ತುಮಕೂರು: ಮಡಿವಾಳರನ್ನು ಎಸ್‌ಸಿ ಮೀಸಲಾತಿಗೆ (Sc Reservation) ಸೇರಿಸುವ ಬೇಡಿಕೆ ಇದ್ದು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ವರದಿ ಶಿಫಾರಸ್ಸು ಮಾಡಲಾಗುವುದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಹೇಳಿದರು. ತಮಕೂರಿನಲ್ಲಿ ನಡೆದ ಮಡಿವಾಳ ಸಮಾವೇಶದಲ್ಲಿ ಈ ಬಗ್ಗೆ ಭರವಸೆ ನೀಡಿದರು. ಮಡಿವಾಳ ಸಮುದಾಯವನ್ನು ಎಸ್‌ಸಿ ಮೀಸಲಾತಿಗೆ ಸೇರಿಸುವ ಬೇಡಿಕೆ ಇದೆ. ಮಡಿವಾಳರನ್ನು ಎಸ್‌ಸಿ ಮೀಸಲಾತಿಗೆ ಸೇರಿಸುವ ಬೇಡಿಕೆ ವಿಚಾರವಾಗಿ ಅನ್ನಪೂರ್ಣ ವರದಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡಬೇಕಿದೆ. ನಮ್ಮ ಸರ್ಕಾರ ಬಂದಾಗ ವರದಿ ಶಿಫಾರಸಿಗೆ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದರು.
ಮಡಿವಾಳ ಸಮಾಜಕ್ಕೆ ರಾಜಕೀಯ ಪ್ರಾತಿನಿಧ್ಯ ಬೇಕೆಂದು ಒತ್ತಾಯ ಮಾಡಿದ್ದಾರೆ. ಮಡಿವಾಳರಿಗೆ ಪರಿಷತ್‌ನಲ್ಲಿ ಅವಕಾಶ ಕಲ್ಪಿಸಲೂ ಪ್ರಯತ್ನಿಸುತ್ತೇವೆ. 1 ವರ್ಷ 9 ತಿಂಗಳಾದರೂ ಬಿಬಿಎಂಪಿ ಚುನಾವಣೆಯನ್ನು ರಾಜ್ಯ ಸರ್ಕಾರ ನಡೆಸುತ್ತಿಲ್ಲ. ಈಗಲೂ ಚುನಾವಣೆ ನಡೆಸುತ್ತೇವೆ ಎಂದು ಹೇಳುತ್ತಿದ್ದಾರೆ. ಅವಧಿ ಮುಗಿದ ತಕ್ಷಣ ಚುನಾವಣೆ ನಡೆಸಿದ್ದಿದ್ದರೆ ಮೀಸಲಾತಿ ಸಿಗುತ್ತಿತ್ತು. ಎಲ್ಲಾ ಚುನಾವಣೆಗಳಲ್ಲೂ ಎಲ್ಲಾ ಜಾತಿಯವರಿಗೆ ಮೀಸಲಾತಿ ಬೇಕು. ಮೀಸಲಾತಿ ಇಲ್ಲ ಅಂದರೆ ರಾಜಕೀಯ ಸ್ಥಾನಮಾನ ಸಿಗಲ್ಲ. ರಾಜಕೀಯ ಮೀಸಲಾತಿ ಇರಲೇಬೇಕು, ಈ ವಿಚಾರದಲ್ಲಿ ರಾಜಿ ಇಲ್ಲ ಎಂದು ಹೇಳಿಕೆ ನೀಡಿದರು.
ಮಡಿವಾಳ ಸಮಾಜ ಅತ್ಯಂತ ಹಿಂದುಳಿದ ಸಮಾಜ. ಇಷ್ಟು ದೊಡ್ಡ ಪ್ರಮಾಣದಲ್ಲಿ ಸಮಾವೇಶ ಏರ್ಪಡಿಸಿರುವುದು ಸಾಹಸ. ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದ ಜಾತಿಗಳನ್ನ ಗುರುತಿಸಿ ಶಕ್ತಿ ತುಂಬುವ ಕೆಲಸ ಸರ್ಕಾರದ್ದಾಗಿದೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಸಾಮಾಜಿಕ ನ್ಯಾಯದಿಂದ ವಂಚಿತರಾದ ಜಾತಿಗಳಿಗೆ ನ್ಯಾಯ ದೊರಕಿಸಿ ಕೊಡೋ ಕೆಲಸ ಮಾಡುತ್ತೇವೆ. ಅಸಮಾನತೆಗೆ ಹಿಂದುಳಿದ ಜಾತಿಗಳು ಕಾರಣ ಅಲ್ಲ. ಬದಲಾಗಿ ಸಾಮಾಜಿಕ ವ್ಯವಸ್ಥೆಯೇ ಕಾರಣ. ಶೂದ್ರ ಸಮುದಾಯ ಹಾಗೂ ಪಂಚಮ ವರ್ಗ ಅಕ್ಷರ ಸಂಸ್ಕೃತಿಯಿಂದ ವಂಚಿತರಾದರು. ಸಂವಿಧಾನದಲ್ಲಿ ಸಮಸಮಾಜದ ನಿರ್ಮಾಣ ಮಾಡಲು ಹೇಳಲಾಗಿದೆ. ಆದರೆ, ಸಮುದಾಯದ ಏಳಿಗೆಗೆ ಒತ್ತಾಯ, ಹೋರಾಟ ಮಾಡಲೇಬೇಕಿದೆ ಎಂದರು.
ಇದನ್ನೂ ಓದಿ: ಇಂಧನ ಮೇಲಿನ ಅಬಕಾರಿ ಸುಂಕ ಕಡಿತಗೊಳಿಸಿರುವ ಮೋದಿ ಸರ್ಕಾರದ ನಿರ್ಧಾರ ಶ್ಲಾಘಿಸಿದ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್
ನಮ್ಮ ಸರ್ಕಾರ ಇರೋದರೊಳಗೆ ಮೀಸಲಾತಿ ಕೊಡ್ತಿನಿ
”ಎಸ್ಟಿ ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ಹೋರಾಟ ವಿಚಾರ ಯಾಕೆ? ನನ್ನ ಸರ್ಕಾರ ಇರೋದರೊಳಗೆ ಕೊಡ್ತಿನಿ” ಎಂದು ಸಚಿವ ಶ್ರೀರಾಮುಲು ಮಾತನಾಡಿರುವ ವಿಡಿಯೋ ವೈರಲ್ ಆಗುತ್ತಿದೆ. ರಾಯಚೂರು ಜಿಲ್ಲೆ ಮಸ್ಕಿ ಪಟ್ಟಣಕ್ಕೆ ಭೇಟಿ ನೀಡಿದ್ದ ವೇಳೆ ಮೀಸಲಾತಿ ಪ್ರತಿಭಟನೆ ವೇಳೆ ಮೃತಪಟ್ಟಿದ್ದ ವಾಲ್ಮೀಕಿ ಸಮುದಾಯ ಮುಖಂಡ ಶೇಖರ್ ಗೌಡ ಅವರ ಕುಟುಂಬಕ್ಕೆ ಸಾಂತ್ವಾನ ಹೇಳಲು ಬಂದಾಗಿನ ಮಾತುಕತೆಯ ವಿಡಿಯೋ ವೈರಲ್ ಆಗಿದೆ. ”ಮೀಸಲಾತಿ ಕೊಡದಿದ್ದರೇ ಆಗ ನನ್ನ ಕೇಳಿ. ಕಾನೂನು ತೊಡಕಿರುವ ಕಾರಣಕ್ಕೆ ಹೀಗಾಗ್ತಿದೆ. ಮಹಾರಾಷ್ಟ್ರದಲ್ಲಿ ಹೀಗೆ ಸುಪ್ರೀಂಕೋರ್ಟ್ಗೆ ಹೋಗಿ ರದ್ದಾಗಿದೆ. ಆದರೆ, ಹೀಗಾಗಬಾರದು. ನಾವಿನ್ನು ಒಳ್ಳೆ ಕೆಲಸ ಮಾಡೋ ಟೈಂನಲ್ಲಿ ನಮ್ಮ ತಾಳ್ಮೆ ಪರೀಕ್ಷೆ ಮಾಡ್ತಿರಿ ಅಂದ್ರೆ, ನಾವಿನ್ನೇನು ಮಾಡೋಕೆ ಆಗುತ್ತೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: IPL 2022: ಲಕ್ನೋ ತಂಡದಲ್ಲಿದೆ ಜೋಡೆತ್ತು: RCBಗೆ ಇವರದ್ದೇ ಭಯ..!
ಇದನ್ನೂ ಓದಿ: iQoo Neo 6: ಭಾರತಕ್ಕೆ ಅಪ್ಪಳಿಸಲಿದೆ ವಿದೇಶದಲ್ಲಿ ಧೂಳೆಬ್ಬಿಸಿದ ಐಕ್ಯೂ ನಿಯೋ 6 5G: ಮೇ 31ಕ್ಕೆ ರಿಲೀಸ್
ಮತ್ತಷ್ಟು ಸುದ್ದಿಗಳಿಗಾಗಿ ಲಿಂಕ್ ಕ್ಲಿಕ್ ಮಾಡಿ
Published On - 5:48 pm, Sun, 22 May 22