಲ, ಸುಪ್ರೀಂಕೋರ್ಟ್ (Supreme Court) ಆದೇಶದ ಅನುಸಾರವಾಗಿ ನಡೆದ ಪ್ರಕ್ರಿಯೆ ಇದು ಎಂದರು.

ಕಾಂಗ್ರೆಸ್ ನಾಯಕರ ಆರೋಪಗಳ ಬಗ್ಗೆ ದಾವಣಗೆರೆಯಲ್ಲಿ ಕಿಡಿಕಾರಿದ ಸಿಟಿ ರವಿ, ಎರಡು ವರ್ಷಕ್ಕಿಂತ ಹೆಚ್ಚು ಕಾಲ ಶಿಕ್ಷೆಗೆ ಒಳಗಾದರೆ ಸದಸ್ಯತ್ವ ರದ್ದಾಗುತ್ತದೆ. ಸುಪ್ರೀಂ ಕೋರ್ಟ್ ಆದೇಶದ ಅನುಸಾರವಾಗಿ ಕ್ರಮ ಕೈಗೊಳ್ಳಲಾಗಿದೆ. ಇದುವರೆಗೆ ಕಾಂಗ್ರೆಸ್​​ ನಾಯಕರು ಯಾಕೆ ಕೋರ್ಟ್ ಮೊರೆ ಹೋಗಿಲ್ಲ ಎಂದು ಪ್ರಶ್ನಿಸಿದರು. ಅವರಲ್ಲಿ ಸಮರ್ಥ ವಕೀಲರಿದ್ದಾರೆ. ಆದರೆ ಅವರು ಕೋರ್ಟ್​ಗೆ ಹೋಗದೆ ಜನರ ಗಮನ ಸೆಳೆಯಲು ಯತ್ನಿಸುತ್ತಿದ್ದಾರೆ. ಬೀದಿಯಲ್ಲಿ ನಿಂತು ಡ್ರಾಮಾ ಮಾಡುತ್ತಿದ್ದಾರೆ. ಸದಸ್ಯತ್ವ ಕಳೆದುಕೊಂಡವರಲ್ಲಿ ರಾಹುಲ್ ಗಾಂಧಿ ಮೊದಲಿಗರಲ್ಲ. ಈವರೆಗೆ 10 ಮಂದಿ ಜನಪ್ರತಿನಿಧಿಗಳು ಸ್ಥಾನ ಕಳೆದುಕೊಂಡಿದ್ದಾರೆ. ಅಂದು ರಾಹುಲ್ ಗಾಂಧಿ ಯಾಕೆ ಮಾತನಾಡಲಿಲ್ಲ ಎಂದು ಪ್ರಶ್ನಿಸಿದರು.

2013ರಲ್ಲಿ ಸುಗ್ರಿವಾಜ್ಞೆ ಪ್ರತಿಯನ್ನು ರಾಹುಲ್ ಗಾಂಧಿ ಸಂಸತ್​ನಲ್ಲಿ ಹರಿದುಹಾಕಿದ್ದರು. ಈ ಮೂಲಕ ಅನರ್ಹತೆಯ ಮಸೂದೆಗೆ ನನ್ನ ವಿರೋಧವಿದೆ ಎಂದು ಹೇಳಿ ಹಿರೋಯಿಸಂ ತೋರಿಸಿದ್ದರು. ಅಂದು ಹಾಗೆ ಮಾಡದಿದ್ದರೆ ಇಂದು ಅವರು ಅನರ್ಹತೆಯಿಂದ ಬಚಾವ್ ಆಗುತ್ತಿದ್ದರೇನೋ. ಅವರ ನಿಲುವೇ ಈಗ ಅವರಿಗೆ ಈ ಪರಿಸ್ಥಿತಿ ತಂದಿಟ್ಟಿದೆ. ಅಷ್ಟಕ್ಕೂ ಬಿಜೆಪಿ ಅವರನ್ನು ಟಾರ್ಗೆಟ್ ಮಾಡುತ್ತಿದೆ ಎಂಬುದರಲ್ಲಿ ಅರ್ಥವಿಲ್ಲ.
ಇದು ಕಾಂಗ್ರೆಸ್​ನ ವ್ಯವಸ್ಥಿತ ಷಡ್ಯಂತ್ರ ಎನಿಸುತ್ತದೆ. ಅಲ್ಲದೆ ಸೋನಿಯಾಗಾಂಧಿ ಕುಟುಂಬ ಸಂವಿಧಾನ ಮತ್ತು ನ್ಯಾಯಾಲಯಕ್ಕಿಂತ ದೊಡ್ಡದು ಎಂದು ಭಾವಿಸಿದಂತಿದೆ. ಅಷ್ಟಕ್ಕೂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಸದಸ್ಯತ್ವ ಕಳೆದುಕೊಂಡವರಲ್ಲಿ ರಾಹುಲ್ ಗಾಂಧಿ ಮೊದಲಿಗರಲ್ಲ. ಇದುವರೆಗೆ ಹತ್ತು ಮಂದಿ ಜನಪ್ರತಿನಿಧಿಗಳು ತಮ್ಮ ಸ್ಥಾನ ಕಳೆದುಕೊಂಡಿದ್ದಾರೆ. ರಾಹುಲ್ ಗಾಂಧಿ ಹನ್ನೊಂದನೆಯವರು. ಆಗ ಮಾತನಾಡದವರು ಇಂದು ಮಾತನಾಡುತ್ತಿದ್ದಾರೆ ಎಂದರು.

ಇದನ್ನೂ ಓದಿ: Rahul Gandhi: ರಾಹುಲ್ ಗಾಂಧಿಗೆ ಮುಳುವಾಯ್ತು 2013ರಲ್ಲಿ ಹರಿದು ಹಾಕಿದ್ದ ಸುಗ್ರೀವಾಜ್ಞೆ

ಸದಸ್ಯತ್ವ ರದ್ದು ಬಳಿಕ ರಾಹುಲ್ ಗಾಂಧಿ ಹೇಳಿದ್ದೇನು?

ದೇಶದಲ್ಲಿ ಪ್ರಜಾಪ್ರಭುತ್ವದ ಮೇಲೆ ದಾಳಿಯಾಗುತ್ತಿದೆ ಎಂದು ಈ ಹಿಂದೆಯೂ ಹಲವು ಬಾರಿ ಹೇಳಿದ್ದೆ. ಇಂತಹ ಉದಾಹರಣೆಗಳನ್ನು ನಾವು ಪ್ರತಿದಿನ ನೋಡುತ್ತಿದ್ದೇವೆ. ಪ್ರಧಾನಿ ಮೋದಿ ಮತ್ತು ಅದಾನಿ ನಡುವಿನ ಸಂಬಂಧದ ಬಗ್ಗೆ ನಾನು ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳಿದೆ. ಸಂಸತ್ತಿನಲ್ಲಿ ಮಾಡಿದ ನನ್ನ ಭಾಷಣವನ್ನು ಅಳಿಸಲಾಯಿತು. ನಂತರ ನಾನು ಲೋಕಸಭೆ ಸ್ಪೀಕರ್‌ಗೆ ವಿವರವಾದ ಉತ್ತರವನ್ನು ಬರೆದೆ. ನಾನು ವಿದೇಶಿ ಶಕ್ತಿಗಳ ಸಹಾಯ ಕೇಳಿದ್ದೇನೆ ಎಂದು ಕೆಲವು ಸಚಿವರು ನನ್ನ ಬಗ್ಗೆ ಸುಳ್ಳು ಹೇಳಿದರು ಆದರೆ ನಾನು ಅಂತಹ ಯಾವುದೇ ಕೆಲಸ ಮಾಡಿಲ್ಲ. ನಾನು ಪ್ರಶ್ನೆ ಕೇಳುವುದನ್ನು ನಿಲ್ಲಿಸುವುದಿಲ್ಲ. ಪ್ರಧಾನಿ ಮೋದಿ ಮತ್ತು ಅದಾನಿ ನಡುವಿನ ಸಂಬಂಧವನ್ನು ನಾನು ಪ್ರಶ್ನಿಸುತ್ತಲೇ ಇರುತ್ತೇನೆ ಎಂದು ವಯನಾಡ್ ಕ್ಷೇತ್ರದ ಮಾಜಿ ಸಂಸದ ರಾಹುಲ್ ಗಾಂಧಿ ಹೇಳಿದ್ದರು.

ನೀವು ನಿರ್ದಿಷ್ಟ ಜಾತಿಯವರನ್ನು ಗುರಿಯಾಗಿಸಿದ್ದೀರಿ ಎಂದು ಬಿಜೆಪಿ ಆರೋಪಿಸುತ್ತಿದೆ. ಈ ಬಗ್ಗೆ ಏನಂತೀರಿ ಎಂದು ಸುದ್ದಿಗೋಷ್ಠಿ ವೇಳೆ ಪತ್ರಕರ್ತರು ಕೇಳಿದಾಗ, ನಾನು ಯಾರನ್ನೂ ಅವಮಾನಿಸಿಲ್ಲ, ಯಾವ ಜಾತಿಯನ್ನೂ ಗುರಿಯಾಗಿಸಿಲ್ಲ ಎಂದು ರಾಹುಲ್ ಹೇಳಿದ್ದರು. ನಾನು ಭಾರತದ ಧ್ವನಿಗಾಗಿ ಹೋರಾಡುತ್ತಿದ್ದೇನೆ. ನಾನು ಯಾವುದೇ ಬೆಲೆ ತೆರಲು ಸಿದ್ಧ ಎಂದು ಟ್ವೀಟ್ ಕೂಡ ಮಾಡಿದ್ದರು.

ಮೋದಿ ಉಪನಾಮ ಹೇಳಿಕೆ ಸಂಬಂಧಿಸಿದಂತೆ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಶಿಕ್ಷೆಗೊಳಗಾದ ದಿನಾಂಕದಿಂದ ರಾಹುಲ್ ಗಾಂಧಿಯವರ ಸಂಸದ ಸದಸ್ಯತ್ವ ಅನರ್ಹಗೊಳಿಸಲಾಗಿದೆ. ರಾಹುಲ್ ಗಾಂಧಿ ಅವರನ್ನು ಮಾರ್ಚ್ 23, 2023 ರಿಂದ ಆರ್ಟಿಕಲ್ 102(1)(ಇ) ನ ನಿಬಂಧನೆಗಳ ಪ್ರಕಾರ ಲೋಕಸಭೆಯ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿದೆ. ಭಾರತದ ಸಂವಿಧಾನವು 1951 ರ ಪ್ರಜಾ ಪ್ರಾತಿನಿಧ್ಯ ಕಾಯಿದೆಯ ಸೆಕ್ಷನ್ 8 ರೊಂದಿಗೆ ಹೇಳಿರುವಂತೆ ಈ ಕ್ರಮವನ್ನು ಜಾರಿಗೊಳಿಸಲಾಗಿದೆ ಎಂದು ಲೋಕಸಭೆಯ ಕಾರ್ಯದರ್ಶಿ ಇಂದು ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ