ಮೈಸೂರು, ಡಿ.17: ಜಿಲ್ಲೆಯ ವಿಮಾನ ನಿಲ್ದಾಣಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ (Nalvadi Krishnaraja Wadiyar) ಹೆಸರಿಡಬೇಕೋ ಅಥವಾ ಟಿಪ್ಪು (Tipu) ಹೆಸರಿಡಬೇಕೋ ಎಂಬ ಚರ್ಚೆ ಜೋರಾಗಿಯೇ ನಡೆಯುತ್ತಿದೆ. ಈ ವಿಚಾರದಲ್ಲಿ ಆಡಳಿತ ಪಕ್ಷ ಕಾಂಗ್ರೆಸ್ ಹಾಗೂ ವಿಪಕ್ಷ ಬಿಜೆಪಿ (Congress-BJP) ನಡುವೆ ಜಟಾಪಟಿಯೂ ನಡೆಯುತ್ತಿದೆ. ಈ ನಡುವೆ ನಾಮಕರಣಕ್ಕೆ ಹೆಸರು ಪ್ರಸ್ತಾಪ ಮಾಡಿದ ವಿಚಾರವಾಗಿ ಪಕ್ಷಗಳ ನಡುವೆ ಕ್ರೆಡಿಟ್ ವಾರ್ ಆರಂಭವಾಗಿದೆ.
ಮೈಸೂರು ವಿಮಾನ ನಿಲ್ದಾಣಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರನ್ನು ಮೊದಲು ತಾನು ಪ್ರಸ್ತಾಪ ಮಾಡಿದ್ದೆ ಎಂದು ಪ್ರತಾಪ್ ಸಿಂಹ ಹೇಳುತ್ತಿದ್ದರೆ, ಇತ್ತ ಕಾಂಗ್ರೆಸ್ ತಾನು ಎನ್ನುತ್ತಿದೆ. ಹೌದು, ಬಿಜೆಪಿ ಶಾಸಕರು ಅದರಲ್ಲೂ, ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ಜಿಲ್ಲೆಯ ವಿಮಾನ ನಿಲ್ದಾಣಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಿಡುವಂತೆ ಒತ್ತಾಯಿಸುತ್ತಿದ್ದಾರೆ.
ಈ ಬಗ್ಗೆ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದಾಗಲೇ ತಾನು ಪತ್ರ ಬರೆದಿದ್ದಾಗಿ ಪ್ರತಾಪಸಿಂಹ ಸ್ಪಷ್ಟನೆ ನೀಡಿದ್ದಾರೆ. ಅಲ್ಲದೆ, ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಿಡಲು ಬೊಮ್ಮಾಯಿ ಸಚಿವ ಸಂಪುಟ ಒಪ್ಪಿಗೆ ನೀಡಿತ್ತು ಎಂದು ಹೇಳಿದ್ದಾರೆ.
ಇದನ್ನೂ ಓದಿ: ನಾಡಪ್ರಭು ಕೆಂಪೇಗೌಡರ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ್ದ ನಟ ಚೇತನ್ ಅಹಿಂಸಾ ವಿರುದ್ಧ ದೂರು ದಾಖಲು
ಇತ್ತ, ನಾವೇ ಮೊದಲು ಹೆಸರು ಪ್ರಸ್ತಾಪ ಮಾಡಿದ್ದು ಎಂದು ಕಾಂಗ್ರೆಸ್ ಹೇಳುತ್ತಿದೆ. 2015 ರಲ್ಲೇ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಿಡಲು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಒಪ್ಪಿಗೆ ಸೂಚಿಸಿತ್ತು. ಸಚಿವ ಸಂಪುಟದ ಒಪ್ಪಿಗೆ ನೀಡಿದ್ದ ದಾಖಲೆ ಟಿವಿ9 ಕನ್ನಡಕ್ಕೆ ಲಭ್ಯವಾಗಿದೆ. ಸದ್ಯ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಇದೆ. ಅಂದು ಒಡೆಯರ್ ಹೆಸರು ನಾಮಕರಣಕ್ಕೆ ಒಪ್ಪಿಗೆ ಸೂಚಿಸಿದ್ದ ಕಾಂಗ್ರೆಸ್ ಸರ್ಕಾರ, ಇಂದು ಅದೇ ಹೆಸರನ್ನು ಇಡುತ್ತಾ ಅಥವಾ ಟಿಪ್ಪು ಹೆಸರು ಇಡುತ್ತಾ ಎಂಬುದನ್ನು ಕಾದುನೋಡಬೇಕಿದೆ.
ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ವಿಮಾನ ನಿಲ್ದಾಣಗಳ ನಾಮಕರಣ ಮಾಡುವ ನಿರ್ಣಯವನ್ನು ಅಂಗೀಕರಿಸಲಾಯಿತು. ಈ ವೇಳೆ ಹುಬ್ಬಳ್ಳಿ-ಧಾರವಾಡ ಪೂರ್ವ ಕಾಂಗ್ರೆಸ್ ಶಾಸಕ ಅಬ್ಬಯ್ಯ ಪ್ರಸಾದ್ ಅವರು ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರು ಇಡುವಂತೆ ಒತ್ತಾಯಿಸಿದ್ದರು. ಇದಕ್ಕೆ ವಿಪಕ್ಷ ಬಿಜೆಪಿ ಶಾಸಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.
ಇದರ ಬೆನ್ನಲ್ಲೇ ಟ್ವೀಟ್ ಮಾಡಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಳ್ ಯತ್ನಾಳ್, ಮೈಸೂರಿನ ವಿಮಾನ ನಿಲ್ದಾಣಕ್ಕೆ ಮಹಾಪ್ರಭುಗಳಾದ ಶ್ರೀ ಮನ್ಮಹಾರಾಜ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಅವರ ಹೆಸರನ್ನು ಕರ್ನಾಟಕ ಸರ್ಕಾರ ಶಿಫಾರಸ್ಸು ಮಾಡಬೇಕು. ಅವರ ಕೊಡುಗೆ ಕರ್ನಾಟಕ ಹಾಗೂ ಭಾರತಕ್ಕೆ ಅಪಾರವಾದದ್ದು ಎಂದು ಹೇಳಿದ್ದರು. ಇವರು ಮಾತ್ರವಲ್ಲದೆ ಬಿಜೆಪಿಯ ಅನೇಕ ಶಾಸಕರು ಒಡೆಯರ್ ಹೆಸರು ಇಡುವಂತೆ ಒತ್ತಾಯಿಸುತ್ತಿದ್ದಾರೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ