ಬಿಜೆಪಿ-ಜೆಡಿಎಸ್ ಮೈತ್ರಿ ವಿರುದ್ಧ ಸಿಡಿದೆದ್ದ ನಾರಾಯಣಗೌಡ; ಸಿದ್ದರಾಮಯ್ಯ ಜೊತೆ ರಹಸ್ಯ ಮಾತುಕತೆ
ಲೋಕಸಭೆ ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ಆದರೆ, ಮಂಡ್ಯದಲ್ಲಿ ಕಮಲ-ದಳ ನಾಯಕರನ್ನು ಒಮ್ಮತ ಮೂಡಿಬಂದಿಲ್ಲ. ಮೈತ್ರಿ ವಿರುದ್ಧ ಸಿಡಿದೆದ್ದಿರುವ ಬಿಜೆಪಿಯ ಕೆಸಿ ನಾರಾಯಣಗೌಡ ಕಾಂಗ್ರೆಸ್ ಕಡೆ ಮುಖ ತಿರುಗಿಸಿದಂತಿದೆ. ಇದಕ್ಕೆ ಕಾರಣ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ರಹಸ್ಯವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದರುವುದು.
ಮಂಡ್ಯ, ಫೆ.8: ಲೋಕಸಭೆ ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ಆದರೆ, ಮಂಡ್ಯದಲ್ಲಿ ಕಮಲ-ದಳ ನಾಯಕರನ್ನು ಒಮ್ಮತ ಮೂಡಿಬಂದಿಲ್ಲ. ಮಂಡ್ಯದಲ್ಲಿ ಪಕ್ಷ ಬಲವರ್ಧನೆಯಾಗುತ್ತಿರುವ ನಡುವೆ ಕ್ಷೇತ್ರವನ್ನು ಜೆಡಿಎಸ್ಗೆ (JDS) ಬಿಟ್ಟುಕೊಡದಂತೆ ಹಾಗೂ ಹಾಲಿ ಸಂಸದೆ ಸುಮಲತಾ ಅವರಿಗೇ ಟಿಕೆಟ್ ನೀಡುವಂತೆ ಪಟ್ಟುಹಿಡಿದಿರುವ ಬಿಜೆಪಿಯ ಕೆಸಿ ನಾರಾಯಣಗೌಡ (KC Narayanagowda) ಅವರು ಮೈತ್ರಿ ವಿರುದ್ಧ ಸಿಡಿದೆದ್ದಿದ್ದಾರೆ. ಸಿದ್ದರಾಮಯ್ಯ (Siddaramaiah) ಅವರನ್ನು ರಹಸ್ಯವಾಗಿ ಭೇಟಿಯಾಗಿ ಮಾತುಕತಡೆ ನಡೆಸಿರುವುದು ರಾಜ್ಯ ರಾಜಕೀಯದಲ್ಲಿ ಭಾರೀ ಕುತೂಹಲ ಕೆರಳಿಸಿದೆ.
ದಳ-ಕಮಲ ಮೈತ್ರಿ ವಿರುದ್ಧ ಸಿಡಿದೆದ್ದ ನಾರಾಯಣಗೌಡ ಕಮಲ ಬಿಟ್ಟು ಕೈ ಪಾಳಯ ಸೇರಲು ತಯಾರಿ ನಡೆಸುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ರಹಸ್ಯ ಮಾತುಕತೆ ನಡೆಸಿರುವ ಫೋಟೋ ಟಿವಿ9ಗೆ ಲಭ್ಯವಾಗಿದೆ.
ಮಂಡ್ಯದಲ್ಲಿ ಜೆಡಿಎಸ್ -ಬಿಜೆಪಿ ಮೈತ್ರಿ ವಿರುದ್ಧ ನಾರಾಯಣಗೌಡ ಅಸಮಾಧಾನ ವ್ಯಕ್ತಪಡಿಸಿದ್ದರು. ಮಂಡ್ಯ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಡದಂತೆ ಬಹಿರಂಗವಾಗಿಯೇ ಹೇಳಿಕೆ ನೀಡುತ್ತಾ ಬಂದಿದ್ದಾರೆ. ಆದರೆ, ಮಂಡ್ಯ ಬಿಜೆಪಿ ಕೈ ತಪ್ಪುವುದು ಬಹುತೇಕ ಖಚಿತವಾಗಿರುವ ಹಿನ್ನೆಲೆ ನಾರಾಯಣಗೌಡ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಳ್ಳಲು ಮುಂದಾಗಿರುವಂತೆ ಗೋಚರಿಸುತ್ತಿದೆ.
ಕಾಂಗ್ರೆಸ್ ಟಿಕೆಟ್ ಕೇಳಿದ ನಾರಾಯಣಗೌಡ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಮಾತುಕತೆ ನಡೆಸಿದ ನಾರಾಯಣಗೌಡ ಅವರು ಕಾಂಗ್ರೆಸ್ ಟಿಕೆಟ್ ಕೇಳಿದ್ದಾರೆ ಎನ್ನಲಾಗುತ್ತಿದೆ. ಆದರೆ ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡಲು ಆಗುವುದಿಲ್ಲ ಎಂದ ಸಿದ್ದರಾಮಯ್ಯ ಹೇಳಿದ್ದಾರೆ. ಅಲ್ಲದೆ, ಮೊದಲು ಕಾಂಗ್ರೆಸ್ ಪಕ್ಷ ಸೇರುವಂತೆ ಸಲಹೆ ನೀಡಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಮಂಡ್ಯದಲ್ಲಿ ಬಿಜೆಪಿ-ಜೆಡಿಎಸ್ ನಡುವೆ ಮೈತ್ರಿ ಟಿಕೆಟ್ ಫೈಟ್! ಅತ್ತ ಸೈಲೆಂಟಾಗಿ ಅಭ್ಯರ್ಥಿ ಫೈನಲ್ ಮಾಡಿದ ಕಾಂಗ್ರೆಸ್!?
ಕಳೆದ ವಿಧಾನಸಭಾ ಚುನಾವಣೆ ವೇಳೆಯೇ ಪಕ್ಷ ಸೇರುವಂತೆ ಹೇಳಿದ್ದೆ. ಅಂದೇ ಕಾಂಗ್ರೆಸ್ ಸೇರಿದ್ದಿದ್ದರೆ ಇಷ್ಟೊತ್ತಿಗೆ ನೀನು ಶಾಸಕ, ಸಚಿವನಾಗುತ್ತಿದ್ದೆ. ಸದ್ಯಕ್ಕೆ ಎಂಪಿ ಟಿಕೆಟ್ ಕೊಡಲು ಸಾಧ್ಯವಿಲ್ಲ. ಮೊದಲು ಪಕ್ಷ ಸೇರಿ ನಂತರ ಸ್ಥಾನಮಾನ ಒದಗಿಸುವುದಾಗಿ ಸಿದ್ದರಾಮಯ್ಯ ಅವರು ನಾರಾಯಣಗೌಡರಿಗೆ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಸಿಎಂ ಮಾತಿಗೆ ಒಪ್ಪಿದ್ರಾ ಮಾಜಿ ಸಚಿವ ನಾರಾಯಣಗೌಡ?
ಕೆಲವೇ ದಿನದಲ್ಲಿ ಕಾಂಗ್ರೆಸ್ ಸೇರಲಿದ್ದಾರೆ ಎಂದು ಆಪ್ತ ವಲಯಗಳಿಂದ ಮಾಹಿತಿ ತಿಳಿದುಬಂದಿದೆ. ಕಾಂಗ್ರೆಸ್ ಸೇರ್ಪಡೆ ಆಗುವುದಾದರೇ ಮಾಧ್ಯಮಗಳಿಗೆ ತಿಳಿಸಿಯೇ ಆಗುತ್ತೇನೆ ಎಂದು ನಾರಾಯಣಗೌಡ ಅವರು ಹೇಳಿದ್ದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:17 am, Thu, 8 February 24