ತುಮಕೂರು, ಫೆ.8: ಲೋಕಸಭೆ ಚುನಾವಣೆ (Lok Sabha Election 2024) ಸಮೀಪಿಸುತ್ತಿದ್ದಂತೆ ತುಮಕೂರು (Tumkur) ಕ್ಷೇತ್ರದ ಬಿಜೆಪಿ ಟಿಕೆಟ್ ಫೈಟ್ ಜೋರಾಗಿಯೇ ನಡೆಯುತ್ತಿದೆ. ವಿಧಾನಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿರುವ ಬಿಜೆಪಿ ನಾಯಕರಾದ ವಿ ಸೋಮಣ್ಣ (V Somanna) ಮತ್ತು ಜೆಸಿ ಮಾಧುಸ್ವಾಮಿ (JC Madhuswamy) ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. ಒಂದೆಡೆ, ಟಿಕೆಟ್ ಸಿಗುವ ವಿಶ್ವಾಸದಲ್ಲಿ ಮಾಧುಸ್ವಾಮಿ ಇದ್ದರೆ, ಇನ್ನೊಂದೆಡೆ, ನನ್ನ ಕಾರ್ಯವೈಖರಿ ನೋಡಿ ಹೈಕಮಾಂಡ್ ಯಾವ ಕ್ಷೇತ್ರ ಕೊಟ್ಟರೂ ನನಗೆ ತೊಂದರೆಯಿಲ್ಲ ಎಂದು ವಿ ಸೋಮಣ್ಣ ಹೇಳುತ್ತಿದ್ದಾರೆ.
ಸದ್ದಿಲ್ಲದೆ ತುಮಕೂರು ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಮಾಧುಸ್ವಾಮಿ, ನಾನು ಕೂಡ ತುಮಕೂರು ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ನನಗೆ ಟಿಕೆಟ್ ಸಿಗುವ ವಿಶ್ವಾಸ ಇದೆ ಎಂದು ಹೇಳುತ್ತಿದ್ದಾರೆ. ಈ ನಡುವೆ ಮಾಜಿ ಸಚಿವ ವಿ ಸೋಮಣ್ಣ ಕೂಡ ಇದೇ ಕ್ಷೇತ್ರದ ಟಿಕೆಟ್ಗಾಗಿ ತೀವ್ರ ಪೈಪೋಟಿ ನಡೆಸುತ್ತಿದ್ದು, ದೆಹಲಿಯಲ್ಲಿ ಠಿಕಾಣಿ ಹೂಡಿದ್ದಾರೆ.
ಈಗಾಗಲೇ ಸೋಮಣ್ಣ ಅವರು ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಜೊತೆಗೆ ಮಾಜಿ ಪ್ರಧಾನಿ ದೇವೆಗೌಡರನ್ನ ಕೂಡ ಭೇಟಿಯಾಗಿ ಬೆಂಬಲ ಕೋರಿದ್ದಾರೆ. ತುಮಕೂರು ಸಂಸದ ಜಿಎಸ್ ಬಸವರಾಜ್ ಜೊತೆಗೆ ಸೋಮಣ್ಣ ತೆರಳಿದ್ದು, ತಾವೇ ಮುಂದೆ ನಿಂತು ಸೋಮಣ್ಣಗೆ ಟಿಕೆಟ್ ಕೊಡಿಸಲು ಬಸವರಾಜ್ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಸೋಮಣ್ಣಗೆ ಟಿಕೆಟ್ ನೀಡುವುದನ್ನು ಮಾಧುಸ್ವಾಮಿ ಬಣ ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ. ಸ್ಥಳೀಯರಿಗೆ ಟಿಕೆಟ್ ನೀಡಿದರೆ ಗೆಲುವು ಸುಲಭವಾಗಲಿದೆ ಎಂದು ಹೇಳುತ್ತಿದೆ.
ಇದನ್ನೂ ಓದಿ: ತುಮಕೂರು ಲೋಕಸಭಾ BJP ಟಿಕೆಟ್ ಮೇಲೆ ವಿ ಸೋಮಣ್ಣ ಕಣ್ಣು; ಸದ್ದಿಲ್ಲದೆ ಹಲವು ಮುಖಂಡರ ಭೇಟಿ
ಸದ್ಯ, ಸೋಮಣ್ಣ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ್ದಾರೆ. ಈ ವೇಳೆ ತುಮಕೂರು ಕ್ಷೇತ್ರದಲ್ಲಿ ಜೆ.ಸಿ. ಮಾಧುಸ್ವಾಮಿ ಟಿಕೆಟ್ ಆಕಾಂಕ್ಷಿಯಾಗಿರುವ ವಿಚಾರವಾಗಿ ಮಾತನಾಡಿದ ಸೋಮಣ್ಣ, ನಾನು ತುಮಕೂರು ಟಿಕೆಟ್ ಆಕಾಂಕ್ಷಿ ಎಂದು ಎಲ್ಲಿಯೂ ಹೇಳಿಲ್ಲ. ತುಮಕೂರು ಅಭಿವೃದ್ಧಿಗಾಗಿ ನಾನು ಶ್ರಮ ವಹಿಸಿದ್ದೇನೆ. ನಾನು ಯಾವುದೇ ಕ್ಷೇತ್ರವನ್ನು ಕೇಳಿಲ್ಲ. ಕಳೆದ ಬಾರಿ ನನಗೆ ಸೋಲಾಗಿದೆ. ಆದರೆ ನನ್ನ ಕಾರ್ಯವೈಖರಿ ನೋಡಿ ಹೈಕಮಾಂಡ್ ಯಾವ ಕ್ಷೇತ್ರ ಕೊಟ್ಟರೂ ನನಗೆ ತೊಂದರೆಯಿಲ್ಲ. ವರಿಷ್ಠರ ಆದೇಶವನ್ನು ನಾನು ಮೀರಲ್ಲ ಎಂದರು.
ನಾನು ತುಮಕೂರಿನಲ್ಲಿ ಕೆಲಸ ಮಾಡಿರುವುದನ್ನು ನೋಡಿ ನನ್ನ ಹೆಸರು ಕೇಳಿ ಬರುತ್ತಿದೆ. ತುಮಕೂರಿನಲ್ಲಿ ಜೆ.ಸಿ. ಮಾಧುಸ್ವಾಮಿ ಆಕಾಂಕ್ಷಿ ಎಂದು ಕೇಳಿಕೊಂಡಿದ್ದಾರೆ. ಅದಕ್ಕೆ ನನ್ನ ವಿರೋಧವಿಲ್ಲ ಎಂದರು. ಅಲ್ಲದೆ, ನಾನು ರಾಜ್ಯ ಸಭಾ ಸದಸ್ಯತ್ವವನ್ನು ಕೇಳಿದ್ದೇನೆ. ರಾಜೀವ್ ಚಂದ್ರಶೇಖರ್ ಅವರಿಗೆ ಪಾರ್ಲಿಮೆಂಟ್ ಸದಸ್ಯತ್ವ ಕೊಡುವುದಿಲ್ಲವಾದರೆ ನನಗೆ ಕೊಡಿ ಎಂದು ವರಿಷ್ಠರಲ್ಲಿ ಕೇಳಿಕೊಂಡಿದ್ದೇನೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:37 pm, Thu, 8 February 24