ಬೆಂಗಳೂರು: ಭಾರತೀಯ ಷೇರುಪೇಟೆಯ ಪ್ರಾತಿನಿಧಿಕ ಸೂಚ್ಯಂಕ ನಿಫ್ಟಿ (Nifty) ಮಂಗಳವಾರದ (ಸೆ 13) ಆರಂಭಿಕ ವಹಿವಾಟಿನಲ್ಲಿ 18,000 ಅಂಶಗಳನ್ನು ದಾಟಿ ಮುನ್ನಡೆದಿದೆ. ಭಾರತದ ಆರ್ಥಿಕತೆಯು ನಿರೀಕ್ಷೆಯಂತೆ ಸತತ ಪ್ರಗತಿ ಉಳಿಸಿಕೊಳ್ಳಲಿದೆ ಎಂಬ ಸುಳಿವುಗಳಿಂದ ಉತ್ತೇಜಿತರಾಗಿರುವ ಹೂಡಿಕೆದಾರರು ಷೇರುಪೇಟೆಯತ್ತ ಮತ್ತೆ ಆಸಕ್ತಿ ತೋರುತ್ತಿದ್ದಾರೆ. ಇಂದು ವಹಿವಾಟು ಆರಂಭವಾದಾಗ ನಿಫ್ಟಿ 18,046 ಅಂಶಗಳ ಸಮೀಪ ಇತ್ತು. ಇದು ನಿಫ್ಟಿಯ ಸಾರ್ವಕಾಲಿಕ ಗರಿಷ್ಠ ಅಂಶವಾದ 18,604ಕ್ಕೆ ಕೇವಲ ಶೇ 3ರಷ್ಟು ಕಡಿಮೆ. ಬ್ಯಾಂಕ್ ನಿಫ್ಟಿ ಶೇ 0.4ರ ಏರಿಕೆಯೊಂದಿಗೆ (40,804) ವಹಿವಾಟು ಆರಂಭಿಸಿತು. ಇದೂ ಸಹ ಸಾರ್ವಕಾಲಿಕ ಗರಿಷ್ಠ ಮೊತ್ತಕ್ಕೆ ಕೇವಲ ಶೇ 2.5ರಷ್ಟು ಕಡಿಮೆಯಿದೆ. ಬಿಎಸ್ಇ ಸೆನ್ಸೆಕ್ಸ್ ಸಹ 60,000 ಅಂಶಗಳನ್ನು ನಿನ್ನೆಯೇ ದಾಟಿತ್ತು. ಇಂದು ಸೆನ್ಸಿಕ್ಸ್ 60,479 ಅಂಶಗಳಲ್ಲಿ ವಹಿವಾಟು ನಡೆಸುತ್ತಿದೆ.
ಈ ಬೆಳವಣಿಗೆಯನ್ನು ಭಾರತದ ವಿತ್ತ ವಲಯ ಸಂಭ್ರಮದಿಂದ ಸ್ವಾಗತಿಸಿದೆ. ಸೂಚ್ಯಂಕಗಳ ಏರಿಕೆ ಕುರಿತು ಪ್ರತಿಕ್ರಿಯಿಸಿರುವ ಜಿಯೊಜಿತ್ ಫೈನಾನ್ಷಿಯಲ್ ಸರ್ವೀಸಸ್ನ ಚೀಫ್ ಇನ್ವೆಸ್ಟ್ಮೆಂಟ್ ಸ್ಟ್ರಾಟಜಿಸ್ಟ್ ವಿ.ಕೆ.ವಿಜಯ್ಕುಮಾರ್, ‘ಭಾರತದ ಷೇರುಪೇಟೆ ಇದೀಗ ಏರುಗತಿಯಲ್ಲಿದೆ. ಮುಂದಿನ ದಿನಗಳಲ್ಲಿ ಸೂಚ್ಯಂಕಗಳು ಹೊಸ ದಾಖಲೆ ಬರೆಯಲಿವೆ’ ಎಂದು ಹೇಳಿದ್ದಾರೆ. ‘ಬ್ಯಾಂಕ್ ನಿಫ್ಟಿ ನಿರಂತರ ಏರಿಕೆ ಕಾಣಬಹುದು. ಬ್ಯಾಂಕಿಂಗ್ ವಲಯದತ್ತ ವಿದೇಶಿ ಹೂಡಿಕೆದಾರರು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಬ್ಯಾಂಕಿಂಗ್ ವಲಯದಲ್ಲಿ ಇತ್ತೀಚೆಗೆ ನಡೆದ ಸುಧಾರಣೆಗಳು ಫಲ ಕೊಡುತ್ತಿವೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ವಿಶ್ವದ ಹಲವು ದೇಶಗಳಲ್ಲಿ ಆರ್ಥಿಕ ಹಿಂಜರಿತ, ಇಂಧನ ಬಿಕ್ಕಟ್ಟು ಸೇರಿದಂತೆ ಹಲವು ಸಮಸ್ಯೆಗಳಿಂದ ಪ್ರಗತಿ ಕುಂಠಿತಗೊಳ್ಳಬಹುದು ಎಂಬ ವರದಿಗಳು ಒಂದಾದ ಮೇಲೆ ಒಂದರಂತೆ ಬೆಳಕು ಕಾಣುತ್ತಿವೆ. ರಷ್ಯಾ-ಉಕ್ರೇನ್ ಯುದ್ಧದಲ್ಲಿ ಇದೀಗ ಉಕ್ರೇನ್ ಮೇಲುಗೈ ಸಾಧಿಸಲು ಆರಂಭಿಸಿದೆ. ಇದರ ಸಂಭಾವ್ಯ ಪರಿಣಾಮಗಳ ಬಗ್ಗೆಯೂ ಬಿಸಿಬಿಸಿ ಚರ್ಚೆಗಳು ಆರಂಭವಾಗಿವೆ. ಚೀನಾದ ರಿಯಲ್ ಎಸ್ಟೇಟ್ ವಲಯವು ತತ್ತರಿಸಿದ್ದು ‘ಸಾಲ ತೀರಿಸಲ್ಲ’ ಎಂದು ಜನರು ಹಟ ಹಿಡಿದಿರುವುದರಿಂದ ಅಲ್ಲಿ ಬ್ಯಾಂಕಿಂಗ್ ವಲಯವೂ ಕುಸಿಯುತ್ತಿದೆ. ಏಷ್ಯಾ, ಯೂರೋಪ್ ಮತ್ತು ಅಮೆರಿಕದ ಷೇರುಪೇಟೆಗಳು ಸತತ ಕುಸಿತ ದಾಖಲಿಸುತ್ತಿವೆ. ಈ ನಡುವೆ ಕಳೆದ ಒಂದು ವಾರದಿಂದ ಭಾರತದ ಷೇರುಪೇಟೆಯಲ್ಲಿ ವಹಿವಾಟು ಚುರುಕಾಗಿದ್ದು, ಪ್ರಾತಿನಿಧಿಕ ಸೂಚ್ಯಂಕಗಳಾದ ಮುಂಬೈ ಷೇರುಪೇಟೆ (Bombay Stock Exchange – BSE) ಮತ್ತು ರಾಷ್ಟ್ರೀಯ ಷೇರು ಸಂವೇದಿ ಸೂಚ್ಯಂಕ (National Stock Exchange – NSE) ಸತತ ಏರಿಕೆ ದಾಖಲಿಸುತ್ತಿವೆ. ಇಷ್ಟು ದಿನ ಕಳಾಹೀನವಾಗಿದ್ದ ಬ್ಯಾಂಕಿಂಗ್, ಲೋಹ ಮತ್ತು ಐಟಿ ವಲಯದ ಕಂಪನಿಗಳ ಷೇರುಗಳು ಉತ್ತಮ ಮೌಲ್ಯ ಪಡೆದುಕೊಳ್ಳುತ್ತಿವೆ.
ಎಚ್ಡಿಎಫ್ಸಿ ಲೈಫ್, ಟೈಟಾನ್, ಹಿಂಡಾಲ್ಕೊ, ಎಸ್ಬಿಐ ಲೈಫ್, ಬ್ರಿಟಾನಿಯಾ ಷೇರುಗಳು ಅತಿಹೆಚ್ಚು ಮುನ್ನಡೆ ದಾಖಲಿಸಿದವು. ಸಿಪ್ಲಾ, ದಿವಿಸ್ ಲ್ಯಾಬ್ಸ್, ಟಿಸಿಎಸ್, ಸನ್ ಫಾರ್ಮಾ, ಎಚ್ಸಿಎಲ್ ಟೆಕ್ ಕಂಪನಿಗಳ ಷೇರುಗಳು ಮೌಲ್ಯ ಕಳೆದುಕೊಂಡವು.