ಆಹ್ವಾನ ಪತ್ರಿಕೆಯಲ್ಲಿ ಪ್ರಿಯಾಂಕ್ ಖರ್ಗೆ ಹೆಸರು ಮಿಸ್ಸಿಂಗ್: ಇಬ್ಬರು ಅಧಿಕಾರಿಗಳು ಸಸ್ಪೆಂಡ್, ಸಿಎಂ ಮೊರೆ ಹೋದ ಬಿಜೆಪಿ ಶಾಸಕ

ಮಂಗಳೂರಿನಲ್ಲಿ ಶಿಷ್ಟಾಚಾರ ಉಲ್ಲಂಘಿಸಿದ ಆರೋಪದ ಮೇಲೆ ಗ್ರಾಮೀಣಾಭಿವೃದ್ಧಿ ಇಲಾಖೆಯ ಇಬ್ಬರು ಅಧಿಕಾರಿಗಳ ಅಮಾನತು ಮಾಡಲಾಗಿದ್ದು, ಇದೀಗ ಅನಾಮತು ಹಿಂಪಡೆಯಬೇಕೆಂದುಬಿಜೆಪಿ ಶಾಸಕ ಸಿಎಂಗೆ ಒತ್ತಾಯಿಸಿದ್ದಾರೆ.

ಆಹ್ವಾನ ಪತ್ರಿಕೆಯಲ್ಲಿ ಪ್ರಿಯಾಂಕ್ ಖರ್ಗೆ ಹೆಸರು ಮಿಸ್ಸಿಂಗ್: ಇಬ್ಬರು ಅಧಿಕಾರಿಗಳು ಸಸ್ಪೆಂಡ್, ಸಿಎಂ ಮೊರೆ ಹೋದ ಬಿಜೆಪಿ ಶಾಸಕ

Updated on: Aug 02, 2023 | 2:00 PM

ಮಂಗಳೂರು, (ಆಗಸ್ಟ್, 02): ಗ್ರಾಮ ಪಂಚಾಯಿತಿ ಕಟ್ಟಡದ ಉದ್ಘಾಟನಾ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೆಸರು ಹಾಕದೇ ಶಿಷ್ಟಾಚಾರ ಉಲ್ಲಂಘಿಸಿದ ಆರೋಪದ ಮೇಲೆ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಮೂಡುಬಿದಿರೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ದಯಾವತಿ ಹಾಗೂ ಇರುವೈಲ್ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಕಂಠಪ್ಪ ಅವರನ್ನು ಅಮಾನತುಗೊಳಿಸಲಾಗಿದೆ. ಇನ್ನು ಇದಕ್ಕೆ ಮೂಡುಬಿದಿರೆ ಬಿಜೆಪಿ ಶಾಸಕ ಉಮಾನಾಥ ಕೋಟ್ಯಾನ್ ಆಕ್ರೋಶಗೊಂಡಿದ್ದು, ಅಮಾನತು ಆದೇಶವನ್ನು ಹಿಂಪಡೆಯುವಂತೆ ಸಿಎಂ ಸಿದ್ದರಾಮಯ್ಯಗೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಮನೆ ಸಂಪೂರ್ಣ ಹಾನಿಯಾದವರಿಗೆ ಕೂಡಲೇ 5 ಲಕ್ಷ ರೂ. ನೀಡಿ: ದ.ಕ. ಜಿಲ್ಲಾಧಿಕಾರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

ನಿನ್ನೆ(ಆಗಸ್ಟ್ 01) ಮಂಗಳೂರಿಗೆ ಬಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಪ್ರಗತಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಶಾಸಕ ಉಮಾನಾಥ ಕೋಟ್ಯಾನ್ ಅವರು ಅಧಿಕಾರಿಗಳನ್ನು ವರ್ಗಾವಣೆ ಮಾಡಿರುವ ಬಗ್ಗೆ ಮುಖ್ಯಮಂತ್ರಿ ಗಮನಕ್ಕೆ ತಂದಿದ್ದು, ಅಧಿಕಾರಿಗಳ ಅಮಾನತು ವಾಪಸ್​ ಪಡೆಯಬೇಕು. ಹಾಗೇ ದಕ್ಷಿಣ ಜಿಲ್ಲಾಧಿಕಾರಿ ಮುಲ್ಲೈ ಮಹಿಲನ್‌ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಇದಕ್ಕೆ ಸಿದ್ದರಾಮಯ್ಯನವರು ಪ್ರತಿಕ್ರಿಯಿಸಿ, ಈ ಬಗ್ಗೆ ತನಿಖೆ ನಡೆಸುವುದಾಗಿ ಶಾಸಕರಿಗೆ ಭರವಸೆ ನೀಡಿದ್ದಾರೆ.

ಆಗಿದ್ದೇನು?

ಗ್ರಾಮ ಪಂಚಾಯಿತಿ ಕಟ್ಟಡದ ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನಿಸದೆ ಶಿಷ್ಟಾಚಾರ ಉಲ್ಲಂಘಿಸಿದ ಆರೋಪದ ಮೇಲೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಇಬ್ಬರು ಅಧಿಕಾರಿಗಳನ್ನು ನಿನ್ನೆ(ಆಗಸ್ಟ್ 01) ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಮಾನತು ಮಾಡಿ ಆದೇಶ ಹೊರಡಿಸಿದ್ದರು. ದಕ್ಷಿಣ ಕನ್ನಡ ಜಿಲ್ಲೆ ಮೂಡುಬಿದಿರೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ದಯಾವತಿ ಹಾಗೂ ಇರುವೈಲ್ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಕಂಠಪ್ಪ ಅವರನ್ನು ಅಮಾನತುಗೊಳಿಸಲಾಗಿತ್ತು.

ಇರುವೈಲ್ ಪಂಚಾಯಿತಿಯ ನೂತನ ಕಟ್ಟಡ ಸೋಮವಾರ ಉದ್ಘಾಟನೆಯಾಗಬೇಕಿತ್ತು. ಆದ್ರೆ, ಆಹ್ವಾನ ಪತ್ರಿಕೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೆಸರನ್ನು ಹಾಕದೇ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ. ಹೀಗಾಗಿ ಈ ಇಬ್ಬರನ್ನೂ ಅಮಾನತು ಮಾಡಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆನಂದ್.ಕೆ ಆದೇಶದಲ್ಲಿ ತಿಳಿಸಿದ್ದರು.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Ramesh B Jawalagera

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More
Follow Us