ಬಿಜೆಪಿ ವರಿಷ್ಠರನ್ನ​ ಭೇಟಿಯಾದ ಸುಮಲತಾ ಅಂಬರೀಶ್, ಮಂಡ್ಯ ಕ್ಷೇತ್ರದ ಬಗ್ಗೆ ಮಹತ್ವದ ಚರ್ಚೆ

ಲೋಕಸಭೆ ಸನಿಹದಲ್ಲಿ ರಾಜಕೀಯ ಮೇಲಾಟಗಳು ಜೋರಾಗಿಯೇ ಇವೆ. ಅದರಲ್ಲೂ ಬಿಜೆಪಿ ಜತೆ ಜೆಡಿಎಸ್​ ಕೈ ಜೋಡಿಸಿದ್ದೇ ತಡ ಮಂಡ್ಯದಲ್ಲಿ ದಳಪತಿಗಳು ದರ್ಬಾರ್​ ನಡೆಸೋಕೆ ಮುಂದಾಗಿದ್ದಾರೆ. ಮಂಡ್ಯವನ್ನು ತಮ್ಮ ತೆಕ್ಕೆಗೆ ಬರುವುದು ಖಚಿತವಾಗುತ್ತಿದ್ದಂತೆಯೇ ಜೆಡಿಎಸ್​ ನಾಯಕರು ಜಿಲ್ಲೆಯಲ್ಲಿ ಚುನಾವಣೆ ತಯಾರಿ ಆರಂಭಿಸಿದ್ದಾರೆ. ಆದ್ರೆ ಇತ್ತ ಸುಮಲತಾ ಅಂಬರೀಶ್​ ಕ್ಷೇತ್ರ ಬಿಟ್ಟು ಕೊಡುವ ಬಗ್ಗೆ ಯಾವ ಮನಸ್ಸು ಮಾಡುತ್ತಿಲ್ಲ. ಈ ಸಂಬಂಧ ಇಂದು ಬಿಜೆಪಿ ಹೈಕಮಾಂಡ್​ ನಾಯಕರನ್ನು ಭೇಟಿ ಮಾಡಿ ಮಹತ್ವದ ಚರ್ಚೆ ಮಾಡಿದ್ದಾರೆ.

ಬಿಜೆಪಿ ವರಿಷ್ಠರನ್ನ​ ಭೇಟಿಯಾದ ಸುಮಲತಾ ಅಂಬರೀಶ್, ಮಂಡ್ಯ ಕ್ಷೇತ್ರದ ಬಗ್ಗೆ ಮಹತ್ವದ ಚರ್ಚೆ
ಬಿಜೆಪಿ ವರಿಷ್ಠರನ್ನ​ ಭೇಟಿಯಾದ ಸುಮಲತಾ ಅಂಬರೀಶ್
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on:Feb 08, 2024 | 5:37 PM

ನವದೆಹಲಿ/ಮಂಡ್ಯ, (ಫೆಬ್ರವರಿ 08): ಲೋಕಸಭಾ ಚುನಾವಣೆ (Loksabha Elections 2024) ಸಮೀಪಿಸುತ್ತಿದ್ದು, ಕರ್ನಾಟಕದಲ್ಲಿ ರಾಜಕೀಯ (Karnataka Politics) ಚಟುವಟಿಕೆಗಳು ಬಿರುಸುಗೊಂಡಿವೆ. ಈ ಬಾರಿ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್​ ಹಾಗೂ ಬಿಜೆಪಿ ಸೀಟು ಹಂಚಿಕೆ ಸಂಬಂಧ ಚರ್ಚೆ ನಡೆಸಿವೆ. ಇದರ ಮಧ್ಯೆ ಈ ಬಾರಿಯೂ ಸಹ ಮಂಡ್ಯ(Mandya) ರಾಜಕಾರಣ ಮುನ್ನೆಲೆಗೆ ಬಂದಿದೆ. ಮಂಡ್ಯವನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳುವಂತೆ ಸುಮಲತಾ ಅಂಬರೀಶ್ (Sumalatha Ambareesh)​ ಬಿಗಿಪಟ್ಟು ಹಿಡಿದಿದ್ದಾರೆ. ಈ ಸಂಬಂಧ ಇಂದು(ಫೆ.08) ನವದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ(JP Nadda) ಹಾಗೂ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್​ ಸಂತೋಷ್ ಅವರನ್ನು ಭೇಟಿಯಾಗಿ ಮಹತ್ವದ ಚರ್ಚೆ ನಡೆಸಿದ್ದಾರೆ. ಈ ವೇಳೆ ಮಂಡ್ಯ ಕ್ಷೇತ್ರವನ್ನ ಉಳಿಸಿಕೊಂಡು ತಮಗೆ ಟಿಕೆಟ್ ನೀಡುವಂತೆ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ನಡ್ಡಾ, ಬಿಎಲ್​ ಸಂತೋಷ್​ ಜತೆ ಮಹತ್ವದ ಚರ್ಚೆ

ಮಂಡ್ಯ ಲೋಕಸಭಾ ಕ್ಷೇತ್ರದ ಬಗ್ಗೆ ನಡ್ಡಾ ಹಾಗೂ ಸುಮಾಲತಾ ಅಂಬರೀಶ್ ನಡುವೆ ಸುದೀರ್ಘವಾಗಿ ಮಾತುಕತೆ ನಡೆದಿದ್ದು, ಮಂಡ್ಯ ರಾಜಕೀಯ ಬಗ್ಗೆ ನಡ್ಡಾ ಗಮನಕ್ಕೆ ತಂದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಲ್ಲದೇ ಸುಮಲತಾ ಅಂಬರೀಶ್ ಅವರು ಮಂಡ್ಯ ಕ್ಷೇತ್ರದ ಬಿಜೆಪಿ ಟಿಕೆಟ್ ತಮಗೆ ನೀಡಬೇಕೆಂದು ಮನವಿ ಮಾಡಿದ್ದಾರೆ. ಈ ಮೂಲಕರ ಯಾವುದೇ ಕಾರಣಕ್ಕೂ ಮಂಡ್ಯವನ್ನು ಜೆಡಿಎಸ್​ಗೆ ಬಿಟ್ಟುಕೊಡಬೇಡಿ ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಸ್ಥಳೀಯ ಕಮಲ ಕಲಿಗಳ ವಿರೋಧ; ಬಿಜೆಪಿ ಮಂಡ್ಯ ಬಿಟ್ಟುಕೊಟ್ಟರೂ ಜೆಡಿಎಸ್​ ನಾಯಕರಿಗೆ ತಲೆಬಿಸಿ

ಬಳಿಕ ಸುಮಲತಾ ಅಂಬರೀಶ್ ಅವರು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್​ ಸಂತೋಷ್ ಅವರನ್ನು ಸಹ ಭೇಟಿ ಮಾಡಿ ಮಂಡ್ಯ ಲೋಕಸಭಾ ಕ್ಷೇತ್ರದ ಬಗ್ಗೆ ಮಾತುಕತೆ ನಡೆಸಿದ್ದು, ಯಾವುದೇ ಕಾರಣಕ್ಕೂ ಮಂಡ್ಯ ಕ್ಷೇತ್ರವನ್ನು ಜೆಡಿಎಸ್​ಗೆ ಬಿಟ್ಟುಕೊಡದಂತೆ ನಾಯಕರಿಗೆ ತಿಳಿಸಿ ಎಂದು ಮನವಿ ಮಾಡಿದ್ದಾರೆ.

ಮಂಡ್ಯ ರಾಜಕೀಯ ಮನವರಿಕೆ ಮಾಡಿಕೊಟ್ಟ ಸಂಸದೆ

ಈ ಬಾರಿ ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಬೇಕೆಂದು ಪಣತೊಟ್ಟಿರುವ ಸುಮಲತಾ ಅಂಬರೀಶ್ ಅವರು ಜೆಪಿ ನಡ್ಡಾ ಹಾಗೂ ಬಿಎಲ್ ಸಂತೋಷ್​ ಅವರನ್ನು ಪ್ರತ್ಯೇಕವಾಗಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಮಂಡ್ಯ ಜಿಲ್ಲಾ ರಾಜಕಾರಣ ಬಗ್ಗೆಯೂ ವರಿಷ್ಠರ ಗಮನಕ್ಕೆ ತಂದಿದ್ದಾರೆ. ಅಲ್ಲದೇ ಜಿಲ್ಲೆಯ ಬಿಜೆಪಿ ನಾಯಕರ ಅಭಿಪ್ರಾಯವನ್ನು ಸಹ ನಡ್ಡಾ ಮುಂದೆ ವಿವರಿಸಿದ್ದಾರೆ ಎಂದು ತಿಳದಿಬಂದಿದೆ. ಕ್ಷೇತ್ರವನ್ನು ಬಿಜೆಪಿ ಉಳಿಸಿಕೊಂಡರೆ ಎಷ್ಟು ಲಾಭ? ಜೆಡಿಎಸ್​ಗೆ ಬಿಟ್ಟು ಕೊಟ್ಟರೆ ಏನಾಗಲಿದೆ ಎನ್ನುವ ರಾಜಕೀಯ ಸ್ಥಿಗತಿಯನ್ನೂ ಸಹ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ ಎನ್ನಲಾಗಿದೆ.

ಇಬ್ಬರು ನಾಯಕರಿಗೂ ಧನ್ಯವಾದ ಹೇಳಿದ ಸುಮಲತಾ

ಇನ್ನು ಇಬ್ಬರು ನಾಯಕ ಭೇಟಿಯಾಗಿರುವ ಬಗ್ಗೆ ಸುಮಲತಾ ಅಂಬರೀಶ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಹಂಚಿಕೊಂಡಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಜೆ.ಪಿ ನಡ್ಡಾ ಅವರನ್ನು ಹಾಗೂ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಬಿ.ಎಲ್‌. ಸಂತೋಷ್‌ ಅವರನ್ನು ಅನೌಪಚಾರಿಕವಾಗಿ ಇಂದು ಭೇಟಿ ಭೇಟಿ ಮಾಡಿ ಮಂಡ್ಯ ಕ್ಷೇತ್ರ ಹಾಗೂ ಲೋಕಸಭಾ ಚುನಾವಣೆ ಕುರಿತಂತೆ ಚರ್ಚಿಸಲಾಯಿತು. ತಮ್ಮ ಅಮೂಲ್ಯ ಸಮಯವನ್ನು ನೀಡಿ, ನನ್ನ ಮಾತುಗಳನ್ನು ಆಲಿಸಿದ ನಡ್ಡಾ ಜಿ, ಸಂತೋಷ್ ಜಿ ಅವರಿಗೂ ಧನ್ಯವಾದಗಳು. ತಮ್ಮ ಸಹಕಾರದ ಮಾತುಗಳಿಗೆ ಮತ್ತೊಮ್ಮೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

ಸುಮಲಾತ ಅಂಬರೀಶ್ ಅವರ ಈ ಭೇಟಿ ಮಂಡ್ಯ ರಾಜಕಾರಣಕ್ಕೆ ಮತ್ತೊಂದು ಆಯಾಮ ತಂದುಕೊಟ್ಟಿದೆ. ಈಗಾಗಲೇ ಸಂಸದೆ ಸುಮಲತಾ, ಮಂಡ್ಯದಿಂದ ಕಣಕ್ಕಿಳಿಯೋ ತಮ್ಮ ನಿರ್ಧಾರಕ್ಕೆ ಅಚಲವಾದಂತೆ ಅಭಿಪ್ರಾಯ ಹೊರಹಾಕಿದ್ದಾರೆ. ಹೀಗಾಗಿ ಮಂಡ್ಯದಲ್ಲಿ ಯಾರು ಕಣಕ್ಕಿಳಿತಾರೆ ಎನ್ನುವ ಕುತೂಹಲ ಗರಿಗೆದರಿದೆ.

ಒಟ್ಟಿನಲ್ಲಿ ಈ ಬಾರಿಯೂ ಮಂಡ್ಯ ರಣ ರಣ ಎನ್ನುವುದರಲ್ಲಿ ಅನುಮಾನವೇ ಇಲ್ಲ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:25 pm, Thu, 8 February 24