ನಾನ್ ವೆಜ್ ತಿಂದು ಸುತ್ತೂರು ಮಠಕ್ಕೆ ಭೇಟಿ: ಬಿಜೆಪಿ ಆರೋಪಕ್ಕೆ ಸಿದ್ದರಾಮಯ್ಯ ಹೇಳಿದ್ದಿಷ್ಟು
ಮಾಂಸದ ಊಟ ಮಾಡಿ ಧರ್ಮಸ್ಥಳ ಕ್ಷೇತ್ರಕ್ಕೆ ಭೇಟಿ ನೀಡಿದ ಆಪಾದನೆಯಿಂದ ವಿವಾದಕ್ಕೆ ಒಳಗಾಗಿದ್ದ ಸಿಎಂ ಸಿದ್ದರಾಮಯ್ಯ ವಿರುದ್ಧ ಇದೀಗ ಅಂಥಹುದೇ ಒಂದು ವಿವಾದ ಸುತ್ತಿಕೊಂಡಿದೆ. ಅವರು ಮತ್ತು ಇತರ ಕಾಂಗ್ರೆಸ್ ನಾಯಕರು ಮಾಂಸಾಹಾರ ಸೇವನೆ ಮಾಡಿ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನಲ್ಲಿ ನಡೆದ ಸುತ್ತೂರು ಜಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ, ಸುತ್ತೂರು ಜಗದ್ಗುರುಗಳ ಗದ್ದುಗೆ ಭೇಟಿ ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಇನ್ನು ಇದಕ್ಕೆ ಸ್ವತಃ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ಅದು ಈ ಕೆಳಗಿನಂತಿದೆ.
ಬೆಂಗಳೂರು, (ಫೆಬ್ರವರಿ 08): ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah)ಅವರು ಮಾಂಸ ಸೇವಿಸಿ (Non veg) ಸುತ್ತೂರು ಮಠಕ್ಕೆ ( suttur Mutt)ಭೇಟಿ ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಇನ್ನು ಈ ಬಗ್ಗೆ ಮಾಧ್ಯಮಗಳು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದು, ಇಂತಹ ಸಿಲ್ಲಿ ಪ್ರಶ್ನೆಗಳನ್ನು ಕೇಳಬೇಡಿ. ಊಟ, ತಿಂಡಿ ತಿನ್ನೋದು, ಬಟ್ಟೆ ಹಾಕುವುದರ ಬಗ್ಗೆ ಮಾತಾಡಕ್ಕಾಗುತ್ತಾ? ಬಡವರ ಸಮಸ್ಯೆ ಹಾಗೂ ನಿರುದ್ಯೋಗ ಇದೆಲ್ಲ ಮಾತಾಡೋಣ. ಅದನ್ನು ಬಿಟ್ಟು ಮಾಂಸ ಸೇವಿಸಿ ಮಠಕ್ಕೆ ಭೇಟಿ ಹೀಗೆಲ್ಲಾ ಕೇಳಬೇಡಿ ಎಂದು ಗರಂ ಆದರು.
ಬಿಜೆಪಿ ಆರೋಪವೇನು?
ಬುಧವಾರ ದೆಹಲಿಯಲ್ಲಿ ನಡೆದ ನಮ್ಮ ತೆರಿಗೆ ನಮ್ಮ ಹಕ್ಕ ಕೇಂದ್ರದ ವಿರುದ್ಧ ರಾಜ್ಯ ಸರ್ಕಾರದ ಪ್ರತಿಭಟನೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಭಾಗಿಯಾಗಿದ್ದರು. ಜಂತರ್ ಮಂತರ್ನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟಿಸಿ ಬಳಿಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜು ಖರ್ಗೆ ಅವರ ನಿವಾಸದಲ್ಲಿ ಆಯೋಜಿಸಲಾಗಿದ್ದ ಭೋಜನಕೂಟದಲ್ಲಿ ಸಿದ್ದರಾಮಯ್ಯ ಭಾಗಿಯಾಗಿದ್ದರು. ಆದ್ರೆ, ಅವರು ಮಧ್ಯಾಹ್ನ ಮಾಂಸದ ಊಟ ಮಾಡಿ ಬಳಿಕ ನೇರವಾಗಿ ದೆಹಲಿಯಿಂದ ಮೈಸೂರಿಗೆ ಬಂದಿದ್ದಾರೆ. ಬಳಿಕ ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಸುತ್ತೂರು ಮಠಕ್ಕೆ ಭೇಟಿ ನೀಡಿ ಜಾತ್ರೆಯಲ್ಲಿ ಭಾಗವಹಿಸಿದ್ದಾರೆ. ಹೀಗೆ ಮಾಂಸದೂಟ ಮಾಡಿದ ಬೆನ್ನಿಗೇ ಸುತ್ತೂರು ಜಾತ್ರೆಯಲ್ಲಿ ಭಾಗಿಯಾಗಿದ್ದು, ಗದ್ದುಗೆ ಭೇಟಿ ಮಾಡಿದ್ದು ಎಷ್ಟು ಸರಿ ಎಂದು ಬಿಜೆಪಿ ಪ್ರಶ್ನೆ ಮಾಡಿದೆ.
ಇದನ್ನೂ ಓದಿ: ಬಿಜೆಪಿ-ಜೆಡಿಎಸ್ ಮೈತ್ರಿ ವಿರುದ್ಧ ಸಿಡಿದೆದ್ದ ನಾರಾಯಣಗೌಡ; ಸಿದ್ದರಾಮಯ್ಯ ಜೊತೆ ರಹಸ್ಯ ಮಾತುಕತೆ
ಈ ಹಿಂದೆ ಮಾಂಸದ ಊಟ ಮಾಡಿ ಧರ್ಮಸ್ಥಳ ಕ್ಷೇತ್ರಕ್ಕೆ ಭೇಟಿ ನೀಡಿದ ಆಪಾದನೆಯಿಂದ ವಿವಾದಕ್ಕೆ ಸಿಎಂ ಸಿದ್ದರಾಮಯ್ಯ ಸಿಲುಕಿದ್ದರು. ಇದು ರಾಜ್ಯ ರಾಜಕಾರಣದಲ್ಲಿ ಭಾರೀ ಪರ-ವಿರೋಧಕ್ಕೆ ಕಾರಣವಾಗಿತ್ತು. ಇದೀಗ ಅಂಥಹುದೇ ಒಂದು ವಿವಾದ ಸುತ್ತಿಕೊಂಡಿದೆ.
ಸಿದ್ದರಾಮಯ್ಯ ನಡೆ ಖಂಡಿಸಿದ ವಿಜಯೇಂದ್ರ
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಇದು ಬಹಳ ದುರದೃಷ್ಟಕರ. ಸಿದ್ದರಾಮಯ್ಯನವರು ರಾಜ್ಯದ ಮುಖ್ಯಮಂತ್ರಿಗಳು ಎಂಬುದನ್ನು ಎಲ್ಲೋ ಒಂದು ಕಡೆ ಮರೆಯುತ್ತಿದ್ದಾರೆ ಎಂಬುದು ನನ್ನ ಭಾವನೆ. ಇದು ಮೊದಲ ಬಾರಿ ಏನಲ್ಲ. ಹಲವು ಸಂದರ್ಭಗಳಲ್ಲಿ ಈ ರೀತಿ ಘಟನೆಗಳು ಪುನರಾವರ್ತನೆ ಆಗಿವೆ. ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ದೇವರ ಬಗ್ಗೆ ಎಷ್ಟು ಭಕ್ತಿ ಭಾವನೆ ಇಟ್ಟುಕೊಂಡಿದ್ದಾರೆ ಎಂಬುದು ಬೇರೆ ಮಾತು. ಆದರೆ, ರಾಜ್ಯದ ಮುಖ್ಯಮಂತ್ರಿಯಾಗಿ ಅವರ ನಡವಳಿಕೆಯನ್ನು ಸಮಾಜ, ಪ್ರತಿಯೊಬ್ಬರೂ ಗಮನಿಸುತ್ತಾರೆ. ಈ ಘಟನೆ ನಿಜವಾಗಿಯೂ ಖಂಡನೀಯ. ಅದರಲ್ಲೂ ಸುತ್ತೂರಿನ ಪವಿತ್ರ ಗದ್ದುಗೆಗೆ ಭೇಟಿ ಕೊಟ್ಟದ್ದು ನಿಜವಾಗಲೂ ಒಂದು ದುರಂತ ಎಂದರು.
ಯಾಕೆ ಪದೇಪದೆ ಇಂಥ ಘಟನೆ ನಡೆಯುತ್ತದೆ ಎಂದು ಅವರೇ ಉತ್ತರಿಸಬೇಕು. ಒಂದು ಕಡೆ ಭಾಷಣ ಮಾಡಿದ ಮುಖ್ಯಮಂತ್ರಿಯವರು ಅಣ್ಣ ಬಸವಣ್ಣನನ್ನು ನೆನಪು ಮಾಡಿಕೊಳ್ಳುತ್ತಾರೆ. ಅಂದರೆ, ಅವರ ನಡೆಗೂ ನುಡಿಗೂ ಅಜಗಜಾಂತರ ವ್ಯತ್ಯಾಸವಿದೆ. ಎಲ್ಲ ಭಕ್ತರ ಭಾವನೆಗೆ ಧಕ್ಕೆ ಬರುವಂತೆ ಮುಖ್ಯಮಂತ್ರಿಗಳು ನಡೆದುಕೊಂಡಿದ್ದಾರೆ ಎಂದು ಕಿಡಿಕಾರಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ