ಇಂದಿರಾ ಕ್ಯಾಂಟೀನ್ ಹೆಸರು ಬದಲಿಸಿದ್ರೆ ಪರಿಣಾಮ ನೆಟ್ಟಗಿರಲ್ಲ ಎಂದು ಬೆಂಗಳೂರಿನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಎಚ್ಚರಿಕೆ ನೀಡಿದ್ದಾರೆ. ವಿಧಾನ ಪರಿಷತ್ ಮುಖ್ಯ ಸಚೇತಕ ನಾರಾಯಣಸ್ವಾಮಿ, ಬಿ.ಕೆ ಹರಿಪ್ರಸಾದ್ ಅವರೊಂದಿಗೆ ಜಂಟಿ ಸುದ್ದಿ ಗೋಷ್ಟಿ ನಡೆಸಿ ಅವರು ಮಾತನಾಡಿದರು. ‘‘ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ಅಗೌರವ ತೋರಿಸಿದರೆ ನಾವೂ ಅದೇ ಧಾಟಿಯಲ್ಲಿ ಪ್ರತ್ಯುತ್ತರ ನೀಡಬೇಕಾಗುತ್ತದೆ. ಕೆಲವು ಫ್ಲೈಓವರ್, ರಸ್ತೆಗಳಿಗೆ ಬಿಜೆಪಿ ನಾಯಕರ ಹೆಸರಿಟ್ಟಿದ್ದಾರೆ. ಯಶವಂತಪುರ ಫ್ಲೈಓವರ್ಗೆ ದೀನದಯಾಳ್ ಉಪಾಧ್ಯಾಯ, ಬಸ್ ನಿಲ್ದಾಣಕ್ಕೆ ಅಟಲ್ ಬಿಹಾರಿ ವಾಜಪೇಯಿ ಹೆಸರಿಟ್ಟಿದ್ದಾರೆ. ಒಂದು ವೇಳೆ ಇಂದಿರಾ ಕ್ಯಾಂಟೀನ್ ಹೆಸರು ಬದಲಿಸಿದರೆ ಈ ಎಲ್ಲ ಬೋರ್ಡ್ಗಳಿಗೆ ಮಸಿ ಬಳಿಯುತ್ತೇವೆ’’ ಎಂದು ಅವರು ಎಚ್ಚರಿಕೆ ನೀಡಿದ್ಧಾರೆ.
ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯ ಹೆಸರು ಬದಲಾಯಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರಾಮಲಿಂಗಾರೆಡ್ಡಿ, ‘‘ರಾಜೀವ್ ಗಾಂಧಿ ಕೂಡ ದೇಶಕ್ಕೋಸ್ಕರವೇ ಪ್ರಾಣ ಕೊಟ್ಟಿದ್ದು. ಅವರ ಹೆಸರಿನ ಪ್ರಶಸ್ತಿ ಬದಲಿಸಿದ್ದು ಸರಿಯಲ್ಲ. ಧ್ಯಾನ್ ಚಂದ್ ಹೆಸರು ಬೇರೆ ದೊಡ್ಡ ಯೋಜನೆಗಳಿಗೆ ಇಡಲಿ. ಅದನ್ನ ಬೇಡ ಎನ್ನುವುದಿಲ್ಲ, ಇರುವ ಹೆಸರು ಬದಲಿಸೋದ್ಯಾಕೆ?’’ ಎಂದು ಅವರು ಪ್ರಶ್ನಿಸಿದ್ದಾರೆ.
ಗುಜರಾತ್ನಲ್ಲಿನ ಕ್ರೀಡಾಂಗಣಕ್ಕೆ ನರೇಂದ್ರ ಮೋದಿ ಹೆಸರನ್ನು ಇಟ್ಟಿರುವುದನ್ನು ಪ್ರಸ್ತಾಪಿಸಿದ ರಾಮಲಿಂಗಾರೆಡ್ಡಿ, ‘‘ನರೇಂದ್ರ ಮೋದಿ ಸ್ಟೇಡಿಯಂ ಎಂದು ಬಿಜೆಪಿಯವರೇ ಹೆಸರಿಟ್ಟಿದ್ದಾರೆ. ನರೇಂದ್ರ ಮೋದಿ ಏನು ದೊಡ್ಡ ಕ್ರೀಡಾಪಟುವಾ? ಅವರೇನು ನೂರು ಕ್ಯಾಚ್ ಹಿಡಿದಿದ್ದಾರಾ? ಸೆಂಚುರಿ ಬಾರ್ಸಿದ್ದಾರಾ? ಇವರೇನು ಸಚಿನ್ ತೆಂಡುಲ್ಕರ್ ತರಹ ದೊಡ್ಡ ಕ್ರಿಕೆಟರಾ?’’ ಎಂದು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ಮುಂದಕ್ಕೆ ಬಿಜೆಪಿ ಸರ್ಕಾರ ಎಲ್ಲೂ ಇರುವುದಿಲ್ಲ. ನಮ್ಮ ಸರ್ಕಾರ ಬಂದಾಗ, ಬಿಜೆಪಿ ಇಟ್ಟಿರುವ ಹೆಸರು ಬದಲಿಸುವ ಕಾಲ ಬರುತ್ತದೆ ಎಂದು ಅವರು ಹೇಳಿದ್ದಾರೆ.
ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಹರಿಹಾಯ್ದ ಬಿ.ಕೆ.ಹರಿಪ್ರಸಾದ್:
ಸಚಿವ ಕೆ.ಎಸ್.ಈಶ್ವರಪ್ಪ ತಮ್ಮ ಹೆಸರನ್ನು ಮೇರಾ ನಾಮ್ ಜೋಕರ್ ಎಂದು ಬದಲಾಯಿಸಿಕೊಳ್ಳಲಿ ಎಂದು ಬೆಂಗಳೂರಿನಲ್ಲಿ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹರಿಹಾಯ್ದಿದ್ದಾರೆ. ಸಚಿವ ಕೆ.ಎಸ್.ಈಶ್ವರಪ್ಪ ದ್ವೇಷದ ಭಾಷಣ ಮಾಡಿದ್ದಾರೆ. ಇದು ಈಶ್ವರಪ್ಪನವರಿಗೆ ಪಾಠ ಹೇಳಿಕೊಟ್ಟ ‘ನಾಗಪುರ’ ವಿವಿಯ ತಪ್ಪು ಎಂದು ಅವರು ಕುಟುಕಿದ್ದಾರೆ. ಪ್ರಚೋದನಾಕಾರಿ ಭಾಷಣದ ವಿರುದ್ಧ ಪೊಲೀಸರು ಸ್ವಯಂಪ್ರೇರಿತ ಪ್ರಕರಣವನ್ನು ದಾಖಲಿಸಬೇಕು ಎಂದು ಆಗ್ರಹಿಸಿದ ಹರಿಪ್ರಸಾದ್, ಈಶ್ವರಪ್ಪ ಹೇಳಿಕೆಯನ್ನು ಸಿಎಂ ಸಮರ್ಥಿಸಿಕೊಂಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:
ಸಾಕ್ಷಾತ್ ವಿಧಾನಸೌಧದಲ್ಲಿ ಕಾಂಗ್ರೆಸ್‌ನವರ ಬಗ್ಗೆ ಅವಾಚ್ಯ ಬೈಗುಳ ಪದ ಬಳಸಿದ ಸಚಿವ ಕೆ.ಎಸ್. ಈಶ್ವರಪ್ಪ
ಹೈಕೋರ್ಟ್ ಒಪ್ಪಿಗೆಯಿಲ್ಲದೆ ಶಾಸಕರು, ಸಂಸದರ ವಿರುದ್ಧದ ಕ್ರಿಮಿನಲ್ ಕೇಸ್ ಹಿಂಪಡೆಯುವಂತಿಲ್ಲ; ಸುಪ್ರೀಂ ಕೋರ್ಟ್ ಆದೇಶ
(Ramalinga Reddy warns BJP regarding Changing the name of Indira Canteen)