ಮಳೆ ಹಾನಿ ಸಂಬಂಧ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್: ಸಿಎಂ ಸಿದ್ಧರಾಮಯ್ಯ ಹೇಳಿದ್ದಿಷ್ಟು

| Updated By: ಗಂಗಾಧರ​ ಬ. ಸಾಬೋಜಿ

Updated on: Jul 26, 2023 | 7:51 PM

ಮಳೆ‌ ಹಾನಿ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ಮಾಡಲಾಯಿತು. ಬಳಿಕ ಮಾತನಾಡಿದ ಸಿಎಂ, 21 ಜಿಲ್ಲೆಗಳಲ್ಲಿ ವಾಡಿಕೆ ಮಳೆ ಆಗಿದೆ, 6 ಜಿಲ್ಲೆಗಳಲ್ಲಿ ಮಳೆ ಕೊರತೆ ಉಂಟಾಗಿದೆ ಎಂದು ಹೇಳಿದರು.

ಬೆಂಗಳೂರು, ಜುಲೈ 26: 21 ಜಿಲ್ಲೆಗಳಲ್ಲಿ ವಾಡಿಕೆ ಮಳೆ ಆಗಿದ್ದು, 6 ಜಿಲ್ಲೆಗಳಲ್ಲಿ ಮಳೆ ಕೊರತೆ ಉಂಟಾಗಿದೆ. ಜೂ. 1ರಿಂದ ಈವರೆಗೆ 38 ಜನ ಮೃತಪಟ್ಟಿದ್ದು, 38 ಜನ ಗಾಯಗೊಂಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ (Cm Siddaramaiah) ತಿಳಿಸಿದರು. ಮಳೆ ಹಾನಿ ಸಂಬಂಧ ಎಲ್ಲಾ ಜಿಲ್ಲಾಧಿಕಾರಿಗಳ ಜತೆ ವಿಡಿಯೋ ಕಾನ್ಫ್‌ರೆನ್ಸ್ ಸಭೆ ನಂತರ ಗೃಹಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮಳೆಯಿಂದ 57 ಮನೆ ಸಂಪೂರ್ಣವಾಗಿ ಹಾನಿಯಾಗಿದ್ದು, 2,682 ಮನೆಗಳು ಭಾಗಶಃ ಹಾನಿ ಆಗಿವೆ. 105 ಜಾನುವಾರು ಸಾವನ್ನಪ್ಪಿವೆ ಎಂದರು.

ಒಟ್ಟು 541.39 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಜಲಾವೃತಗೊಂಡಿದ್ದು, 185 ಹೆಕ್ಟೇರ್‌ ಪ್ರದೇಶದಲ್ಲಿ ಕೃಷಿ ಬೆಳೆ, 356 ಹೆಕ್ಟೇರ್‌ ಪ್ರದೇಶದಲ್ಲಿ ತೋಟಗಾರಿಕೆ ಬೆಳೆ ಹಾನಿಯಾಗಿದೆ.

ರಾಜ್ಯದಲ್ಲಿ ಸುರಿದ ಮಳೆಯಿಂದ ಒಟ್ಟು 2109 ಕಿ.ಮೀ. ರಸ್ತೆ ಹಾನಿಯಾಗಿದೆ. ಅದರಲ್ಲಿ 407 ಕಿ.ಮೀ. ರಾಜ್ಯ ಹೆದ್ದಾರಿ, 425 ಕಿ.ಮೀ. ಜಿಲ್ಲಾ ಹೆದ್ದಾರಿ ಹಾಗೂ 1277 ಕಿ.ಮೀ. ಗ್ರಾಮೀಣ ರಸ್ತೆಗಳು ರಸ್ತೆ ಹಾನಿಯಾಗಿದೆ. 189 ಸೇತುವೆಗಳು, 889 ಶಾಲಾ ಕೊಠಡಿಗಳು, 8 ಪ್ರಾಥಮಿಕ ಕೇಂದ್ರ, 269 ಅಂಗನವಾಡಿ ಕೇಂದ್ರಗಳು ಹಾನಿಯಾಗಿರುವುದು ವರದಿಯಾಗಿದೆ ಎಂದು ಹೇಳಿದರು.

ಇದನ್ನೂ ಓದಿ: ಕೇಂದ್ರ ಸಚಿವ ನಿತಿನ್ ಗಡ್ಕರಿ ಭೇಟಿಯಾದ ಸಚಿವ ಸತೀಶ್ ಜಾರಕಿಹೊಳಿ: ನೆನೆಗುದಿಗೆ ಬಿದ್ದಿರುವ ಕಾಮಗಾರಿಗಳ ಬಗ್ಗೆ ಚರ್ಚೆ

11,995 ವಿದ್ಯುತ್‌ ಕಂಬ, 894 ಟ್ರಾನ್ಸ್‌ಫಾರ್ಮರ್‌ಗಳು, 215 ಕಿ.ಮೀ. ಉದ್ದದ ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ. ಪ್ರಸ್ತುತ 2 ಪರಿಹಾರ ಶಿಬಿರಗಳಲ್ಲಿ 50 ಜನರಿಗೆ ಆಶ್ರಯ ನೀಡಲಾಗಿದೆ. ರಾಜ್ಯದಲ್ಲಿ ಜೂನ್‌ ತಿಂಗಳಿನಲ್ಲಿ ಮಳೆ ಕೊರತೆಯಾದ್ದರಿಂದ ಮುಂಗಾರು ಹಂಗಾಮಿನಲ್ಲಿ ಈವರೆಗೆ ಶೇ.53 ರಷ್ಟು ಬಿತ್ತನೆಯಾಗಿದೆ ಎಂದರು.

 ಅನಾಹುತ ತಡೆಯುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ

ರಾಜ್ಯದಲ್ಲಿ ವಾಡಿಕೆಯಂತೆ ಶೇಕಡಾ 83ರಷ್ಟು ಬಿತ್ತನೆಯಾಗಿದೆ. 156 ಲಕ್ಷ ಟನ್ ಮೇವು ದಾಸ್ತಾನಿದ್ದು 29 ವಾರಗಳಿಗೆ ಸಾಕಾಗುತ್ತದೆ. ಹಿಂದಿನ ವರ್ಷಗಳ ಅನುಭವ, ಅನಾಹುತಗಳಿಂದ ಬಹಳಷ್ಟು ಸಾವು ಹಾಗೂ ಅಪಘಾತ ಪ್ರಕರಣಗಳನ್ನು ತಡೆಯಲು ಸಾಧ್ಯವಿದೆ. ಸಮನ್ವಯಿಂದ ಅನಾಹುತ ತಡೆಯುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದ್ದಾರೆ.

ನಾಳೆ, ನಾಡಿದ್ದು ಹೆಚ್ಚು ಮಳೆ

ಜುಲೈ ತಿಂಗಳಲ್ಲಿ ವಾಡಿಕೆ ಮಳೆಗಿಂತ ಶೇ.37ರಷ್ಟು ಹೆಚ್ಚು ಮಳೆ ಆಗಿದೆ. ನಾಳೆ, ನಾಡಿದ್ದು ಹೆಚ್ಚು ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಒಂದು ವಾರದಲ್ಲಿ 223 TMC ನೀರು ಜಲಾಶಯಗಳಿಗೆ ಹರಿದು ಬಂದಿದೆ ಎಂದು ಹೇಳಿದರು.

ಇದನ್ನೂ ಓದಿ: ಮುಂದಿನ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಸ್ಪಷ್ಟನೆ ನೀಡಿದ ಜಗದೀಶ್ ಶೆಟ್ಟರ್, ಅಂತೆ-ಕಂತೆಗಳಿಗೆ ತೆರೆ

ಐದು ಲಕ್ಷ ರೂ. ಪರಿಹಾರ

ಯಾರು ಯಾರು ಮಳೆಯಲ್ಲಿ ಪ್ರಾಣ ಕಳೆದುಕೊಂಡವರಿಗೆ ಐದು ಲಕ್ಷ ರೂ. ಪರಿಹಾರ ಕೊಟ್ಟಿದ್ದೇವೆ. ಜಾನುವಾರು ಸಾವಿನ ಬಗ್ಗೆ ಮಾಹಿತಿ ಕೊಡಲು ಹೇಳಿದ್ದಾನೆ. ಕೆಲವು ಕಡೆ ಸೇತುವೆ ಮುಳುಗಿ ಹೋಗಿವೆ. ಅಂತ ಕಡೆ ಪರ್ಯಾಯ ವ್ಯವಸ್ಥೆ ಮಾಡಲು ಸೂಚನೆ ಕೊಟ್ಟಿದ್ದೇನೆ. ಎಲ್ಲಾ ಕಡೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗುವುದು. ತಗ್ಗು ಪ್ರದೇಶಗಳಲ್ಲಿ ಇರುವವರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲು ಸೂಚನೆ ನೀಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:43 pm, Wed, 26 July 23