ಮಂಡ್ಯದಲ್ಲಿ ಬಿಜೆಪಿ-ಜೆಡಿಎಸ್ ನಡುವೆ ಮೈತ್ರಿ ಟಿಕೆಟ್ ಫೈಟ್! ಅತ್ತ ಸೈಲೆಂಟಾಗಿ ಅಭ್ಯರ್ಥಿ ಫೈನಲ್ ಮಾಡಿದ ಕಾಂಗ್ರೆಸ್!?
ಮಂಡ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ನಾಯಕರು ಕ್ಷೇತ್ರ ಹಂಚಿಕೆ ವಿಚಾರದಲ್ಲಿ ಗುದ್ದಾಟ ಮಾಡ್ತಾ ಇದ್ದಾರೆ, ಇನ್ನೊಂದೆಡೆ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದು, ಘೋಷಣೆಯಷ್ಟೇ ಬಾಕಿಯಿದೆ. ಯಾರ ಯಾರ ರಾಜಕೀಯ ಸ್ಟಾರ್ ಹೇಗೆ ಇರುತ್ತದೆ ಅನ್ನೋದನ್ನು ಕಾದು ನೋಡಬೇಕಿದೆ.
ಸಕ್ಕರೆನಾಡು ಮಂಡ್ಯದಲ್ಲಿ ಲೋಕಸಭಾ ಚುನಾವಣೆಯ (Mandya Lok Sabha elections) ಅಖಾಡ ಗರಿಗೆದರುತ್ತಾ ಇದೆ. ಎಂಎಲ್‌ಎ ಚುನಾವಣೆ ರೀತಿ ಲೋಕಸಭಾ ಚುನಾವಣೆಯಲ್ಲೂ ಪ್ರಚಂಡ ಗೆಲುವು ದಾಖಲಿಸಬೇಕೆಂದು ಕಾಂಗ್ರೆಸ್ ನಾಯಕರು ಸ್ಟ್ರಾಟಜಿ ಮಾಡಿದ್ದಾರೆ. ಆರಂಭಿಕ ಹಂತವಾಗಿ ಇದೀಗ ಮಂಡ್ಯ ಕೈ ನಾಯಕರು ಅಭ್ಯರ್ಥಿಯನ್ನು ಸಹ ಆಯ್ಕೆ ಮಾಡಿದ್ದಾರೆ. ಹಾಗಿದ್ರೆ ಯಾರು ಮಂಡ್ಯ ಕ್ಷೇತ್ರದ ಆ ಅಭ್ಯರ್ಥಿ ಅಂತೀರಾ? ಈ ಸ್ಟೋರಿ ನೋಡಿ. ಹೌದು ಲೋಕಸಭಾ ಚುನಾವಣೆಗೆ ಇನ್ನೇನೂ ಕೆಲವು ತಿಂಗಳು ಬಾಕಿ ಇದೆ. ಈ ನಡುವೆ ಮಂಡ್ಯ ಲೋಕಸಭಾ ಚುನಾವಣೆ ಕಾವು ಈಗಲೇ ರಂಗೇರುತ್ತಿದೆ. ಇನ್ನು ಲೋಕಸಭಾ ಚುನಾವಣಾ ದೃಷ್ಟಿಯಿಂದ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಾಗಿದೆ ( BJP JDS alliance). ಇದೀಗ ಮೈತ್ರಿ ಟಿಕೆಟ್ ಗಾಗಿ ಬಿಜೆಪಿ ಹಾಗೂ ಜೆಡಿಎಸ್ ನಡುವೆ ಫೈಟ್ ಏರ್ಪಟ್ಟಿದೆ. ಇನ್ನು ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ ಅಭೂತಪೂರ್ವ ಗೆಲುವು ಸಾಧಿಸಿದೆ. ಇದೀಗ ಸಚಿವ ಚಲುವರಾಯಸ್ವಾಮಿ ನೇತೃತ್ವದ ಮಂಡ್ಯ ಕೈ ನಾಯಕರು ಶತಾಯಗತಾಯ ಲೋಕಸಭಾ ಚುನಾವಣೆಯನ್ನು ಗೆಲ್ಲಲೇಬೆಂಬ ಲೆಕ್ಕಾಚಾರ ಹಾಕಿಕೊಂಡಿದ್ದಾರೆ.
ಒಂದು ಕಡೆ ಮೈತ್ರಿ ಹಾಕಿಗಿರುವ ಬಿಜೆಪಿ-ಜೆಡಿಎಸ್‌ನಲ್ಲಿ ಕ್ಷೇತ್ರ ಹಂಚಿಕೆ ವಿಚಾರವಾಗಿ ಮಂಡ್ಯ ಜಿಲ್ಲಾ ನಾಯಕರ ನಡುವೆ ಫೈಟ್ ಏರ್ಪಟ್ಟಿದೆ. ಇತ್ತ ಇದನ್ನೇ ಅಸ್ತ್ರ ಮಾಡಿಕೊಂಡಿರುವ ಕಾಂಗ್ರೆಸ್ ನಾಯಕರು ತೆರೆಮರೆಯಲ್ಲಿ ಲೋಕಸಭಾ ಚುನಾವಣೆಗೆ ಭರ್ಜರಿ ಸಿದ್ಧತೆ ಮಾಡ್ತಾ ಇದ್ದಾರೆ. ಇದರ ಆರಂಭಿಕವಾಗಿ ಅಭ್ಯರ್ಥಿ ಆಯ್ಕೆಯನ್ನು ಕೈ ನಾಯಕರು ಹುಡುಕಿದ್ದಾರೆ. ಮಂಡ್ಯ ಲೋಕಸಭಾ ಕ್ಷೇತ್ರ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಟಾರ್ ಚಂದ್ರು @ ವೆಂಕಟರಮಣೇಗೌಡ ಅವರನ್ನು ಆಯ್ಕೆ ಮಾಡಿದ್ದು, ಬಹುತೇಕ ಅವರೇ ಕ್ಯಾಂಡಿಡೇಟ್ ಆಗಲಿದ್ದು, ಘೋಷಣೆ ಒಂದೇ ಬಾಕಿ ಎಂದು ಕಾಂಗ್ರೆಸ್ ಮೂಲಗಳು ಹೇಳ್ತಾ ಇವೆ.
ಇದರ ಬೆನ್ನಲ್ಲೇ ಇದೀಗ ಕಾಂಗ್ರೆಸ್ ನಾಯಕರು ಈಗಿನಿಂದಲೇ ಸ್ಟಾರ್ ಚಂದ್ರು ಅವರನ್ನು ಮಂಡ್ಯದಲ್ಲಿ ಪರಿಚಯ ಮಾಡಲು ಮುಂದಾಗಿದ್ದಾರೆ. ಮಂಡ್ಯದಲ್ಲಿ ಕಾಂಗ್ರೆಸ್ ನಾಯಕರು ಇರುವ ಕಾರ್ಯಕ್ರಮಗಳಲ್ಲಿ ಸ್ಟಾರ್ ಚಂದ್ರು (Star Chandru) ಕಾಣಿಸಿಕೊಳ್ಳುತ್ತಿದ್ದು, ಅವರಿಗೂ ಹಾರ-ತುರಾಯಿಗಳ ಸುರಿ ಮಳೆಯೇ ಬೀಳ್ತಾ ಇದೆ.
ಇದನ್ನೂ ಓದಿ: 2023ರ ವಿಧಾನಸಭಾ ಚುನಾವಣೆ ವೇಳೆ ಮತದಾರರಿಗೆ ಆಮಿಷ ಆರೋಪ: ಹೈಕೋರ್ಟ್ ಮೆಟ್ಟಿಲೇರಿದ ನಿಖಿಲ್ ಕುಮಾರಸ್ವಾಮಿ
ಮೂಲತಃ ನಾಗಮಂಗಲ ತಾಲೂಕಿನವರಾಗಿರುವ ಸ್ಟಾರ್ ಚಂದ್ರು, ಸ್ಟಾರ್ ಗ್ರೂಪ್‌ನ ಮಾಲೀಕರಾಗಿದ್ದಾರೆ. ಚಂದ್ರು ಅವರ ಅಣ್ಣ ಬೇರಾರು ಅಲ್ಲ ಗೌರಿಬಿದನೂರು ಕ್ಷೇತ್ರದ ಪಕ್ಷೇತರ ಶಾಸಕ ಪುಟ್ಟಸ್ವಾಮಿಗೌಡ ಅವರು. ಪುಟ್ಟಸ್ವಾಮಿಗೌಡ ಅವರ ಅಳಿಯ ಶರತ್ ಬಚ್ಚೇಗೌಡ ಆಗಿದ್ದಾರೆ. ಈ ಮೂಲಕ ಸ್ಟಾರ್ ಚಂದ್ರು ಅವರಿಗೆ ರಾಜಕೀಯ ಹಿನ್ನೆಲೆಯೂ ಸಹ ಇದೆ. ರಾಜಕೀಯ ಹಿನ್ನೆಲೆ ಹಾಗೂ ಯಶಸ್ವಿ ಉದ್ಯಮಿಯಾಗಿರುವ ಸ್ಟಾರ್ ಚಂದ್ರು ಚುನಾವಣೆಯ ಎಲ್ಲಾ ತಂತ್ರಗಳಿಗೂ ಸೂಕ್ತರು ಎಂದು ಸಚಿವ ಚಲುವರಾಯಸ್ವಾಮಿ ನೇತೃತ್ವದ ಕಾಂಗ್ರೆಸ್ ನಾಯಕರು ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದಾರೆ ಎಂಬ ಮಾತುಗಳು ದಟ್ಟವಾಗಿ ಕೇಳಿ ಬರ್ತಾ ಇವೆ.
ಒಟ್ಟಾರೆ ಮಂಡ್ಯದಲ್ಲಿ ಬಿಜೆಪಿ-ಜೆಡಿಎಸ್ ನಾಯಕರು ಕ್ಷೇತ್ರ ಹಂಚಿಕೆ ವಿಚಾರದಲ್ಲಿ ಗುದ್ದಾಟ ಮಾಡ್ತಾ ಇದ್ರೆ, ಇನ್ನೊಂದೆಡೆ ಕಾಂಗ್ರೆಸ್ ತನ್ನ ಅಭ್ಯರ್ಥಿಯಾಗಿ ಸ್ಟಾರ್ ಚಂದ್ರು ಅವರನ್ನು ಆಯ್ಕೆ ಮಾಡಿದ್ದು, ಘೋಷಣೆ ಒಂದೇ ಬಾಕಿ. ಸ್ಟಾರ್ ಚಂದ್ರು ಅವರ ರಾಜಕೀಯ ಸ್ಟಾರ್ ಹೇಗೆ ಇರುತ್ತೆ ಎನ್ನೋದನ್ನು ಕಾದು ನೋಡಬೇಕಿದೆ.
ಮಂಡ್ಯ ಜಿಲ್ಲೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ