ವಿಜಯಪುರ: ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಲು ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಅಖಾಡಕ್ಕಿಳಿದಿದ್ದಾರೆ. ಜೆಡಿಎಸ್ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಲು ರಣತಂತ್ರಗಳನ್ನು ಮಾಡಿದ್ದಾರೆ. ಇದೇ ವೇಳೆ ನಗರದ ಜೆಡಿಎಸ್ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಪಾಲಿಕೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲುವ ಭರವಸೆಯನ್ನು ವ್ಯಕ್ತಪಡಿಸಿದರಲ್ಲದೆ 2023 ರಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಆಧಿಕಾರಕ್ಕೇರಲು ಹೋರಾಟ ಮಾಡುವುದಾಗಿ ಹೇಳಿದರು.
2023ಕ್ಕೆ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ನವೆಂಬರ್ 1 ರಿಂದ ಉತ್ತರ ಕರ್ನಾಟಕದ 12 ಜಿಲ್ಲೆಗಳಲ್ಲಿ ಪಂಚ ರತ್ನ ಯಾತ್ರೆ ಮಾಡುತ್ತೇವೆ. ಮುಂಬೈ ಕರ್ನಾಕಟಕ ಹಾಗೂ ಹೈದ್ರಾಬಾದ್ ಕರ್ನಾಟಕ ಭಾಗಗಳಲ್ಲಿ ಯಾತ್ರೆ ನಡೆಯಲಿದೆ ಎಂದು ಪಂಚರತ್ನ ಯಾತ್ರೆಯ ಬಗ್ಗೆ ಮಾಹಿತಿ ನೀಡಿದರು. ದೇವೇಗೌಡರ ಆಶಯದಂತೆ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ತರುವುದು ಯಾತ್ರೆಯ ಉದ್ದೇಶವಾಗಿದೆ ಎಂದರು.
ಇದೇ ವೇಳೆ ಬಿಜೆಪಿ ಹಾಗೂ ಕಾಂಗ್ರೆಸ್ ವಿರುದ್ದ ಹರಿಹಾಯ್ದ ಇಬ್ರಾಹಿಂ, ಬಿಜೆಪಿಗೆ ಮೋದಿ ಚಿಂತೆ, ಕಾಂಗ್ರೆಸ್‌ಗೆ ರಾಹುಲ್ ಗಾಂಧಿ ಚಿಂತೆ, ಜೆಡಿಎಸ್‌ಗೆ ಮಾತ್ರ ರಾಜ್ಯದ ಚಿಂತೆ ಇದೆಯೆಂದು ಛಾಟಿ ಬೀಸಿದರು. ಎಸ್ಟಿ ಸಮುದಾಯದ ಮೀಸಲಾತಿ ವಿಚಾರದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು ರಾಜ್ಯದಲ್ಲಿ ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳ ಕೇವಲ ಗಿಮಿಕ್ ಆಗಿದೆ. ಆರ್ಎಸ್ಎಸ್ನ ಬಿ.ಎಸ್.ಯಡಿಯೂರಪ್ಪ ಇದ್ದಾಗಲೇ ಆಗಲಿಲ್ಲ. ಇನ್ನು ಬೊಮ್ಮಾಯಿ ಅವರಿಂದ ಆಗುತ್ತದಾ? ಎಂದು ಪ್ರಶ್ನಿಸಿದರು.
ಮೀಸಲಾತಿ ಬಗ್ಗೆ ಪರಾಮರ್ಶೆ ಆಗಬೇಕು, ಈ ಸರ್ಕಾರಕ್ಕೆ ದಿಕ್ಕಿಲ್ಲ, ದೆಸೆಯಿಲ್ಲಾ. ಇವರಿಗೆ ಬದ್ಧತೆಯಿದ್ದರೆ ಒಂದು ಕಮಿಟಿ ರಚನೆ ಮಾಡಲ್ಲ. ಮೀಸಲಾತಿ ಕೇಳುತ್ತಿರುವವರ ಬಗ್ಗೆ ಮೊದಲು ಸಮೀಕ್ಷೆ ನಡೆಸಬೇಕು ಎಂದು ಕಿಡಿ ಕಾರಿದರು. ಪಿಎಫ್ಐ ಬ್ಯಾನ್ ವಿಚಾರವಾಗಿ ಮಾತನಾಡಿ, ಆರ್ಎಸ್ಎಸ್ ಬ್ಯಾನ್ ಅನ್ನುವ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಏನು ಮಾಡಿತು? ಪಿಎಫ್ಐ ಬ್ಯಾನ್ ಎಂದಾಗ ಸ್ವಾಗತ ಎಂದವರಿಗೆ ರಾಮಸೇನೆ ಯಾಕೆ ನೆನಪಾಗಲಿಲ್ಲ. ರಾಮಸೇನೆಯವರೇನು ಅವರು ಚಿಕ್ಕಪ್ಪನ ಮಕ್ಕಳಾ? ಎಂದು ಪ್ರಶ್ನಿಸಿದರು.
ಗುಂಡಾಗಳು (ಹಿಂದೂಗಳು) ಸತ್ತರೆ ಐದು ಲಕ್ಷ ಪರಿಹಾರ ಕೊಡುತ್ತಾರೆ. ನಾವು ಯಾವುದೇ ಧರ್ಮ ನೋಡದೆ ಹಿಂದೂ ಮುಸ್ಲಿಂ ಎಲ್ಲರಿಗೂ ಸಮಾನ ಪರಿಹಾರ ಹಣ ನೀಡಿದ್ದೇವೆ. ನಾನು ಆರ್ಎಸ್ಎಸ್ ಆಗಲಿ ಪಿಎಫ್ಐ ಆಗಲಿ ಯಾವುದನ್ನೂ ನಿಷೇಧ ಮಾಡಿ ಎಂದಿಲ್ಲ. ಏನೇ ಇದ್ದರೂ ಜನರ ಮುಂದಿಡಿ ಎಂದು ಒತ್ತಾಯಿಸಿದರು.
ಅಲ್ಪಸಂಖ್ಯಾತರು ಕಾಂಗ್ರೆಸ್ ಪಕ್ಷವನ್ನು ನಂಬಬೇಡಿ
ಕಾಂಗ್ರೆಸ್‌ಗೆ ಮುಸ್ಲಿಂರ ಬಗ್ಗೆ ಕಾಳಜಿ ಇಲ್ಲ, 70 ವರ್ಷದ ಇತಿಹಾಸದಲ್ಲಿ ಮುಸ್ಲಿಂರಿಗೆ ರಾಜ್ಯಾಧ್ಯಕ್ಷ ಮಾಡಿದ್ದು ಜೆಡಿಎಸ್ ಮಾತ್ರ ಎಂದು ಕೈ ಪಕ್ಷದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಅಲ್ಪಸಂಖ್ಯಾತರು ಕಾಂಗ್ರೆಸ್ ಅನ್ನು ನಂಬಬೇಡಿ, ಅವರದ್ದು ಕೇವಲ ಕಣ್ಣು ಒರೆಸುವ ತಂತ್ರ. ಬಸವತತ್ವದ ಸರ್ಕಾರವನ್ನು ರಾಜ್ಯದಲ್ಲಿ ತರುವ ಸಂಕಲ್ಪದೊಂದಿಗೆ ನಾವು ಚುನಾವಣೆ ಎದುರಿಸುತ್ತಿದ್ದೇವೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ಭಾರತ ಜೋಡೋ ಯಾತ್ರೆ ಕುರಿತು ಮಾತನಾಡಿದ ಇಬ್ರಾಹಿಂ, ಭಾರತ ಜೋಡೋಕ್ಕಿಂತ ಕಾಂಗ್ರೆಸ್ ಜೋಡೋ ಮಾಡಬೇಕಾಗಿದೆ. ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷ ಆಗಿದ್ದು ಸಂತಸ ತಂದಿದೆ. ಕರ್ನಾಟಕ, ದೇಶಕ್ಕೆ ಒಳ್ಳೆಯದು ಮಾಡಲಿ ಎಂದು ಖರ್ಗೆಗೆ ಹೇಳಿದ್ದೇನೆ. ದೇಶದಲ್ಲಿ ಕಾಂಗ್ರೆಸ್ ಪಕ್ಷ ಪ್ರಾದೇಶಿಕ ಪಕ್ಷಕ್ಕಿಂತ ಕೆಳಮಟ್ಟದಲ್ಲಿದೆ. ಜೆಡಿಎಸ್ ಮೊದಲ ಸ್ಥಾನ, ಬಿಜೆಪಿ ಎರಡನೇ ಸ್ಥಾನ, ಕಾಂಗ್ರೆಸ್ ಮೂರನೇ ಸ್ಥಾನದಲ್ಲಿ ಇದೆ. ಕಾಂಗ್ರೆಸ್ ಪಕ್ಷದಲ್ಲಿ 80 ಕಡೆಗೆ ಎಂಎಲ್‌ಎ ಅಭ್ಯರ್ಥಿಗಳು ಇಲ್ಲ. ಈ ಸಲ ಜೆಡಿಎಸ್‌ಗೆ ಬಹುಮತ ಸಿಗುವ ನಿರೀಕ್ಷೆ ಇದೆ ಎಂದು ಭವಿಷ್ಯ ನುಡಿದರು.
ಮುಸ್ಲೀಂ ಸಮುದಾಯವರ ಮೀಸಲಾತಿ ರದ್ದು ಮಾಡುವ ವಿಚಾರವಾಗಿ ವಿಜಯಪುರ ನಗರ ಶಾಸಕ ಯತ್ನಾಳ ಹೇಳಿಕೆಗೆ ಸಿಎಂ ಇಬ್ರಾಹಿಂ ಟಾಂಗ್ ನೀಡಿದರು. ಮುಸ್ಲಿಂ ಸಮುದಾಯದ ಮೀಸಲಾತಿ ತೆಗೆಯಲು ಸಾಧ್ಯವಿಲ್ಲ. ಸಂವಿಧಾನ ಬದ್ಧವಾಗಿ ಮೀಸಲಾತಿ ನೀಡಲಾಗಿದೆ. ಇದನ್ನ ತೆಗೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ವರದಿ: ಅಶೋಕ ಯಡಳ್ಳಿ, ಟಿವಿ9 ವಿಜಯಪುರ
ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:03 pm, Tue, 25 October 22