ಬೆಂಗಳೂರು, ಸೆ.5: ದೇಶದಕ್ಕೆ ಇಂಡಿಯಾ ಬದಲು ರಿಪಬ್ಲಿಕ್ ಆಫ್ ಭಾರತ್ (Republic Of Bharat) ಎಂದು ಮರುನಾಮಕರಣ ಮಾಡಲುವ ಬಗ್ಗೆ ಕೇಂದ್ರ ಸರ್ಕಾರ ಮುಂದಾಗಿದೆ. ಇದಕ್ಕೆ ಬಿಜೆಪಿ (BJP) ಸೇರಿದಂತೆ ಬಲಪಂಥೀಯ ನಾಯಕರು ಮಾತ್ರವಲ್ಲದೆ ಕೋಟ್ಯಂತರ ದೇಶವಾಸಿಗಳು ಕೂಡ ಸಂತಸಗೊಂಡಿದ್ದಾರೆ. ಕೆಲವರು ವಿರೋಧ ಕೂಡ ಮಾಡುತ್ತಿದ್ದಾರೆ. ಹಾಗದರೆ, ಕೇಂದ್ರ ಸರ್ಕಾರದ ನಿರ್ಧಾರದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah), ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಸೇರಿದಂತೆ ಕರ್ನಾಟಕದ ಯಾವ ನಾಯಕರು ಏನಂದ್ರು? ಈ ಬಗ್ಗೆ ಮಾಹಿತಿ ಇಲ್ಲಿದೆ.
ರಿಪಬ್ಲಿಕ್ ಆಫ್ ಭಾರತ್ ಎಂದು ಮರುನಾಮಕರಣ ಅಗತ್ಯವಿಲ್ಲ ಎಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ನಮ್ಮ ಸಂವಿಧಾನದಲ್ಲಿ ಭಾರತದ ಸಂವಿಧಾನ ಎಂದು ಬರೆದಿದೆ. ಇಂಡಿಯಾ ಎಂಬುದು ಎಲ್ಲರೂ ಒಪ್ಪಿರುವ ಹೆಸರಾಗಿದೆ. ಹೀಗಾಗಿ ಭಾರತ್ ಎಂದು ಹೆಸರಿಡುವ ಅಗತ್ಯವಿಲ್ಲ ಎಂದಿದ್ದಾರೆ.
ಸೋಲಿನ ಭಯದಿಂದ ಅವರು ಮರುನಾಮಕರಣ ಮಾಡುತ್ತಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ನೋಟಿನ ಮೇಲೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅಂತಾ ಇದೆ ಎಂದು 500 ರೂಪಾಯಿ ನೋಟು ತೋರಿಸಿದ ಡಿ.ಕೆ.ಶಿವಕುಮಾರ್, ಇಂಡಿಯಾ ಹೆಸರನ್ನ ತಡೆದುಕೊಳ್ಳಲು ಆಗುತ್ತಿಲ್ಲ ಅಂದರೆ ಏನು ಮಾಡೋಣ? ಕಾಂಗ್ರೆಸ್ ಬಗ್ಗೆ ಕೇಂದ್ರ ಸರ್ಕಾರಕ್ಕೆ ಎಷ್ಟು ಭಯ ಬಂದಿರಬೇಕು ಎಂದರು.
ಇದನ್ನೂ ಓದಿ: G20 ಶೃಂಗಸಭೆಯ ಭೋಜನಕೂಟದ ಆಹ್ವಾನ ಪತ್ರಿಕೆಯಲ್ಲಿ ಪ್ರೆಸಿಡೆಂಟ್ ಆಫ್ ಇಂಡಿಯಾ ಬದಲು ಭಾರತದ ರಾಷ್ಟ್ರಪತಿ; ಏನಿದು ಹೊಸ ಚರ್ಚೆ?
ಸೋಲನ್ನು ಯಾವ ರೀತಿಯಲ್ಲಿ ನೋಡುತ್ತಿರಬೇಕು? ರಿಸರ್ವ್ ಬ್ಯಾಂಕ್ ಸಹಿಗೆ ಬೆಲೆ ಇಲ್ಲದಂತೆ ಕೇಂದ್ರ ಸರ್ಕಾರ ಮಾಡಿದೆ. ಇಂಡಿಯಾವನ್ನು ಭಾರತ್ ಮಾಡುತ್ತಿರುವುದು ಸರಿಯಲ್ಲ. ಸೋಲಿನ ಭಯದಿಂದ ಅವರು ಮರುನಾಮಕರಣ ಮಾಡುತ್ತಿದ್ದಾರೆ ಎಂದು ರಾಮನಗರದಲ್ಲಿ ಹೇಳಿದ್ದಾರೆ.
ಇಂಡಿಯಾ (ವಿಪಕ್ಷ ಮೈತ್ರಿಕೂಟದ ಹೆಸರು)ದ ಬಗ್ಗೆ ಭಯ ಕೇಂದ್ರ ಸರ್ಕಾರಕ್ಕಿದೆ ಎಂಬ ಡಿಕೆ ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್, ಭಯ ಅನ್ನೋದು ನಮಗೆ ಇಲ್ಲ. ಭಾರತ ಅಂತಾ ಕರೆಯಲು ನಮಗೆ ಯಾಕೆ ಭಯ? ಬ್ರಿಟಿಷರ ಶಿಕ್ಷಣವನ್ನು ಮುಂದುವರೆಸುತ್ತಿರುವ ನಿಮಗೆ ಭಯ ಇರಬಹುದು. ನಮಗೆ ಭಯವಿಲ್ಲ. ಇಂಡಿಯಾ ಎಂದು ಕರೆಯುವುದಕ್ಕೆ ನಿಮಗೆ ನಾಚಿಕೆಯಾಗಬೇಕು. ಗುಲಾಮಿತನ ಇರುವುದು ನಿಮಗೆ, ನಮಗಲ್ಲ ಎಂದರು.
ಇದನ್ನೂ ಓದಿ: ‘ಇಂಡಿಯಾ’ ಹೆಸರು ಬದಲಾವಣೆ ಚರ್ಚೆ ಬೆನ್ನಲ್ಲೇ ‘ಭಾರತ್ ಮಾತಾ ಕಿ ಜೈ’ ಎಂದ ಅಮಿತಾಭ್ ಬಚ್ಚನ್
ರಿಪಬ್ಲಿಕ್ ಆಫ್ ಭಾರತ್ ಮರು ನಾಮಕರಣದ ಬಗ್ಗೆ ಪ್ರತಿಕ್ರಿಯಿಸಿದ ರವಿಕುಮಾರ್, ಭಾರತ ಎಂಬ ಶಬ್ದ ಸಾಂಸ್ಕೃತಿಕ ಭಾವನೆಯಿಂದ ಕೂಡಿದ ಹೆಸರಾಗಿದೆ. ಇಂಡಿಯಾ ಶಬ್ಧದಲ್ಲಿ ಆ ರೀತಿಯ ಭಾವನೆ ಇಲ್ಲ. ಇಂಡಿಯಾ ಎಂದು ಬ್ರಿಟಿಷರು ಕರೆಯುತ್ತಿದ್ದರು. ನಮ್ಮ ಭಾರತ ಎಂದು ಕರೆಯಲು ಹೆಮ್ಮೆ ಇದೆ. ಕಾಂಗ್ರೆಸ್ನವರು ಭಾರತ ಎಂದು ಕರೆಯುವುದಕ್ಕೆ ಮುಜುಗರ ಬೇಡ. ಇಂಡಿಯಾ ಬ್ರಿಟಿಷರು ಇಟ್ಟ ಹೆಸರು. ಹೀಗಾಗಿ ಭಾರತ ಎಂಬ ನಾಮಕರಣಕ್ಕೆ ಬಿಜೆಪಿ ಸ್ವಾಗತ ಮಾಡುತ್ತದೆ ಎಂದರು.
ಭಾರತ ಅಂತಾ ಹೆಸರು ಬದಲಾವಣೆ ಮಾಡಲು ನನ್ನ ವಿರೋಧವಿಲ್ಲ. ಆದರೆ ಹೆಸರು ಬದಲಾಯಿಸಿದರೆ ಜನರ ಬದುಕು ಬದಲಾಗುವುದಿಲ್ಲ ಎಂದು ಹೊಸಕೋಟೆಯಲ್ಲಿ ಟಿವಿ9ಗೆ ನಿವೃತ್ತ ನ್ಯಾ.ನಾಗಮೋಹನ ದಾಸ್ ಹೇಳಿಕೆ ನೀಡಿದ್ದಾರೆ. ನಿರುದ್ಯೋಗ, ಬಡತನ ನಿರ್ಮೂಲನೆ ಸೇರಿ ಜನರ ಸಮಸ್ಯೆ ಬಗೆಹರಿಯಲಿ. ದೇಶದ ಮಕ್ಕಳಿಗೆ ಮೊದಲು ಗುಣಮಟ್ಟದ ಶಿಕ್ಷಣವನ್ನು ನೀಡಬೇಕು. ಮೊದಲು ಇವೆಲ್ಲ ಬದಲಾವಣೆಯಾಗಲಿ, ನಂತರ ಬೇರೆ ಬದಲಾಗಬೇಕು ಎಂದರು.
ಇಂಡಿಯಾ ಬದಲು ಭಾರತ ಎಂದು ನೇಮಕ ಮಾಡುವ ಕುರಿತು ನನಗೆ ಪೂರ್ತಿ ವಿಚಾರ ಗೊತ್ತಿಲ್ಲ. ಅಧಿವೇಶನದಲ್ಲಿ ಬಿಲ್ ತಂದ ಮೇಲೆ ಈ ಬಗ್ಗೆ ಮಾತನಾಡೋಣ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ. ಕೊಪ್ಪಳದಲ್ಲಿ ಮಾತನಾಡಿದ ಅವರು, ಒಟ್ಟಾರೆರಾಗಿ ಪ್ರಧಾನಮಂತ್ರಿ ಮೋದಿಗೆ ಸೋಲಿನ ಭಯ ಶುರುವಾಗಿದೆ. ರಾಹುಲ್, ಕಾಂಗ್ರೆಸ್ ಬಗ್ಗೆ ಪ್ರಧಾನಿ ಮೋದಿಗೆ ಭಯ ಶುರುವಾಗಿದೆ. ಬಿಜೆಪಿಯವರು ಜನರಿಗೆ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ಕೋಲಾರ ಜಿಲ್ಲೆಯ ಕೆಜಿಎಫ್ನಲ್ಲಿ ಮಾತನಾಡಿದ ಬಿಜೆಪಿ ಸಂಸದ ಮುನಿಸ್ವಾಮಿ, ಹಿಂದೆ ಈಸ್ಟ್ ಇಂಡಿಯಾ ಕಂಪನಿ ಎಂದು ನಾಮಕರಣ ಮಾಡಲಾಗಿತ್ತು. ಇಂದು ಭಾರತ ಎಂದು ಮರುನಾಮಕರಣ ಮಾಡಲಾಗುತ್ತಿದೆ. ಭಾರತ ಎಂದರೆ ಹಿಂದೂಸ್ತಾನ, ಇದು ತನ್ನದೇ ಆದ ಇತಿಹಾಸ ಹೊಂದಿದೆ ಎಂದರು.
ಈ ಹಿಂದೆ ವಿಪಕ್ಷಗಳು ಯುಪಿಎ ಎಂದು ಹೆಸರಿಟ್ಟುಕೊಂಡಿದ್ದರು. ಯುಪಿಎ1, ಯುಪಿಎ2 ಹೆಸರಿನಲ್ಲಿ ಭ್ರಷ್ಟಾಚಾರ ನಡೆಸಿದ್ದರು. ಅದನ್ನು ಮುಚ್ಚಿಕೊಳ್ಳಲು I.N.D.I.A ಎಂದು ಹೆಸರಿಟ್ಟಿದ್ದಾರೆ. ಈ ಕಳ್ಳಕಾಕರು I.N.D.I.A ಅಂತಾ ಹೆಸರಿಟ್ಟುಕೊಳ್ಳುವುದು ಬೇಡ ಎಂದು ಹೇಳಿದ ಮುನಿಸ್ವಾಮಿ, ಭಾರತ್ ಎಂದು ಹೆಸರಿಟ್ಟರೆ ಯಾರೂ ವಿರೋಧ ಮಾಡಲ್ಲ ಎಂದರು.
ಇಂಡಿಯಾ ಮರುನಾಮಕರಣ ವಿಚಾರವಾಗಿ ಮಾತನಾಡಿದ ಸಚಿವ ಈಶ್ವರ್ ಖಂಡ್ರೆ, ಸಂವಿಧಾನವನ್ನೇ ಬದಲಾವಣೆ ಮಾಡಲು ಹೊರಟಿದ್ದರು. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಕರ್ನಾಟಕದ ಪರಿಸ್ಥಿತಿ ಬರುತ್ತದೆ ಎಂದು ಬದಲಾವಣೆ ಮಾಡಲು ಹೊರಟಿದ್ದಾರೆ. ಸಂವಿಧಾನದ ಹಕ್ಕುಗಳು ಇದೆ. ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಹಕ್ಕು ಕಸಿಯುವ ಕೆಲಸ ಸಫಲವಾಗಲ್ಲ. ಇಂಡಿಯಾ ಒಕ್ಕೂಟ ನೋಡಿ ಅವರಿಗೆ ಭಯ ಶುರುವಾಗಿದೆ. ಚುನಾವಣೆಗೆ ಉಳಿದಿರುವುದು 6 ತಿಂಗಳು ಮಾತ್ರ. ಅದಕ್ಕೆ ಹೀಗೆಲ್ಲ ಮಾಡುತ್ತಿದ್ದಾರೆ ಎಂದರು.
ಗದಗನಲ್ಲಿ ಮಾತನಾಡಿದ ಶ್ರೀರಾಮನ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ರಿಪಬ್ಲಿಕ್ ಆಪ್ ಭಾರತ್ ನಾಮಕರಣ ಮಾಡುವ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ದೇಶದಲ್ಲಿನ ಗ್ರಾಮ, ಪಟ್ಟಣ, ವಿಮಾನ ನಿಲ್ದಾಣ, ರೈಲು ನಿಲ್ದಾಣಗಳ ಹೆಸರು ಗುಲಾಮಗಿರಿ ಹೆಸರು ಇದ್ದವು. ಈ ಹೆಸರುಗಳನ್ನು 2014 ರ ನಂತರ ತೆಗೆದು, ಭಾರತೀಯ ಹೆಸರು, ಹಿಂದೂ ಧರ್ಮದ ಹೆಸರುಗಳನ್ನು ಇಡಲಾಗುತ್ತಿದೆ ಎಂದರು.
ಈಗ ಜಿ20 ಸಮ್ಮೇಳನದಲ್ಲಿ ರಿಪಬ್ಲಿಕ್ ಆಪ್ ಭಾರತ್ ಅಂತಾ ಹೆಸರು ಇಟ್ಟಿದ್ದು ಸ್ವಾಗತಾರ್ಹ. ಇಂಡಿಯಾ ಎನ್ನುವ ಶಬ್ದದಲ್ಲಿ ಗುಲಾಮಗಿರಿ ಇದೆ. ಬ್ರಿಟಿಷರು ಇಟ್ಟಿರುವ ಶಬ್ದ ಇದಾಗಿದೆ. ಭಾರತ್ ಎನ್ನುವುದು ಹೆಮ್ಮೆಯ ಶಬ್ದವಾಗಿದೆ. ಸ್ವಾಭಿಮಾನದ ಅರ್ಥ ಬರುವ ಶಬ್ದವಾಗಿದೆ ಇದಾಗಿದೆ ಎಂದರು.
ಮರುನಾಮಕರಣ ಸಾಧ್ಯತೆ ವಿಚಾರವಾಗಿ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಜಾಗತಿಕ ಮಟ್ಟದಲ್ಲಿ ಇಂಡಿಯಾ ಎಂದು ಕರೆಯುವುದು ರೂಢಿ ಎಂದರು. ಬೆಳಗಾವಿಯಲ್ಲಿ ಮಾತನಾಡಿದ ಅವರು, ನಮ್ಮ ನಾಯಕರು ಯಾವ ನಿಲುವು ತೆಗೆದುಕೊಳ್ತಾರೋ ನೋಡಬೇಕು. ರಾಷ್ಟ್ರೀಯ ನಾಯಕರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂಬುದನ್ನು ನೋಡೋಣ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:52 pm, Tue, 5 September 23