Paytm Shares: ಮರು ಖರೀದಿ ನಿರ್ಧಾರ ಬೆನ್ನಲ್ಲೇ ಪೇಟಿಎಂ ಷೇರು ಮೌಲ್ಯ ಚೇತರಿಕೆ

| Updated By: Ganapathi Sharma

Updated on: Dec 09, 2022 | 11:58 AM

ಡಿಸೆಂಬರ್ 13ರಂದು ನಿರ್ದೇಶಕರ ಮಂಡಳಿ ಸಭೆ ಸೇರಲಿದ್ದು, ಪೇಟಿಎಂ ಷೇರುಗಳ ಮರು ಖರೀದಿ ಪ್ರಸ್ತಾಪವನ್ನು ಪರಿಗಣಿಸಲಿದೆ ಎಂದು ಷೇರುಪೇಟೆಗೆ ‘ಒನ್ 97 ಕಮ್ಯೂನಿಕೇಷನ್ಸ್​’ ತಿಳಿಸಿದೆ.

Paytm Shares: ಮರು ಖರೀದಿ ನಿರ್ಧಾರ ಬೆನ್ನಲ್ಲೇ ಪೇಟಿಎಂ ಷೇರು ಮೌಲ್ಯ ಚೇತರಿಕೆ
ಸಾಂದರ್ಭಿಕ ಚಿತ್ರ
Follow us on

ಮುಂಬೈ: ಪೇಟಿಎಂ ಷೇರುಗಳ (Paytm shares) ಮರು ಖರೀದಿಗೆ ‘ಒನ್ 97 ಕಮ್ಯೂನಿಕೇಷನ್ಸ್​’ಗೆ (One97 Communications) ಮುಂದಾಗಿರುವ ವಿಚಾರ ಬಹಿರಂಗವಾಗುತ್ತಿದ್ದಂತೆಯೇ ಷೇರು ಮೌಲ್ಯದಲ್ಲಿ ಚೇತರಿಕೆ ಕಾಣಿಸಿದೆ. ಈಕ್ವಿಟಿ ಷೇರುಗಳ ಮರುಖರೀದಿ ಬಗ್ಗೆ ಚರ್ಚಿಸಲು ಇದೇ 13ರಂದು ಸಭೆ ಸೇರುವುದಾಗಿ ‘ಒನ್ 97 ಕಮ್ಯೂನಿಕೇಷನ್ಸ್​’ ನಿರ್ದೇಶಕರ ಮಂಡಳಿ ಗುರುವಾರ ತಿಳಿಸಿತ್ತು. ಪರಿಣಾಮವಾಗಿ ಶುಕ್ರವಾರದ ಆರಂಭದ ವಹಿವಾಟಿನಲ್ಲಿ ಪೇಟಿಎಂ ಷೇರು ಮೌಲ್ಯ ಶೇಕಡಾ 7ರಷ್ಟು ವೃದ್ಧಿಯಾಗಿದ್ದು, ಪ್ರತಿ ಷೇರಿಗೆ 542 ರೂ. ಆಗಿದೆ.

ಡಿಸೆಂಬರ್ 13ರಂದು ನಿರ್ದೇಶಕರ ಮಂಡಳಿ ಸಭೆ ಸೇರಲಿದ್ದು, ಪೇಟಿಎಂ ಷೇರುಗಳ ಮರು ಖರೀದಿ ಪ್ರಸ್ತಾಪವನ್ನು ಪರಿಗಣಿಸಲಿದೆ ಎಂದು ಷೇರುಪೇಟೆಗೆ ‘ಒನ್ 97 ಕಮ್ಯೂನಿಕೇಷನ್ಸ್​’ ತಿಳಿಸಿದೆ. ಷೇರು ಮರುಖರೀದಿ ಪ್ರಕ್ರಿಯೆ ಎಂದರೆ, ಮಾಲೀಕತ್ವ ಹೊಂದಿರುವ ಕಂಪನಿಯು ಷೇರುದಾರರಿಂದ ಅಸ್ತಿತ್ವದಲ್ಲಿರುವ ಬೆಲೆಗೆ ಹೆಚ್ಚಿನ ಷೇರುಗಳನ್ನು ಮರಳಿ ಖರೀದಿಸುವ ಪ್ರಕ್ರಿಯೆಯಾಗಿದೆ. ಈ ಮೂಲಕ ತನ್ನ ಮಾಲೀಕತ್ವದ ಹಿಡಿತವನ್ನು ಕಂಪನಿ ಹೆಚ್ಚಿಸಿಕೊಳ್ಳುತ್ತದೆ.

ಇದನ್ನೂ ಓದಿ: Paytm shares: ಪಾತಾಳಕ್ಕೆ ಕುಸಿದ ಪೇಟಿಎಂ ಷೇರು ಮೌಲ್ಯ; ಸಂಕಷ್ಟದಲ್ಲಿ ಡಿಜಿಟಲ್ ಪಾವತಿ ಕಂಪನಿ

ಕಳೆದ ತಿಂಗಳು ಪಾತಾಳಕ್ಕೆ ಕುಸಿದಿದ್ದ ಪೇಟಿಎಂ ಷೇರು

ಸುಮಾರು 21.5 ಕೋಟಿ ಡಾಲರ್ ಮೌಲ್ಯದ ಪೇಟಿಎಂ ಷೇರುಗಳನ್ನು ಮಾರಾಟ ಮಾಡುವುದಾಗಿ ಜರ್ಮನಿ ಮೂಲದ ಸಾಫ್ಟ್​ಬ್ಯಾಂಕ್ ಕಳೆದ ತಿಂಗಳು ಘೋಷಿಸಿತ್ತು. ಐಪಿಒ ಲಾಕ್​ ಇನ್ ಅವಧಿ (ಐಪಿಒದಲ್ಲಿ ಖರೀದಿಸಿದ ಷೇರುಗಳ ಮಾರಾಟಕ್ಕೆ ನಿರ್ದಿಷ್ಟ ಅವಧಿಗೆ ನೀಡಿರುವ ತಡೆ) ಮುಗಿಯುತ್ತಿದ್ದಂತೆಯೇ ಸಾಫ್ಟ್​ಬ್ಯಾಂಕ್ ಈ ಘೋಷಣೆ ಮಾಡಿತ್ತು. ಪರಿಣಾಮವಾಗಿ ಪೇಟಿಎಂ ಷೇರುಗಳ ಮೌಲ್ಯ ಪಾತಾಳಕ್ಕೆ ಕುಸಿಯಲು ಆರಂಭವಾಗಿತ್ತು. ಶೇಕಡಾ 75ರಷ್ಟು ಕುಸಿತ ದಾಖಲಾಗಿತ್ತು. ಕಳೆದ ವರ್ಷ ನವೆಂಬರ್​ನಲ್ಲಿ ಪೇಟಿಎಂ ಐಪಿಒ ಮೂಲಕ ಷೇರು ಮಾರುಕಟ್ಟೆಗೆ ಲಗ್ಗೆ ಇಟ್ಟಿತ್ತು.

ನಷ್ಟದ ಸುಳಿಯಲ್ಲಿ ಪೇಟಿಎಂ

ಜುಲೈ – ಸೆಪ್ಟೆಂಬರ್ ಅವಧಿಯಲ್ಲಿ ಪೇಟಿಎಂ 571 ಕೋಟಿ ರೂ. ನಷ್ಟ ದಾಖಲಿಸಿದೆ. ವರ್ಷದ ಹಿಂದೆ ಇದೇ ಅವಧಿಯಲ್ಲಿ 473 ಕೋಟಿ ರೂ. ನಷ್ಟ ಅನುಭವಿಸಿತ್ತು. ಆದರೆ, ಈ ವರ್ಷ ಪೇಟಿಎಂ ಆದಾಯವೂ ವೃದ್ಧಿಯಾಗಿತ್ತು. ಸೆಪ್ಟೆಂಬರ್​ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ಕಂಪನಿಯ ಕ್ರೂಡೀಕೃತ ಆದಾಯದಲ್ಲಿ ಶೇಕಡಾ 76ರಷ್ಟು ಹೆಚ್ಚಳ ಕಂಡುಬಂದಿದ್ದು, 1,914 ಕೋಟಿ ಆಗಿತ್ತು. ಆದಾಗ್ಯೂ, 24ನೇ ಹಣಕಾಸು ವರ್ಷದ ಆರಂಭದ ವೇಳೆ ಷೇರುಗಳ ಮೌಲ್ಯದಲ್ಲಿ ಚೇತರಿಕೆಯಾಗುವ ಸಾಧ್ಯತೆ ಇದೆ ಎಂದು ಐಸಿಐಸಿಐ ಸೆಕ್ಯುರಿಟೀಸ್ ಇತ್ತೀಚೆಗೆ ಅಭಿಪ್ರಾಯಪಟ್ಟಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ