ಕೆರಗೋಡು ಹನುಮ ಧ್ವಜ ತೆರವು ಖಂಡಿಸಿ ನಾಳೆ ಮಂಡ್ಯ ಬಂದ್; ಇಂದು ಬಿಜೆಪಿ ನಿಲುವು ಪ್ರಕಟ, ಅಂತರ ಕಾಯ್ದುಕೊಂಡ ಜೆಡಿಎಸ್

ಕೆರಗೋಡು ಹನುಮ ಧ್ವಜ ತೆರವು ವಿರೋಧಿಸಿ ಫೆ.9ಕ್ಕೆ ಮಂಡ್ಯ ಬಂದ್​ಗೆ ಭಜರಂಗದಳ ಕರೆಕೊಟ್ಟಿದ್ದನ್ನು ವಿರೋಧಿಸಿ ಸಮಾನ ಮನಸ್ಕರ ವೇದಿಕೆ ಬಂದ್​ಗೆ ಕರೆಕೊಟ್ಟಿತ್ತು. ಆದರೆ, ಜಿಲ್ಲಾಡಳಿತದ ಸಭೆಯ ನಂತರ ಫೆ.7 ರಂದು ಉದ್ದೇಶಿಸಲಾಗಿದ್ದ ಬಂದ್​ ಅನ್ನು ಸಮಾನ ಮನಸ್ಕರ ವೇದಿಕೆ ತಾತ್ಕಾಲಿಕವಾಗಿ ಹಿಂಪಡೆದಿದೆ. ಆದರೆ, ಜಿಲ್ಲಾಡಳಿತದ ಮನವಿಗೆ ಕಿವಿಗೊಡದ ಹಿಂದೂಪರ ಸಂಘಟನೆಗಳು ನಾಳೆ ಮಂಡ್ಯ ಬಂದ್​ ನಡೆಸಲು ಮುಂದಾಗಿದ್ದು, ಬಿಜೆಪಿ ಇಂದು ನಿಲುವು ಪ್ರಕಟಿಸಲಿದೆ.

ಕೆರಗೋಡು ಹನುಮ ಧ್ವಜ ತೆರವು ಖಂಡಿಸಿ ನಾಳೆ ಮಂಡ್ಯ ಬಂದ್; ಇಂದು ಬಿಜೆಪಿ ನಿಲುವು ಪ್ರಕಟ, ಅಂತರ ಕಾಯ್ದುಕೊಂಡ ಜೆಡಿಎಸ್
ಕೆರಗೋಡು ಹನುಮ ಧ್ವಜ ತೆರವು ಖಂಡಿಸಿ ನಾಳೆ ಮಂಡ್ಯ ಬಂದ್; ಇಂದು ಬಿಜೆಪಿ ನಿಲುವು ಪ್ರಕಟ, ಅಂತರ ಕಾಯ್ದುಕೊಂಡ ಜೆಡಿಎಸ್ Image Credit source: FILE PHOTO
Follow us
| Updated By: Rakesh Nayak Manchi

Updated on: Feb 08, 2024 | 8:31 AM

ಮಂಡ್ಯ, ಫೆ.8: ತಾಲೂಕಿನ ಕೆರಗೋಡು (Keragodu) ಹನುಮ ಧ್ವಜ ತೆರವು ಖಂಡಿಸಿ ನಾಳೆ ಬಜರಂಗದಳ ಸೇರಿದಂತೆ ವಿವಿಧ ಹಿಂದೂ ಪರ ಸಂಘಟನೆಗಳು ಮಂಡ್ಯ (Mandya) ನಗರ, ಕೆರಗೋಡು ಗ್ರಾಮ ಬಂದ್​ಗೆ ಕರೆ ಕೊಟ್ಟಿದೆ. ಬಜರಂಗದಳ (Bajrang Dal), ವಿಶ್ವ ಹಿಂದೂ ಪರಿಷತ್, ಶ್ರೀರಾಮಭಜನಾ ಮಂಡಳಿ ನೀಡಿದ ಬಂದ್​​ಗೆ ಕರೆಗೆ ಇಂದು ನಡೆಯುವ ಸಭೆಯ ನಂತರ ಬಿಜೆಪಿ (BJP) ಬೆಂಬಲ ಸೂಚಿಸುವ ಸಾಧ್ಯತೆ ಇದೆ.

ಜಿಲ್ಲಾಡಳಿತ ಬಂದ್ ಕೈಬಿಡುವಂತೆ ಮನವಿ ಮಾಡಿದರೂ ಖ್ಯಾರೆ ಎನ್ನದ ಹಿಂದೂಪರ ಸಂಘಟನೆಗಳು ನಾಳೆ ಬಂದ್ ನಡೆಸಲು ಮುಂದಾಗಿವೆ. ಈ ಹಿನ್ನೆಲೆ, ಇಂದು ಮಧ್ಯಾಹ್ನ ಜಿಲ್ಲಾ ಬಿಜೆಪಿ ಸಭೆ ಕರೆದಿದ್ದು, ಚರ್ಚೆ ನಡೆಸಿ ತೀರ್ಮಾನ ಪ್ರಕಟಿಸುವ ಸಾಧ್ಯತೆ ಇದೆ. ಆದರೆ, ಪ್ರತಿಭಟನೆಯಲ್ಲಿ ಕೈಜೋಡಿಸಿದ್ದ ಮೈತ್ರಿ ಪಕ್ಷ ಜೆಡಿಎಸ್ ಮಂಡ್ಯ ಬಂದ್​ನಿಂದ ಅಂತರ ಕಾಯ್ದುಕೊಂಡಿದೆ.

ವಿವಾದ ಪ್ರಾರಂಭದಲ್ಲಿ ಬಿಜೆಪಿ, ಹಿಂದೂಪರ ಸಂಘಟನೆಗಳಿಗೆ ಜೆಡಿಎಸ್ ಸಾಥ್ ನೀಡಿತ್ತು. ಜೊತೆಗೆ ದಳ ನಾಯಕರು ಪಾದಯಾತ್ರೆ ಮಾಡಿದ್ದರು. ಆನಂತರ ಹೋರಾಟದಿಂದ ಜೆಡಿಎಸ್ ಹಿಂದೆ ಸರಿದಿದೆ. ಅದಾಗ್ಯೂ, ಬಿಜೆಪಿ ಜೆಡಿಎಸ್ ಬಿಟ್ಟು ಮನೆ ಮನೆಗೆ ಹನುಮ ಧ್ವಜ ಕಟ್ಟುವ ಅಭಿಯಾನ ನಡೆಸುತ್ತಿದೆ.

ಇದನ್ನೂ ಓದಿ: ಸ್ಥಳೀಯ ಕಮಲ ಕಲಿಗಳ ವಿರೋಧ; ಬಿಜೆಪಿ ಮಂಡ್ಯ ಬಿಟ್ಟುಕೊಟ್ಟರೂ ಜೆಡಿಎಸ್​ ನಾಯಕರಿಗೆ ತಲೆಬಿಸಿ

ಫೆಬ್ರವರಿ 9 ರ ಬಂದ್ ಬೆಂಬಲದ ಬಗ್ಗೆ ಜೆಡಿಎಸ್ ಅಭಿಪ್ರಾಯ ತಿಳಿಸಿಲ್ಲ. ಮಾಜಿ ಪ್ರಧಾನಿಯೂ ಆಗಿರುವ ಜೆಡಿಎಸ್ ವರಿಷ್ಠ ಹೆಚ್​ಡಿ ದೇವೇಗೌಡ ಅವರು “ಪ್ರತಿಭಟನೆಯಲ್ಲಿ ಕೇಸರಿ ಶಾಲು ಹಾಕಬಾರದಿತ್ತು, ಹಸಿರು ಶಾಲು ಹಾಕಬೇಕಿತ್ತು” ಎಂಬ ಹೇಳಿಕೆಯಿಂದಲೇ ಕುಮಾರಸ್ವಾಮಿ ಮತ್ತು ಇತರೆ ನಾಯಕರು ಹಿಂದೇ ಸರಿದಿದ್ದಾರೆಯೇ ಎನ್ನುವ ಪ್ರಶ್ನೆ ಉದ್ಭವಿಸಿದೆ.

ಬಂದ್ ಹಿಂಪಡೆದ ಸಮಾನ ಮನಸ್ಕರ ವೇದಿಕೆ

ಕೆರಗೋಡು ಹನುಮ ಧ್ವಜ ತೆರವು ವಿರೋಧಿಸಿ ಫೆ.9ಕ್ಕೆ ಭಜರಂಗದಳ ಬಂದ್​ಗೆ ಕೊಟ್ಟಿದ್ದ ಕರೆ ವಿರೋಧಿಸಿ ಫೆ.7 ಕ್ಕೆ ಸಮಾನ ಮನಸ್ಕರ ವೇದಿಕೆ ಬಂದ್​ಗೆ ಕರೆ ಕೊಟ್ಟಿತ್ತು. ಸಮಾನ ಮನಸ್ಕರ ವೇದಿಕೆಗೆ ದಲಿತ ಪರ ಸಂಘಟನೆ, ಪ್ರಗತಿಪರರು, ಸಿಐಟಿಯು ಸೇರಿ ಹಲವು ಸಂಘಟನೆಗಳು ಬೆಂಬಲ ನೀಡಿದ್ದವು. ಆದರೆ ಇದೀಗ ಜಿಲ್ಲಾಡಳಿತ ಮನವಿ ಮೇರೆಗೆ ಸಮಾನ ಮನಸ್ಕರ ವೇದಿಕೆ ತಾತ್ಕಾಲಿಕವಾಗಿ ಬಂದ್ ಹಿಂಪಡೆದಿದೆ.​

ಜಿಲ್ಲಾಡಳಿತ ಮನವಿ ಮೇರೆಗೆ ತಾತ್ಕಾಲಿಕವಾಗಿ ಬಂದ್​ ಹಿಂಪಡೆದಿರುವ ಸಮಾನ ಮನಸ್ಕರ ವೇದಿಕೆ, ಫೆಬ್ರವರಿ 9ಕ್ಕೆ ಬಂದ್​ಗೆ ಅವಕಾಶ ನೀಡದಂತೆ ಮನವಿ ಮಾಡಿದೆ. ಒಂದು ವೇಳೆ ಬಂದ್ ಮಾಡಿದರೆ ದನ್ನ ವಿರೋಧಿಸಿ ಮತ್ತೆ ಬಂದ್​ಗೆ ಕರೆಕೊಡುತ್ತೇವೆ ಎಂದು ಎಚ್ಚರಿಕೆ ನೀಡಿದೆ.

ಏನಿದು ಪ್ರಕರಣ?

ಮಂಡ್ಯ ತಾಲೂಕಿನ ಕೆರೆಗೋಡು ಗ್ರಾಮದಲ್ಲಿ ಜನವರಿ 28ರಂದು ಅರ್ಜುನ ಧ್ವಜಸ್ತಂಭದ ಮೇಲೆ ಹಾರಿಸಿದ್ದ ಹನುಮ ಧ್ವಜವನ್ನ ಇಳಿಸಿ, ತ್ರಿವರ್ಣ ಧ್ವಜವನ್ನ ಜಿಲ್ಲಾಡಳಿತ ಹಾರಿಸಿತ್ತು. ಇದನ್ನ ವಿರೋಧಿಸಿ ಬಿಜೆಪಿ, ಜೆಡಿಎಸ್ ಹಾಗೂ ಹಿಂದೂಪರ ಸಂಘಟನೆ ಕಾರ್ಯಕರ್ತರು ಬೃಹತ್ ಹೋರಾಟವನ್ನ ನಡೆಸಿದ್ದರು. ಆದಾದ ಬಳಿಕ ಮಂಡ್ಯ ಬಿಜೆಪಿ ಜಿಲ್ಲಾಧ್ಯಕ್ಷ ಡಾ ಇಂದ್ರೇಶ್ ನೇತೃತ್ವದಲ್ಲಿ ಹನುಮಧ್ವಜ ಅಭಿಯಾನ ಅನ್ನ ಕೆರೆಗೋಡು ಗ್ರಾಮದಿಂದಲೇ ಆರಂಭಿಸಿ, ಕೆರಗೋಡು ಗ್ರಾಮದ ನೂರಾರು ಮನೆಗಳ ಮೇಲೆ ಹನುಮಧ್ವಜವನ್ನ ಹಾರಿಸಲಾಗಿತ್ತು.

ಇನ್ನು ಈ ವಿವಾದವನ್ನ ಜೀವಂತವಾಗಿ ಇಟ್ಟು ಮತದಾರರನ್ನ ಭಾವನಾತ್ಮಕವಾಗಿ ಸೆಳೆಯಲು ಮುಂದಾಗಿರುವ ಬಿಜೆಪಿ ಮಂಡ್ಯ ನಗರದಲ್ಲಿ ಅಭಿಯಾನವನ್ನ ಮುಂದುವರೆಸಿದೆ. ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಮಂಜುಳ ನೇತೃತ್ವದಲ್ಲಿ ಮಂಡ್ಯ ನಗರದಲ್ಲಿ ಹಲವು ಅಭಿಯಾನವನ್ನ ಮುಂದುವರೆಸಿ, ಮನೆಗಳ ಮೇಲೆ ಹನುಮಧ್ವಜವನ್ನ ಹಾರಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ