ಕಾಂಗ್ರೆಸ್​ ಭ್ರಷ್ಟಾಚಾರದ ಅವತಾರ ತಾಳಿದೆ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಿಡಿ

| Updated By: ಗಂಗಾಧರ​ ಬ. ಸಾಬೋಜಿ

Updated on: Aug 09, 2023 | 3:16 PM

ಒಂದೆಡೆ ಚಲುವರಾಯಸ್ವಾಮಿ ಅವರ ಭ್ರಷ್ಟಾಚಾರದ ಕೃಷಿಗೆ ಇಲಾಖೆ ಅಧಿಕಾರಿಗಳ ಮೇಲೆ ಸಚಿವರು ಒತ್ತಡ ಹೇರುತ್ತಿದ್ದಾರೆ. ಮತ್ತೊಂದೆಡೆ ಖುದ್ದು ಕಲೆಕ್ಷನ್‌ಗೆ ಡಿಸಿಎಂ ಡಿಕೆ ಶಿವಕುಮಾರ್​ ಇಳಿದಿದ್ದಾರೆ. ಇಂತಹ ಭ್ರಷ್ಟ ಎಟಿಎಂ ಸರ್ಕಾರದ ಸಚಿವರ ರಾಜಿನಾಮೆ ಯಾವಾಗ ಸಿಎಂ ಸಿದ್ಧರಾಮಯ್ಯ ಅವರೇ? ಎಂದು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟ್ವೀಟ್​ ಮೂಲಕ ಕಿಡಿಕಾರಿದ್ದಾರೆ.​​

ಕಾಂಗ್ರೆಸ್​ ಭ್ರಷ್ಟಾಚಾರದ ಅವತಾರ ತಾಳಿದೆ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಿಡಿ
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್
Follow us on

ಬೆಂಗಳೂರು, ಆಗಸ್ಟ್​ 09: ಖುದ್ದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಅವರು ಗುತ್ತಿಗೆದಾರರಲ್ಲಿ ಕಮಿಷನ್ ಕೇಳುತ್ತಿದ್ದಾರೆ. ಚೆಲುವರಾಯ ಸ್ವಾಮಿ ಅವರು ತಮ್ಮ ಭ್ರಷ್ಟಾಚಾರದ ಕೃಷಿಗೆ ಅಧಿಕಾರಗಳ ಮೇಲೆ ಒತ್ತಡ ಹೇರುತ್ತಿದ್ದಾರೆ. ಕಾಂಗ್ರೆಸ್ ಆಡಳಿತವೇ ಭ್ರಷ್ಟಾಚಾರದ ಅವತಾರ ಎತ್ತಿದೆ.‌ ಇಂತಹ ಭ್ರಷ್ಟ ಎಟಿಎಂ ಸರ್ಕಾರದ ಸಚಿವರ ರಾಜಿನಾಮೆ ಯಾವಾಗ ಸಿದ್ಧರಾಮಯ್ಯ ಅವರೇ ಎಂದು ಕಾಂಗ್ರೆಸ್​ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ಟ್ವೀಟ್​ ಮಾಡಿದ್ದಾರೆ.​​

ರಾಜ್ಯದ ಅಭಿವೃದ್ಧಿಗಳಿಗೆ ಸರ್ಕಾರ ತಿಲಾಂಜಲಿ ಇಡುತ್ತಿದೆ

ಅವಾಸ್ತವಿಕ ಗ್ಯಾರಂಟಿಗಳಿಂದಾಗಿ ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್​ ಅವರೇ ಒಪ್ಪಿಕೊಂಡಿದ್ದಾರೆ. ಗುತ್ತಿಗೆದಾರರಿಗೆ ಬಿಲ್‌ಗಳನ್ನು ಪಾವತಿಸಲು ಕನಿಷ್ಠ 3 ವರ್ಷ ಬೇಕು ಎಂದು ಡಿಸಿಎಂ ಹೇಳುತ್ತಿರುವುದು ರಾಜ್ಯದ ಅಭಿವೃದ್ಧಿಗಳಿಗೆ ಕಾಂಗ್ರೆಸ್ ಸರ್ಕಾರ ಸಂಪೂರ್ಣ ತಿಲಾಂಜಲಿ ಇಡುವ ಸ್ಪಷ್ಟ ಸೂಚನೆಯಾಗಿದೆ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಯಡಿಯೂರಪ್ಪ ಭೇಟಿಯಾದ ಬಿಬಿಎಂಪಿ ಗುತ್ತಿಗೆದಾರರ ಸಂಘ, ರಾಜಕೀಯ ಸ್ವರೂಪ ಪಡೆದುಕೊಳ್ತಾ?

ಡಿಕೆ ಶಿವಕುಮಾರ್​ ಗುತ್ತಿಗೆದಾರರ ಜೀವ ಹಿಂಡುತ್ತಿದ್ದಾರೆ

ಒಂದೆಡೆ ಚೆಲುವರಾಯ ಸ್ವಾಮಿ ಅವರ ಭ್ರಷ್ಟಾಚಾರದ ಕೃಷಿಗೆ ಇಲಾಖೆ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ. ಮತ್ತೊಂದೆಡೆ ಖುದ್ದು ಕಲೆಕ್ಷನ್‌ಗೆ ಇಳಿದಿರುವ ಡಿಸಿಎಂ ಡಿಕೆ ಶಿವಕುಮಾರ್​ ಗುತ್ತಿಗೆದಾರರ ಜೀವ ಹಿಂಡುತ್ತಿದ್ದಾರೆ.

ಕಾಂಗ್ರೆಸ್‌ನಲ್ಲಿ ಬಣ ರಾಜಕೀಯ ಮಾತ್ರವಲ್ಲದೇ, ಕಮಿಷನ್ ಮತ್ತು ಕಲೆಕ್ಷನ್ ಕೂಡ ಬಣಕ್ಕೆ ಇಂತಿಷ್ಟು ಎಂದು ಫಿಕ್ಸ್ ಆಗಿರುವ ಹಾಗಿದೆ ಎಂದು ವಾಗ್ದಾಳಿ ಮಾಡಿದ್ದಾರೆ.

ಇದನ್ನೂ ಓದಿ: ಸೋಲಿನ ಆಘಾತದಿಂದ ಮಾನಸಿಕ ಸ್ಥಿಮಿತ ಕಳೆದುಕೊಂಡಂತಿದೆ: ಕುಮಾರಸ್ವಾಮಿಗೆ ಸಿದ್ದರಾಮಯ್ಯ ತಿರುಗೇಟು

ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ರಾಜ್ಯದ ಹಣ ಏಕೆ ನಿಲ್ಲಿಸಿದ್ದೀರಿ? ಸಿ.ಟಿ.ರವಿ ಪ್ರಶ್ನೆ

ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ರಾಜ್ಯದ ಹಣ ಏಕೆ ನಿಲ್ಲಿಸಿದ್ದೀರಿ? ಎಂದು ಮಾಜಿ‌ ಶಾಸಕ ಸಿ.ಟಿ.ರವಿ ಪ್ರಶ್ನೆ ಮಾಡಿದ್ದಾರೆ. ಫ್ರೀಡಂಪಾರ್ಕ್​ನಲ್ಲಿ ರೈತ ಮೋರ್ಚಾ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಕದ್ದುಮುಚ್ಚಿ ತಮಿಳುನಾಡಿಗೆ ನೀರು ಹರಿಸುತ್ತಿದ್ದೀರಿ ಎಂದು ವಾಗ್ದಾಳಿ ಮಾಡಿದ್ದಾರೆ.

ಮೊದಲು ನಮ್ಮ ಮಂಡ್ಯ ಜಿಲ್ಲೆಯ ರೈತರ ಬೆಳೆಗಳಿಗೆ ನೀರು ಹರಿಸಿ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಈಗ ಪೇಚಾಡುತ್ತಿದ್ದಾರೆ. ಬಾಣಲೆಯಿಂದ ಬೆಂಕಿಗೆ ಬಿದ್ದಿದ್ದೇವೆ ಎಂದು ಕೆಂಪಣ್ಣ ಹೇಳುತ್ತಿದ್ದಾರೆ. ಇವತ್ತು ಚುನಾವಣೆ ನಡೆದರೆ ಸಿಎಂ ಸಿದ್ದರಾಮಯ್ಯ ಸೇರಿ ಅನೇಕರು ಸೋಲಲಿದ್ದಾರೆ. ಇದು ರೈತ ವಿರೋಧಿ ಸರ್ಕಾರ ಎಂದು ಕಿಡಿಕಾರಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.