ನಾಡಪ್ರಭು ಕೆಂಪೇಗೌಡರ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ್ದ ನಟ ಚೇತನ್ ಅಹಿಂಸಾ ವಿರುದ್ಧ ದೂರು ದಾಖಲು
ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡ ಅವರ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಸ್ಯಾಂಡಲ್ವುಡ್ ನಟ ಚೇತನ್ ಅಹಿಂಸಾ ವಿರುದ್ಧ ಬೆಂಗಳೂರಿನ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕೆಂಪೇಗೌಡ-ಊಳಿಗಮಾನ್ಯ ಜಾತಿ ಲಾಬಿಗಳ ಪ್ರಭಾವದಿಂದ ಐಕಾನ್ ಆಗಿದ್ದಾರೆ. ಈಗ ಪ್ರಮುಖ ಕರ್ನಾಟಕದ ಐಕಾನ್ ಆಗಿರುವ ಅತ್ಯಲ್ಪ ಐತಿಹಾಸಿಕ ವ್ಯಕ್ತಿ ಎಂದು ಪೋಸ್ಟ್ ಹಾಕಿದ್ದರು.
ಬೆಂಗಳೂರು, ಡಿ.17: ನಾಡಪ್ರಭು ಕೆಂಪೇಗೌಡ (Nadaprabhu Kempe Gowda) ಅವರ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಸ್ಯಾಂಡಲ್ವುಡ್ ನಟ ಚೇತನ್ ಅಹಿಂಸಾ (Chetan Ahimsa) ವಿರುದ್ಧ ಬೆಂಗಳೂರಿನ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿ ಅಗೌರವ ತೋರಿದ್ದಾರೆಂದು ಆರೋಪಿಸಿ ವಕೀಲ ಆರ್ಎಲ್ಎನ್ ಮೂರ್ತಿ ದೂರು ನೀಡಿದ್ದಾರೆ.
ಫೇಸ್ಬುಕ್ ಖಾತೆಯಲ್ಲಿ ಇಬ್ಬರು ಯೋಧರ ಕಥೆ ಎಂದು ಬರೆದುಕೊಂಡು, ಬೆಂಗಳೂರು ನಿರ್ಮಾತೃ ಕೆಂಪೇಗೌಡರನ್ನು ಅತ್ಯಲ್ಪ ಐತಿಹಾಸಿಕ ವ್ಯಕ್ತಿ ಎಂದು ಜರಿದು ಟಿಪ್ಪು ಸುಲ್ತಾನ್ನನ್ನು ಐತಿಹಾಸಿಕವಾಗಿ ಬಹಳ ಮಹತ್ವದ ವ್ಯಕ್ತಿ ಎಂದು ಹೇಳಿಕೊಂಡಿದ್ದಾರೆ. ಚೇತನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಿಜೆಪಿ ಶಾಸಕ ಅಶ್ವತ್ಥ ನಾರಾಯಣ ಒತ್ತಾಯಿಸಿದ್ದರು. ಸದ್ಯ, ವಕೀಲ ಆರ್ಎಲ್ಎನ್ ಮೂರ್ತಿ ಅವರು ನೀಡಿದ ದೂರನ್ನು ಸ್ವೀಕರಿಸಿದ ಶೇಷಾದ್ರಿಪುರಂ ಠಾಣಾ ಪೊಲೀಸರು ನಟ ಚೇತನ್ ಅಹಿಂಸಾ ವಿರುದ್ಧ ಎನ್ಸಿಆರ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಚೇತನ್ ಪೋಸ್ಟ್ನಲ್ಲಿ ಏನಿದೆ?
ಕೆಂಪೇಗೌಡ- ಊಳಿಗಮಾನ್ಯ ಜಾತಿ ಲಾಬಿಗಳ ಪ್ರಭಾವದಿಂದ ಐಕಾನ್ ಆಗಿದ್ದಾರೆ. ಈಗ ಪ್ರಮುಖ ಕರ್ನಾಟಕದ ಐಕಾನ್ ಆಗಿರುವ ಅತ್ಯಲ್ಪ ಐತಿಹಾಸಿಕ ವ್ಯಕ್ತಿ. ಟಿಪ್ಪು ಸುಲ್ತಾನ್-ಒಬ್ಬ ಐತಿಹಾಸಿಕವಾಗಿ ಬಹಳ ಮಹತ್ವದ ವ್ಯಕ್ತಿ. ಅವರ ಜನ್ಮವು ಮುಸ್ಲಿಮರಾಗಿ ಇಂದಿನ ಮಾನ್ಯತೆಗೆ ಅಡ್ಡಿಯಾಗಿದೆ. ದುರದೃಷ್ಟವಶಾತ್ ಒಬ್ಬ ವ್ಯಕ್ತಿಯು ಹುಟ್ಟಿದ ಸಮುದಾಯಕ್ಕೆ ಅವನ ಅಥವಾ ಅವಳ ಸಾಮಾಜಿಕ ಕೊಡುಗೆಗಳಿಂದ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂದು ಬರೆದುಕೊಂಡಿದ್ದರು.
ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ವಿಮಾನ ನಿಲ್ದಾಣಗಳ ನಾಮಕರಣ ಮಾಡುವ ನಿರ್ಣಯವನ್ನು ಅಂಗೀಕರಿಸಲಾಯಿತು. ಈ ವೇಳೆ ಹುಬ್ಬಳ್ಳಿ-ಧಾರವಾಡ ಪೂರ್ವ ಕಾಂಗ್ರೆಸ್ ಶಾಸಕ ಅಬ್ಬಯ್ಯ ಪ್ರಸಾದ್ ಅವರು ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರು ಇಡುವಂತೆ ಒತ್ತಾಯಿಸಿದ್ದರು. ಇದಕ್ಕೆ ವಿಪಕ್ಷ ಬಿಜೆಪಿ ಶಾಸಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ಜಾತಿ ಜನಗಣತಿ ಅಂಕಿ ಅಂಶ ಬಿಡುಗಡೆ ಮಾಡದ ಸರ್ಕಾರ; ನಟ ಚೇತನ್ ಆಕ್ರೋಶ
ಇದರ ಬೆನ್ನಲ್ಲೇ ಟ್ವೀಟ್ ಮಾಡಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಳ್ ಯತ್ನಾಳ್, ಮೈಸೂರಿನ ವಿಮಾನ ನಿಲ್ದಾಣಕ್ಕೆ ಮಹಾಪ್ರಭುಗಳಾದ ಶ್ರೀ ಮನ್ಮಹಾರಾಜ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಅವರ ಹೆಸರನ್ನು ಕರ್ನಾಟಕ ಸರ್ಕಾರ ಶಿಫಾರಸ್ಸು ಮಾಡಬೇಕು. ಅವರ ಕೊಡುಗೆ ಕರ್ನಾಟಕ ಹಾಗು ಭಾರತಕ್ಕೆ ಅಪಾರವಾದದ್ದು ಎಂದು ಹೇಳಿದ್ದರು.
ಇನ್ನೊಂದೆಡೆ, ಟಿಪ್ಪು ಹೆಸರು ಇಡುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದ ಯತ್ನಾಳ್, ಮೈಸೂರು ವಿಮಾನ ನಿಲ್ದಾಣಕ್ಕೆ ಮಹರಾಜರ ಹೆಸರು ಇಡಬೇಕು. ಟಿಪ್ಪು ಹೆಸರನ್ನು ಬೇಕಾದರೆ ಶೌಚಾಲಯಕ್ಕೆ ಇಡಲಿ ಎಂದಿದ್ದರು.
ಈ ವಿಚಾರವಾಗಿಯೂ ಟ್ವೀಟ್ ಮಾಡಿದ್ದ ನಟ ಚೇತನ್, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುವ ವಿಚಾರವಾಗಿ ಕಾಶ್ಮಿರಾಮ್ ನೀಡಿದ್ದ ಅವಹೇಳನಕಾರಿ ಹೇಳಿಕೆಯನ್ನು ಉಲ್ಲೇಖಿಸಿದ್ದರು. ಅಲ್ಲದೆ, ಶೌಚಾಲಯಗಳನ್ನು ಯಾವಾಗಲೂ ಸ್ವಚ್ಛಗೊಳಿಸಬಹುದು, ಯತ್ನಾಳ್ ಮನಸ್ಸಿನಲ್ಲಿರುವ ಕೋಮು ಕೊಳಕುತನವನ್ನು ಎಂದಿಗೂ ಸ್ವಚ್ಛಗೊಳಿಸಲಾಗುವುದಿಲ್ಲ ಎಂದಿದ್ದರು.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ