ಇಂದು ವಿಶ್ವ ಅರಣ್ಯ ದಿನ. ಕಾಡು ಎಂದಾಕ್ಷಣ ನಮಗೆ ನೆನಪಾಗುವುದು ಗಿಡ, ಮರ, ಬಳ್ಳಿ, ಪೊದೆ, ವಿಶಾಲ ಹುಲ್ಲುಗಾವಲು, ಬೆಟ್ಟ, ಗುಡ್ಡ, ವೈವಿಧ್ಯಮಯ ವನ್ಯಜೀವಿಗಳು, ನದಿ, ಝರಿ, ತೊರೆ ಇತ್ಯಾದಿಗಳು. ಇವುಗಳ ಜೊತೆಗೆ ಅರಣ್ಯ ಎಂದಾಗ ಅರಣ್ಯಾಧಿಕಾರಿಗಳು, ಅರಣ್ಯ ಇಲಾಖೆಯ ನೌಕರರು ಸಹ ನೆನಪಾಗದೆ ಇರಲಾರರು. ಬಹಳ ಹಿಂದೆ ಅರಣ್ಯ ಪ್ರದೇಶ ವಿಶಾಲವಾಗಿತ್ತು. ಜನಸಂಖ್ಯೆ ಕಡಿಮೆ ಇತ್ತು. ಹಾಗಾಗಿ ಅರಣ್ಯ ಒತ್ತುವರಿ, ಮರಗಳ್ಳತನ, ವನ್ಯಜೀವಿಗಳ ಬೇಟೆ, ಕಳ್ಳಸಾಗಣೆ, ಕಾಡ್ಗಿಚ್ಚು ಮತ್ತಿತರ ಅರಣ್ಯ ಸಂಬಂಧಿ ಪ್ರಕರಣಗಳು ಅಷ್ಟಾಗಿ ನಡೆಯುತ್ತಿರಲಿಲ್ಲ. ಜನಸಂಖ್ಯೆಯಲ್ಲಿ ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿರುವ, ಆದರೆ ಭೂ ವಿಸ್ತೀರ್ಣದಲ್ಲಿ ಏಳನೇ ಸ್ಥಾನದಲ್ಲಿರುವ ನಮ್ಮ ಭಾರತದಲ್ಲಿ ಅರಣ್ಯ ಭೂಮಿಯ ಮೇಲಿನ ಒತ್ತಡ ಸಹಜವಾಗಿಯೇ ಇತರ ದೇಶಗಳಿಗಿಂತ ಅಧಿಕವಾಗಿದೆ.
ಭಾರತದಲ್ಲಿ ಅರಣ್ಯ ಸಂರಕ್ಷಣೆಗೆ ಬಹಳ ಸುದೀರ್ಘವಾದ ಇತಿಹಾಸವಿದೆ. ಬಹಳ ಹಿಂದೆ ನಿರ್ದಿಷ್ಟ ಅರಣ್ಯ ಭೂಮಿಯನ್ನು ಸಂರಕ್ಷಿಸುವ ಉದ್ದೇಶಕ್ಕಾಗಿ ನಾಗಬನ, ಪವಿತ್ರವನಗಳಿದ್ದವು. ನಂತರ ಮೌರ್ಯ ಸಾಮ್ರಾಜ್ಯದ ಸಾಮ್ರಾಟ ಅಶೋಕ ಚಕ್ರವರ್ತಿ ಸಾಲುಮರಗಳನ್ನು ನೆಡುವುದಕ್ಕೆ ಆದ್ಯತೆ ಕೊಡುವುದರೊಂದಿಗೆ ದೊಡ್ಡಮಟ್ಟದಲ್ಲಿ ಗಿಡಮರ ಬೆಳೆಸುವ ಕಾರ್ಯ ಪ್ರಾರಂಭವಾಯಿತು. ನಂತರ ಬ್ರಿಟಿಷರ ಕಾಲದಲ್ಲಿ ಅರಣ್ಯವನ್ನು ಪ್ರಮುಖವಾಗಿ ವಾಣಿಜ್ಯ ಉದ್ದೇಶಕ್ಕೆ ಬೆಳೆಸುವ ಪರಿಪಾಠ ಶುರುವಾಯಿತು. ತದನಂತರ ಕರ್ನಾಟಕದಲ್ಲಿ ಮೈಸೂರು ಒಡೆಯರ್ ಅವರು ಅರಣ್ಯ ಸಂರಕ್ಷಣೆಗೆ ಸ್ವಲ್ಪಮಟ್ಟಿಗೆ ಒತ್ತು ನೀಡಿದರು. ಸ್ವಾತಂತ್ರ ನಂತರ ಬಂದ ಕರ್ನಾಟಕ ಅರಣ್ಯ ಕಾಯ್ದೆ 1963 ಹಾಗೂ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972, ಅರಣ್ಯ ಹಾಗೂ ವನ್ಯಜೀವಿಗಳ ಸಂರಕ್ಷಣೆಗೆ ಬಲಿಷ್ಠವಾದ ಕಾನೂನಿನ ಬಲ ನೀಡಿದವು.
ಅರಣ್ಯ ಇಲಾಖೆಯಲ್ಲಿ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಅರಣ್ಯ ಹಾಗೂ ವನ್ಯಜೀವಿಗಳ ಸಂರಕ್ಷಣೆಯ ಜೊತೆಗೆ ಅರಣ್ಯ ಅಭಿವೃದ್ಧಿಯ ಜವಾಬ್ಧಾರಿಯೂ ಇದೆ. ಹಾಗಾಗಿ ಅರಣ್ಯ ಸಿಬ್ಬಂದಿಗಳ ಕರ್ತವ್ಯ ತುಂಬಾ ವೈವಿಧ್ಯವಾದದ್ದು ಹಾಗೂ ವಿಶಾಲವಾದದ್ದು. ಅರಣ್ಯ ಸಂಪತ್ತನ್ನು ‘ತೆರದ ಖಜಾನೆ’ (Open Treasury) ಎನ್ನುತ್ತಾರೆ. ಹೀಗಾಗಿಯೇ ಅರಣ್ಯ ಸಂರಕ್ಷಣೆ ಅತ್ಯಂತ ಸವಾಲಿನದ್ದಾಗಿರುತ್ತದೆ. ಮರಗಳ್ಳರು, ಭೂ ಒತ್ತುವರಿದಾರು, ಬೇಟೆಗಾರರ ವಿರುದ್ಧ 24×7 ಹದ್ದಿನ ಕಣ್ಣಿಟ್ಟು ಕಾರ್ಯ ನಿರ್ವಹಿಸಬೇಕು. ಇದರ ಜೊತೆಗೆ ಕಾಡಿನೊಳಗೆ ಕಾಲ್ನಡಿಗೆ ಗಸ್ತು ಮಾಡುವಾಗ, ಮಾನವ ವನ್ಯಜೀವಿ ಸಂಘರ್ಷ ತಡೆಗಟ್ಟುವಾಗ, ಅಪಾಯಕ್ಕೆ ಸಿಲುಕಿದ, ಕೆಲವೊಮ್ಮೆ ಮಾನವರ ಜೀವಕ್ಕೆ ಅಪಾಯ ತರುವಂತಹ ಕೆಲವು ಪ್ರಾಣಿಗಳನ್ನು ರಕ್ಷಿಸುವ ಕಾರ್ಯ (Rescue Operations) ಮಾಡುವಾಗ ವನ್ಯಜೀವಿಗಳಿಂದಲೇ ದಾಳಿಗೊಳಗಾಗುವ ಸಾಧ್ಯತೆ ಇರುವುದರಿಂದ ಅರಣ್ಯ ಎಂದಿಗೂ ಎಚ್ಚರ ತಪ್ಪದಂತಿರಬೇಕು. ಹೀಗಾಗಿ ಅರಣ್ಯ ಇಲಾಖೆಯ ಕೆಲಸ, ಅದರಲ್ಲೂ ವನ್ಯಜೀವಿ ವಲಯಗಳಲ್ಲಿ ಕಾರ್ಯ ನಿರ್ವಹಣೆ ಹೆಜ್ಜೆಹೆಜ್ಜೆಗೂ ಸವಾಲಿನಿಂದ ಕೂಡಿರುತ್ತದೆ. ಕರ್ನಾಟಕ ರಾಜ್ಯ ಒಂದರಲ್ಲೇ ಇದುವರೆಗೂ ಸುಮಾರು 50 ಜನ ಅರಣ್ಯ ಸಿಬ್ಬಂದಿಗಳು ಕರ್ತವ್ಯದ ಸಮಯದಲ್ಲಿ ಅರಣ್ಯ ಹಾಗೂ ವನ್ಯಜೀವಿಗಳ ಸಂರಕ್ಷಣೆಗಾಗಿ ಪ್ರಾಣತ್ಯಾಗ ಮಾಡಿ ಹುತಾತ್ಮರಾಗಿದ್ದಾರೆ. International Ranger Federation’s Roll of Honour Report (2012-17) ಪ್ರಕಾರ ವಿಶ್ವದಲ್ಲಿಯೇ ಅತಿಹೆಚ್ಚು ಅರಣ್ಯಾಧಿಕಾರಿಗಳು ಹುತಾತ್ಮರಾಗಿರುವ ದೇಶ ಭಾರತ.
ಅರಣ್ಯ ಇಲಾಖೆಯಲ್ಲಿ ಈ ಮೊದಲೇ ಹೇಳಿದಂತೆ ಅರಣ್ಯ, ವನ್ಯಜೀವಿಗಳ ಸಂರಕ್ಷಣೆಯ ಜೊತೆಜೊತೆಗೆ ಅರಣ್ಯ ಅಭಿವೃದ್ಧಿ ಕಾರ್ಯಗಳನ್ನು ಕೂಡ ಮಾಡಬೇಕಿರುತ್ತದೆ. ಅರಣ್ಯ ಅಭಿವೃದ್ಧಿ ಎಂಬುದು ಅರಣ್ಯ ಭೂಮಿಯಷ್ಟೆ ಅಲ್ಲದದೇ, ರಸ್ತೆ ಬದಿ, ನಾಲೆ ಬದಿ, ಇತರ ಸರ್ಕಾರಿ ಭೂಮಿ, ಶಾಲಾ-ಕಾಲೇಜು, ಕಛೇರಿ ಉದ್ಯಾನದ ಆವರಣದಲ್ಲಿ ಗಿಡಮರ ಬೆಳೆಸುವುದನ್ನು ಒಳಗೊಳ್ಳುತ್ತದೆ. ಅರಣ್ಯ ಅಭಿವೃದ್ಧಿ ಕಾರ್ಯದ ಭಾಗವಾಗಿ ಬೀಜಗಳ ಸಂಗ್ರಹ, ನರ್ಸರಿಯಲ್ಲಿ ಬೀಜ ಬಿತ್ತಿ ಗಿಡ ಬೆಳೆಸುವಿಕೆ, ಗುಂಡಿ ತೋಡಿಸುವಿಕೆ, ಗಿಡಗಳನ್ನು ನೆಡುವುದು, ಅವುಗಳ ಪಾಲನೆ ಪೋಷಣೆ, ಕಾಡ್ಗಿಚ್ಚು , ಜಾನುವಾರುಗಳಿಂದ ಅವುಗಳ ರಕ್ಷಣೆ ಮತ್ತಿತ್ಯಾದಿ ಚಟುವಟಿಕೆಗಳು ಬರುತ್ತವೆ. ಇವುಗಳೊಂದಿಗೆ ಹುಲಿಗಣತಿ, ಆನೆಗಣತಿ, ಪಕ್ಷಿಗಣತಿ, ವನ್ಯಜೀವಿ ಗಣತಿ, ಅರಣ್ಯ ಭೂಮಿಯ ಒತ್ತುವರಿ ತಡೆಗಟ್ಟುವುದು ಮುಂತಾದ ಕಾರ್ಯಗಳು ಅರಣ್ಯಾಧಿಕಾರಿಗಳ ಮುಖ್ಯ ಕರ್ತವ್ಯಗಳ ಪಟ್ಟಿಯಲ್ಲಿವೆ.
ಒಂದು ದೇಶದ ಪ್ರಾಕೃತಿಕ ಸಮತೋಲನಕ್ಕೆ ಆ ದೇಶದ ಒಟ್ಟು ಭೂ ಪ್ರದೇಶದಲ್ಲಿ ಶೇ 33 ಅರಣ್ಯ ಪ್ರದೇಶ ಇರಬೇಕು. ನಮ್ಮ ದೇಶ ಹಾಗೂ ರಾಜ್ಯದಲ್ಲಿ ಸದ್ಯ ಈ ಪ್ರಮಾಣ ಶೇ 20 ರ ಆಸುಪಾಸಿನಲ್ಲಿದೆ. ಇದರಲ್ಲಿ ವನ್ಯಜೀವಿಗಳಿಗೆ ಅಂತ ಮೀಸಲಿರುವ ಸಂರಕ್ಷಿತ ಪ್ರದೇಶಗಳ (ಹುಲಿಸಂರಕ್ಷಿತ ಪ್ರದೇಶ, ರಾಷ್ಟ್ರೀಯ ಉದ್ಯಾನ, ವನ್ಯಜೀವಿಧಾಮ, ಸಂರಕ್ಷಿತ ಮೀಸಲು ಪ್ರದೇಶ ಇತ್ಯಾದಿ) ಪ್ರಮಾಣ ಕೇವಲ ಶೇ 4-5 ಮಾತ್ರ. ಜಾಗತಿಕ ಮಟ್ಟದಲ್ಲಿ ಇಂದಿನ ಗಂಭೀರ ಸಮಸ್ಯೆಗಳಾದ ಬರ, ಪ್ರವಾಹ, ಚಂಡಮಾರುತದಂತಹ ಪ್ರಾಕೃತಿಕ ವಿಕೋಪಗಳು ಹವಾಮಾನ ಬದಲಾವಣೆಯೊಂದಿಗೆ ನೇರ ಸಂಬಂಧ ಹೊಂದಿವೆ. ಇವುಗಳಿಗೆ ನಿರ್ಣಾಯಕ ಪರಿಹಾರವಿರುವುದು ಅರಣ್ಯ ಸಂರಕ್ಷಣೆ ಹಾಗೂ ಅರಣ್ಯದ ಅಭಿವೃದ್ಧಿಯಲ್ಲಿ. ಹೀಗಾಗಿ ಇಂದು ಅರಣ್ಯಾಧಿಕಾರಿಗಳ ಜವಾಬ್ದಾರಿ ಹಿಂದಿಗಿಂತಲೂ ಹಿರಿದಾಗಿದೆ.
– ಸಂಜಯ್ ಹೊಯ್ಸಳ, ಅರಣ್ಯ ರಕ್ಷಕ, ಮೈಸೂರು
ಇದನ್ನೂ ಓದಿ: ಬೇಡ್ತಿ-ವರದಾ ನದಿ ಜೋಡಣೆ: ಕುಡಿಯುವ ನೀರಿನ ಯೋಜನೆಯೋ? ಪರಿಸರ ನಿರ್ನಾಮದ ತಂತ್ರವೋ?
ನೀರೇ ಇರದ ಬೇಡ್ತಿಯಿಂದ ಯಲ್ಲಾಪುರಕ್ಕೆ ಕುಡಿಯುವ ನೀರಿನ ಯೋಜನೆ; ಬೇಡ್ತಿ-ವರದಾ ಜೋಡಣೆ ಎಷ್ಟು ಸರಿ?
Catch the Rain: ನಮಗೆ ನಮ್ಮದೇ ನೆಲದ ನೀರಿನ ಎಂಜಿನಿಯರ್ಗಳು ಬೇಕು; ಪರಿಸರ ಕಾರ್ಯಕರ್ತ ಶಿವಾನಂದ ಕಳವೆ ಬರಹ