ಬೆಂಗಳೂರು, ಆಗಸ್ಟ್ 07: ಬಾರ್ ಕೌನ್ಸಿಲ್ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಭಾಗವಹಿಸುವ ಬಗ್ಗೆ ಆಮಂತ್ರಣ ಪತ್ರಿಕೆಯಲ್ಲಿ ಉಲ್ಲೇಖವಾಗಿರುವುದಕ್ಕೆ ಮಾಜಿ ಕಾನೂನು ಸಚಿವ, ಬಿಜೆಪಿ ಶಾಸಕ ಎಸ್ ಸುರೇಶ್ ಕುಮಾರ್ (S Suresh Kumar) ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನ್ಯಾಯಮೂರ್ತಿಗಳಿರುವ ಕಾರ್ಯಕ್ರಮದಲ್ಲಿ ಆರೋಪಿ ಸ್ಥಾನದಲ್ಲಿರುವವರು ಭಾಗವಹಿಸಬಹುದೇ? ಆರೋಪಿ ಸ್ಥಾನದಲ್ಲಿರುವವರು ಜಡ್ಜ್‌ಗಳ ಜತೆ ವೇದಿಕೆ ಹಂಚಿಕೊಳ್ಳಬಹುದೇ ಎಂದು ಸುರೇಶ್ ಕುಮಾರ್ ಅವರು ರಿಜಿಸ್ಟ್ರಾರ್ ಜನರಲ್‌ರಿಗೆ ಪತ್ರ ಬರೆದಿದ್ದಾರೆ. ಜತೆಗೆ, ಸಾಮಾಜಿಕ ಮಾಧ್ಯಮ ಫೇಸ್ಬುಕ್ನಲ್ಲಿ ಕೂಡ ಪ್ರಶ್ನಿಸಿದ್ದಾರೆ.
ನಾನು ಕಾನೂನು ಸಚಿವನಾಗಿದ್ದಾಗ ಬಾರ್ ಕೌನ್ಸಿಲ್ ಕಾರ್ಯಕ್ರಮದಲ್ಲಿ ವೇದಿಕೆ ಹಂಚಿಕೊಳ್ಳುವವರ ಹಿನ್ನೆಲೆಯನ್ನು ಪರಿಶೀಲಿಸಲಾಗುತ್ತಿತ್ತು. ಅವರ ಕ್ರಿಮಿನಲ್ ಕೇಸ್‌ಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದರು. ಆದರೆ ಈಗ ಶಿಷ್ಟಾಚಾರ ಅನ್ವಯವಾಗುವುದಿಲ್ಲವೇ ಎಂದು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್‌ರಿಗೆ ಬರೆದ ಪತ್ರದಲ್ಲಿ ಸುರೇಶ್ ಕುಮಾರ್ ಪ್ರಶ್ನಿಸಿದ್ದಾರೆ.
ಆಗಸ್ಟ್ 12ರಂದು ಮೈಸೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸುಪ್ರೀಂ ಕೋರ್ಟ್, ಹೈಕೋರ್ಟ್ ಜಡ್ಜ್‌ಗಳು ಭಾಗವಹಿಸಲಿದ್ದಾರೆ.
ಇದನ್ನೂ ಓದಿ: ಬಿಬಿಎಂಪಿ ವ್ಯಾಪ್ತಿಯ ಕಾಮಗಾರಿ ಅಕ್ರಮಗಳ ತನಿಖೆಗೆ ಪ್ರತ್ಯೇಕ ಸಮಿತಿ ರಚನೆ
ಬಾರ್ ಕೌನ್ಸಿಲ್ ಕಾರ್ಯಕ್ರಮದಲ್ಲಿ ಭಾಗಿ ಆಗುತ್ತಿರುವುದಕ್ಕೆ ಆಕ್ಷೇಪ ಬಂದ ವಿಚಾರವಾಗಿ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ಕೇಸ್ ಇರಲಿಲ್ವಾ? ಅವರು ಬಾರ್ ಕೌನ್ಸಿಲ್ ಕಾರ್ಯಕ್ರಮದಲ್ಲಿ ಭಾಗಿಯಾಗಿರಲಿಲ್ವಾ ಎಂದು ಪ್ರಶ್ನಿಸಿದ್ದಾರೆ. ಮುದುವರಿದು ನಾನು ಯಾರಿಗೂ ಮುಜುಗರ ಉಂಟು ಮಾಡುತ್ತಿಲ್ಲ. ಮೈಸೂರು ಬಾರ್ ಕೌನ್ಸಿಲ್ನಿಂದ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ. ವಿವಾದ ಆಗುತ್ತೆ ಎಂಬ ಕಾರಣಕ್ಕೆ ಅಲ್ಲಿಗೆ ಹೋಗುವುದಿಲ್ಲ, ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ. ಆಹ್ವಾನ ನನಗೆ ಬರುತ್ತವೆ. ಸಾಕಷ್ಟು ಜಡ್ಜ್‌ಗಳು ಮದುವೆಗೂ ಕರೆಯುತ್ತಾರೆ. ಯಡಿಯೂರಪ್ಪ ಬಗ್ಗೆ ಸುರೇಶ್ ಕುಮಾರ್ ಏಕೆ ಮಾತನಾಡಿರಲಿಲ್ಲ ಎಂದು ಡಿಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ