ಕರಾವಳಿಯಲ್ಲಿ ಕಾಂಗ್ರೆಸ್ಗೆ ಹೊಸ ಚುನಾವಣಾ ದಾಳ; ಫಲಿಸಲಿದೆಯೇ ‘ಕೈ’ ರಣತಂತ್ರ?
ತುಳು ಭಾಷೆಗೆ (Tulu Language) ಇನ್ನೂ ಅಧಿಕೃತ ಸ್ಥಾನಮಾನ ಸಿಗದೇ ಇರೋದು ಕರಾವಳಿಯಲ್ಲಿ ಚುನಾವಣಾ ವಿಷಯವಾಗಿ (Election Issue) ಮುನ್ನಲೆಗೆ ಬಂದಿದೆ.
ಮಂಗಳೂರು: ತುಳು ಭಾಷೆಗೆ (Tulu Language) ಇನ್ನೂ ಅಧಿಕೃತ ಸ್ಥಾನಮಾನ ಸಿಗದೇ ಇರೋದು ಕರಾವಳಿಯಲ್ಲಿ ಚುನಾವಣಾ ವಿಷಯವಾಗಿ (Election Issue) ಮುನ್ನಲೆಗೆ ಬಂದಿದೆ. ಇನ್ನೇನು ಶೀಘ್ರದಲ್ಲೇ ತುಳು ಭಾಷೆಗೆ ಅಧಿಕೃತ ಸ್ಥಾನಮಾನ ಸಿಗುತ್ತೆ ಅಂತ ನಿರೀಕ್ಷೆಯಲ್ಲಿದ್ದ ಜನರಿಗೆ ಸರ್ಕಾರ ನಿರಾಶೆ ತಂದಿತ್ತು. ಕಾಟಾಚಾರಕ್ಕೆ ಅದ್ಯಯನ ಸಮಿತಿ ರಚಿಸಿ ಜನರ ಮೂಗಿಗೆ ಬೆಣ್ಣೆ ಸವರೋ ಕೆಲಸ ಮಾಡಿತ್ತು. ಈಗ ಇದೇ ವಿಚಾರ ಕಾಂಗ್ರೆಸ್ (Congress) ಪಕ್ಷಕ್ಕೆ ಮುಂದಿನ ಚುನಾವಣೆಗೆ ಅಸ್ತ್ರವಾಗಿ ಬಳಕೆ ಆಗುತ್ತಿದೆ. ಕರಾವಳಿ ಜಿಲ್ಲೆಯ ಪ್ರಮುಖ ಭಾಷೆ ತುಳುವಿಗೆ ಅಧಿಕೃತ ಸ್ಥಾನಮಾನ ಸಿಗಬೇಕು ಎಂಬ ಹೋರಾಟಕ್ಕೆ ಹಲವು ವರ್ಷಗಳ ಇತಿಹಾಸ ಇದೆ. ಆದರೆ ಅದು ದೊಡ್ಡ ತಿರುವು ಪಡೆದುಕೊಂಡಿದ್ದು 2009 ರಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರಿಂದ. ಲಕ್ಷಾಂತರ ಜನರ ಪಾಲ್ಗೊಳ್ಳುವಿಕೆಯಲ್ಲಿ ವಿಶ್ವ ತುಳು ಸಮ್ಮೇಳನವನ್ನು ಆಯೋಜಿಸಿ ಕೇಂದ್ರ ಸರ್ಕಾರಕ್ಕೆ ಈ ಬಗ್ಗೆ ಒತ್ತಾಯ ಮಾಡಲಾಗಿತ್ತು. ತುಳು ಭಾಷೆಯನ್ನು ಎಂಟನೇ ಪರಿಚ್ಚೇದಕ್ಕೆ ಸೇರಿಸಬೇಕು ಅಂತ ಅಂದು ಒತ್ತಾಯಿಸಲಾಗಿತ್ತು. ಆ ಬಳಿಕ ಸಾಕಷ್ಟು ಹೋರಾಟಗಳು ನಡೆದು, ತುಳು ಹೋರಾಟ ಸಮಿತಿಗಳು ಹುಟ್ಟಿಕೊಂಡು ಪ್ರತ್ಯೇಕ ರಾಜ್ಯದ ಕೂಗಿನೊಂದಿಗೆ ಪ್ರತ್ಯೇಕ ದ್ವಜಾರೋಹಣ ಕೂಡಾ ಮಾಡಲಾಗಿತ್ತು. ನವೆಂಬರ್ ಒಂದರಂದು ಪ್ರತ್ಯೇಕ ದ್ವಜಾರೋಹಣ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗಿತ್ತು. ಯಾವುದು ಫಲಿಸದೇ ಇದ್ದಾಗ ಕೊನೆಗೆ ತುಳುವರ ಪಕ್ಷವೂ ಕೂಡಾ ಅಸ್ಥಿತ್ವಕ್ಕೆ ಬಂತು.
ಇಷ್ಟೆಲ್ಲಾ ಆದ ಬಳಿಕ ರಾಜ್ಯ ಸರ್ಕಾರ ಇತ್ತೀಚೆಗೆ ತುಳು ಭಾಷೆಗೆ ಅಧಿಕೃತ ಸ್ಥಾನಮಾನ ನೀಡುವ ಸಲುವಾಗಿ ಅದ್ಯಯನ ಸಮಿತಿಯೊಂದನ್ನು ರಚನೆ ಮಾಡಿತ್ತು. ಆದರೆ ಆ ಅದ್ಯಯನ ಸಮಿತಿ ಏನು ವರದಿ ನೀಡಿದೆ? ತುಳು ಭಾಷೆಯ ಸ್ಥಾನಮಾನದ ವಿಚಾರ ಏನಾಯ್ತು ಅನ್ನೋದು ಯಾರಿಗೂ ಗೊತ್ತಿಲ್ಲ. ಈ ಬಗ್ಗೆ ಉತ್ತರ ನೀಡದೆ ಮುಖ್ಯಮಂತ್ರಿ ಆದಿಯಾಗಿ ಸ್ಥಳಿಯ ಜನಪ್ರತಿನಿಧಿಗಳು ಜಾರಿಕೊಳ್ಳುತ್ತಿರುವುದು ಈಗ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ: Mangaluru: ಹೋಲಿ ಸಂಭ್ರಮದ ಡಿಜೆ ಪಾರ್ಟಿ ವೇಳೆ ಭಜರಂಗದಳ ಕಾರ್ಯಕರ್ತರ ನೈತಿಕ ಪೊಲೀಸ್ಗಿರಿ
ವಿಶೇಷ ಅಂದ್ರೆ ತುಳು ಭಾಷೆಗೆ ಅಧಿಕೃತ ಸ್ಥಾನಮಾನ ಸಿಗದೇ ಇದ್ರೂ ಇದರ ಲಿಪಿ ಪಠ್ಯದಲ್ಲಿ ಅಳವಡಿಸಲಾಗಿದೆ. ಈಗಾಗಲೆ ನೂರಾರು ವಿದ್ಯಾರ್ಥಿಗಳು ತುಳು ಲಿಪಿಯಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಕೂಡಾ ಬರೆದಿದ್ದಾರೆ. ಮಂಗಳೂರು ವಿವಿಯಲ್ಲಿ ಎಂಎ ಪದವಿಯಲ್ಲೂ ತುಳು ಭಾಷೆಯನ್ನು ಅಳವಡಿಸಲಾಗಿದೆ. ತುಳು ಅಕಾಡೆಮಿ, ತುಳು ಅದ್ಯಯನ ಪೀಠ ಎಲ್ಲವೂ ಆರಂಭಿಸಲಾಗಿದೆ. ಆದ್ರೆ ತುಳುವಿಗೆ ಅಧಿಕೃತ ಎರಡನೇ ಭಾಷೆಯ ಸ್ಥಾನಮಾನ ಮಾತ್ರ ಸಿಕ್ಕಿಲ್ಲ.
ಕಾಂಗ್ರೆಸ್ಗೆ ಸಿಕ್ಕಿದ ಹೊಸ ಅಸ್ತ್ರ
ಇದೀಗ ಬಿಜೆಪಿ ಸರ್ಕಾರ ತುಳು ಭಾಷೆಗೆ ಅಧಿಕೃತ ಸ್ಥಾನಮಾನ ಒದಗಿಸುವ ಬಗ್ಗೆ ಪ್ರಸ್ತಾಪ ಮಾಡಿ ಕೊನೆ ಕ್ಷಣದಲ್ಲಿ ಜಾರಿಕೊಂಡಿದೆ. ಚುನಾವಣೆ ಸಮಯದಲ್ಲೇ ಈ ರೀತಿ ಆಗಿರೋದು ಈಗ ಕೈ ಪಾಳಯಕ್ಕೆ ಖುಷಿ ನೀಡಿದ್ದು, ಬಿಜೆಪಿ ತುಳು ವಿರೋಧಿ ಎಂದು ಬಿಂಬಿಸ್ತಾ ಇದೆ. ನಾವು ಅಧಿಕಾರಕ್ಕೆ ಬಂದ್ರೆ ತುಳುವಿಗೆ ಅಧಿಕೃತ ಮಾನ್ಯತೆ ತರೋದಾಗಿ ಕಾಂಗ್ರೆಸ್ ಅಭ್ಯರ್ಥಿಗಳು ಹೇಳಕೊಳ್ಳುತ್ತಿದ್ದಾರೆ. ಸೋಷಿಯಲ್ ಮೀಡಿಯಾ ಮೂಲಕ ಇದೇ ವಿಚಾರವನ್ನು ಪ್ರಚಾರಕ್ಕೆ ಬಳಸಿಕೊಳ್ತಾ ಇದ್ದಾರೆ. ತುಳು ಹೋರಾಟಗಾರರು ಸರ್ಕಾರದ ನಡೆ ಖಂಡಿಸಿ ನೋಟಾ ಅಭಿಯಾನ ನಡೆಸುವ ಚರ್ಚೆ ನಡೆಸಿದ್ದಾರೆ.
ಒಟ್ಟಾರೆ ಭಾಷೆಯ ಭಾವನಾತ್ಮಕ ಹೋರಾಟ ಈಗ ರಾಜಕೀಯ ದಾಳವಾಗಿ ಬದಲಾಗಿದೆ. ಬಿಜೆಪಿ ಪಕ್ಷ ಮಾತು ಕೊಟ್ಟು ತಪ್ಪಿದ ಕಾರಣ ಜನರ ಬಳಿ ಏನೂ ಹೇಳಲಾಗದ ಪರಿಸ್ಥಿತಿಯಲ್ಲಿ ಇದೆ. ಇದನ್ನೇ ತನ್ನ ಅಸ್ತ್ರವಾಗಿ ಬಳಸಿಕೊಂಡಿರೋ ಕೈ ನಾಯಕರು ತುಳುವರ ಮನಗೆಲ್ಲುವ ಪ್ರಯತ್ನದಲ್ಲಿದ್ದಾರೆ. ಇದು ಎಷ್ಟರ ಮಟ್ಟಿಗೆ ಪರಿಣಾಮ ಬೀರಲಿದೆ ಅನ್ನುವುದು ಚುನಾವಣೆ ಮುಗಿದ ಬಳಿಕವಷ್ಟೇ ಗೊತ್ತಾಗಲಿದೆ.
ಅಶೋಕ್ ಟಿ.ವಿ 9 ಮಂಗಳೂರು
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:52 pm, Tue, 28 March 23