ಬೆಂಗಳೂರು: ಟಿಪ್ಪು ಎಕ್ಸ್‌ಪ್ರೆಸ್ ಹೆಸರು ಬದಲಿಸುವಂತೆ ಎಲ್ಲರ ಒತ್ತಡ ಇತ್ತು. ಇದೀಗ ರೈಲಿನ ಹೆಸರು ಬದಲಾವಣೆ ಮಾಡಿ ಒಡೆಯರ್ ಹೆಸರು ಇಡಲಾಗಿದೆ. ಈ ನಿರ್ಧಾರವನ್ನು ಎಲ್ಲರೂ ಸ್ವಾಗತ ಮಾಡಿದ್ದಾರೆ. ಆದರೆ ರೈಲಿನ ಹೆಸರನ್ನು ಬದಲಾವಣೆ ಮಾಡಿದ್ದಕ್ಕೆ ಕಾಂಗ್ರೆಸ್ನವರು ಯಾಕೆ ವಿರೋಧ ಮಾಡುತ್ತಿದ್ದಾರೆ ಗೊತ್ತಿಲ್ಲ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಹೇಳಿದ್ದಾರೆ. ಮೈಸೂರಿನಿಂದ ಬೆಂಗಳೂರಿಗೆ ಓಡಾಡುವವರ ಮನಸ್ಸಿನಲ್ಲಿ ಟಿಪ್ಪು ಎಕ್ಸ್‌ಪ್ರೆಸ್ ಹೆಸರು ಬದಲಿಸಬೇಕು ಎಂಬ ಬೇಗುದಿ ಇತ್ತು. ಅದರಂತೆ ಕರ್ನಾಟಕಕ್ಕೆ ಮೊದಲು ಮೀಸಲಾತಿ ತಂದುಕೊಟ್ಟ, ನಾಡು ಕಟ್ಟಿದ ಒಡೆಯರ್ ಹೆಸರಿಡಲಾಗಿದೆ. ಸಿದ್ದರಾಮಯ್ಯ ಅವರಿಗೆ ಅದ್ಯಾಕೆ ಒಡೆಯರ್ ಹೆಸರು ಬೇಸರ ತರಿಸಿತೋ ಗೊತ್ತಿಲ್ಲ. ಒಡೆಯರ್ ಹೆಸರಿಟ್ಟಿರೋದಕ್ಕೆ ನಾಡಿನ ಎಲ್ಲರೂ ಸ್ವಾಗತ ಕೋರಿದ್ದಾರೆ. ಆದರೆ ಕೆಲವು ಕಾಂಗ್ರೆಸ್ನವರು ಯಾಕೆ ವಿರೋಧ ಮಾಡುತ್ತಿದ್ದಾರೆ ಗೊತ್ತಿಲ್ಲ ಎಂದರು.
ರೈಲಿಗೆ ಟಿಪ್ಪು ಹೆಸರು ತೆಗೆದುಹಾಕಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಒಡೆಯರ್ ಅವರ ಕೊಡುಗೆ ಈ ರಾಜ್ಯದಲ್ಲಿ ಅಪಾರವಿದೆ. ಶ್ರೇಷ್ಠ ಅಭಿವೃದ್ಧಿ ಹರಿಕಾರರು ಒಡೆಯರ್ ಅವರಾಗಿದ್ದಾರೆ. ಮೋದಿಯವರು ಈಗ ಏನು ಮಾಡುತ್ತಿದ್ದಾರೋ ಅದನ್ನು ಒಡೆಯರ್ ಅವರು ಆಗಿನ ಕಾಲದಲ್ಲಿ ಮಾಡಿದ್ದಾರೆ. ಸದ್ಯ ರೈಲನ್ನು ಒಡೆಯರ್ ಎಕ್ಸ್‌ಪ್ರೆಸ್ ಎಂದು ಕರೆಯುತ್ತಾರೆ ಎಂದು ಹೇಳುವ ಮೂಲಕ ಹೆಸರು ಬದಲಾವಣೆಯನ್ನು ಸಮರ್ಥಿಸಿಕೊಂಡರು. ಅಲ್ಲದೆ ಟಿಪ್ಪು ಹೆಸರೇ ಗೊಂದಲದಲ್ಲಿದೆ, ಚರ್ಚೆಯಲ್ಲಿದೆ. ಅವನ ಸಾಧನೆಗಳು ಚರ್ಚೆಯಲ್ಲಿವೆ. ಹಾಗಾಗಿ ಚರ್ಚೆಯಲ್ಲಿ ಇರುವರ ಹೆಸರು ಸರಿಯಲ್ಲ ಎಂದು ಹೇಳಿದರು.
ಹೆಸರು ಬದಲಿಸಿದ ಕೇಂದ್ರ ಸರ್ಕಾರಕ್ಕೆ ಅಭಿನಂದನೆ
ಟಿಪ್ಪು ಎಕ್ಸ್‌ಪ್ರೆಸ್ ರೈಲಿಗೆ ಒಡೆಯರ್ ಹೆಸರು ಮರುನಾಮಕರಣ ವಿಚಾರಕ್ಕೆ ಕಂದಾಯ ಸಚಿವ ಆರ್.ಅಶೋಕ್ ಕೇಂದ್ರ ಸರ್ಕಾರಕ್ಕೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಟಿಪ್ಪು ಸುಲ್ತಾನ್ ಕನ್ನಡಿಗ ಅಲ್ಲ, ಟಿಪ್ಪು ಸುಲ್ತಾನ್ ಒಬ್ಬ ಮತಾಂಧ. ಟಿಪ್ಪು ಅವಧಿಯಲ್ಲಿ ಕನ್ನಡ ಇರಲಿಲ್ಲ, ಪರ್ಷಿಯನ್ ಭಾಷೆ ಬಳಕೆ ಮಾಡಲಾಗುತ್ತಿತ್ತು. ಹಾಗಾಗಿ ಟಿಪ್ಪು ಎಕ್ಸ್‌ಪ್ರೆಸ್ ಹೆಸರು ತೆಗೆದಿದ್ದಾರೆ. ಇದರಲ್ಲಿ ತಪ್ಪೇನಿದೆ? ಎಂದು ಪ್ರಶ್ನಿಸಿದರು. ಜಿನ್ನಾ, ಘಜ್ನಿ, ಲಾಡೆನ್ ಹೆಸರಲ್ಲಿ ಸಿದ್ದರಾಮಯ್ಯ ರೈಲು ಓಡಿಸಲಿ. ಆಗ ಜನರು ಯಾರನ್ನು ಓಡಿಸುತ್ತಾರೆ ಅಂತಾ ಗೊತ್ತಾಗುತ್ತದೆ. ರಾಜ್ಯಕ್ಕೆ ಮೈಸೂರು ಅರಸರು ಸಾಕಷ್ಟು ಕೊಡುಗೆ ನೀಡಿದ್ದಾರೆ. ಸದುದ್ದೇಶದಿಂದ ಟಿಪ್ಪು ಹೆಸರು ತೆಗೆದು ಒಡೆಯರ್ ಹೆಸರಿಡಲಾಗಿದೆ ಎಂದು ಹೇಳಿದರು.
ಮೈಸೂರು, ಮಂಡ್ಯ ಭಾಗಕ್ಕೆ ನೀರು ಕೊಟ್ಟವರು ಒಡೆಯರ್. ತಮ್ಮ ಒಡವೆ ಮಾರಿ ಕೆಆರ್‌ಎಸ್ ಕಟ್ಟಿ ಕರ್ಣರಾದರು. ಮೊದಲ ವಿದ್ಯುತ್ ತಯಾರಿಕೆ ಮಾಡಿದ್ದು, ಸೋಪ್, ಸಕ್ಕರೆ ತಯಾರಿಕೆ ಎಲ್ಲವನ್ನೂ ಕರ್ನಾಟಕಕ್ಕೆ ಕೊಟ್ಟವರು, ಅವರ ಹೆಸರಲ್ಲೇ ಜಂಬೂ ಸವಾರಿ ಆರಂಭವಾಗಿದ್ದು. ಆದರೆ ಟಿಪ್ಪು ಕನ್ನಡಿಗ ಅಂತ ಒಪ್ಪಿಯೇ ಇಲ್ಲ. ಕಗ್ಗೊಲೆ ಮಾಡಿ, ಮತಾಂತರ ಮಾಡಿದ್ದಾನೆ. ಚಲುವನಾರಾಯಣ ಸ್ವಾಮಿ ದೇವಸ್ಥಾನದ ಬಳಿ ಕಗ್ಗೊಲೆ ಮಾಡಿದ್ದಾನೆ. ಹಾಗಾಗಿ ನಮ್ಮ ಆಯ್ಕೆ ಒಡೆಯರ್ ಅನ್ನೋದೇ ಆಗಿದೆ. ನಮ್ಮ ಬೆಂಬಲ ಒಡೆಯರ್ ಅವರಿಗೆ ಎಂದರು.
ಶೃಂಗೇರಿಯಲ್ಲಿ ಸಲಾಂ ಆರತಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅಶೋಕ್, ಅಲ್ಲಿನ ಸ್ಥಳೀಯ ಜನರ ಬೇಡಿಕೆ ಬಂದರೆ ಅದನ್ನು ನಿಲ್ಲಿಸುತ್ತೇವೆ. ಅಲ್ಲಿನ ಆಡಳಿತ ಮಂಡಳಿ, ಧರ್ಮದರ್ಶಿಗಳು ನಮಗೆ ಮನವಿ ಸಲ್ಲಿಸಿದರೆ ಪರಿಶೀಲನೆ ನಡೆಸುತ್ತೇವೆ. ಆದರೆ ಇದುವರೆಗೆ ಯಾವುದೇ ಅರ್ಜಿ ಬಂದಿಲ್ಲ ಎಂದರು.
ರೈಲಿಗೆ ಟಿಪ್ಪು ಹೆಸರಿಟ್ಟಿದ್ದೇ ತಪ್ಪು
ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ಮೊದಲು ರೈಲಿಗೆ ಟಿಪ್ಪು ಹೆಸರಿಟ್ಟಿದ್ದೇ ತಪ್ಪು. ಲಕ್ಷಾಂತರ ಹಿಂದೂಗಳನ್ನು ಹತ್ಯೆ ಮಾಡಿದವ ಟಿಪ್ಪು ಸುಲ್ತಾನ್. ಟಿಪ್ಪು ಬದಲಾಗಿ ಒಡೆಯರ್ ಹೆಸರನ್ನು ರೈಲಿಗೆ ಇಡಲಾಗಿದೆ. ಒಡೆಯರ್ ಹೆಸರು ಇಟ್ಟಿದ್ದಕ್ಕೆ ಪ್ರಧಾನಿ ಮೋದಿಗೆ ಅಭಿನಂದನೆ ಎಂದು ಹೇಳಿದರು. ರೈಲ್ವೇಗಳಿಗೆ ಹೆಸರು ಬದಲಾವಣೆ ಮಾಡಿದ್ದು ಕೇಂದ್ರದ ಉತ್ತಮ ಕಾರ್ಯ. ನಿರ್ಧಯಿ ಮತಾಂಧನಾಗಿದ್ದ ಟಿಪ್ಪು ರಾಜನಲ್ಲಾ, ಮೈಸೂರು ಮಹಾರಾಜರ ಬಳಿ ಟಿಪ್ಪು ತಂದೆ ಹೈದರಾಲಿ ನೌಕರನಾಗಿದ್ದ. ಅವರು ಮೈಸೂರು ರಾಜರ ಮನೆತನಕ್ಕೆ ಮೋಸ ಮಾಡಿದ್ದರು. ಹಿಂದೆ ಸಿದ್ದರಾಮಯ್ಯ, ಕಾಂಗ್ರೆಸ್, ಯುಪಿಎ ಕಾಲದಲ್ಲಿ ಆಗಿದ್ದ ಪ್ರಮಾದಗಳನ್ನು ತಿದ್ದು ಪಡಿ ಮಾಡುವ ಕೆಲಸವನ್ನು ಪ್ರಧಾನಿ ಮಾಡುತ್ತಿದ್ಧಾರೆ. ಮೈಸೂರು ರಾಜರಾದ ಒಡೆಯರ ಕೊಡುಗೆ ರಾಜ್ಯಕ್ಕೆ ಅಪಾರವಾಗಿದೆ. ಹೀಗಾಗಿ ಟಿಪ್ಪು ಬದಲಾಗಿ ಒಡೆಯರ್ ಹೆಸರು ಇಟ್ಟಿದ್ದಕ್ಕೆ ಮೈಸೂರು ಸಂಸದ ಪ್ರತಾಪ್ ಸಿಂಹ, ಕೇಂದ್ರ ರೇಲ್ವೇ ಸಚಿವ ಹಾಗೂ ಪ್ರಧಾನಿ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.
ಟಿಪ್ಪುಗಿಂತ ಒಡೆಯರ್ ಸಾಧನೆ ಹೆಚ್ಚು
ಟಿಪ್ಪು ಎಕ್ಸ್‌ಪ್ರೆಸ್ ರೈಲಿಗೆ ಒಡೆಯರ್ ಹೆಸರು ಮರುನಾಮಕರಣ ಮಾಡಿರುವುದನ್ನು ಸಮರ್ಥಿಸಿಕೊಂಡ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಅವರು, ಟಿಪ್ಪು ಸುಲ್ತಾನ್ಗಿಂತ ಮೈಸೂರು ಒಡೆಯರ್ ಹೆಚ್ಚು ಕೆಲಸ ಮಾಡಿದ್ದಾರೆ. ಬರಗಾಲ ಬಂದಾಗ ಒಡವೆ ಇಟ್ಟು ಅಭಿವೃದ್ಧಿ ಮಾಡಿದ್ದಾರೆ. ಮೈಸೂರು ಭಾಗಕ್ಕೆ ಸೇವೆ ಸಲ್ಲಿಸಿದ್ದಕ್ಕೆ ರೈಲಿಗೆ ಅವರ ಹೆಸರು ಇಡಲಾಗಿದೆ ಎಂದರು.
ವಿರೋಧ ಪಕ್ಷಗಳ ವಿರೋಧದ ಹೇಳಿಕೆ ಹೀಗಿದೆ
ಇದೊಂದು ವೋಟ್ ಬ್ಯಾಂಕ್ ರಾಜಕಾರಣ
ಟಿಪ್ಪು ಎಕ್ಸ್‌ಪ್ರೆಸ್ ರೈಲಿಗೆ ಒಡೆಯರ್ ಹೆಸರು ಮರುನಾಮಕರಣದ ಬಗ್ಗೆ ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಇದು ಕೂಡ ವೋಟ್ ಬ್ಯಾಂಕ್ ರಾಜಕಾರಣದ ಒಂದು ಭಾಗ. ಇದು ಭಾವನಾತ್ಮಕವಾಗಿ ಜನರನ್ನು ಸೆಳೆಯುವ ತಂತ್ರವಾಗಿದೆ. ಹೆಸರು ಬದಲಾದ ಮಾತ್ರಕ್ಕೆ ಜನರ ಜೀವನ ಬದಲಾಗುವುದಿಲ್ಲ. ಆಯಾ ಕಾಲಕ್ಕೆ ಈ ತರದ ಬದಲಾವಣೆ ನಡೆಯುತ್ತಿರುತ್ತವೆ ಎಂದರು.
ರೈಲಿಗೆ ಒಡೆಯರ್ ಹೆಸರು ಇಡಬೇಡಿ ಎಂದು ನಾವು ಹೇಳಲ್ಲ
ರೈಲಿಗೆ ಒಡೆಯರ್ ಹೆಸರು ನಾಮಕರಣ ಮಾಡಿದ ವಿಚಾರಕ್ಕೆ ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ಅರಳಿಕೆರೆ ಪಾಳ್ಯ ಗ್ರಾಮದಲ್ಲಿ ಪ್ರತಿಕ್ರಿಯೆ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ರೈಲಿಗೆ ಒಡೆಯರ್ ಹೆಸರು ಇಡಬೇಡಿ ಎಂದು ನಾವು ಹೇಳಲ್ಲ. ಆದರೆ ಟಿಪ್ಪು ಹೆಸರನ್ನು ತೆಗೆದು ಹಾಕಿದ್ದು ಸರಿಯಲ್ಲ. ಬಿಜೆಪಿಗೆ ಎಲ್ಲರೂ ಕಿತ್ತಾಡಿಕೊಂಡು ದ್ವೇಷ ಬೆಳೆಸಬೇಕೆಂಬ ಉದ್ದೇಶ ಎಂದರು.
ಟಿಪ್ಪುಸುಲ್ತಾನ್ ಇತಿಹಾಸದ ಒಂದು ಭಾಗ
ಟಿಪ್ಪು ಎಕ್ಸ್‌ಪ್ರೆಸ್ ಹೆಸರು ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವ ಜಿ.ಪರಮೇಶ್ವರ್, ಬಿಜೆಪಿಗೆ ಮಾಡಲು ಸಾಕಷ್ಟು ಕೆಲಸ ಇದೆ. ನಿರುದ್ಯೋಗ ಕಡಿಮೆ ಮಾಡುವ ಕೆಲಸವಿದೆ, ಸಮಾಜದಲ್ಲಿ ಶಾಂತಿ ಕಾಪಾಡುವ ಕೆಲಸವಿದೆ. ಆದರೆ ಇವರು ಒಂದು ರೈಲಿಗೆ ಹೆಸರಿಟ್ಡಿದ್ದಾರೆ. ಟಿಪ್ಪುಸುಲ್ತಾನ್ ಇತಿಹಾಸದ ಒಂದು ಭಾಗ. ಯಾರು ಒಪ್ಪುತ್ತಾರೋ ಬಿಡುತ್ತಾರೋ, ಅದನ್ನು ಬದಲಾಯಿಸುವುದರಿಂದ ಇತಿಹಾಸವನ್ನು ಅಳಿಸಿಹಾಕಲು ಆಗಲ್ಲ. ರಾಜಕೀಯ ಕಾರಣದಿಂದ ತೆಗೆದಿದ್ದರೆ ಅದನ್ನು ವಾಪಸ್ ಪಡೆಯಬೇಕು ,ಟಿಪ್ಪು ಸುಲ್ತಾನ್ ಹೆಸರನ್ನು ಮತ್ತೆ ಇಡಬೇಕು ಎಂದು ಆಗ್ರಹ ಮಾಡುತ್ತೇನೆ ಎಂದರು.
ಒಡೆಯರ್ ಹೆಸರಿಡಲು ಒತ್ತಾಯ ಇತ್ತಾ?
ರೈಲಿಗೆ ಒಡೆಯರ್ ಹೆಸರಿಡಲು ಯಾರಾದರೂ ಒತ್ತಾಯ ಮಾಡಿದ್ದಾರಾ ಎಂದು ಮೈಸೂರಿನಲ್ಲಿ ಪ್ರಶ್ನಿಸಿದ ಕಾಂಗ್ರೆಸ್ ಎಂಎಲ್ಸಿ ಡಾ.ಡಿ.ತಿಮ್ಮಯ್ಯ ಅವರು, ಹೆಸರು ಬದಲಿಸುವುದೇ ಬಿಜೆಪಿಯ ದೊಡ್ಡ ಸಾಧನೆಯಾ? ಟಿಪ್ಪು ಎಕ್ಸ್‌ಪ್ರೆಸ್ ಹೆಸರು ಬದಲಾವಣೆಗೆ ನನ್ನ ವಿರೋಧವಿದೆ. ಹೊಸ ರೈಲುಗಳಿಗೆ ಒಡೆಯರ್ ಹೆಸರು ಇಡಬಹುದಿತ್ತು ಎಂದರು.
ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ