ಬೆಂಗಳೂರು, (ನವೆಂಬರ್ 10): ಮುಂಬರುವ ಲೋಕಸಭಾ ಚುನಾವಣೆಗೆ ಸಿದ್ಧತೆ ಆರಂಭವಾಗುತ್ತಿರುವ ಹೊಸ್ತಿಲಲ್ಲಿ ರಾಜ್ಯ ಬಿಜೆಪಿಯ ಹಿರಿಯ ನಾಯಕರೂ ಆಗಿರುವ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಮತ್ತು ಡಿ.ವಿ.ಸದಾನಂದಗೌಡ (DV Sadananda Gowda) ಅವರ ನಡುವೆ ಮುಸುಕಿನ ಗುದ್ದಾಟ ಶುರುವಾಗಿದೆ. ಯಾವುದೇ ಚುನಾವಣೆಗೆ ಸ್ಪರ್ಧಿಸದಂತೆ ಸದಾನಂದಗೌಡ ಅವರಿಗೆ ಪಕ್ಷದ ಕೇಂದ್ರ ಘಟಕ ಸೂಚನೆ ನೀಡಿದೆ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯರೂ ಆಗಿರುವ ಯಡಿಯೂರಪ್ಪ ಹೇಳಿದ್ದಾರೆ. ಯಡಿಯೂರಪ್ಪ ಅವರ ಈ ಹೇಳಿಕೆಗೆ ತೀಕ್ಷ್ಣವಾಗಿ ತಿರುಗೇಟು ನೀಡಿರುವ ಸದಾನಂದಗೌಡ, ಇದೊಂದು ಅಪ್ಪಟ ಸುಳ್ಳು. ನಾನು ಯಾರ ಒತ್ತಡದಿಂದಲೂ ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗುತ್ತಿಲ್ಲ ಎಂದಿದ್ದಾರೆ. ಇನ್ನು ಸದಾನಂದಗೌಡ ಅವರು ಈ ಬಾರಿ ಲೋಕಸಭಾ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಸ್ಪಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಇದೀಗ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಕ್ಕೆ (Bengaluru north loksabha constituency) ಅಭ್ಯರ್ಥಿ ಯಾರು ಎನ್ನುವುದು ಬಿಜೆಪಿಯಲ್ಲಿ ಚರ್ಚೆ ಶುರುವಾಗಿದೆ. ಹಗಾದ್ರೆ, ಯಾರೆಲ್ಲಾ ಹೆಸರುಗಳು ಕೇಳಿಬಂದಿವೆ ಎನ್ನುವ ವಿವರ ಈ ಕೆಳಗಿನಂತಿದೆ ನೋಡಿ.
ಡಿವಿ ಸದಾಂನದಗೌಡ ನಿವೃತ್ತಿ ಘೋಷಣೆಯಿಂದಾಗಿಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಬೇಡಿಕೆ ಹೆಚ್ಚಾಗಿದೆ. ಒಕ್ಕಲಿಗ ಪ್ರಾಬಲ್ಯದ ಲೋಕಸಭಾ ಕ್ಷೇತ್ರದ ಟಿಕೆಟ್ ಗಾಗಿ ಬಿಜೆಪಿಯಲ್ಲಿ ಘಟಾನುಘಟಿ ನಾಯಕರು ಕಸರತ್ತು ನಡೆಸಿದ್ದಾರೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಸಂಸದ ಪ್ರತಾಪ್ ಸಿಂಹ, ಸಂಸದೆ ಸುಮಲತಾ ಅಂಬರೀಶ್, ಮಾಜಿ ಸಚಿವ ಡಾ. ಕೆ. ಸುಧಾಕರ್ ಸೇರಿದಂತೆ ಎಂಟಕ್ಕೂ ಹೆಚ್ಚು ಹೆಸರುಗಳು ಕೇಳಿಬರುತ್ತಿವೆ. ಆದ್ರೆ, ಈ ಪೈಕಿ ಕೆಲ ಟಿಕೆಟ್ ಆಕಾಂಕ್ಷಿಗಳು ಬಹಿರಂಗವಾಗಿ ಹೇಳಲು ಹಿಂಜರಿಯುತ್ತಿದ್ದಾರೆ.
ಇದನ್ನೂ ಓದಿ: ಯುವಕರು ರಾಜಕೀಯಕ್ಕೆ ಬರಬೇಕೆಂದು ಡಿವಿ ಸದಾನಂದಗೌಡ ನಿವೃತ್ತಿ: ಹೇಳಿಕೆಗೆ ಸ್ಪಷ್ಟನೆ ನೀಡಿದ ಯಡಿಯೂರಪ್ಪ
ಜೆಡಿಎಸ್ ಮಂಡ್ಯ ಕ್ಷೇತ್ರಕ್ಕಾಗಿ ಬಿಜೆಪಿ ಹೈಕಮಾಂಡ್ ಬಳಿ ಬೇಡಿಕೆ ಇಟ್ಟಿದೆ. ಹೀಗಾಗಿ ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿರುವ ಸುಮಲತಾ ಅಂಬರೀಶ್ ಅವರನ್ನು ಬೆಂಗಳೂರು ಉತ್ತರ ಕ್ಷೇತ್ರದಿಂದ ಕಣಕ್ಕಿಳಿಸಲು ಬಿಜೆಪಿ ಪ್ಲ್ಯಾನ್ ಮಾಡಿದದೆ. ಆದ್ರೆ, ಇದಕ್ಕೆ ಸುಮಲತಾ ಅಂಬರೀಶ್ ಅವರು ಈಗಾಗಲೇ ಮಂಡ್ಯ ಬಿಟ್ಟು ಹೋಗಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ. ರಾಜಕೀಯ ಬಿಡುತ್ತೇನೆ ಹೊರತು ಮಂಡ್ಯ ಬಿಟ್ಟು ಹೋಗುವ ಮಾತೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಬಿಜೆಪಿ ಹಾಗೂ ಜೆಡಿಎಸ್ ನಾಯಕರಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಆದರೂ ಬಿಜೆಪಿ ಹೈಕಮಾಂಡ್, ಸುಮಲತಾ ಅವರನ್ನು ಮನವೊಲಿಸುತ್ತಾ ಎನ್ನುವುದನ್ನು ಕಾದುನೋಡಬೇಕಿದೆ.
ಇನ್ನು ವಕ್ಕಲಿಗರು ಭದ್ರಕೋಟೆಯಾಗಿರುವ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸಿಟಿ ರವಿ ಅವರು ಕಣ್ಣಕ್ಕಿಳಿಯಲು ಚಿಂತನೆ ನಡೆಸಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಸೋಲುಕಂಡಿದ್ದು, ಸದ್ಯಕ್ಕೆ ಅವರು ಯಾವುದೇ ಪಕ್ಷದ ಹುದ್ದೆಯಲ್ಲಿ ಇಲ್ಲ. ಈಗಾಗಲೇ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಅವರನ್ನು ಮುಕ್ತಿಗೊಳಿಸಲಾಗಿದೆ, ಮತ್ತೊಂದೆಡೆ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ಸಿಟಿ ರವಿ ಅವರ ಹೆಸರು ಸಹ ಕೇಳಿಬರುತ್ತಿದೆ.
ಇನ್ನು ಕೇಂದ್ರ ಸಚಿವ, ಉಡುಪಿ-ಚಿಕ್ಕಮಗಳೂರು ಲೋಕಸಭಾ ಸದಸ್ಯೆ ಶೋಭಾ ಕರಂದ್ಲಾಜೆ ಅವರು ಈ ಬಾರಿಯ ಲೋಕಸಭಾ ಚುನಾವಣೆಗೆ ಕ್ಷೇತ್ರ ಬದಲಾವಣೆ ಮಾಡುತ್ತಾರೆ ಎನ್ನುವ ಸುದ್ದಿ ಇದೆ. ಅವರು ಬದಲಾವಣೆ ಮಾಡದಿದ್ದರೂ ಹೈಕಮಾಂಡ್ ಚೇಂಜ್ ಮಾಡಿಸುವ ಸಾಧ್ಯತೆಗಳಿವೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಟಿಕೆಟ್ ಸಿಟಿ ರವಿ ಅವರಿಗೆ ಕೊಟ್ಟು, ಶೋಭಾ ಕರಂದ್ಲಾಜೆ ಅವರನ್ನು ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಕರೆತರುವ ಚರ್ಚೆಗಳು ಸಹ ನಡೆದಿವೆ ಎನ್ನಲಾಗಿದೆ.
ಸತತ ಎರಡು ಬಾರಿ ಮೈಸೂರು ಲೋಕಸಭಾ ಕ್ಷೇತ್ರದಿಮದ ಗೆದ್ದು ಸಂಸದರಾಗಿರುವ ಪ್ರತಾಪ್ ಸಿಂಹ ಅವರಿಗೆ ಈ ಬಾರಿ ಟಿಕೆಟ್ ಸಿಗುವುದು ಅನುಮಾನ ಎನ್ನುವ ಮಾತುಗಳು ಹರಿದಾಡುತ್ತಿವೆ. ಈ ಬಾರಿ ಮೈಸೂರು ಲೋಕಸಭಾ ಟಿಕೆಟ್ ರಾಮ್ದಾಸ್ ಅವರಿಗೆ ನೀಡಲು ಹೈಕಮಾಂಡ್ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ. ಇದಕ್ಕೆ ಪುಷ್ಠಿ ನೀಡುವಂತೆ ರಾಮದಾಸ್ ಅವರಿಗೆ ವಿಧಾನಸಭಾ ಚುನಾವಣೆ ಟಿಕೆಟ್ ನೀಡಿರಲಿಲ್ಲ. ಹಾಲಿ ಶಾಸಕರಾಗಿದ್ದರೂ ಸಹ ಅವರ ಬದಲಿಗೆ ಶ್ರೀವಾತ್ಸ್ ಎನ್ನುವರಿಗೆ ಟಿಕೆಟ್ ನೀಡಲಾಗಿತ್ತು. ಮೈಸೂರು ಲೋಕಸಭಾ ಚುನಾವಣೆ ಟಿಕೆಟ್ ನೀಡಬೇಕೆಂದೆ ಹೈಕಮಾಂಡ್ ವಿಧಾನಸಭೆ ಟಿಕೆಟ್ ಕಟ್ ಮಾಡಲಾಗಿದೆ ಎನ್ನುವ ಮಾತುಗಳು ಕೇಳಿಬಂದಿವೆ. ಹೀಗಾಗಿ ಪ್ರತಾಪ್ ಸಿಂಹ ಅವರನ್ನು ಬೆಂಗಳೂರು ಉತ್ತರಕ್ಕೆ ಕರೆತಂದರೂ ಅಚ್ಚರಿ ಪಡಬೇಕಿಲ್ಲ.
ಮಾಜಿ ಸಚಿವ ಡಾ.ಕೆ ಸುಧಾಕರ್ ಸಹ ಒಕ್ಕಲಿಗ ನಾಯಕ. ಕಾಂಗ್ರೆಸ್ನಿಂದ ಬಂದಿದ್ದರೂ ಸಹ ಸುಧಾಕರ್ ಬಿಜೆಪಿ ಹೈಕಮಾಂಡ್ ನಾಯಕರ ಜೊತೆ ಉತ್ತಮ ಸಂಬಂಧ ಹೊಂದಿದ್ದಾರೆ. ಆದ್ರೆ, ಚಿಕ್ಕಬಳ್ಳಾಪುರ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡಿರುವ ಸುಧಾಕರ್ ಅವರಿಗೆ ಒಕ್ಕಲಿಗ ಮತಗಳು ಹೆಚ್ಚಿರುವ ಬೆಂಗಳೂರು ಉತ್ತರ ಲೋಕಸಭಾ ಟಿಕೆಟ್ ನೀಡುವ ಬಗ್ಗೆ ಮಾತುಕತೆಗಳು ನಡೆದಿವೆ ಎನ್ನಲಾಗಿದೆ.
ಇನ್ನು ಬಿಜೆಪಿ ಹೈಕಮಾಂಡ್ ಅಚ್ಚರಿ ಅಭ್ಯರ್ಥಿ ಆಯ್ಕೆ ಮಾಡುವುದರಲ್ಲಿ ಸೈಎನಿಸಿಕೊಂಡಿದೆ. ಈಗಾಗಲೇ ಹಲವು ಸಂದರ್ಭಗಳಲ್ಲಿ ಯಾರು ಊಹಿಸದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ ಉದಾಹರಣೆಗಳು ಇವೆ. ರಾಜ್ಯ ಬಿಜೆಪಿ ನಾಯಕರಿಗೆ ತಿಳಿಯದೇ ಎಲ್ಲೆಲ್ಲಿದ್ದವರೋ ಏನೋ ಅಂತಹ ನಾಯಕನನ್ನು ಹುಡುಕಿ ತಂದು ಚುನಾವಣೆಗೆ ನಿಲ್ಲಿಸುವುದರಲ್ಲಿ ಬಿಜೆಪಿ ಹೈಕಮಾಂಡ್ ಒಂದು ಹೆಜ್ಜೆ ಮುಂದೆ ಇದೆ. ಹೀಗಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಹೈಕಮಾಂಡ್ ಅಚ್ಚರಿ ಅಭ್ಯರ್ಥಿ ತಂದು ನಿಲ್ಲಿಸಿದರೂ ಅಚ್ಚರಿ ಪಡಬೇಕಿಲ್ಲ.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರವು ಕೆ.ಆರ್.ಪುರಂ, ಬ್ಯಾಟರಾಯನಪುರ, ಯಶವಂತಪುರ, ದಾಸರಹಳ್ಳಿ, ಮಹಾಲಕ್ಷ್ಮಿ ಲೇಔಟ್, ಮಲ್ಲೇಶ್ವರಂ, ಹೆಬ್ಬಾಳ್ ಮತ್ತು ಪುಲಕೇಶಿನಗರ ಸೇರಿದಂತೆ ಎಂಟು ವಿಧಾನಸಭೆ ಕ್ಷೇತ್ರಗಳನ್ನು ಒಳಗೊಂಡಿದೆ. ಬೆಂಗಳೂರು ಉತ್ತರ ಅತೀ ಹೆಚ್ಚು ಮತದಾರರನ್ನು ಹೊಂದಿದ್ದಾರೆ. ಕಳೆದ ಲೋಕಸಭೆ ಚುನಾವಣೆ ಅಂದರೆ 2019ರ ಪ್ರಕಾರ ಒಟ್ಟು ಕ್ಷೇತ್ರದಲ್ಲಿ 22,24, 847 ಮತದಾರರಿದ್ದಾರೆ. ಇವರಲ್ಲಿ 11,66,811 ಪುರುಷರು ಹಾಗೂ 10,61,746 ಮಹಿಳೆಯರು, 291 ಇತರರು ಇದ್ದಾರೆ. ಹೇಳಿ ಕೇಳಿ ಈ ಕ್ಷೇತ್ರ ಬಿಜೆಪಿಯ ಭದ್ರಕೋಟೆ. ಕಳೆದ ಸತತ ಎರಡೂ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿ ಅಭ್ಯರ್ಥಿ ಸದಾನಂದಗೌಡ ಅವರು ಗೆದ್ದಿದ್ದಾರೆ.
ಒಟ್ಟಿನಲ್ಲಿ ಹಾಲಿ ಸಂಸದ ಸದಾನಂದಗೌಡ ಅವರು ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿಸುತ್ತಿದ್ದಂತೆಯೇ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಾರು ಎನ್ನುವುದು ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಆದ್ರೆ, ಹೈಕಮಾಂಡ್ ಯಾರಿಗೆ ಮಣೆ ಹಾಕುತ್ತೆ ಎನ್ನುವುದೇ ಕುತೂಹಲ ಮೂಡಿಸಿದೆ.
ಮತ್ತಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:27 am, Fri, 10 November 23