Karnataka Assembly Election: ಒಕ್ಕಲಿಗರ ಮತ ಬೇಟೆಗಾಗಿ ಮಾರ್ಚ್​ 3ರಂದು ದೇವನಹಳ್ಳಿಗೆ ಅಮಿತ್​ ಶಾ ಭೇಟಿ: ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗಿ

|

Updated on: Feb 28, 2023 | 12:50 PM

ಮಾರ್ಚ್​ 3ರಂದು ದೇವನಹಳ್ಳಿಗೆ ಅಮಿತ್​ ಶಾ ಆಗಮಿಸಿ, ದೇವನಹಳ್ಳಿಯಲ್ಲಿ ನಡೆಯುವ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ. ಬಳಿಕ ದೇವನಹಳ್ಳಿಯ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯುವ ಸಮಾವೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ.

Karnataka Assembly Election: ಒಕ್ಕಲಿಗರ ಮತ ಬೇಟೆಗಾಗಿ ಮಾರ್ಚ್​ 3ರಂದು ದೇವನಹಳ್ಳಿಗೆ ಅಮಿತ್​ ಶಾ ಭೇಟಿ: ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗಿ
ಕೇಂದ್ರ ಸಚಿವ ಅಮಿತ್​ ಶಾ
Follow us on

ದೇವನಹಳ್ಳಿ: ಕರ್ನಾಟಕ ವಿಧಾನಸಭೆ ಚುನಾವಣೆಯ (Karnataka Assembly Election) ಹೊಸ್ತಿಲಲ್ಲಿದೆ. ಪ್ರಜಾಪ್ರಭುತ್ವದ ಹಬ್ಬ ಮತದಾನಕ್ಕೆ (Voting) ದಿನ ಎಣಿಕೆ ಪ್ರಾರಂಭವಾಗಿವೆ. ವಿಧಾನಸಭೆ ಮತಸಂಗ್ರಾಮಕ್ಕೆ ಪ್ರಮುಖ ಮೂರು ರಾಜಕೀಯ ಪಕ್ಷಗಳು ಸಿದ್ದವಾಗುತ್ತಿವೆ. ಭಾರತೀಯ ಜನತಾ ಪಾರ್ಟಿಯ (BJP) ರಾಜ್ಯನಾಯಕರು ಕೇಂದ್ರ ನಾಯಕರತ್ತ ಮುಖ ಮಾಡಿದ್ದು, ಪಕ್ಷದ ಹೈ ನಾಯಕರು ರಾಜ್ಯಕ್ಕೆ ದಂಡಯಾತ್ರೆ ಮಾಡುತ್ತಿದ್ದಾರೆ. ಮತಗಳ ಕ್ರೋಢೀಕರಣಕ್ಕೆ ನಾನಾ ತಂತ್ರಗಳನ್ನು ಹೆಣಯುತ್ತಿದ್ದಾರೆ. ಇದಕ್ಕಾಗಿ ಬಿಜೆಪಿ ರಾಷ್ಟ್ರೀಯ ಅಧಕ್ಷ ಜೆಪಿ ನಡ್ಡಾ (JP Nadda), ಕೇಂದ್ರ ಗೃಹ ಸಚಿವ ಅಮಿತ್​ ಶಾ (Amit Shah) , ಪ್ರಧಾನಿ ನರೇಂದ್ರ ಮೋದಿ (Narendra Modi) ಎಂಬ ಮತ ಬುಟ್ಟಿಗಳು ರಾಜ್ಯಕ್ಕೆ ಆಗಮಿಸುತ್ತಿದ್ದು, ರಾಜ್ಯದ ಮತಗಳನ್ನು ತುಂಬಿಸಿಕೊಳ್ಳಲು ಹೊಸ ಹೊಸ ಜಾಲವನ್ನು ಎಣೆಯುತ್ತಿದ್ದಾರೆ. ಚುನಾವಣಾ ಚಾಣಕ್ಯ ಅಮಿತ್​ ಶಾ ಕೆಲ ದಿನಗಳ ಹಿಂದೆ ಕರಾವಳಿ ಭಾಗಕ್ಕೆ ಭೇಟಿ ನೀಡಿ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ಮಾಡಿದ್ದರು. ಈಗ ಮತ್ತೆ ಮಾರ್ಚ್​ 3ರಂದು ದೇವನಹಳ್ಳಿಗೆ ಅಮಿತ್​ ಶಾ ಆಗಮಿಸಲಿದ್ದಾರೆ.

ಹಳೆ ಮೈಸೂರು ಭಾಗದಲ್ಲಿ ಈ ಬಾರಿ ಶತಾಯಗತಾಯ ಕಮಲವನ್ನು ಅರಳಿಸಲು ಬಿಜೆಪಿ ಪ್ಲಾನ್​ ರೂಪಿಸಿದ್ದು, ಒಕ್ಕಲಿಗರ ಮತವನ್ನು ತನ್ನ ತೆಕ್ಕೆಯಲ್ಲಿ ಹಾಕಿಕೊಳ್ಳಲು ನಾನಾ ತಂತ್ರಗಳನ್ನು ಮಾಡುತ್ತಿದೆ. ಮಾರ್ಚ್​ 3 ರಂದು ದೇವನಹಳ್ಳಿಯಲ್ಲಿ ನಡೆಯುವ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ. ಬಳಿಕ ದೇವನಹಳ್ಳಿಯ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯುವ ಸಮಾವೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಇದಕ್ಕೂ ಮುಂಚೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಆವತಿ ಗ್ರಾಮಕ್ಕೆ ಭೇಟಿ ನೀಡಿ, ರಣಭೈರೇಗೌಡರ ಪುತ್ಥಳಿಗೆ ಮಾಲಾರ್ಪಣೆ ಮಾಡಲಿದ್ದಾರೆ. ನಂತರ ಚನ್ನಕೇಶವಸ್ವಾಮಿ ದೇಗುಲಕ್ಕೂ ಭೇಟಿ ನೀಡಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನಾರಾಯಣಸ್ವಾಮಿ ಹೇಳಿದ್ದಾರೆ.

ಬೆಂಗಳೂರು ನಗರದಲ್ಲಿ ಪೊಲೀಸ್ ಅಧಿಕಾರಿಗಳ ಸರಣಿ ಸಭೆ

ಮಾರ್ಚ್ 3ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಂಗಳೂರು ಭೇಟಿ ಮತ್ತು ಚುನಾವಣಾ ತಯಾರಿ ಸಂಬಂಧ ಬೆಂಗಳೂರು ನಗರದಲ್ಲಿ ಪೊಲೀಸ್ ಅಧಿಕಾರಿಗಳು ಸರಣಿ ಸಭೆ ಮಾಡಿದ್ದಾರೆ. ಅಮಿತ್​ ಶಾ ನಗರ ಭೇಟಿ ವೇಳೆ ಕಮಿಷನರ್ ಕಚೇರಿಯ ಕಮಾಂಡ್ ಸೆಂಟರ್​ಗೆ ಭೇಟಿ ನೀಡಿ, ಸೇಫ್ ಸಿಟಿ ಪ್ರಾಜೆಕ್ಟ್​ಗೆ ಚಾಲನೆ ನೀಡಲಿದ್ದಾರೆ. ಈ ಹಿನ್ನೆಲೆ  ಡಿಜಿ  ಮತ್ತು ಐಜಿಪಿ ನೇತೃತ್ವದಲ್ಲಿ ನಡೆಯುತ್ತಿರುವ ಸಭೆ ನಡೆದಿದೆ. ಸಭೆಯಲ್ಲಿ ಡಿಜಿ ಐಜಿಪಿ,ನಗರ ಪೊಲೀಸ್ ಆಯುಕ್ತರು ಹಿರಿಯ ಪೊಲೀಸ್ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು.

ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ವಿಶೇಷತೆ

ರಾಜ್ಯ ಮತ್ತು ಕೇಂದ್ರ ಡಬಲ್​ ಇಂಜಿನ್​ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸುವ ದೃಷ್ಟಿಯಿಂದ ಬಿಜೆಪಿ 224 ವಿಧಾನಸಭಾ ಕ್ಷೇತ್ರಗಳಲ್ಲಿ ವಿಜಯ ಸಂಕಲ್ಪಯಾತ್ರೆ ಮಾಡಲಿದೆ. ಮಾರ್ಚ್ 1 ರಿಂದ ಪ್ರಾರಂಭವಾಗುವ ಯಾತ್ರೆ ನಾಲ್ಕು ಕೋಟಿ ಜನರನ್ನು ತಲುಪಲು ನಾಲ್ಕು ದಿಕ್ಕುಗಳಿಂದ ಪ್ರಾರಂಭಿಸಲು ಪಕ್ಷ ಸಿದ್ದವಾಗಿದೆ.

ಈ ಯಾತ್ರೆಯಲ್ಲಿ ರಾಜ್ಯ ಮತ್ತು ಕೇಂದ್ರದ ಹಿರಿಯ ನಾಯಕರ ನೇತೃತ್ವದಲ್ಲಿ ತಲಾ ನಾಲ್ಕು ತಂಡಗಳು 150 ಕ್ಕೂ ಹೆಚ್ಚು ರೋಡ್ ಶೋ 8,000 ಕಿಮೀ. ದೂರ ಕ್ರಮಿಸಲಿದೆ. ಮಾರ್ಚ್ 20 ರಂದು ಯಾತ್ರೆ ಅಂತ್ಯವಾಗಲಿದೆ. ಮಾರ್ಚ್ 25 ರಂದು ದಾವಣಗೆರೆಯಲ್ಲಿ ನಡೆಯಲಿರುವ ಮೆಗಾ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗಿಯಾಗಲಿದ್ದಾರೆ. ಜೊತೆಗೆ 10 ಲಕ್ಷಕ್ಕೂ ಹೆಚ್ಚು ಜನರು ಸೇರಲಿದ್ದಾರೆ.

30 ಅಡಿ ಎತ್ತರ ಮತ್ತು 8 ಅಡಿ ಅಗಲದ ನಾಲ್ಕು ಬಸ್‌ಗಳನ್ನು ಯಾತ್ರೆಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಎಸಿ ಬಸ್‌ಗಳ ಮೇಲ್ಭಾಗದಲ್ಲಿ ನಾಯಕರು ನಿಂತು ಭಾಷಣ ಮಾಡುವ ಸ್ಥಳವೂ ಇರುತ್ತದೆ. ಮೊಬೈಲ್ ಚಾರ್ಜ್ ಮಾಡಲು ಸ್ಥಳ, ಹೋಮ್ ಥಿಯೇಟರ್, ಆಡಿಯೊ ಸಿಸ್ಟಮ್ಸ್, ಕ್ಯಾಮೆರಾಗಳು, ಎಲ್ಇಡಿ ಡಿಸ್ಪ್ಲೇ ಮತ್ತು ವೈಫೈ ಸೌಲಭ್ಯ ಮತ್ತು ಪವರ್ ಬ್ಯಾಕ್ ಆಪ್ ಆಗಿ ಜನರೇಟರ್ ಇರುತ್ತದೆ.

ಈ ಯಾತ್ರೆಯಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ನೀರಾವರಿ ಸಚಿವ ಗೋವಿಂದ ಕಾರಜೋಳ ಮತ್ತು ಕಂದಾಯ ಸಚಿವ ಆರ್.ಅಶೋಕ ಚಾಮರಾಜನಗರ, ಬೆಳಗಾವಿ, ಬೀದರ್ ಮತ್ತು ಬೆಂಗಳೂರಿನಿಂದ ಪ್ರತಿ ತಂಡವನ್ನು ಮುನ್ನಡೆಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 11:33 am, Tue, 28 February 23