ರಾಮನಗರ ಉಸ್ತುವಾರಿ ಸಚಿವರಿಗೆ ಶಾಸಕರು ಕೂಡ ಉತ್ತರದಾಯಿ ಎನ್ನುವ ಸಾಮಾನ್ಯ ಜ್ಞಾನ ಇಲ್ಲದಾಯಿತಲ್ಲ?: ಅನಿತಾ ಕುಮಾರಸ್ವಾಮಿ ಸರಣಿ ಟ್ವೀಟ್

|

Updated on: Feb 21, 2023 | 7:42 PM

ಹಾರೋಹಳ್ಳಿ‌ ನೂತನ ತಾಲೂಕು ಉದ್ಘಾಟನೆ ಸಮಾರಂಭ ನಡೆಯಿತು. ವೇದಿಕೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಅಶ್ವಥ್ಥನಾರಾಯಣ ಹಾಗೂ ಜೆಡಿಎಸ್ ಶಾಸಕಿ ಅನಿತಾ ಕುಮಾರಸ್ವಾಮಿ ನಡುವೆ ಮಾತಿನ ಜಟಾಪಟಿಯೂ ನಡೆದಿತ್ತು. ಇದೀಗ ಸರಣಿ ಟ್ವೀಟ್ ಮಾಡಿ ಅಶ್ವತ್ಥನಾರಾಯಣ ವಿರುದ್ಧ ಅನಿತಾ ಅವರು ಟೀಕಾಪ್ರಹಾರ ನಡೆಸಿದರು.

ರಾಮನಗರ ಉಸ್ತುವಾರಿ ಸಚಿವರಿಗೆ ಶಾಸಕರು ಕೂಡ ಉತ್ತರದಾಯಿ ಎನ್ನುವ ಸಾಮಾನ್ಯ ಜ್ಞಾನ ಇಲ್ಲದಾಯಿತಲ್ಲ?: ಅನಿತಾ ಕುಮಾರಸ್ವಾಮಿ ಸರಣಿ ಟ್ವೀಟ್
ಅನಿತಾ ಕುಮಾರಸ್ವಾಮಿ ಮತ್ತು ಸಿ.ಎನ್.ಅಶ್ವತ್ಥ ನಾರಾಯಣ
Follow us on

ಬೆಂಗಳೂರು: ಹಾರೋಹಳ್ಳಿ‌ ನೂತನ ತಾಲೂಕು ಉದ್ಘಾಟನೆ (Harohalli Taluk Office Inaugurated) ಸಮಾರಂಭ ನಡೆಯಿತು. ವೇದಿಕೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥ ನಾರಾಯಣ (C.N.Ashwath Narayan) ಹಾಗೂ ಜೆಡಿಎಸ್ ಶಾಸಕಿ ಅನಿತಾ ಕುಮಾರಸ್ವಾಮಿ (Anitha Kumaraswamy) ನಡುವೆ ಮಾತಿನ ಜಟಾಪಟಿಯೂ ನಡೆದಿತ್ತು. ಇದೀಗ ಸರಣಿ ಟ್ವೀಟ್ ಮಾಡಿ ಅಶ್ವತ್ಥನಾರಾಯಣ ವಿರುದ್ಧ ಅನಿತಾ ಅವರು ಟೀಕಾಪ್ರಹಾರ ನಡೆಸಿದರು. “ಹರೋಹಳ್ಳಿ ತಾಲೂಕು ಕಚೇರಿ ಲೋಕಾರ್ಪಣೆಗೊಳಿಸುವ ವಿಷಯದಲ್ಲಿ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಅವರು ತೋರಿದ ಆತುರ ನನಗೆ ಅತೀವ ಅಚ್ಚರಿ ಉಂಟು ಮಾಡಿದೆ. ಕ್ಷುಲ್ಲಕ ರಾಜಕೀಯಕ್ಕಾಗಿ ಶಿಷ್ಟಾಚಾರ ಹತ್ತಿಕ್ಕಿ, ಓರ್ವ ಶಾಸಕಿಯನ್ನು ಅಪಮಾನಿಸುವುದು ಎಷ್ಟು ಸರಿ ಎನ್ನುವುದು ನನ್ನ ಪ್ರಶ್ನೆ” ಎಂದರು.

ಹಾರೋಹಳ್ಳಿ ತಾಲೂಕು ಕೇಂದ್ರ ರಚನೆಗೆ ಕಾರಣಕರ್ತರು ಯಾರೆನ್ನುವುದು ಜನತೆಗೆ ಗೊತ್ತಿದೆ. ಮಾಜಿ ಮುಖ್ಯಮಂತ್ರಿ ಹೆಚ್​.ಡಿ.ಕುಮಾರಸ್ವಾಮಿ ಅವರ ಒತ್ತಾಸೆ, ನನ್ನ ಬದ್ಧತೆಯ ಕುರುಹಾಗಿ ಹಾರೋಹಳ್ಳಿ ತಾಲೂಕು ಕೇಂದ್ರವಾಗಿದೆ. ಕುಮಾರಸ್ವಾಮಿ ಅವರೇ ಹಾರೋಹಳ್ಳಿ ತಾಲೂಕು ಕೇಂದ್ರ ಘೋಷಣೆ ಮಾಡಿದ್ದು. ಉಸ್ತುವಾರಿ ಸಚಿವರಿಗೆ ಗೊತ್ತಿಲ್ಲವೆ? ಎಂದು ಅನಿತಾ ಅವರು ಪ್ರಶ್ನಿಸಿದರು.

ಈ ತಾಲೂಕು ಕೇಂದ್ರದ ಅಭಿವೃದ್ಧಿಗೆ ನಾನು ಸಾಕಷ್ಟು ಅನುದಾನ ತಂದಿದ್ದೇನೆ. ನಾನು, ಕುಮಾರಸ್ವಾಮಿ ಅವರು ರಾಜಕೀಯ ಬದಿಗಿಟ್ಟು ರಾಮನಗರ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದ್ದೇವೆ. ಆದರೆ, ಪ್ರತಿ ಸಣ್ಣ ವಿಷಯದಲ್ಲಿಯೂ ರಾಜಕೀಯ ಹುಡುಕುವ ಉಸ್ತುವಾರಿ ಸಚಿವರಿಗೆ, ಶಾಸಕರು ಕೂಡ ಉತ್ತರದಾಯಿ ಎನ್ನುವ ಸಾಮಾನ್ಯ ಜ್ಞಾನ ಇಲ್ಲದಾಯಿತಲ್ಲ? ಎಂದು ಅನಿತಾ ಅವರು ಪ್ರಶ್ನಿಸಿದರು.

ಕ್ಷೇತ್ರದಲ್ಲಿ ಯಾವುದೇ ಸರಕಾರಿ ಕಾರ್ಯಕ್ರಮ ನಡೆದರೂ ಅದರ ಅಧ್ಯಕ್ಷತೆ ಆಯಾ ಕ್ಷೇತ್ರದ ಶಾಸಕರೇ ವಹಿಸಬೇಕು. ಇದು ಶಿಷ್ಟಾಚಾರ ಮಾತ್ರವಲ್ಲ, ಶಾಸಕರ ಹಕ್ಕು ಕೂಡ. ಆದರೆ, ಸಚಿವರು ನನ್ನ ಹಕ್ಕನ್ನು ಕಸಿದುಕೊಂಡಿದ್ದಾರೆ. ಇದು ಅನ್ಯಾಯದ ಪರಮಾವಧಿ. ಬಿಜೆಪಿ ರಾಜ್ಯ ಸರಕಾರದಲ್ಲಿ ಮಹಿಳೆಯರಿಗೆ ಸಿಗುತ್ತಿರುವ ಗೌರವ ಈ ರೀತಿಯದ್ದು ಎಂದು ಅನಿತಾ ಕುಮಾರಸ್ವಾಮಿ ಅವರು ಟೀಕಿಸಿದರು.

ಇದನ್ನೂ ಓದಿ: ರಾಮನಗರ ಬಿಜೆಪಿಯಲ್ಲಿ ಭುಗಿಲೆದ್ದ ಅಸಮಾಧಾನ: ಉಸ್ತುವಾರಿ ಸಚಿವ ಅಶ್ವತ್ಥ್ ನಾರಾಯಣ ವಿರುದ್ಧ ಕಾರ್ಯಕರ್ತರ ಪ್ರತಿಭಟನೆ

ಮಾನ್ಯ ಸಚಿವರಿಗೆ ಹಾರೋಹಳ್ಳಿ ತಾಲೂಕು ಕೇಂದ್ರದ ಅಭಿವೃದ್ಧಿಗೆ ನಾನು ಮತ್ತು ಶ್ರೀ ಕುಮಾರಸ್ವಾಮಿ ಅವರು ನಡೆಸಿರುವ ಪ್ರಯತ್ನಗಳು, ತಂದ ಅನುದಾನದ ಬಗ್ಗೆ ಮಾಹಿತಿ ಇಲ್ಲದಿದ್ದರೆ ಮೊದಲು ದಾಖಲೆಗಳನ್ನು ಪರಿಶೀಲನೆ ಮಾಡಲಿ, ಅದಕ್ಕೂ ಸಮಯ ಇಲ್ಲ ಎಂದಾದರೆ ಅವರ ಸಂಪುಟ ಸಹೋದ್ಯೋಗಿ, ಕಂದಾಯ ಸಚಿವರಾದ ಆರ್.ಅಶೋಕ್ ಅವರನ್ನು ಸಂಪರ್ಕ ಮಾಡಲಿ ಎಂದು ಅನಿತಾ ಅವರು ಹೇಳಿದರು.

ಜನರ ಸಂಕಷ್ಟಗಳ ಪರಿಹಾರ, ಅಭಿವೃದ್ಧಿ ವಿಷಯದಲ್ಲಿ ನಾನಾಗಲಿ, ಕುಮಾರಸ್ವಾಮಿ ಅವರಾಗಲಿ ಕ್ಷುಲ್ಲಕ ರಾಜಕೀಯ ಮಾಡಿಲ್ಲ, ಮಾಡುವುದೂ ಇಲ್ಲ. ಅಂತಹ ರಾಜಕೀಯದಲ್ಲಿ ನಿಪುಣರಾಗಿರುವ ಬಿಜೆಪಿಗರಿಗೆ ಶಿಷ್ಟಾಚಾರ ಎನ್ನುವುದು ಗೊತ್ತಿರಲು ಹೇಗೆ ಸಾಧ್ಯ? ಉನ್ನತ ಶಿಕ್ಷಣ ಸಚಿವರ ಉನ್ನತ ಮೌಲ್ಯ ಎಂದರೆ, ಮಹಿಳಾ ಶಾಸಕರನ್ನು ಅಪಮಾನಿಸುವುದಾ? ಎಂದು ಅನಿತಾ ಕುಮಾರಸ್ವಾಮಿ ಅವರು ಪ್ರಶ್ನಿಸಿದರು.

ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಇದಕ್ಕೆ ಉತ್ತರ ನೀಡಬೇಕು ಹಾಗೂ ಓರ್ವ ಶಾಸಕಿಗೆ ಅಪಮಾನಿಸಿದ ಸಚಿವರ ನಡೆಯನ್ನು ಖಂಡಿಸಬೇಕು. ಈ ಬಗ್ಗೆ ನನಗೆ ಬಹಳ ನೋವಾಗಿದೆ. ಮಾನ್ಯ ಸಭಾಧ್ಯಕ್ಷರು ಹಾಗೂ ಹಕ್ಕು ಭಾದ್ಯತಾ ಸಮಿತಿಯ ಅಧ್ಯಕ್ಷರಿಗೆ ದೂರು ಸಲ್ಲಿಸಲಾಗುವುದು ಎಂದು ಅನಿತಾ ಅವರು ಹೇಳಿದರು.

ರಾಜಕೀಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:36 pm, Tue, 21 February 23