ಹಿಂದೂ ರಾಷ್ಟ್ರ ಎನ್ನುವಂತೆ ಭಾರತ ಎಂದು ಕರೆಯುವುದರಲ್ಲೂ ಕಿಚ್ಚಿದೆ: ಸುನೀಲ್ ಕುಮಾರ್
ಕೇಂದ್ರ ಸರ್ಕಾರವು ಇಂಡಿಯಾ ಬದಲು ಭಾರತ ಎಂದು ಮರುನಾಮಕರಣ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಬಗ್ಗೆ ಬಿಜೆಪಿ ನಾಯಕರು ಸೇರಿದಂತೆ ಬಲಪಂಥೀಯ ನಾಯಕರು ಸಂತಸಗೊಂಡಿದ್ದಾರೆ. ಹಿಂದೂ ರಾಷ್ಟ್ರ ಎಂದು ಹೇಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೋ ಅದೇ ರೀತಿ ಭಾರತ ಎಂಬುದಕ್ಕೂ ಕಿಚ್ಚಿದೆ ಎಂದು ಬಿಜೆಪಿ ಶಾಸಕ ಸುನೀಲ್ ಕುಮಾರ್ ಹೇಳಿದ್ದಾರೆ.
ಬೆಂಗಳೂರು, ಸೆ.5: ದೇಶವನ್ನು ರಿಪಬ್ಲಿಕ್ ಆಫ್ ಭಾರತ್ (Bharat) ಎಂದು ಮರುನಾಮಕರಣ ಮಾಡುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸುತ್ತೇನೆ ಎಂದು ಕಾರ್ಕಳ ಬಿಜೆಪಿ ಶಾಸಕ ಸುನಿಲ್ ಕುಮಾರ್ (Sunil Kumar) ಹೇಳಿದ್ದಾರೆ. ಇಂಡಿಯಾ ಬದಲು ಭಾರತ ಎಂದು ಮರುನಾಮಕರಣ ಮಾಡುವ ಸಾಧ್ಯತೆ ಕುರಿತು ಪ್ರತಿಕ್ರಿಯಿಸಿದ ಅವರು, ಹಿಂದೂ ರಾಷ್ಟ್ರ ಎಂದು ಹೇಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೋ ಅದೇ ರೀತಿ ಭಾರತ ಎಂಬುದಕ್ಕೂ ಕಿಚ್ಚಿದೆ. ಭಾರತ ದೇಶ ಎಂದು ಕರೆಯುವುದಕ್ಕೆ ನಮಗೆ ಖುಷಿಯಾಗುತ್ತದೆ ಎಂದರು.
ಮುಖ್ಯಮಂತ್ರಿ ಅವರಿಗೆ ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ ಪತ್ರ ಬರೆದಿರುವ ವಿಚಾರವಾಗಿ ಮಾತನಾಡಿದ ಸುನಿಲ್ ಕುಮಾರ್, ಆಡಳಿತ ಪಕ್ಷದ ಶಾಸಕರ ಮಾತು ಅಧಿಕಾರಿಗಳು ಕೇಳುತ್ತಿಲ್ಲ ಅಂದರೆ ಈ ಸರ್ಕಾರ ಎಷ್ಟರ ಮಟ್ಟಿಗೆ ನಡೆಯುತ್ತಿದೆ ಅನ್ನೋದು ಗೊತ್ತಿದೆ. ಇದು ಅಸಮರ್ಥ ಸರ್ಕಾರ. ಈ ಸರ್ಕಾರಕ್ಕೆ ಲಂಗು ಲಗಾಮು ಇಲ್ಲ ಎಂದರು.
ಇದನ್ನೂ ಓದಿ: ಸಂಸತ್ ವಿಶೇಷ ಅಧಿವೇಶನದಲ್ಲಿ ದೇಶದ ಹೆಸರು ಇಂಡಿಯಾ ಎಂಬುದನ್ನು ಭಾರತ್ ಎಂದು ಮರುನಾಮಕರಣ?
ಸಾಮಾನ್ಯವಾಗಿ ಸರ್ಕಾರದ ಒಳಗೆ ಅಸಮಾಧಾನ ಇರುವುದು ಸಹಜ. ಆದರೆ ಎರಡು ಮೂರು ವರ್ಷಗಳ ಬಳಿಕ ಹೊರ ಬರುತ್ತದೆ. ಈ ಸರ್ಕಾರದಲ್ಲಿ ಮೊದಲ ಅಧಿವೇಶನದಲ್ಲೇ ಬರುತ್ತಿದೆ. ಸರ್ಕಾರದ ವಿರುದ್ಧವೇ ಶಾಸಕರು ಪತ್ರ ಬರೆಯುತ್ತಿದ್ದಾರೆ. ಅಂತ ಪರಿಸ್ಥಿತಿ ಈ ಸರ್ಕಾರಕ್ಕೆ ಬಂದಿದೆ ಎಂದರು.
ಗೃಹ ಜ್ಯೋತಿ ಯೋಜನೆಯ ಜಾಹೀರಾತಲ್ಲಿ 200 ಯುನಿಟ್ ಉಚಿತ ಎನ್ನುತ್ತಿದ್ದಾರೆ. ಯಾವ ಗ್ರಾಹಕರಿಗೂ 200 ಯೂನಿಟ್ ಉಚಿತ ವಿದ್ಯುತ್ ಸಿಗುತ್ತಿಲ್ಲ ಎಂದು ಆರೋಪಿಸಿದ ಸುನಿಲ್ ಕುಮಾರ್, ಮೊದಲೇ 16954 ಮೆಗಾವ್ಯಾಟ್ ವಿದ್ಯುತ್ ಬೇಡಿಕೆ ಬಂದಿತ್ತು. ಇದನ್ನು ಅಂದಾಜು ಮಾಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಸರ್ಕಾರ ಇಂಧನ ಇಲಾಖೆಯಲ್ಲಿ ಅರಾಜಕತೆ ಸೃಷ್ಟಿ ಮಾಡಿದೆ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ