ಅನ್ನದಾತನೊಂದಿಗೆ ನಾವು: ಮಣ್ಣು ಬಿಟ್ಟವರಿಗೆ ಆಧಾರವಿಲ್ಲ ಅಣ್ಣಗಳಿರೆಲ್ಲರೂ ಕೇಳಿರಯ್ಯ…

|

Updated on: Jan 15, 2021 | 4:09 PM

‘ಕನಕದಾಸರು ಹೇಳಿ ಕೇಳಿ ಯೋಧರು. ಯುದ್ಧಭೂಮಿಯ ಚಿತ್ರಣ ಅವರಿಗೆ ಹೊಸದಲ್ಲ. ಆ ಹೊತ್ತಿನ ಸೈನಿಕರ ಸಂಘರ್ಷಗಳನ್ನೂ ಸೇನೆಯ ಶಿಬಿರಗಳ ವಿವರಗಳೂ ರಾಮಧಾನ್ಯಚರಿತೆಯಲ್ಲಿ ಕಂಡುಬರುತ್ತವೆ. ಪುರಂದರದಾಸರಾಗಲಿ, ಕನಕದಾಸರಾಗಲಿ, ಕಬೀರ, ನಾನಕರಾಗಲಿ ಭಕ್ತಿಸಾಹಿತ್ಯ ಮೂಲಕ ಮನುಷ್ಯನ ಆಂತರಿಕ ಸಂಘರ್ಷವನ್ನು ತೆರೆದಿಟ್ಟಂತೇ ಸಮಾಜದ ಸಂಘರ್ಷವನ್ನೂ ತೆರೆದಿಟ್ಟವರು.’ -ಡಾ. ದೀಪಾ ಫಡ್ಕೆ

ಅನ್ನದಾತನೊಂದಿಗೆ ನಾವು: ಮಣ್ಣು ಬಿಟ್ಟವರಿಗೆ ಆಧಾರವಿಲ್ಲ ಅಣ್ಣಗಳಿರೆಲ್ಲರೂ ಕೇಳಿರಯ್ಯ...
ಸಂತ ಕಬೀರ
Follow us on

ಅನ್ನ (ಆಹಾರ) ಮಾತ್ರವಲ್ಲ ಅದನ್ನು ಬೆಳೆಯುವ ರೈತನೂ ಪರಬ್ರಹ್ಮ ಎಂದ ದೇಶ ನಮ್ಮದು. ರೈತರ ಬದುಕು ಸಂಕಷ್ಟದಲ್ಲಿದೆ ಎನ್ನುವುದು ನಮ್ಮ ದೇಶದ ಮಟ್ಟಿಗೆ ಹಳೆಯ ಮಾತು. ಇದೀಗ ‘ದೆಹಲಿ ಚಲೋ’ ಚಳವಳಿಯ ನಂತರ ಇದೇ ಮಾತು ವಿಶ್ವಮಟ್ಟದಲ್ಲಿಯೂ ದೊಡ್ಡ ಸುದ್ದಿಯಾಯಿತು. ಇದನ್ನೇ ನೆಪವಾಗಿಸಿಕೊಂಡು ಸೃಜನಶೀಲ ಕಲೆಗಳಲ್ಲಿ ಅನ್ನದಾತನ ಬದುಕು ಹೇಗೆ ಬಿಂಬಿತವಾಗಿದೆ ಎಂಬುದನ್ನು ಶೋಧಿಸುವ ಪ್ರಯತ್ನವನ್ನು ಗಂಭೀರ ಓದುಗರು, ಲೇಖಕರು ಇಲ್ಲಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಟಿವಿ9 ಕನ್ನಡ ಡಿಜಿಟಲ್ ‘ಅನ್ನದಾತನೊಂದಿಗೆ ನಾವು’ ಎಂಬ ಸರಣಿಯ ಮೂಲಕ ದಿನವೂ ನಿಮಗೆ ಜ್ಞಾನದ ಬುತ್ತಿಯನ್ನು ಉಣಿಸುತ್ತಿದೆ. ಇಂದು ಲೇಖಕಿ ಡಾ. ದೀಪಾ ಫಡ್ಕೆ ಅವರ ಬರಹ ನಿಮ್ಮ ಓದಿಗೆ. ನಿಮ್ಮ ಪ್ರತಿಕ್ರಿಯೆಗಳೂ ನಮಗೆ ಅಮೂಲ್ಯ. ಇ-ಮೇಲ್ tv9kannadadigital@gmail.com

 

ಮಣ್ಣಿಂದ ಕಾಯ ಮಣ್ಣಿಂದ
ಮಣ್ಣಿಂದ ಸಕಲ ದರುಶನಗಳೆಲ್ಲ
ಮಣ್ಣಿಂದ ಸಕಲ ವಸ್ತುಗಳೆಲ್ಲ
ಮಣ್ಣು ಬಿಟ್ಟವರಿಗೆ ಆಧಾರವಿಲ್ಲ
ಅಣ್ಣಗಳಿರೆಲ್ಲರೂ ಕೇಳಿರಯ್ಯ

ಪುರಂದರದಾಸರ ಜನಪ್ರಿಯ ಕೀರ್ತನೆಗಳಲ್ಲಿ ಈ ಕೀರ್ತನೆಯೂ ಪ್ರಮುಖವಾದುದು. ದಾಸರು ಮತ್ತೆ ಮುಂದುವರೆದು ಅನ್ನಉದಕ ಊಟವೀಯೋದು ಮಣ್ಣು ಭತ್ತ ಭರಣಧಾನ್ಯ ಬೆಳೆಯುವುದೇ ಮಣ್ಣು ಎನ್ನುತ್ತಾ ‘ಅದರಲ್ಲೇನಿದೆ ಮಣ್ಣು’ ಎಂದು ತಾತ್ಸಾರ ಮಾಡುವ ಮನಸ್ಸುಗಳಿಗೆ ಪ್ರತಿಯೊಂದೂ ಮೂಲದಲ್ಲಿ ಮಣ್ಣೇ ಆಗಿದೆ ಎಂದು ಉತ್ತರಿಸುತ್ತಾ ಮನುಷ್ಯನ ಬದುಕಿನ ಸತ್ಯಕ್ಕೆ ಕನ್ನಡಿ ಹಿಡಿಯುತ್ತಾರೆ.
ಭಾರತೀಯ ಭಕ್ತಿ ಸಾಹಿತ್ಯ ಭಗವಂತನ ಸಾನ್ನಿಧ್ಯವನ್ನು ಭಕ್ತಿಯ ಮೂಲಕವು ಹೊಂದಬಹುದು ಎಂದು ಸಾರಿದ ಭಕ್ತಿ ಚಳವಳಿಯ ಧ್ವನಿ. ತನ್ನ ಕಾಲದ ಮತ್ತು ಸಾರ್ವಕಾಲಿಕವೆನ್ನಬಹುದಾದ ಸಮಸ್ಯೆಗಳ ಮತ್ತು ಸಮಾಜದ ಪರಿಸ್ಥಿತಿಗಳ ಕಡೆಗೆ ಬೆರಳು ತೋರಿ ಬೆಳಕು ಹಾಯಿಸುವ ಗಟ್ಟಿ ಕಾಳಜಿ ತೋರಲಿಲ್ಲ ಎನ್ನುವ ಕೆಲವೊಂದು ಮಾತುಗಳಿದ್ದರೂ ಭಕ್ತಿಯ ಹರಿಕಾರರು, ಹರಿದಾಸರು, ಮರಾಠಿ ವಾರಕಾರಿ ಸಂತ ಕವಿಗಳು, ಕಬೀರ, ನಾನಕರಂತಹ ಸಂತರು ಸಾಮಾಜಿಕ ವ್ಯವಸ್ಥೆಯನ್ನು ತಿದ್ದುವ ಕಡೆಗೆ ಧ್ವನಿಪೂರ್ಣ ನಿಲುವನ್ನು ಪ್ರಕಟಿಸಿದ್ದು ಸಾಹಿತ್ಯದ ಮೂಲಕ ದಾಖಲಾಗಿದೆ.

ಸುಮಾರು ಹತ್ತನೆಯ ಶತಮಾನದ ಹೊತ್ತಿಗೆ ರಾಮಾನುಜರಿಂದ ಭಕ್ತಿಯ ಪ್ರವಾಹ ಆರಂಭಗೊಂಡರೂ ವಿಜಯನಗರದ ಅರಸರ ಕಾಲದಲ್ಲಿ ಬಹುಮುಖ್ಯವಾಗಿ ಕೃಷ್ಣದೇವರಾಯನ ಕಾಲದಲ್ಲಿ ಹರಿದಾಸ ಆಂದೋಲನವಾಗಿ ಉಚ್ಛ್ರಾಯ ಸ್ಥಿತಿಯನ್ನು ಕಂಡಿದ್ದುಇತಿಹಾಸವಾಗಿದೆ. ಹನ್ನೆರಡನೆಯ ಶತಮಾನದ ಶರಣರು ಸರಳ ಧರ್ಮದ ಹೊಸ ವ್ಯಾಖ್ಯಾನವನ್ನು ಅರುಹಿದರೆ ಹದಿನೈದನೆಯ ಶತಮಾನದ ಹರಿದಾಸರು ಸಹಜ ಭಕ್ತಿಯನ್ನು ಪರಿಚಯಿಸಿ ಭಗವಂತನ ಆರಾಧನೆಯ ಸರಳ ರೂಪವನ್ನು ಜನಮಾನಸದೆಡೆಗೆ ಕೊಂಡೊಯ್ದರು. ಅವರು ಕೀರ್ತನೆಗಳ ಮೂಲಕ ಭಕ್ತಿಯನ್ನು ಬಿತ್ತಿ ಮುಕ್ತಿಯೆಂಬೊ ಫಲವನ್ನು ಪಡೆದರು ಮತ್ತು ಜನಸಾಮಾನ್ಯರನ್ನೂ ಆ ಸರಳ ಭಕ್ತಿಮಾರ್ಗದಲ್ಲಿ ಮುನ್ನಡೆಯಲು ಕೈ ಹಿಡಿದು ನಡೆಸಿದರು. ಭಾರತೀಯ ಭಕ್ತಿ ಸಾಹಿತ್ಯದ ಪ್ರಮುಖ ಭಾಗವಾದ ಹರಿದಾಸ ಸಾಹಿತ್ಯದಲ್ಲಿ ಸಾಮಾಜಿಕ ರೀತಿ ನೀತಿಗಳನ್ನು ಪುರಂದರದಾಸರು ಮತ್ತು ಕನಕದಾಸರು ಅತ್ಯಂತ ಸಮರ್ಥವಾದ ರೀತಿಯಲ್ಲಿ ಪ್ರಶ್ನಿಸಿದ್ದು ಕೀರ್ತನೆಗಳಲ್ಲಿ ಸ್ಪಷ್ಟವಾಗಿ ತೋರುತ್ತದೆ. ಈ ಇಬ್ಬರು ಹರಿದಾಸರು ಕಣ್ಣಿಗೆ ಬಿದ್ದ ಪ್ರತಿಯೊಂದನ್ನು ಹಾಡಿನ, ಕಾವ್ಯದ ವಸ್ತುವಾಗಿ ಬಳಸಿ ಮನುಷ್ಯನ ಪ್ರಜ್ಞೆಯನ್ನುಎಚ್ಚರಿಸಲು ಪ್ರಯತ್ನಿಸಿದವರು. ಮಣ್ಣು, ರಾಗಿ, ಮೆಣಸಿನಕಾಯಿ, ಕಾಗದ, ಅಡುಗೆ, ಕಲ್ಲುಸಕ್ಕರೆ, ಹಣ್ಣು ಹೀಗೆ ದಿನನಿತ್ಯದಲ್ಲಿ ಕಣ್ಣಿಗೆ ಕಂಡ ಪ್ರತಿಯೊಂದರ ಮೇಲೂ ಹಾಡುಕಟ್ಟುತ್ತಾ ಅದರ ಮೂಲಕ ಸಮಾಜದ ಓರೆಕೋರೆಗಳಿಗೆ ಉಪಾಯ ತೋರಿದವರು.

ಕನಕ ಪುರಂದರರು

ಪುರಂದರದಾಸರು ಆರೋಗ್ಯಕರ ಸಮಾಜ ನಿರ್ಮಾಣದ ಸದುದ್ದೇಶದಿಂದ ನೀತಿಬೋಧ ಕೀರ್ತನೆಗಳ ಮೂಲಕ ಸಮಾಜದ ಶುದ್ಧೀಕರಣದೆಡೆಗೆ ಕಣ್ಣು ಹಾಯಿಸಿದವರು. ಮಧುಕರವೃತ್ತಿ ಎನ್ನದು ಎನ್ನುತ್ತಾ ಮನೆಮನೆಗೂ ಹಾಡುತ್ತಾ ಸಾಗುತ್ತಾ ಮನಮನಗಳಿಗೆ ಮುಟ್ಟಿದರು. ಈಸಬೇಕು ಇದ್ದು ಜೈಸಬೇಕು ಎನ್ನುತ್ತಾ ತಾನೂ ಮುಕ್ತವಾಗುತ್ತಾಇತರರಿಗೂದಾರಿ ಸುಗಮಗೊಳಿಸಿದರು. ಅವರ ಒಂದು ಕೀರ್ತನೆ `ನಾರಾಯಣ ಎಂಬ ನಾಮದ ಬೀಜವ’ ಕೀರ್ತನೆ ಬಿತ್ತುವ ಬೆಳೆಯುವ ಕೃಷಿ ಸಂಸ್ಕೃತಿಯನ್ನು ಅಧ್ಯಾತ್ಮಕ್ಕೆ ರೂಪಕವಾಗಿ ಬಳಸಿ ಹಾಡಿದ್ದಾರೆ.

ನಾರಾಯಣ ಎಂಬ ನಾಮದ ಬೀಜವ
ನಾಲಿಗೆ ತುದಿಯಿಂದಲಿ ಬಿತ್ತಿರಯ್ಯ
ಹೃದಯ ಹೊಲವ ಮಾಡಿ ಮನವ ನೇಗಿಲ ಮಾಡಿ
ಶ್ವಾಸೋಶ್ವಾಸವ ಎರಡೆತ್ತು ಮಾಡಿ
ಜ್ಞಾನವೆಂಬ ಹಗ್ಗ ಕಣ್ಣಿಯ ಮಾಡಿ
ನಿರ್ಮಾಮವೆಂಬ ಗುಂಟೆಲಿ ಹರವಿರಯ್ಯಾ|

ಹೃದಯವೆಂಬ ಹೊಲದಲ್ಲಿ ನಾರಾಯಣ ಎಂಬ ಬೀಜವ ಬಿತ್ತಿರಯ್ಯಾ ಎನ್ನುತ್ತಾ ಭಕ್ತಿಯನ್ನು ಮನೆಮನಗಳಲ್ಲಿ ಬಿತ್ತುತ್ತಾರೆ.
ಹರಿದಾಸರಲ್ಲೇ ಏಕೈಕ ಕವಿ ಕನಕದಾಸರು ಇನ್ನೂಒಂದು ಹೆಜ್ಜೆ ಮುಂದೆ ಇಟ್ಟು ನೆಲದ ಬದುಕು ಬವಣೆಗಳನ್ನು ಚೆಂದಾಗಿ ಕೀರ್ತನೆಗಳ ಮೂಲಕ, ಕಾವ್ಯಗಳಲ್ಲಿ ಹೆಣೆದಿಟ್ಟರು. ಅಂಥ ಒಂದು ಕಾವ್ಯ `ರಾಮಧಾನ್ಯಚರಿತೆ’. ನಿತ್ಯದಲ್ಲಿ ಉಣ್ಣುವ ಧಾನ್ಯಗಳಾದ ಅಕ್ಕಿ ಮತ್ತು ರಾಗಿಯ ಮೌಲ್ಯವನ್ನು ವರ್ಗ ಸಂಘರ್ಷಕ್ಕೆ ರೂಪಕವಾಗಿ ಬಳಸಿ ಬಹು ಜನರುಣ್ಣುವರಾಗಿಯೇ ಸರ್ವಶ್ರೇಷ್ಠವೆಂದು ಹೇಳುತ್ತಾರೆ.

ಕನಕದಾಸರು ರಾಮನ ಮುಂದೆ ತಮ್ಮ ಮನದ ಬವಣೆಯನ್ನು ಹೇಳಲು ಹೊರಟಿದ್ದೋ ಎನ್ನುವಂತೇ ಮಹಾರಾಜ ರಾಮನ ಮುಂದೆ ಎಲ್ಲಾ ಧಾನ್ಯಗಳನ್ನು ತಂದಿರಿಸಿದಾಗ, ರಾಜನಾದ ರಾಮ ಋಷಿ ಗೌತಮರಿಗೆ ಉತ್ತಮ ಧಾನ್ಯವೊಂದನ್ನು ಆಯ್ಕೆ ಮಾಡಲು ಹೇಳುತ್ತಾನೆ. ಆಗ ಋಷಿ ಗೌತಮರು ರಾಗಿಯನ್ನು ಅತ್ಯುತ್ತಮವೆಂದು ಸಾರಿದಾಗ ರಾಮ ಪ್ರೀತಿಯಿಂದ ನರೆದಲಗಧಾನ್ಯಕ್ಕೆ ತನ್ನ ಹೆಸರನ್ನು ನೀಡಿ ಗೌರವಿಸಿದ ಎನ್ನುವ ಸಾರದ ರಾಮಧಾನ್ಯಚರಿತೆ ಕೇವಲ ಭತ್ತ ಮತ್ತು ರಾಗಿಯ ಬವಣೆಯನ್ನು ಹೇಳದೇ ವರ್ಗ ಸಂಘರ್ಷದ ಹಾಡನ್ನುಒಡಲಲ್ಲಿ ಇಟ್ಟುಕೊಂಡಿದೆ ಎನ್ನಬಹುದು.

ನರೆದಲಗನಿದು ನೆಲ್ಲು ಹಾರಕ
ಬರಗು ಜೋಳವು ಕಂಬು ಸಾಮೆಯು
ಉರುತರದ ನವಣೆಯಿದು ನವಧಾನ್ಯವೆಂದೆನಲು

ರಾಮಧಾನ್ಯಚರಿತೆಯಲ್ಲಿ ಕನಕದಾಸರು ಆ ಹೊತ್ತಿನ ಅನೇಕ ಸಂಗತಿಗಳನ್ನು ಕಾವ್ಯದೊಳಗಿಟ್ಟು ಸಮಾಜದ ಗಮನ ಹರಿಯುವಂತೆ ಪ್ರಯತ್ನ ಪಟ್ಟಿರುವುದನ್ನು ನೋಡಬಹುದು. ಆಗಿನ ಕಾಲದ ದವಸಧಾನ್ಯಗಳು, ಅವುಗಳ ಬಳಕೆ ಅದರಿಂದ ಜನರ ಜೀವನಶೈಲಿಯ ಪರಿಚಯವೂ ನಮಗಾಗುವುದರಲ್ಲಿ ಸಂದೇಹವಿಲ್ಲ. ಈ ಹೊತ್ತಿನ ಬಹುಪಯೋಗಿ ಗೋಧಿಯ ಹೆಸರನ್ನು ಕನಕದಾಸರು ಹೇಳದೇ ಇರುವುದಕ್ಕೆ ಪ್ರಾಯಶಃ ಗೋಧಿ ಕನ್ನಡನಾಡಿನಲ್ಲೇ ಬೆಳೆಯುವ ಧಾನ್ಯವಲ್ಲದಿರುವುದೂ ಕಾರಣವಿರಬಹುದು. ಏಕೆಂದರೆ ಗೋಧಿಯ ಬಳಕೆ ಆ ಹೊತ್ತಿನಲ್ಲಿ ಆರಂಭವಾಗಿತ್ತು ಎಂದು ತಿಳಿದುಬರುತ್ತದೆ.

ಕನಕದಾಸರು ಹೇಳಿ ಕೇಳಿ ಯೋಧರು. ಯುದ್ಧಭೂಮಿಯ ಚಿತ್ರಣವೇನೋ ಅವರಿಗೆ ಹೊಸದಲ್ಲ. ಆ ಹೊತ್ತಿನ ಸೈನಿಕರ ಸಂಘರ್ಷಗಳನ್ನೂ ಸೇನೆಯ ಶಿಬಿರಗಳ ವಿವರಗಳೂ ರಾಮಧಾನ್ಯಚರಿತೆಯಲ್ಲಿ  ಕಂಡು ಬರುತ್ತವೆ. ಪುರಂದರದಾಸರಾಗಲಿ ಕನಕದಾಸರಾಗಲಿ, ಕಬೀರ, ನಾನಕರಾಗಲಿ ಭಕ್ತಿ ಸಾಹಿತ್ಯ ಮೂಲಕ ಮನುಷ್ಯನ ಆಂತರಿಕ ಸಂಘರ್ಷವನ್ನು ತೆರೆದಿಟ್ಟಂತೇ ಸಮಾಜದ ಸಂಘರ್ಷವನ್ನೂ ತೆರೆದಿಟ್ಟವರು. ಕನಕದಾಸರ ಇನ್ನೊಂದು ಅತ್ಯಂತ ಜನಪ್ರಿಯಕೀರ್ತನೆ ‘ಎಲ್ಲಾರೂ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಕೀರ್ತನೆಯಲ್ಲಿ ಕೂಡ ಮನುಷ್ಯನ ಪ್ರತಿಯೊಂದು ನಡೆಯೂ ಹೊಟ್ಟೆಪಾಡಿಗಾಗಿ ಎಂದೇ ದಾಸರು ಹಾಡುತ್ತಾರೆ.

ಕುಂಟೆತುದಿಗೆಕೊರಡು ಹಾಕಿ ಹೆಂಟೆ ಮಣ್ಣು ಸಮನು ಮಾಡಿ
ರೆಂಟೆ ಹೊಡೆದು ಬೆಳೆಸುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ
ಕೊಟ್ಟಣವನು ಕುಟ್ಟಿಕೊಂಡು ಕಟ್ಟಿಗೆಯ ಹೊತ್ತುಕೊಂಡು
ಕಷ್ಟ ಮಾಡಿ ಉಣ್ಣುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ

ಮನುಷ್ಯನ ಶ್ರಮಜೀವನದ ಪ್ರತಿಯೊಂದು ನಡೆಯೂ ಅವನ ಅನಿವಾರ್ಯವಾದ ಹೊಟ್ಟೆಪಾಡಿಗಾಗಿ ಎಂದು ದಾಸರು ಹಾಡುತ್ತಾರೆ.
ಮರಾಠಿ ಸಂತ ಕವಿ ತುಕಾರಾಮ ತನ್ನ ನಿರ್ಭೀತ ಅಭಂಗಗಳಿಗೆ ಅತ್ಯಂತ ಪ್ರಸಿದ್ಧನಾದವನು.

ಆದಿ ಬೀಜ್ ಎಕಲೆ ಬೀಜ್‍ ಅಂಕುರಲೆರೋಪ ವಾಡಲೆ
ಏಕಾ ಬೀಜ ಪೋಟಿತರು ಕೋಟಿಕೋಟಿ ಜನ್ಮಘೇತಿ ಸುಮನೆ ಫಲೆ

ಅಲ್ಲಮ ‘ಬೀಜದೊಳಗಿನ ವೃಕ್ಷದಂತೆ’ ಎಂದಂತೇ ತುಕಾರಾಮನೂ ಒಂದು ಬೀಜದಿಂದ ಕೋಟಿ ಕೋಟಿ ವೃಕ್ಷಗಳು ಚಿಗುರುತ್ತವೆ, ಕೋಟಿಕೋಟಿ ಫಲಪುಷ್ಪಗಳು ಮೂಡುತ್ತವೆ ಅಂದರೆ ವಿಶ್ವದ ಕೋಟಿ ಚೇತನಗಳ ಮೂಲ ಒಂದೇ ಎನ್ನುತ್ತಾ ಬೀಜ, ವೃಕ್ಷಗಳ ಉದಾಹರಣೆಯಿಂದ ಅಧ್ಯಾತ್ಮದ ಗಂಟನ್ನು ಬಿಚ್ಚಿಡುತ್ತಾನೆ. ತುಕಾರಾಮ ನಿರಂತರ ಸಂಘರ್ಷದ ಬದುಕನ್ನು ಬದುಕಿದರೂ ಅವನ ಅಭಂಗಗಳು ಜೇನಿನಂತೆ ಮಧುರವಾಗಿವೆ. ಎಲ್ಲೂ ಸಂಘರ್ಷದ ಲವಲೇಶವೂ ಅಭಿವ್ಯಕ್ತವಾಗದೇ ಸಮಾಜದ ಅಂಕುಡೊಂಕುಗಳಿಗೆ ಮದ್ದೆರೆಯುವ ಮತ್ತು ವಿಠೋಬನೇ ಸರ್ವಸ್ವ, ಅಷ್ಟೇ ಅಲ್ಲದೇ ವಿಠೋಬಾಗಿಂತಲೂ ವಿಠೋಬಾನ ಭಕ್ತರ ಸತ್ಸಂಗವೇ ಪರಮ ಸುಖ ಎನ್ನುವ ನಿವೇದನೆಯನ್ನು ಧ್ವನಿಸುತ್ತಾರೆ.

ಭಕ್ತಿ ಸಾಹಿತ್ಯವು ಮನುಷ್ಯನ ಇತಿಹಾಸದ ತುಂಬಾ ಕಂಡ ಸಂಘರ್ಷದ ಕಥನಗಳನ್ನು ಕೀರ್ತನೆ, ಅಭಂಗ, ದೋಹೆಗಳ ಮೂಲಕ ಕಟ್ಟಿ ನಮ್ಮಂತರಂಗಕ್ಕೆ ಮುಟ್ಟಿಸಿದೆ. ಭಕ್ತಿ ಚಳವಳಿಯ ಬಹು ದೊಡ್ಡ ಸಂದೇಶವೇ ಭಕ್ತಿ ಅಥವಾ ಹಂಬಲದಿಂದ ಮನುಷ್ಯ ಏನನ್ನಾದರೂ ಸಾಧಿಸಬಹುದು ಎನ್ನುವುದು. ‘ಮಾನವ ಜನ್ಮ ದೊಡ್ಡದು ಅದ ಹಾನೀ ಮಾಡಲಿ ಬೇಡ ಹುಚ್ಚಪ್ಪಗಳಿರಾ’, ದಾಸರೆಂದಂತೇ ಮನುಷ್ಯನ ಬದುಕು ಅಪಾರ ಸಾಧ್ಯತೆಗಳಿರುವ ಅವಕಾಶ. ಹಾಗೆಯೇ ಭಕ್ತಿಪಂಥದ ಹರಿಕಾರರ ಅಭಿವ್ಯಕ್ತಿಯನ್ನು ನೋಡಿದರೆ ಹರಿದಾಸ್ಯ, ಅದು ನಿಷ್ಕ್ರೀಯತೆಯನ್ನು ಬೋಧಿಸುವುದಿಲ್ಲ, ಅದು ಈಸಬೇಕು ಇದ್ದು ಜೈಸಬೇಕು ಎನ್ನುವುದನ್ನೇ ಹೇಳುತ್ತದೆ ಎಂದು ಅರಿವಾಗುತ್ತದೆ. ಕಲ್ಲಿನ ನಡುವೆ ಹುಟ್ಟುವ ಗಿಡವೊಂದು ತನ್ನ ಬೇರುಗಳನ್ನು ಆಳಕ್ಕೆ ಇಳಿಸಿ ತನ್ನ ಬೇರುಗಳನ್ನು ಗಟ್ಟಿಗೊಳಿಸುತ್ತಲೇ ಸಾಗುವಂತೇ ಪ್ರಯತ್ನದಿಂದಲೇ ಅಸಾಧ್ಯವನ್ನು ಸಾಧಿಸಬಹುದು ಎನ್ನುವುದನ್ನು ಭಕ್ತಿ ಸಾಹಿತ್ಯ ನಿರಂತರವಾಗಿ ಸಾಧಿಸುತ್ತಲೇ ಬಂದಿದೆ.

ಪರಿಚಯ : ಬೆಂಗಳೂರಿನಲ್ಲಿ ನೆಲೆಸಿರುವ ಡಾ. ದೀಪಾ ಫಡ್ಕೆ ಅವರು ಮೂಲತಃ ದಕ್ಷಿಣ ಕನ್ನಡದ ಬೆಳ್ತಂಗಡಿಯವರು. ‘ಪುರಂದರ ಕನಕರ ಕೀರ್ತನೆ ಗಳಲ್ಲಿ ಅಭಿವ್ಯಕ್ತಿ : ಮನೋವೈಜ್ಞಾನಿಕ ಅಧ್ಯಯನ’ ಎನ್ನುವ ವಿಷಯದಲ್ಲಿ ಅಧ್ಯಯನ ನಡೆಸಿರುವ ದೀಪಾ ಅವರಿಗೆ ಮೈಸೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ. ಪದವಿ ದೊರೆತಿದೆ. ಸಂಸ್ಕೃತಿ ಕುರಿತ ಬರಹಗಳ ಗುಚ್ಛವಾದ ‘ಋತ’, ‘ಹರಪನಹಳ್ಳಿ ಭೀಮವ್ವ’, ‘ಡಾ. ಪ್ರದೀಪಕುಮಾರ್ ಹೆಬ್ರಿ-ಮಹಾಕಾವ್ಯಗಳ ಕವಿ’ ಹಾಗೂ ’ಲೋಕಸಂವಾದಿ’ (ಮೊಗಸಾಲೆಯವರ ಬದುಕು ಬರಹಗಳ ಕುರಿತು), ನಾಡಿಗೆ ನಮಸ್ಕಾರ ಮಾಲೆಗಾಗಿ ಈ ಕೃತಿಯಲ್ಲದೆ ಸುಬ್ರಾಯ ಚೊಕ್ಕಾಡಿಯವರ ಕುರಿತು ಹಾಗೂ ಶಿಕ್ಷಣ ತಜ್ಞ ಡಾ. ಚಂದ್ರಶೇಖರ ದಾಮ್ಲೆ ಅವರ ಕುರಿತು ಕೃತಿಗಳನ್ನು ಬರೆದಿದ್ದಾರೆ.

(ಈ ಸರಣಿ ಇಲ್ಲಿಗೆ ಮುಕ್ತಾಯವಾಯಿತು)

ಅನ್ನದಾತನೊಂದಿಗೆ ನಾವು: ಭೂಮಿಯಿಂದ ದೇವರು ಗುಳೆ ಹೋಗಬೇಕು ಇಲ್ಲಾ ಆಕಾಶದಲ್ಲಿ ಧಾನ್ಯ ಬೆಳೆಯಬೇಕು

 

Published On - 9:57 am, Thu, 14 January 21