AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಲಿ ಬಿಜೆಪಿ ಸಂಸದನಿಗೆ ಶಾಕ್: ಕೋಲಾರ ಲೋಕಸಭಾ ಕ್ಷೇತ್ರ ಜೆಡಿಎಸ್​ ಪಾಲಾಯ್ತಾ?

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗು ಜೆಡಿಎಸ್‌ ಹೊಂದಾಣಿಕೆ ರಾಜಕೀಯ ಮಾಡುವ ನಿರ್ಧಾರ ಕೈಗೊಂಡಿವೆ. ಇದೀಗ ಲೋಕಸಭಾ ಸ್ಥಾನಗಳನ್ನು ಹಂಚಿಕೊಳ್ಳುವ ಸಲುವಾಗಿ ಚರ್ಚೆಗಳು ಶುರುವಾಗಿವೆ. ಮುಂದಿನ ವಾರ ದೆಹಲಿಗೆ ಭೇಟಿ ನೀಡಲಿರುವ ಕುಮಾರಸ್ವಾಮಿ (Kumaraswamy) ಬಿಜೆಪಿ ನಾಯಕರ ಜೊತೆಗೆ ಚರ್ಚೆ ಮಾಡಿ ಸೀಟು ಹಂಚಿಕೆ ಬಗ್ಗೆ ನಿರ್ಧಾರ ಮಾಡಲಿದ್ದಾರೆ. ಈ ನಡುವೆ ಹಾಲಿ ಸಂಸದ ಇರುವ ಕೋಲಾರ ಲೋಕಸಭಾ ಕ್ಷೇತ್ರವನ್ನು ಜೆಡಿಎಸ್​ಗೆ ಬಿಟ್ಟು ಕೊಡಲು ಬಿಜೆಪಿ ತೀರ್ಮಾನಿಸಿದೆ ಎಂದು ತಿಳಿದುಬಂದಿದೆ. ಇದು ಖಚಿತವಾಗಿರುವುದರಿಂದ ಕುಮಾರಸ್ವಾಮಿ ಜಿಲ್ಲಾ ಜೆಡಿಎಸ್​ ಮುಖಂಡರ ಜತೆ ಮಹತ್ವದ ಸಭೆ ಮಾಡಿದ್ದಾರೆ. ಅಲ್ಲದೇ ಕೋಲಾರ ಜೆಡಿಎಸ್​ಗೆ ಸಿಗುವುದು ಖಚಿತ ಎಂದು ಜೆಡಿಎಸ್ ಶಾಸಕರೊಬ್ಬರು ಬಹಿರಂಗಪಡಿಸಿದ್ದಾರೆ.

ಹಾಲಿ ಬಿಜೆಪಿ ಸಂಸದನಿಗೆ ಶಾಕ್: ಕೋಲಾರ ಲೋಕಸಭಾ ಕ್ಷೇತ್ರ ಜೆಡಿಎಸ್​ ಪಾಲಾಯ್ತಾ?
TV9 Web
| Edited By: |

Updated on: Feb 06, 2024 | 3:20 PM

Share

ಕೋಲಾರ, (ಫೆಬ್ರವರಿ 06): ಲೋಕಸಭಾ ಚುನಾವಣೆ (Lok Sabha Elections 2024) ಸಮೀಪಿಸುತ್ತಿದ್ದಂತೆಯೇ ರಾಜಕೀಯ ಪಕ್ಷಗಳು ಅಭ್ಯರ್ಥಿ ಆಯ್ಕೆ ಸೇರಿದಂತೆ ಗೆಲುವಿನ ತಂತ್ರಗಾರಿಕೆಯನ್ನು ಶುರು ಮಾಡಿವೆ. ಈ ಬಾರಿ ಬಿಜೆಪಿ – ಜೆಡಿಎಸ್‌ ಮೈತ್ರಿ (BJP JDS Alliance) ಮಾಡಿಕೊಂಡಿರುವುದರಿಂದ ರಾಜ್ಯದಲ್ಲಿ ಚಿತ್ರಣ ಬದಲಾಗಿದ್ದು, ಜೆಡಿಎಸ್​ಗೆ ಯಾವ ಕ್ಷೇತ್ರ ಬಿಟ್ಟು ಕೊಡಲಿದೆ ಎನ್ನುವುದು ತೀವ್ರ ಕುತೂಹಲ ಮೂಡಿಸಿದೆ. ಇದರ ಮಧ್ಯೆ ಹಾಲಿ ಸಂಸದರನ್ನು ಹೊಂದಿರುವ ಕೋಲಾರ ಲೋಕಸಭಾ ಕ್ಷೇತ್ರವನ್ನು ಈ ಬಾರಿ ಜೆಡಿಎಸ್​​ಗೆ ಬಿಟ್ಟು ಕೊಡಲು ಬಿಜೆಪಿ ತೀರ್ಮಾನಿಸಿದೆ. ಈ ಬಗ್ಗೆ ಸ್ವತಃ ಜೆಡಿಎಸ್ ಶಾಸಕ ವೆಂಕಟಶಿವಾರೆಡ್ಡಿ ಖಚಿತ ಪಡಿಸಿದ್ದಾರೆ. ಇನ್ನು ಹಾಲಿ ಸಂಸದ ಮುನಿಸ್ವಾಮಿ ಅವರಿಗೆ ಈ ಬಾರಿ ಟಿಕೆಟ್‌ ಸಿಗಲ್ಲ ಎನ್ನುವ ಚರ್ಚೆಗಳ ನಡುವೆ ಜೆಡಿಎಸ್​ ರಾಜ್ಯಾಧ್ಯಕ್ಷ ಎಚ್​ಡಿ ಕುಮಾರಸ್ವಾಮಿ ಮಹತ್ವದ ಸಭೆ ಮಾಡಿದ್ದಾರೆ.

ಕೋಲಾರ ಜೆಡಿಎಸ್​ ಮುಖಂಡರ ಸಭೆ ನಡೆಸಿದ ಎಚ್​ಡಿಕೆ

ಬಿಡದಿಯ ತೋಟದ ಮನೆಯಲ್ಲಿ ನಡೆದ ಮಹತ್ವದ ಸಭೆಯಲ್ಲಿ ಕೋಲಾರ ಲೋಕಸಭಾ ಕ್ಷೇತ್ರದ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದುಕೊಂಡಿದ್ದು, ಇದೇ ವೇಳೆ ಪಕ್ಷ ಸಂಘಟನೆ, ಸಿದ್ದತೆ, ಆಕಾಂಕ್ಷಿಗಳ ಬಗ್ಗೆ ಚರ್ಚೆ ಮಾಡಲಾಗಿದೆ. ಜಿಲ್ಲೆಯಲ್ಲಿ ಮೂವರು ಶಾಸಕರು ಇರುವ ಕಾರಣ ಜೆಡಿಎಸ್‌ನಿಂದ ಅಭ್ಯರ್ಥಿ ಕಣಕ್ಕಿಳಿಸುವ ಬಗ್ಗೆ ಸಲಹೆ ನೀಡಿದ್ದಾರೆ. ದಲಿತ ನಾಯಕರೊಬ್ಬರನ್ನು ಗೆಲ್ಲಿಸುವ ಬಗ್ಗೆ kಉಮಾರಸ್ವಾಮಿಗೆ ಸಲಹೆ ನೀಡಿದ್ದಾರೆ. ನಾಯಕರ ಸಲಹೆ ಪರಿಗಣಿಸಿದ ಎಚ್​ಡಿಕೆ ವರಿಷ್ಠರ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ರಾಷ್ಟ್ರ ರಾಜಕಾರಣಕ್ಕೆ ಜಯದೇವ ಮಾಜಿ ನಿರ್ದೇಶಕ ಡಾ ಮಂಜುನಾಥ್ ಕರೆತರಲು ಜೆಡಿಎಸ್ ಕಸರತ್ತು

ಕೋಲಾರದಲ್ಲಿ ಜೆಡಿಎಸ್‌ ಪಕ್ಷಕ್ಕೆ ಉತ್ತಮ ವಾತಾವರಣವಿದೆ. ಈಗ ಎನ್‌ಡಿಎ ಮೈತ್ರಿಕೂಟಕ್ಕೆ ಜೆಡಿಎಸ್​ ಸೇರ್ಪಡೆ ಆಗಿರುವ ಕಾರಣದಿಂದ ಮತ್ತಷ್ಟು ಅನುಕೂಲವಾಗಿದೆ. ಕೋಲಾರ ಕ್ಷೇತ್ರದ ಎಲ್ಲಾ ಸ್ಥಿತಿಗತಿಗಳ ಬಗ್ಗೆ ನಾನು ಕ್ಷೇತ್ರ ಹಂಚಿಕೆ ವೇಳೆ ಚರ್ಚೆ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ರಾಜ್ಯ ಬಿಜೆಪಿ ನಾಯಕರ ಜೊತೆ ಚರ್ಚೆ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ. ಈ ವೇಳೆ ಸ್ಥಳೀಯ ನಾಯಕರಿಗೆ ಮೈತ್ರಿ ಧರ್ಮ ಪಾಲಿಸುವಂತೆ ಕುಮಾರಸ್ವಾಮಿ ಸೂಚಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಪ್ರತಿಯೊಬ್ಬರು ಬದ್ಧತೆ, ನಿಷ್ಠೆಯಿಂದ ಕೆಲಸ ಮಾಡಬೇಕು. ಜೊತೆಗೆ ಕ್ಷೇತ್ರದಲ್ಲಿ ಆಗಬೇಕಿರುವ ಪಕ್ಷ ಸಂಘಟನೆಗೆ ಕೆಲಸ ಮಾಡಬೇಕು ಎಂದು ಕುಮಾರಸ್ವಾಮಿ, ಕೋಲಾರ ಜಿಲ್ಲಾ ಜೆಡಿಎಸ್​ ಮುಖಂಡರಿಗೆ ಸಲಹೆ ಸೂಚನೆಗಳನ್ನು ನೀಡಿದ್ದಾರೆ.

ಕೋಲಾರ ಕ್ಷೇತ್ರ ಜೆಡಿಎಸ್​ಗೆ ಎಂದ ಶಾಸಕ

ಇನ್ನು ಈ ಬಗ್ಗೆ ಕೋಲಾರದ ಶ್ರೀನಿವಾಸಪುರ ಕ್ಷೇತ್ರದ ಜೆಡಿಎಸ್ ಶಾಸಕ ವೆಂಕಟಶಿವಾರೆಡ್ಡಿ ಅವರು ಕೋಲಾರ ಲೋಕಸಭಾ ಕ್ಷೇತ್ರ ಜೆಡಿಎಸ್​ಗೆ ಸಿಗುವುದು ಖಚಿತವಾಗಿದೆ ಎಂದು ಬಹಿರಂಗಪಡಿಸಿದ್ದಾರೆ. ಅಲ್ಲದೇ ಜೆಡಿಎಸ್​ನಿಂದ ಮೂವರು ಅಭ್ಯರ್ಥಿಗಳ ಶಾರ್ಟ್​ ಲಿಸ್ಟ್ ಮಾಡಲಾಗಿದೆ ಎಂದು ಹೇಳಿದ್ದಾರೆ.

ಮೂವರ ಹೆಸರು ಅಂತಿಮ

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯೊಂದಿಗೆ ಹೊಂದಾಣಿಕೆಯಲ್ಲಿ ಕೋಲಾರ ಕ್ಷೇತ್ರ ಜೆಡಿಎಸ್ ಪಾಲಿಗೆ ಸಿಗುವುದು ಬಹುತೇಕ ಖಚಿತ. ಕೋಲಾರ ಕ್ಷೇತ್ರಕ್ಕೆ ಜೆಡಿಎಸ್ ನಿಂದ ಮೂವರ ಹೆಸರು ಅಂತಿಮಗೊಳಿಸಲಾಗಿದೆ. ಮುಳಬಾಗಿಲು ಶಾಸಕ ಸಂಮೃದ್ದಿ ಮಂಜುನಾಥ್, ದೇವನಹಳ್ಳಿ ಮಾಜಿ ಶಾಸಕ ನಿಸರ್ಗ ನಾರಾಯಣ ಸ್ವಾಮಿ, ಹಾಗೂ‌ ವಿಧಾನಸಭಾ ಚುನಾವಣೆಯಲ್ಲಿ ಬಂಗಾರಪೇಟೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿದ್ದ ಮಲ್ಲೇಶ್ ಬಾಬು, ಹೆಸರು ಅಂತಿಮ‌ ಪಟ್ಟಿಯಲ್ಲಿದೆ. ಈ ಮೂವರ ಹೆಸರನ್ನು ಸರ್ವೆ ಮಾಡಿದ ನಂತರ ಒಬ್ಬರು ಅಂತಿಮ ಅಭ್ಯರ್ಥಿ ಆಗಲಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಮುಳಬಾಗಿಲು, ಶ್ರೀನಿವಾಸಪುರ ಮತ್ತು ಶಿಡ್ಲಘಟ್ಟ ಕ್ಷೇತ್ರದ ಜೆಡಿಎಸ್ ಶಾಸಕರಿದ್ದೇವೆ. ಜೆಡಿಎಸ್ ಸ್ಪರ್ಧೆ ಮಾಡಿದರೆ ಗೆಲ್ಲುವುದರಲ್ಲಿ ಸಂಶಯ ಇಲ್ಲ, ಕಳೆದ ಭಾರಿ ಕಾಂಗ್ರೆಸ್ ನೊಂದಿಗಿನ ಹೊಂದಾಣಿಕೆ ಬೇರೆ ಸಂದರ್ಭ, ಈಗ ಬೇರೆ ಸಂದರ್ಭ. ದೇಶದಲ್ಲಿ ಹಲವು ವರ್ಷಗಳಿಂದ ರಾಜಕಾರಣ ನೋಡಿಕೊಂಡು ಬಂದಿದ್ದೇವೆ. ಯಾವ ಸಿದ್ದಾಂತಗಳನ್ನು ಯಾರು ಪಾಲನೆ ಮಾಡುತಿದ್ದಾರೆ. ಯಾವ ಪಕ್ಷದವರಿಗೂ ಯಾವದೇ ಸಿದ್ದಾಂತದ ಮೇಲೆ ನಂಬಿಕೆ ಇಲ್ಲ. ಎಲ್ಲರೂ ಸಂದರ್ಭ ಕ್ಕೆ ಅನುಗುಣವಾಗಿ ಹೋಗುತ್ತಾರೆ. ಈ ಭಾರಿ ದೇಶದಲ್ಲಿ ಬಿಜೆಪಿ ಪರ ಅಲೆ ಇದೆ. 400 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುತ್ತದೆ. ನಮ್ಮ ಪಕ್ಷಕ್ಕೂ ನಾಲ್ಕೈದು ಕ್ಷೇತ್ರಗಳನ್ನು‌ ಗೆಲ್ಲುವ ಶಕ್ತಿಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇನ್ನು ಇದೇ ವೇಳೆ ಕೋಲಾರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಸ್ಪೀಕರ್ ರಮೇಶ್ ಕುಮಾರ್​ ಸ್ಪರ್ಧೆ ಮಾಡಿದರೆ ಹೇಗೆ ಎನ್ನುವುದಕ್ಕೆ ಪ್ರತಿಕ್ರಿಯಿಸಿದ ವೆಂಕಟಶಿವಾರೆಡ್ಡಿ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ರೆ ಸಂತೋಷ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದು ಸ್ವಲ್ಪ ಬೇಸರದಲ್ಲಿ ಇರುತ್ತಾರೆ. ಎಲ್ಲರಿಗೂ ಹಾಗೆ ಆಗುತ್ತದೆ. ಮತ್ತೆ ಹುರುಪು ಬರುತ್ತದೆ. ರಮೇಶ್ ಕುಮಾರ್ ನಡುವಿನ ಜಿದ್ದಾಜಿದ್ದಿ ರಾಜಕಾರಣ ಸಾಕಾಗಿದೆ. ಕ್ಷೇತ್ರದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡೋದಕ್ಕೆ ಮಾತ್ರ ಮನಸ್ಸಿದೆ ಎಂದರು.

ಒಟ್ಟಿನಲ್ಲಿ ಜೆಡಿಎಸ್​ ಶಾಸಕ ಈ ಹೇಳಿಕೆ ಒಂದು ವೇಳೆ ನಿಜವಾದರೆ ಹಾಲಿ ಬಿಜೆಪಿ ಸಂಸದ ಮುನಿಸ್ವಾಮಿಗೆ ಟಿಕೆಟ್ ಇಲ್ಲದಂತಾಗಲಿದೆ.