ಇತ್ತೀಚೆಗಿನ ಕೆಲ ಯೂಟ್ಯೂಬ್ ವಿಡಿಯೋ ಥಂಬ್ನೈಲ್ಗಳಲ್ಲಿ ನೋಡಿಯೇ ಇರುತ್ತೀರಿ, ‘ಆಪಲ್ ಬೆಳೆಯಿರಿ ಎಕರೆಗೆ 20 ಲಕ್ಷ ಗಳಿಸಿ’, ‘ಕಾಶ್ಮೀರದ ಆಪಲ್ ಅನ್ನು ಬಿಸಿಲ ನಾಡಿನಲ್ಲಿ ಬೆಳೆದು ಯಶಸ್ವಿಯಾದ ರೈತ’ ಎಂದೆಲ್ಲ. ಆದರೆ ಇದು ಅರ್ಧ ಸತ್ಯವಷ್ಟೆ. ಶೀಥ ಹವಾಮಾನದ ಬೆಳೆಯಾದ ಆಪಲ್ ಅನ್ನು ಬಿಜಾಪುರದಂಥಹಾ ಬಿಸಿಲು ನಾಡಿನಲ್ಲಿಯೂ ಬೆಳೆದಿದ್ದಾರೆ. ಚಿಕ್ಕಬಳ್ಳಾಪುರ, ಹೊಸಕೋಟೆ, ತುಮಕೂರು, ಶಿರಾಗಳಲ್ಲಿಯೂ ಕೆಲ ರೈತರು ಬೆಳೆದಿರುವುದು ನಿಜ, ಹಾಗೆಂದು ಎಲ್ಲ ರೈತರೂ ಆಪಲ್ ಬೆಳೆ ಬೆಳೆಯಲು ತೊಡಗುವ ಮುನ್ನ ತುಸು ನಿಂತು ಯೋಚಿಸಬೇಕಿದೆ. ಪೂರ್ಣ ಮಾಹಿತಿ ಪಡೆದ ಮೇಲಷ್ಟೆ ಆಪಲ್ ಕೃಷಿಗೆ ಇಳಿಯಬೇಕಿದೆ. ಏಕೆಂದರೆ ಆಪಲ್ ಕೃಷಿ ಎಲ್ಲರ ಕೈ ಹಿಡಿದಿಲ್ಲ. ಹಿಮಾಚಲ ಪ್ರದೇಶ, ಕಾಶ್ಮೀರಗಳಂಥಹಾ ಶೀತ ಪ್ರದೇಶದಲ್ಲಿ ಬೆಳೆಯುವ ಆಪಲ್ ಅನ್ನು ಬಿಸಿಲ ನಾಡಾದ ಬಿಜಾಪುರದಲ್ಲಿ ಹೇಗೆ ಬೆಳೆದರು? ಬರದ ಜಿಲ್ಲೆಗಳಾದ ಚಿಕ್ಕಬಳ್ಳಾಪುರ, ಕೋಲಾರಗಳಲ್ಲಿ ಹೇಗೆ ಬೆಳೆದರು ಎಂದು ಆಶ್ಚರ್ಯ ಪಡುವ ಮುನ್ನ ತಿಳಿದುಕೊಳ್ಳಬೇಕಾದ ವಿಷಯವೆಂದರೆ ಹಿಮಾಚಲ ಪ್ರದೇಶ, ಕಾಶ್ಮೀರಗಳಲ್ಲಿ ಬೆಳೆಯುವ ಆಪಲ್ಗೂ ಕರ್ನಾಟಕದಲ್ಲಿ ಬೆಳೆಯಲಾಗುತ್ತಿರುವ ಆಪಲ್ಗೂ ವ್ಯತ್ಯಾಸವಿದೆ. ಕರ್ನಾಟಕದಲ್ಲಿ ಬೆಳೆಯಲಾಗುತ್ತಿರುವ ಆಪಲ್ಗಳು ಹಾಟ್ ವೆದರ್ ಆಪಲ್ಗಳು. ಅಂದರೆ ಉಷ್ಣ ಅಥವಾ ಅರೆ ಉಷ್ಣ ಹವಾಗುಣ ಇದ್ದಲ್ಲಿ ಬೆಳೆಯಲೆಂದು ವಿಶೇಷವಾಗಿ ಕಸಿ ಮಾಡಲಾದ ಆಪಲ್ ಗಿಡಗಳು. ಉಷ್ಣ ಹವಾಗುಣದಲ್ಲಿ ಬೆಳೆಯಲಾಗುವ ಆಪಲ್ ಹಾಗೂ ಹಿಮಾಚಲ, ಕಾಶ್ಮೀರ ಆಪಲ್ಗಳಲ್ಲಿ ರುಚಿ, ಬಣ್ಣ, ಆಕಾರ, ತೂಕಗಳಲ್ಲಿ ಮಹತ್ವದ ಭಿನ್ನತೆಯಿದೆ. ಇತ್ತೀಚೆಗೆ ಐದಾರು ವರ್ಷಗಳಿಂದಲೂ ಕರ್ನಾಟಕದಲ್ಲಿ ಅಲ್ಲಲ್ಲಿ ಆಪಲ್ ಕೃಷಿಯ ಸುದ್ದಿಗಳು ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿವೆ. ತುಮಕೂರು, ಶಿರ, ಚಿಕ್ಕಬಳ್ಳಾಪುರ, ಬಿಜಾಪುರಗಳಲ್ಲಿ ಐದಾರು ವರ್ಷಗಳ ಹಿಂದೆ ಕೆಲ...