ಧಾರವಾಡ, ಡಿ.8: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ರಾಜ್ಯದ ಹಿರಿಯ ನಾಯಕ, ಒಬ್ಬ ಸೂಪರ್ ಸ್ಟಾರ್. ಆದರೆ ಅವರು ಪಾಕ್, ಮುಸ್ಲಿಂ, ಐಸಿಸ್ ಸೇರಿ ಐದು ಪದ ಮಾತ್ರ ಮಾತನಾಡುತ್ತಾರೆ. ಇದು ಬಿಟ್ಟು ಬೇರೆ ಮಾತನಾಡುವುದಿಲ್ಲ ಎಂದು ಸಚಿವ ಸಂತೋಷ್ ಲಾಡ್ (Santosh Lad) ಹೇಳಿದ್ದಾರೆ. ಮೌಲ್ವಿ ತನ್ವೀರ್ ಹಶ್ಮಿಗೆ ಐಸಿಸ್ ಉಗ್ರರ ನಂಟು ಇದೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಗಂಭೀರ ಆರೋಪ ಮಾಡಿದ್ದರು.
ಈ ವಿಚಾರವಾಗಿ ಧಾರವಾಡದಲ್ಲಿ ಮಾತನಾಡಿದ ಸಂತೋಷ್ ಲಾಡ್, ಕೇಂದ್ರದಲ್ಲಿ ಅವರದ್ದೇ ಸರ್ಕಾರ ಇದೆ. ಈ ಹಿಂದೆ ರಾಜ್ಯದಲ್ಲಿಯೂ ಬಿಜೆಪಿ ಸರ್ಕಾರ ಇತ್ತು. ಬಿಜೆಪಿಯವರಿಂದ ರಾಜ್ಯದ ಹಿಂದೂಗಳಿಗೆ ಏನು ಲಾಭ ಆಗಿದೆ? ನಮ್ಮ ಸರ್ಕಾರ ಬಂದ ತಕ್ಷಣ ಈ ರೀತಿ ಮಾತನಾಡುತ್ತಿದ್ದಾರೆ. ನಾಲ್ಕೈದು ವರ್ಷದ ಹಿಂದೆ ಐಸಿಸ್ ಬಗ್ಗೆ ಮಾತನಾಡಬೇಕಿತ್ತು. ಅವರು ಬರೀ ರಾಜಕೀಯ ಪ್ರಚಾರಕ್ಕಾಗಿ ಮಾತನಾಡುತ್ತಾರೆ ಎಂದರು.
ಹುಬ್ಬಳ್ಳಿಯಲ್ಲಿ ನಡೆದ ಮುಸ್ಲಿಂ ಸಮಾವೇಶದಲ್ಲಿ ಮುಖ್ಯ ಸಿದ್ದರಾಮಯ್ಯ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದ ಸಯ್ಯದ್ ಮೊಹಮ್ಮದ್ ತನ್ವೀರ್ ಪೀರಾ ಹಾಸ್ಮೀಂ ಅವರಿಗೆ ಉಗ್ರರ ಜೊತೆ ನಂಟಿದೆ ಎಂದು ಯತ್ನಾಳ್ ಆರೋಪಿಸಿದ್ದರು. ತನ್ವೀರ್ ಪೀರಾ ಕೊಲೆ ಕೇಸ್ ಒಂದರಲ್ಲಿ ಆರೋಪಿತನಾಗಿದ್ದು, ಕೊಲೆಯಾದ ವ್ಯಕ್ತಿಯ ಪತ್ನಿಯು ಸಾಕ್ಷಿ ನಾಶ ಮಾಡುವುದಲ್ಲದೆ, ನಮ್ಮ ಕುಟುಂಬಕ್ಕೆ, ಕಾರ್ಯಕರ್ತರಿಗೆ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಆರೋಪಿಸಿದ್ದರು.
ಇದನ್ನೂ ಓದಿ: ಮೌಲ್ವಿ ತನ್ವೀರ್ ಜೊತೆ ವ್ಯಾಪಾರ ಪಾಲುದಾರ ಆರೋಪ: ಸಿದ್ದರಾಮಯ್ಯಗೆ ಸವಾಲು ಹಾಕಿದ ಯತ್ನಾಳ್
ಕೊಲೆ ಪ್ರಕರಣದಲ್ಲಿ ಈತನ ಮೇಲೆ ಪೊಲೀಸರು ಹಾಕಿದ್ದ ದೋಷಾರೋಪ ಪಟ್ಟಿಯಿಂದ ಈತನ ಹೆಸರು ಕೈಬಿಟ್ಟಿದ್ದು ಏಕೆ? ಯಾರ ಒತ್ತಡದಿಂದ ಈತನ ಹೆಸರನ್ನು ಚಾರ್ಜಶೀಟ್ನಿಂದ ತೆಗಿಸಲಾಯಿತು? ತನಿಖೆ ವೇಳೆ ಕೊಲೆಯಲ್ಲಿ ಈತ ಭಾಗಿಯಾಗಿದ್ದ ಎಂಬ ಶಂಕೆಯಿಂದ ಚಾರ್ಜಶೀಟ್ನಲ್ಲಿ ಮೊದಲು ಈತನ ಹೆಸರನ್ನು ಹಾಕಿ, ನಂತರ ತೆಗೆದು ಹಾಕಿದ್ದು ಯಾರ ಒತ್ತಡದಿಂದ ಎಂದು ಸರ್ಕಾರ ಹೇಳಲಿ ಎಂದು ಒತ್ತಾಯಿಸಿದ್ದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ