DK Shivakumar: ಕಾಂಗ್ರೆಸ್ ಸರ್ಕಾರದಿಂದ ಈ ವರ್ಷ ಅಭಿವೃದ್ಧಿ ಸಾಧ್ಯವಿಲ್ಲ ಎಂದ ಡಿಕೆ ಶಿವಕುಮಾರ್; ಕಾರಣ ಇಲ್ಲಿದೆ
ನಾವು ಈ ವರ್ಷ (ಐದು ಗ್ಯಾರಂಟಿ ಯೋಜನೆಗಳಿಗಾಗಿ) 40,000 ಕೋಟಿ ರೂಪಾಯಿಗಳನ್ನು ಮೀಸಲಿಡಬೇಕಾಗಿತ್ತು. ಈ ವರ್ಷ ನಾವು ಅಭಿವೃದ್ಧಿ ಯೋಜನೆಗಳಿಗೆ ಅನುದಾನ ನೀಡಲು ಸಾಧ್ಯವಿಲ್ಲ ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ಸರ್ಕಾರವು ಈ ವರ್ಷ ಅಭಿವೃದ್ಧಿ ಯೋಜನೆಗಳಿಗೆ ಅನುದಾನ (Development Projects) ನೀಡಲು ಸಾಧ್ಯವಿಲ್ಲ ಎಂದು ಉಪಮುಖ್ಯಮಂತ್ರಿ, ಜಲಸಂಪನ್ಮೂಲ ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ (DK Shivakumar) ಬುಧವಾರ ಹೇಳಿರುವುದಾಗಿ ವರದಿಯಾಗಿದೆ. ತಮ್ಮ ಪಕ್ಷದ ಅಸಮಾಧಾನಿತ ಶಾಸಕರನ್ನು ಉದ್ದೇಶಿಸಿ ಅವರು ಈ ಹೇಳಿಕೆ ನೀಡಿದ್ದಾರೆ. ಪಕ್ಷವು ಚುನಾವಣಾ ಪೂರ್ವದಲ್ಲಿ ನೀಡಿದ್ದ ಐದು ಉಚಿತ ‘ಗ್ಯಾರಂಟಿ’ಗಳನ್ನು ಈಡೇರಿಸಲು ಹಣಕಾಸಿನ ಅಡಚಣೆಯಾಗುವುದನ್ನು ಶಾಸಕರು ಅರ್ಥಮಾಡಿಕೊಳ್ಳಬೇಕೆಂಬ ದೃಷ್ಟಿಯಿಂದ ಈ ಮಾತು ಹೇಳಿದ್ದಾರೆ ಎನ್ನಲಾಗಿದೆ.
ಗುರುವಾರದ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆಯಲ್ಲಿ ಶಾಸಕರಿಗೆ ಪರಿಸ್ಥಿತಿಯನ್ನು ವಿವರಿಸಲಾಗುವುದು ಎಂದು ಶಿವಕುಮಾರ್ ಹೇಳಿದ್ದಾರೆ. ಸಚಿವರು ಭೇಟಿಗೆ ಸಿಗುತ್ತಿಲ್ಲ ಎಂಬ ಶಾಸಕರ ದೂರಿನ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅಭಿವೃದ್ಧಿ ಕಾಮಗಾರಿಗಳು ವಿಳಂಬವಾಗುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಲು ಶಾಸಕರು ಶಾಸಕಾಂಗ ಪಕ್ಷದ ಸಭೆಗೆ ಆಗ್ರಹಿಸಿದ್ದಾರೆ ಎಂದು ಹೇಳಿರುವುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ.
ಗ್ಯಾರಂಟಿಗಳಿಗೆ ಹಣ ಬೇಕು, ಅಭಿವೃದ್ಧಿಗೆ ನೀಡಲಾಗದು; ಡಿಕೆ ಶಿವಕುಮಾರ್
ನಾವು ಈ ವರ್ಷ (ಐದು ಗ್ಯಾರಂಟಿ ಯೋಜನೆಗಳಿಗಾಗಿ) 40,000 ಕೋಟಿ ರೂಪಾಯಿಗಳನ್ನು ಮೀಸಲಿಡಬೇಕಾಗಿತ್ತು. ಈ ವರ್ಷ ನಾವು ಅಭಿವೃದ್ಧಿಗೆ ಅನುದಾನ ನೀಡಲು ಸಾಧ್ಯವಿಲ್ಲ ಶಿವಕುಮಾರ್ ಹೇಳಿದ್ದಾರೆ. ನೀರಾವರಿ ಮತ್ತು ಸಾರ್ವಜನಿಕ ಕಾರ್ಯಗಳಿಗೂ ಸಹ ನಾವು (ಅನುದಾನ) ನೀಡಲು ಸಾಧ್ಯವಿಲ್ಲ, ಆದರೆ ನಿರೀಕ್ಷೆಗಳು ಹೆಚ್ಚಿವೆ. ನಾವು ಶಾಸಕರ ಬಳಿ ತಾಳ್ಮೆಯಿಂದಿರಲು ಕೋರಿದ್ದೇವೆ. ನಾವು ಸಿಎಲ್‌ಪಿ ಸಭೆಯಲ್ಲಿ ಈ ಬಗ್ಗೆ ಅವರಿಗೆ ವಿವರಿಸುತ್ತೇವೆ ಎಂದು ಡಿಕೆ ಶಿವಕುಮಾರ್ ಹೇಳಿರುವುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ತಿಳಿಸಿದೆ.
ಖಜಾನೆ ಖಾಲಿಯಾಗಿದೆ ಎಂದ ಡಿಕೆಶಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ತಮ್ಮ ಸಚಿವ ಸಂಪುಟದ ಸಹೋದ್ಯೋಗಿಗಳಿಗೆ ತಾಳ್ಮೆಯಿಂದ ಇರುವಂತೆ ಸೂಚಿಸಿದ್ದಾರೆ ಎಂದು ಶಿವಕುಮಾರ್ ತಿಳಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಂತೆಯೇ ಹಿಂದಿನ ಬಿಜೆಪಿ ಸರ್ಕಾರವನ್ನು ದೂಷಿಸಿದ ಶಿವಕುಮಾರ್, ಹಿಂದಿನ ಬಿಜೆಪಿ ಸರ್ಕಾರ ಬೊಕ್ಕಸವನ್ನು ಬರಿದುಮಾಡಿತು. ಹೆಚ್ಚುವರಿ ಟೆಂಡರ್‌ಗಳನ್ನು ಕರೆಯಲಾಗಿತ್ತು. ಅದರ ಪರಿಣಾಮವಾಗಿ ಖಜಾನೆ ಖಾಲಿಯಾಗಿದೆ ಎಂದು ಹೇಳಿದ್ದಾರೆ.
ನಾವು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ನಮ್ಮ ಭರವಸೆಯನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಮೊದಲ ವರ್ಷದಲ್ಲಿ ನಾವು ನಮ್ಮ ಮಾತನ್ನು ಉಳಿಸಿಕೊಂಡಿದ್ದೇವೆ. ಆದ್ದರಿಂದ, ಎಲ್ಲರೂ ತಾಳ್ಮೆಯಿಂದಿರಬೇಕು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Koppal News: ಮುಖ್ಯಮಂತ್ರಿಗಳಿಗೆ ಶಾಸಕರು ಪತ್ರ ಬರೆದಿರುವುದು ಸತ್ಯ, ಅದರಲ್ಲಿ ತಪ್ಪೇನಿದೆ? ಬಸವರಾಜ ರಾಯರೆಡ್ಡಿ
ಈ ತಿಂಗಳ ಆರಂಭದಲ್ಲಿ 2023-24 ನೇ ಸಾಲಿನ ಬಜೆಟ್ ಮಂಡಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್‌ನ ಐದು ಭರವಸೆಗಳಾದ ಗೃಹ ಜ್ಯೋತಿ, ಗೃಹ ಲಕ್ಷ್ಮಿ, ಅನ್ನ ಭಾಗ್ಯ, ಶಕ್ತಿ ಮತ್ತು ಯುವ ನಿಧಿಗೆ 35,000 ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದರು. ಇದರಿಂದಾಗಿ ಸಾಲದ ಪ್ರಮಾಣ ಹೆಚ್ಚಾಯಿತಲ್ಲದೆ, 12,522 ಕೋಟಿ ರೂಪಾಯಿಗಳ ಆದಾಯದ ಕೊರತೆಯಾಗಿದೆ ಎಂದು ವರದಿ ಉಲ್ಲೇಖಿಸಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:32 pm, Wed, 26 July 23