ಉಡುಪಿ: ಬಿಕಾಂ ಓದಿ ಆಯುರ್ವೇದಿಕ್, ಅಲೋಪತಿ ಚಿಕಿತ್ಸೆ ನೀಡುತ್ತಿದ್ದ ನಕಲಿ ವೈದ್ಯನ ಕಳ್ಳಾಟ ಬಯಲು
ಪರವಾನಗಿ ಇಲ್ಲದ ಲ್ಯಾಬ್, ಕ್ಲಿನಿಕ್ಗಳ ಮೇಲೆ ಆರೋಗ್ಯಾಧಿಕಾರಿಗಳು ದಾಳಿ ನಡೆಸಿದ ಘಟನೆ ಉಡುಪಿಯಲ್ಲಿ ನಡೆದಿದೆ. ತಾನು ವೈದ್ಯನೆಂದು ಹೇಳಿಕೊಂಡು ಕ್ಲಿನಿಕ್ ನಡೆಸುತ್ತದ್ದ ಬಿಕಾಂ ಪದವೀಧರ ವ್ಯಕ್ತಿಯೊಬ್ಬ ಆರೋಗ್ಯಾಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾನೆ. ಈತ ಆಯುರ್ವೇದಿಕ್, ಅಲೋಪತಿ ಚಿಕಿತ್ಸೆ ನೀಡುತ್ತಿದ್ದನು ಎಂದು ತಿಳಿದುಬಂದಿದ್ದು, ಎಫ್ಐಆರ್ ದಾಖಲಾಗಿದೆ.
ಉಡುಪಿ, ಡಿ.17: ಪರವಾನಗಿ ಇಲ್ಲದ ಲ್ಯಾಬ್, ಕ್ಲಿನಿಕ್ಗಳ ಮೇಲೆ ಆರೋಗ್ಯಾಧಿಕಾರಿಗಳು ದಾಳಿ ನಡೆಸಿದ ಘಟನೆ ಉಡುಪಿಯಲ್ಲಿ (Udupi) ನಡೆದಿದೆ. ಈ ವೇಳೆ ತಾನು ವೈದ್ಯನೆಂದು ಹೇಳಿಕೊಂಡು ಬ್ರಹ್ಮಾವರ ತಾಲೂಕಿನ ಕಂಬಳಗದ್ದೆ ಕ್ರಾಸ್ನ ಕುಂಜಾಲಿನಲ್ಲಿ ಕ್ಲಿನಿಕ್ ಇಟ್ಟುಕೊಂಡು ಆಯುರ್ವೇದಿಕ್, ಅಲೋಪತಿ ಚಿಕಿತ್ಸೆ ನೀಡುತ್ತಿದ್ದ ಬಿಕಾಂ ಪದವೀಧರನೊಬ್ಬ ಸಿಕ್ಕಿಬಿದ್ದಿದ್ದಾನೆ.
ಬಿಕಾಂ ಪದವಿ ಪಡೆದಿರುವ ಸಂದೇಶ್ ರಾವ್ ಕುಂಜಾಲಿನಲ್ಲಿ ಶ್ರೀಸೂರ್ಯನಾರಾಯಣ ಸ್ವಾಮಿ ಹೆಸರಿನ ಆಯುರ್ವೇದಿಕ್ ಕೇಂದ್ರ ತೆರೆದು ಚಿಕಿತ್ಸೆ ನೀಡುತ್ತಿದ್ದನು. ಈ ಕ್ಲಿನಿಕ್ ಮೇಲೆ ಆರೋಗ್ಯಾಧಿಕಾರಿಗಳು ದಾಳಿ ನಡೆಸಿದಾಗ ಸಂದೇಶ್ ರಾವ್ ವೈದ್ಯನಲ್ಲ, ಆತ ನಕಲಿ ವೈದ್ಯ ಎಂದು ತಿಳಿದುಬಂದಿದೆ. ಸದ್ಯ, ಕ್ಲಿನಿಕ್ ಜಪ್ತಿ ಮಾಡಿದ ಆರೋಗ್ಯಾಧಿಕಾರಿಗಳು, ಆರೋಪಿ ವಿರುದ್ಧ ಬ್ರಹ್ಮಾವರ ಠಾಣೆಗೆ ದೂರು ನೀಡಿದ್ದು, ಎಫ್ಐಆರ್ ದಾಖಲಾಗಿದೆ.
ಲ್ಯಾಬ್, ಕ್ಲಿನಿಕ್ಗಳ ಮೇಲೆ ದಾಳಿ ಆರೋಗ್ಯಾಧಿಕಾರಿಗಳ ದಾಳಿ
ರಾಜ್ಯದಲ್ಲಿ ಭ್ರೂಣ ಹತ್ಯೆ ಕೇಸ್ ಪತ್ತೆ ಹಿನ್ನೆಲೆ ಆರೋಗ್ಯಾಧಿಕಾರಿಗಳು ಇಂದು ಜಿಲ್ಲೆಯ ಹಲವೆಡೆ ಲ್ಯಾಬ್, ಕ್ಲಿನಿಕ್ಗಳ ಮೇಲೆ ದಾಳಿ ನಡೆಸಿದ್ದರು. ಉಡುಪಿ, ಕುಂದಾಪುರ ತಾಲೂಕಿನ ಏಳು ಕಡೆ ದಾಳಿ ನಡೆಸಿದಾಗ ನಕಲಿ ವೈದ್ಯರು, ಅನುಮತಿ ರಹಿತ ಕ್ಲಿನಿಕ್ಗಳು ಪತ್ತೆಯಾಗಿವೆ. ಪರವಾನಗಿ ಇಲ್ಲದ ಲ್ಯಾಬ್, ಕ್ಲಿನಿಕ್ ಸೀಜ್ ಮಾಡಿ ಕೆಪಿಎಂಇ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: ಚುರುಕುಗೊಂಡ ಭ್ರೂಣ ಹತ್ಯೆ ಕೇಸ್ ತನಿಖೆ; ಮೈಸೂರಿನಲ್ಲಿ ಈ ವರ್ಷ 1800ಕ್ಕೂ ಹೆಚ್ಚು ಗರ್ಭಪಾತ, ಕಾರಣ ಕೇಳಿ ನೋಟಿಸ್
ಉಪ್ಪುಂದದ ಸುಷ್ಮಾ ಕ್ಲಿನಿಕಲ್ ಲ್ಯಾಬ್ ಸೀಜ್ ಮಾಡಿ ಕೇಸ್ ದಾಖಲು ಮಾಡಲಾಗಿದ್ದು, ಕುಂದಾಪುರದ ಬಯೋಲಿನ್ ಕ್ಲಿನಿಕಲ್ ಲ್ಯಾಬ್ ವಿರುದ್ಧವೂ ಪ್ರಕರಣ ದಾಖಲಾಗಿದೆ. ಆರೂರಿನಲ್ಲಿ ಆರೋಗ್ಯಾಧಿಕಾರಿಗಳು ಒಂದು ಕ್ಲಿನಿಕ್ ಜಪ್ತಿ ಮಾಡಿದ್ದಾರೆ.
ಆಯುರ್ವೇದಿಕ್ ನೋಂದಣಿಯಲ್ಲಿ ಅಲೋಪತಿ ಕ್ಲಿನಿಕ್ ನಡೆಸುತ್ತಿದ್ದ ವಿಚಾರ ಪತ್ತೆಯಾಗಿದೆ. ಆದಿ ಉಡುಪಿಯ ಧನ್ವಂತರಿ ಕ್ಲಿನಿಕ್, ನಾವುಂದದ ನಂಬಿಯಾರ್ ಕ್ಲಿನಿಕ್ನಲ್ಲಿ ಅಲೋಪತಿ ಚಿಕಿತ್ಸೆ ನೀಡುತ್ತಿದ್ದ ವಿಚಾರ ತಿಳಿದುಬಂದಿದೆ.
ದಾಳಿ ವೇಳೆ ಕೆಲವೊಂದು ಸಂಶಯಾಸ್ಪದ ವಸ್ತುಗಳು ವಶಕ್ಕೆ ಪಡೆಯಲಾಗಿದ್ದು, ಭ್ರೂಣ ಹತ್ಯೆಗೆ ಬಳಸಲಾಗಿತ್ತೇ ಎಂಬುದನ್ನು ತಿಳಿಯಲು ಹೆಚ್ಚಿನ ತನಿಖೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಕೆಲವೊಂದು ಮಾತ್ರೆ, ಸಿರಿಂಜ್ಗಳನ್ನು ಯಥೇಚ್ಛವಾಗಿ ಬಳಸಲಾಗಿದ್ದು, ಅಷ್ಟೊಂದು ಪ್ರಮಾಣದಲ್ಲಿ ಯಾಕಾಗಿ ಬಳಸಲಾಯಿತು ಎಂದು ತನಿಖೆ ನಡೆಸಲಾಗುತ್ತಿದೆ.
ದಾಳಿ ಬಗ್ಗೆ ಟಿವಿ9 ಜೊತೆ ಮಾತನಾಡಿದ ಜಿಲ್ಲಾ ಅರೋಗ್ಯ ಅಧಿಕಾರಿ ಡಾ.ಐಪಿ ಗಡಾಧ್, ರಾಜ್ಯದಲ್ಲಿ ಭ್ರೂಣ ಹತ್ಯೆ ಪತ್ತೆಯಾದ ಹಿನ್ನೆಲೆ ಮೇಲಾಧಿಕಾರಿಗಳ ಸೂಚನೆ ಮೇರೆಗೆ ಜಿಲ್ಲೆಯಾದ್ಯಂತ ದಾಳಿ ನಡೆಸಿದ್ದೇವೆ. ದಾಳಿ ವೇಳೆಯಲ್ಲಿ ನಕಲಿ ವೈದ್ಯರು ಇರುವುದು ಮಾಹಿತಿ ಸಿಕ್ಕಿದೆ. ಡಾಕ್ಟರ್ ಪದವಿ ಇಲ್ಲದೆ ಆಯುರ್ವೇದಿಕೆ ಕ್ಲಿನಿಕ್ ನಡೆಸುತ್ತಿದ್ದವನ ಮೇಲೆ ಪ್ರಕರಣ ದಾಖಲಿಸಿದ್ದೇವೆ. ಪರವಾನಿಗೆ ಇಲ್ಲದೆ ಲ್ಯಾಭ್ ನಡೆಸುತ್ತಿದ್ದವರ ಮೇಲೆಯು ಪ್ರಕರಣ ದಾಖಲಿಸಿ ಸೀಜ್ ಮಾಡಿದ್ದೇವೆ. ಜಿಲ್ಲೆಯಲ್ಲಿರುವ ಎಲ್ಲಾ ಕ್ಲಿನಿಕ್ಗಳಿಗೂ ದಾಳಿ ನಡೆಸಿ ಮಾಹಿತಿ ಸಂಗ್ರಹಿಸಿದ್ದೇವೆ. ದಾಳಿಯ ವೇಳೆ ಮಾತ್ರೆ, ಸಿರಿಂಜ್ಗಳು ಸಿಕ್ಕಿದ್ದು, ಜಪ್ತಿ ಮಾಡಲಾಗಿದೆ. ಹೆಚ್ಚಿನ ತನಿಖೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದರು.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:20 am, Sun, 17 December 23