ಬೆಂಗಳೂರು: ಚುನಾವಣೆ ಹೊಸ್ತಿಲಲ್ಲೇ ಕಾಂಗ್ರೆಸ್ನತ್ತ ಮುಖ ಮಾಡಿದ್ದ ವಸತಿ ಮತ್ತು ಮೂಲಸೌಕರ್ಯ ಸಚಿವ ವಿ.ಸೋಮಣ್ಣ (V Somanna) ಮುನಿಸಿಗೆ ಬಿಜೆಪಿ ಹೈಕಮಾಂಡ್ ಮದ್ದು ಅರೆದಿದೆ. ಹೌದು… ಸಚಿವ ವಿ.ಸೋಮಣ್ಣ ಅವರ ಪುತ್ರ ಡಾ.ಅರುಣ್ ಸೋಮಣ್ಣ(Dr Arun Somanna) ಅವರನ್ನು ತುಮಕೂರು ಜಿಲ್ಲಾ ಘಟಕ ಉಪಾಧ್ಯಕ್ಷರನ್ನಾಗಿ(Tumakuru District BJP vice president) ನೇಮಿಸಲಾಗಿದೆ. ಈ ಸಂಬಂಧ ಮಂಗಳವಾರ ರಾತ್ರಿ ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷ ರವಿ ಶಂಕರ್ ಹೆಬ್ಬಾಕ ಅವರು ಆದೇಶ ಹೊರಡಿಸಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷರ ಸೂಚನೆ ಮೇರೆಗೆ ನೇಮಕ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಆದ್ರೆ, ಇದೀಗ ಇದಕ್ಕೆ ವಿಜೆಪಿಯಲ್ಲೇ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿವೆ.
ಇದನ್ನೂ ಓದಿ: ಸೋಮಣ್ಣ ವಿಷಯ ಮಾತಾಡುವಾಗ ಬಿಎಸ್ ಯಡಿಯೂರಪ್ಪ ಅದ್ಯಾಕೆ ವಿಜೆಯೇಂದ್ರನ ಹೆಸರು ಉಲ್ಲೇಖಿಸಿದರೋ?
ಡಾ.ಅರುಣ್ ಸೋಮಣ್ಣ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಸೂಚನೆ ಹಿನ್ನೆಲೆಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ತುಮಕೂರು ಜಿಲ್ಲಾ ಬಿಜೆಪಿ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷ ಎಚ್.ಎಸ್.ರವಿಶಂಕರ್ ತಿಳಿಸಿದ್ದಾರೆ. ಆದ್ರೆ, ಬಿಜೆಪಿ ನಿರ್ಧಾರದ ವಿರುದ್ಧ ಕಾರ್ಯಕರ್ತರ ಅಸಮಾಧಾನಗೊಂಡಿದ್ದು, ಬಿಎಸ್ ಯಡಿಯೂರಪ್ಪ ವಿರೋಧಿಗಳಿಗೆ ಬೆಂಬಲವಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ಗಳನ್ನು ಹಾಕುವ ಮೂಲಕ ಆಕ್ರೋಶ ಹೊರಹಾಕುತ್ತಿದ್ದಾರೆ.
ತುಮಕೂರಿನಲ್ಲಿ ಮುಖಂಡರ ಕೊರತೆಯಿಂದ ಬೆಂಗಳೂರಿನಿಂದ ಆಮದು ಮಾಡಿಕೊಳ್ಳುತ್ತಿರುವ ಅರುಣ್ ಸೋಮಣ್ಣಗೆ ಸ್ವಾಗತ ಎಂದು ವ್ಯಂಗ್ಯ ವಾಡಿದ್ದಾರೆ. ಬಿಜೆಪಿ ಸಂಸದರೇ, ಶಾಸಕರೇ, ನಿಮ್ಮ ಚುನಾವಣೆಯಲ್ಲಿ ಶ್ರಮಿಸಿದ್ದು ಸಾಮಾನ್ಯ ಕಾರ್ಯಕರ್ತರು. ಈಗ ಬೇರೆ ಯಾವುದೋ ಜಿಲ್ಲೆಯವರಿಗೆ ಉಪಾಧ್ಯಕ್ಷ ಸ್ಥಾನ. ಪಕ್ಷದ ಕಾರ್ಯಕರ್ತನಾಗಿ ಶತಕೋಟಿ ನಮನ ಎಂದು ಕಾರ್ಯಕರ್ತರು ಪೋಸ್ಟ್ ಹಾಕಿದ್ದಾರೆ. ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಗೋ ಬ್ಯಾಕ್ ಅರುಣ್ ಸೋಮಣ್ಣ ಎನ್ನುವ ಅಭಿಯಾನವನ್ನ ಕೂಡ ಆರಂಭವಾಗಿದೆ.
ಇತ್ತೀಚೆಗೆ ರಾಜ್ಯ ಬಿಜೆಪಿಯಲ್ಲಿ ನಡೆದ ಕೆಲ ಬೆಳವಣಿಗೆಗಳಿಂದ ಸೋಮಣ್ಣ ಹಾಗೂ ಅವರ ಪುತ್ರ ಅರುಣ್ ಸೋಮಣ್ಣ ಅವರು ಅಸಮಾಧಾನಗೊಂಡಿದ್ದರು. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಅವರ ಪುತ್ರ ಬಿವೈ ವಿಜಯೇಂದ್ರ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರು. ಅಲ್ಲದೇ ಅಪ್ಪ ಮಕ್ಕಳ ನಡೆಯಿಂದ ಬಿಜೆಪಿ ತೊರೆಯಲು ಸಹ ಸಜ್ಜಾಗಿದ್ದರು. ಅಂತಿಮವಾಗಿ ಪ್ರಲ್ಹಾದ್ ಜೋಶಿ, ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಕೆಲ ನಾಯಕರು ಸೋಮಣ್ಣನವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಸೋಮಣ್ಣ ತಮ್ಮ ನಿಲುವು ಬದಲಿಸಿದ್ದರು. ಅಲ್ಲದೇ ಇಷ್ಟಕ್ಕೆ ಸುಮ್ಮನಾಗದ ಸೋಮಣ್ಣ ಖುದ್ದು ದೆಹಲಿಗೆ ತೆರಳಿ ಅಮಿತ್ ಶಾಗೆ ದೂರು ನೀಡಿದ್ದರು.
ಇದೀಗ ಸೋಮಣ್ಣ ಪುತ್ರನಿಗೆ ಪಕ್ಷದಲ್ಲಿ ಜವಾಬ್ದಾರಿ ನೀಡುವ ಮೂಲಕ ಸೋಮಣ್ಣರನ್ನು ಹಿಡಿದಿಟ್ಟುಕೊಳ್ಳಲು ಬಿಜೆಪಿ ತಂತ್ರರೂಪಿಸಿದೆ. ಆದ್ರೆ, ಇದಕ್ಕೆ ತುಮಕೂರಿನಲ್ಲಿ ವಿರೋಧ ವ್ಯಕ್ತವಾಗುತ್ತಿದ್ದು, ಮುಂದೆ ಇದು ಯಾವ ಹಂತಕ್ಕೆ ಹೋಗಿ ನಿಲ್ಲುತ್ತದೆ ಎಂದು ಕಾದುನೋಡಬೇಕಿದೆ.